ಶುಕ್ರವಾರ, ಡಿಸೆಂಬರ್ 6, 2019
17 °C
ಕರ್ನಾಟಕ ಗೃಹ ಮಂಡಳಿಯಿಂದ ವಶಕ್ಕೆ ಪಡೆಯಲು ವಿಶೇಷ ಸಭೆಯಲ್ಲಿ ಸರ್ವಾನುಮತದ ನಿರ್ಣಯ

ನಗರಸಭೆ ವಶಕ್ಕೆ ಚನ್ನಪಟ್ಟಣ ಬಡಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರಸಭೆ ವಶಕ್ಕೆ ಚನ್ನಪಟ್ಟಣ ಬಡಾವಣೆ

ಹಾಸನ: ನಗರದ ಹೊಸ ಬಸ್‌ ನಿಲ್ದಾಣ ಎದುರು ಇರುವ ಚನ್ನಪಟ್ಟಣ ಬಡಾವಣೆಯನ್ನು ಕರ್ನಾಟಕ ಗೃಹ ಮಂಡಳಿಯಿಂದ ತನ್ನ ವಶಕ್ಕೆ ಪಡೆಯಲು ನಗರಸಭೆ ನಿರ್ಧರಿಸಿದೆ.

ನಗರಸಭೆ ಕುವೆಂಪು ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶೇಷ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ಸಭೆ ಆರಂಭದಲ್ಲಿ ಅಧ್ಯಕ್ಷ ಎಚ್.ಎಸ್.ಅನಿಲ್‌ಕುಮಾರ್ ಮಾತನಾಡಿ, ಚನ್ನಪಟ್ಟಣ ಬಡಾವಣೆ ಅಭಿವೃದ್ಧಿಗೆ ₹ 6 ಕೋಟಿ ಅನುದಾನ ನೀಡುವುದಾಗಿ ಗೃಹ ಮಂಡಳಿ ಹೇಳಿದೆ. ನಗರಸಭೆ ಒಪ್ಪಿಗೆ ಪತ್ರ ಸಲ್ಲಿಸಿದ ವಾರದ ಒಳಗೆ ಹಣ ನೀಡುವುದಾಗಿ ಕೆಎಚ್‌ಬಿ ಅಧಿಕಾರಿ ಹೇಳಿದ್ದಾರೆ. ₹6 ಕೋಟಿ ಅನುದಾನ ಪೈಕಿ ₹ 3.50 ಕೋಟಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ₹ 2 ಕೋಟಿ ವಿನಿಯೋಗಿಸಲಾಗುವುದು ಎಂದು ಹೇಳಿದರು.

ಚನ್ನಪಟ್ಟಣ ಬಡಾವಣೆಯನ್ನು ನಗರಸಭೆ ವಶಕ್ಕೆ ಪಡೆದು ಅಭಿವೃದ್ಧಿಪಡಿಸುವ ಬಗ್ಗೆ 2015 ರಿಂದಲೂ ಚರ್ಚೆ ನಡೆಸಲಾಗುತ್ತಿದೆ. ಈಗ ಗೃಹ ಮಂಡಳಿಯೇ ಹಸ್ತಾಂತರಿಸಲು ಮುಂದೆ ಬಂದಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ವಿವರಿಸಿದರು.

ಬಿಜೆಪಿ ಸದಸ್ಯ ಸುರೇಶ್‌ ಕುಮಾರ್ ಮಾತನಾಡಿ, ಈ ಹಿಂದೆ ಇದೇ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರಿಸಲು ₹ 14 ಕೋಟಿ ಅನುದಾನ ನೀಡುವುದಾಗಿ ಗೃಹ ಮಂಡಳಿ ಹೇಳಿತ್ತು. ಈಗ ಕೇವಲ ₹ 6 ಕೋಟಿ ನೀಡುವುದಾಗಿ ಹೇಳಿದೆ. ನಿಗದಿಪಡಿಸಿದ ಈ ಹಣವನ್ನು ಗೃಹಮಂಡಳಿ ನೀಡುತ್ತದೆ ಎಂಬ ನಂಬಿಕೆಯಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಸದಸ್ಯ ಯಶವಂತ್ ಮಾತನಾಡಿ, ನಗರದ 6ನೇ ವಾರ್ಡ್‌ನ ಪಶು ಆಸ್ಪತ್ರೆ ಸಮೀಪದ ಎಸ್‌ಜೆಪಿ ರಸ್ತೆಯ ಬಲಭಾಗದಲ್ಲಿ 7 ಸಾವಿರ ಅಡಿ ನಗರಸಭೆ ಜಾಗವನ್ನು ಖಾಸಗಿ ವ್ಯಕ್ತಿ ಕಬಳಿಕೆ ಮಾಡಿಕೊಂಡಿದ್ದಾರೆ. ಇದೇ ರೀತಿ ನಗರದ ಅನೇಕ ಪ್ರದೇಶ ಖಾಸಗಿಯವರ ಪಾಲಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಆಸ್ತಿ ಕಬಳಿಕೆದಾರರಿಗೆ ಶಿಕ್ಷೆ ವಿಧಿಸಬೇಕು. ನಗರಸಭೆ ಜಾಗದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು,  ನಗರಸಭೆ ಆಸ್ತಿ ರಕ್ಷಣೆಗೆ ಬದ್ಧರಾಗಿದ್ದು, ತಮ್ಮ ವಾರ್ಡ್‌ಗಳಲ್ಲಿ  ಜಾಗ ಒತ್ತುವರಿ ನಡೆದಿದ್ದರೆ ಗಮನಕ್ಕೆ ತರಬೇಕು. ಎಲ್ಲಾ  ವಾರ್ಡ್‌ಗಳಲ್ಲೂ ಸರ್ವೆ  ಕಾರ್ಯ ನಡೆಯುತ್ತಿದೆ. ಕಂದಾಯ ಭೂಮಿಯನ್ನು ಖಾತೆ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲ. ಒಂದು ವೇಳೆ ಕಂದಾಯ ಭೂಮಿ ಖಾತೆ ಮಾಡಿಕೊಟ್ಟಿದ್ದರೆ  ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಪೌರ ಕಾರ್ಮಿಕರ ನಿವೇಶನಕ್ಕಾಗಿ ಜಮೀನು ಖರೀದಿಸಲು ₹ 63.45 ಲಕ್ಷ   ಹಣವನ್ನು ನಗರಸಭೆಯಿಂದ ಭರಿಸಲು ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಲೀಲಾವತಿ ವಾಸು, ಪ್ರಭಾರ ಪೌರಾಯುಕ್ತ ಕೃಷ್ಣಮೂರ್ತಿ, ಎಂಜಿನಿಯರ್ ನಾಗೇಂದ್ರ, ಪ್ರೊಬೆಷನರಿ ಕೆಎಎಸ್ ಅಧಿಕಾರಿ ನಾಗರತ್ನಾ ಹಾಜರಿದ್ದರು.

***

ಕಂದಾಯ ಭೂಮಿ ಖಾತೆ ಮಾಡಿಕೊಟ್ಟಿದ್ದರೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು

ಎಚ್‌.ಎಸ್‌. ಅನಿಲ್‌ಕುಮಾರ್, ನಗರಸಭೆ ಅಧ್ಯಕ್ಷ

ಪ್ರತಿಕ್ರಿಯಿಸಿ (+)