ಶುಕ್ರವಾರ, ಡಿಸೆಂಬರ್ 6, 2019
19 °C
ಉಮ್ಮತ್ತೂರು ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

24 ಕೆರೆಗಳಿಗೆ ನಾಳೆಯಿಂದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

24 ಕೆರೆಗಳಿಗೆ ನಾಳೆಯಿಂದ ನೀರು

ಚಾಮರಾಜನಗರ: ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 14ರಂದು ಭೇಟಿ ನೀಡಲಿದ್ದು, ಉಮ್ಮತ್ತೂರು ಗ್ರಾಮದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಸಂಸದ ಆರ್‌. ಧ್ರುವನಾರಾಯಣ, ಶಾಸಕ ಸಿ. ಪುಟ್ಟರಂಗಶೆಟ್ಟಿ ಮತ್ತು ಅಧಿಕಾರಿಗಳು ಬುಧವಾರ ಪರಿಶೀಲಿಸಿದರು.

ಕೆರೆಯ ಸುತ್ತಲೂ ಮುಳ್ಳಿನ ಗಿಡಗಂಟಿಗಳು ಬೆಳೆದಿದ್ದು, ಅವುಗಳನ್ನು ಕಡಿದು ಸ್ವಚ್ಛಗೊಳಿಸಲಾಗುತ್ತಿದೆ. ಕೆರೆಯ ಎದುರಿನ ಜಮೀನಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿಶಾಲ ಜಾಗದಲ್ಲಿ ಬೃಹತ್‌ ವೇದಿಕೆ ನಿರ್ಮಾಣ, ಸಭಿಕರಿಗೆ ಆಸನ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶಾಮಿಯಾನ ಹಾಕುವ ಕೆಲಸಗಳನ್ನು ವೀಕ್ಷಿಸಿದರು.

ಕಾರ್ಯಕ್ರಮಕ್ಕೆ ಬರುವ ಜನರಿಗೆ ಆಹಾರ ಪೂರೈಸಲು ಇನ್ನೊಂದು ಜಮೀನಿನಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸುಮಾರು 35 ಆಹಾರ ಕೌಂಟರ್‌ಗಳನ್ನು ಇಲ್ಲಿ ತೆರೆಯಲಾಗುತ್ತಿದೆ. ಈ ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಧ್ರುವನಾರಾಯಣ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಉಮ್ಮತ್ತೂರು ಕೆರೆಯಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಸಚಿವರಾದ ಎಚ್‌.ಸಿ. ಮಹದೇವಪ್ಪ, ಯು.ಟಿ. ಖಾದರ್‌ ಭಾಗವಹಿಸಲಿದ್ದಾರೆ. ಸುಮಾರು 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.

‘ಈ ಯೋಜನೆಯಿಂದ ಮೂರು ತಾಲ್ಲೂಕುಗಳ 59 ಗ್ರಾಮಗಳ ಜನರಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಲಿದ್ದು, ಕೃಷಿಗೂ ಅನುಕೂಲವಾಗಲಿದೆ. ಈ ಹಿಂದೆ ಇದೇ ರೀತಿಯ ಯೋಜನೆಯಲ್ಲಿ 20 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಅದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಿದೆ’ ಎಂದರು.

‘ಒಟ್ಟು 24 ಕೆರೆಗಳಿಗೆ ನೀರು ತುಂಬಿಸುತ್ತಿದ್ದು, ಸಿದ್ದರಾಮಯ್ಯ ಅವರ ವರುಣಾ ಕ್ಷೇತ್ರದಲ್ಲಿನ 2 ಕೆರೆಗಳು ಮಾತ್ರ ಇದರಲ್ಲಿ ಒಳಗೊಂಡಿವೆ. ಈ ಯೋಜನೆಯಿಂದ ಕುಡಿಯುವ ನೀರಿನ ಅಭಾವ ತೀವ್ರವಾಗಿರುವ ಸಂತೇಮರಹಳ್ಳಿ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್‌ ಅವರ ಪ್ರಯತ್ನದ ಫಲವಾಗಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದರು.

ಪ್ರಭಾರ ಜಿಲ್ಲಾಧಿಕಾರಿ ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ರೂಪಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ. ಚಂದ್ರು, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ತಹಶೀಲ್ದಾರ್ ಪುರಂದರ, ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳಾದ ಮರಿಸ್ವಾಮಿ ಮತ್ತು ರಾಜೇಂದ್ರ ಪ್ರಸಾದ್‌ ಇದ್ದರು.

ಚಾಮುಲ್‌ಗೆ ಅನುದಾನದ ನಿರೀಕ್ಷೆ

ಈ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಗಂಟೆಗೆ ಚಾಮರಾಜನಗರ ಜಿಲ್ಲಾ ಸಹಕಾರಿ ಒಕ್ಕೂಟದ (ಚಾಮುಲ್‌) ಘಟಕಕ್ಕೆ ಭೇಟಿ ನೀಡಲಿದ್ದಾರೆ.

ಇಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಯಂತ್ರೋಪಕರಣಗಳ ಅಳವಡಿಕೆಗೆ ₹ 54 ಕೋಟಿ ಅಗತ್ಯವಿದೆ. ಅದನ್ನು ಸ್ವತಃ ವೀಕ್ಷಿಸಲಿರುವ ಮುಖ್ಯಮಂತ್ರಿ ಅವರು ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಧ್ರುವನಾರಾಯಣ ತಿಳಿಸಿದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆ

ಸಿದ್ದರಾಮಯ್ಯ ಅವರ ವರುಣಾ ಕ್ಷೇತ್ರದಲ್ಲಿನ 2 ಕೆರೆಗಳು ಮಾತ್ರ ಇದರಲ್ಲಿ ಒಳಗೊಂಡಿವೆ.   ಸಂತೇಮರಹಳ್ಳಿ ಭಾಗದ ಜನರಿಗೆ ಹೆಚ್ಚು ಅನುಕೂಲ

0.628 ಟಿಎಂಸಿ ಅಡಿ, ಕಬಿನಿಯಿಂದ ಕೆರೆಗಳಿಗೆ ತುಂಬಿಸುವ ನೀರಿನ ಪ್ರಮಾಣ

₹233 ಕೋಟಿ ಯೋಜನೆಯ ಅಂದಾಜು ವೆಚ್ಚ

51.13 ಕಿ.ಮೀ. ರೈಸಿಂಗ್ ಮೈನ್ ಉದ್ದ

***

59 ಈ ವ್ಯಾಪ್ತಿಯಲ್ಲಿನ ಗ್ರಾಮಗಳು

24 ನೀರು ತುಂಬಿಸಲಾಗುವ ಕೆರೆಗಳು

21 ಚಾಮರಾಜನಗರ ತಾಲ್ಲೂಕಿನ ಕೆರೆಗಳು

02 ನಂಜನಗೂಡು ತಾಲ್ಲೂಕಿನ ಕೆರೆಗಳು

01 ಯಳಂದೂರು ತಾಲ್ಲೂಕಿನ ಕೆರೆ

ಪ್ರತಿಕ್ರಿಯಿಸಿ (+)