ಶುಕ್ರವಾರ, ಡಿಸೆಂಬರ್ 6, 2019
17 °C
ಕುಶಾಲನಗರ, ಅಮ್ಮತ್ತಿ ವ್ಯಾಪ್ತಿಯಲ್ಲಿ ‘ರ‍್ಯಾಪಿಡ್ ರೆಸ್ಕ್ಯು ಟೀಮ್‌’ ರಚನೆ

ಕಾಫಿ ತೋಟಗಳಲ್ಲಿ ಕಾಡಾನೆ ಹಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಫಿ ತೋಟಗಳಲ್ಲಿ ಕಾಡಾನೆ ಹಾವಳಿ

ಸಿದ್ದಾಪುರ: ಇಲ್ಲಿಗೆ ಸಮೀಪದ ಅತ್ತಿತೋಪು ಕಾಫಿ ತೋಟದ ಕಾರ್ಮಿಕರ ವಾಸದ ಕೊಠಡಿಯೊಂದು ಕಾಡಾನೆಗಳ ದಾಳಿಗೆ ಧ್ವಂಸಗೊಂಡಿದೆ. ಗುಹ್ಯ ಗ್ರಾಮದ ಚೌರೀರ ಪೊನ್ನಮ್ಮ ಅವರಿಗೆ ಸೇರಿದ ಕಾಫಿ ತೋಟಕ್ಕೆ ಬುಧವಾರ ನುಗ್ಗಿದ ಕಾಡಾನೆಗಳ ಹಿಂಡು ಕಾಫಿ, ಅಡಿಕೆ ಗಿಡಗಳನ್ನು ನಾಶಪಡಿಸಿವೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ, ಅತ್ತಿತೋಪು, ಬೀಟಿ ಕಾಡು ಹಾಗೂ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಳ್ಳಕರೆ, ಹಚ್ಚಿ ನಾಡು ಗ್ರಾಮಗಳಲ್ಲಿಯೂ ಕಾಡಾನೆಗಳು ಬೀಡುಬಿಟ್ಟಿವೆ. ಈ ವ್ಯಾಪ್ತಿಯಲ್ಲಿ ಒಂದು ವಾರದಿಂದ 17 ಕಾಡಾನೆಗಳು ಇರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಕಾರ್ಮಿಕರ ಮನೆ ಮೇಲೆ ದಾಳಿ ಮಾಡಿದ ಕಾಡಾನೆಗಳು ಸಿದ್ದಾಪುರ -ಅಮ್ಮತ್ತಿ ಮುಖ್ಯ ರಸ್ತೆಯಲ್ಲಿ ಒಂದು ಸಣ್ಣ ಮರಿಯಾನೆಯೊಂದಿಗೆ ಸಾಗುತ್ತಿದ್ದ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿಯೂ ವೈರಲ್ ಆಗಿದೆ.

ಆರ್.ಆರ್.ಟಿ.ತಂಡ ರಚನೆ: ಕಾಡಾನೆಗಳ ಪತ್ತೆಗಾಗಿ ಅರಣ್ಯ ಇಲಾಖೆ ‘ರ‍್ಯಾಪಿಡ್ ರೆಸ್ಕ್ಯು ಟೀಮ್‌’ (ಆರ್‌ಆರ್‌ಟಿ) ರಚಿಸಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಅರಣ್ಯ ಅಧಿಕಾರಿ ಕನ್ನಂಡ ರಂಜನ್ ಹಾಗೂ ಅಮ್ಮತ್ತಿ ವ್ಯಾಪ್ತಿಯ ತಂಡವನ್ನು ಉಪ ವಲಯ ಅರಣ್ಯ ಅಧಿಕಾರಿ ಕಳ್ಳೀರ ದೇವಯ್ಯ ನೇತೃತ್ವ ವಹಿಸಿದ್ದಾರೆ. ಕಾಡಾನೆಗಳ ಉಪಟಳ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಯ ತುರ್ತು ಸೇವೆಗೆ ಈ ತಂಡವನ್ನು ರಚಿಸಲಾಗಿದೆ.

15 ಮಂದಿಯನ್ನು ಒಳಗೊಂಡಿರುವ ಈ ತಂಡ ಅಮ್ಮತ್ತಿ ಹೋಬಳಿಯ 23 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಡಾನೆ ಉಪಟಳ ನಿಯಂತ್ರಿಸಲು ರಚಿಸಲಾಗಿರುವ ಆರ್.ಆರ್.ಟಿ. ತಂಡಕ್ಕೆ ಮಾಹಿತಿ ನೀಡಲು ರಚಿಸಿರುವ ವಾಟ್ಸ್‌ ಆ್ಯಪ್‌ ಬಳಗದಲ್ಲಿ ಕಾಫಿ ಬೆಳೆಗಾರರು, ಕಾರ್ಮಿಕರು, ವಿದ್ಯಾರ್ಥಿಗಳು ಇದ್ದಾರೆ.

ಪ್ರತಿಕ್ರಿಯಿಸಿ (+)