ಭಾನುವಾರ, ಡಿಸೆಂಬರ್ 15, 2019
21 °C

ಚೀನಾ–ಭಾರತ ಮಿಲಿಟರಿ ಘರ್ಷಣೆ: ಸರ್ವಪಕ್ಷ ನಾಯಕರ ಸಭೆ ಕರೆದ ಸುಷ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀನಾ–ಭಾರತ ಮಿಲಿಟರಿ ಘರ್ಷಣೆ: ಸರ್ವಪಕ್ಷ ನಾಯಕರ ಸಭೆ ಕರೆದ ಸುಷ್ಮಾ

ನವದೆಹಲಿ: ಪಶ್ಚಿಮ ಭೂತಾನ್‌ನ ಡಾಂಗ್‌ಲಾಂಗ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಘರ್ಷಣೆ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಶುಕ್ರವಾರ ಸರ್ವ ಪಕ್ಷ ನಾಯಕರ ಸಭೆ ಕರೆದಿದ್ದಾರೆ.

ಗೃಹ ಸಚಿವ ರಾಜನಾಥ ಸಿಂಗ್‌ ಅವರ ನಿವಾಸದಲ್ಲಿ ಶುಕ್ರವಾರ ನಡೆಯುವ ಸಭೆಗೆ ಹಾಜರಾಗುವಂತೆ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ನಾಯಕರನ್ನು ಸುಷ್ಮಾ ಸ್ವರಾಜ್‌ ಆಹ್ವಾನಿಸಿದ್ದಾರೆ.

ಈ ಸಮಾಲೋಚನಾ ಸಭೆಗೆ ಆಡಳಿತಾರೂಢ ಬಿಜೆಪಿಯ ಕೆಲವು ಮೈತ್ರಿಕೂಟಗಗಳ ನಾಯಕರೂ ಸಹ ಭಾಗವಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಮತ್ತು ರಾಜ್ಯಸಭೆಯ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಲಿದೆ. ಭಾರತೀಯ ಸೇನೆ ಮತ್ತು ಚೀನಾ ಪೀಪಲ್ಸ್‌ ಲಿಬರೇಷನ್‌ ಆರ್ಮಿ ನಡುವಿನ ಘರ್ಷಣೆ ಬಗ್ಗೆ ವಿರೋಧ ಪಕ್ಷಗಳ ಅಭಿಪ್ರಾಯ, ನಿಲುವುಗಳನ್ನು ಪಡೆಯಲು ಸರ್ಕಾರ ಸಂಸತ್‌ನ ಮುಂಗಾರು ಅಧಿವೇಶನಕ್ಕೂ ಮೊದಲೇ ಸಭೆ ಕರೆದಿದೆ.

ಪಶ್ಚಿಮ ಭೂತಾನ್‌ನ ಡಾಂಗ್‌ಲಾಂಗ್‌ನ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿದ್ದಾರೆ, ಏನನ್ನೂ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದರು.

ಆರಂಭವಾಗಲಿರುವ ಅಧಿವೇಶನದಲ್ಲಿ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆ ಉಭಯ ಸದನಗಳಲ್ಲೂ ಡಾಂಗ್‌ಲಾಂಗ್‌ನ ವಿಷಯವಾಗಿ ಪ್ರಶ್ನಿಸಬಹುದು.

ಪ್ರತಿಕ್ರಿಯಿಸಿ (+)