ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಡೆಂಗಿ: ಆಸ್ಪತ್ರೆ ಬಾಗಿಲಿಗೂ ಸೊಳ್ಳೆ ಪರದೆ

ಹಳ್ಳಿಗಳಲ್ಲಿ ಹೆಚ್ಚಿದ ಆತಂಕ, ದಿನೇ ದಿನೇ ಜ್ವರ ಪೀಡಿತರ ಸಂಖ್ಯೆ ಹೆಚ್ಚಳ, ಆಗದ ಸೊಳ್ಳೆ ನಿಯಂತ್ರಣ
Last Updated 13 ಜುಲೈ 2017, 10:57 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಡೆಂಗಿ ಜ್ವರ ನಿಯಂತ್ರಣಕ್ಕೆ ಬಾರದೆ ನಾಗಾಲೋಟದಿಂದ ಓಡುತ್ತಿದೆ. ಡೆಂಗಿ ಹಾವಳಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಸಹ ಬೆದರುತ್ತಿದ್ದಾರೆ. ಸೊಳ್ಳೆಗಳು ಆಸ್ಪತ್ರೆ ಒಳಗೆ ಸೇರದಂತೆ ಕಿಟಕಿ– ಬಾಗಿಲುಗಳಿಗೆ ಸೊಳ್ಳೆ ಪರದೆ ಕಟ್ಟಿಕೊಳ್ಳುತ್ತಿದ್ದಾರೆ.

ಸೊಳ್ಳೆಗಳ ನಿಯಂತ್ರಣಕ್ಕೆ ಪಾಲಿಕೆ ಸಂಪೂರ್ಣವಾಗಿ ವಿಫಲವಾಗಿದೆ. ಡೆಂಗಿ ಪೀಡಿತ ರೋಗಿಗಳು ಚಿಕಿತ್ಸೆ ಪಡೆಯುವಾಗಲೇ ಮತ್ತೆ ಸೊಳ್ಳೆಗಳು ಕಚ್ಚಿದರೆ ಕಷ್ಟವಾಗಲಿದೆ. ಅಲ್ಲದೆ ಬೇರೆ ಬೇರೆ ರೋಗಿಗಳಿಗೂ ಸೊಳ್ಳೆ ಕಚ್ಚುವ ಅಪಾಯ ಇರುವುದರಿಂದ ಹೆದರಿ ಬಾಗಿಲು, ಕಿಟಕಿಗಳಿಗೂ ಸೊಳ್ಳೆ ಪರದೆ ಹಾಕಿಸಿದ್ದಾಗಿ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.

‘ಸೊಳ್ಳೆ ಪರದೆ ಹಾಕುವುದರಿಂದ ಶೇ 100 ರಷ್ಟು ಸೊಳ್ಳೆ ನಿಯಂತ್ರಣ ಸಾಧ್ಯವಿಲ್ಲ. ಆದರೆ ಸಾಧ್ಯವಿದ್ದಷ್ಟು ನಿಯಂತ್ರಣ ಮಾಡುವ ಉದ್ದೇಶದಿಂದ ನಾವು ಸೊಳ್ಳೆ ಪರದೆ ಹಾಕಿದ್ದೇವೆ. ವ್ಯವಸ್ಥೆಯೇ ಸರಿಯಾಗಬೇಕು. ನಗರದ ಸ್ವಚ್ಛತೆ ಕಡೆಗೆ ಎಲ್ಲರೂ ಗಮನ ನೀಡಬೇಕು’ ಎಂದು ನಗರದ ಚರಕ ಆಸ್ಪತ್ರೆಯ ಡಾ.ಬಸವರಾಜ್ ಹೇಳಿದರು.

‘ಪಾಲಿಕೆಯ ಮೂವರು ಆರೋಗ್ಯ ನಿರೀಕ್ಷಕರು, ಇಬ್ಬರು ಸಹಾಯಕ ಕಾರ್ಯಪಾಲಕ ಎಂಜಿನಿಯರುಗಳು,  ಹಲವಾರು ವಾಲ್ವ್‌ಮನ್‌ಗಳು,  ಪೌರ ಕಾರ್ಮಿಕರು ಜ್ವರದಿಂದ ನರಳುತ್ತಿದ್ದಾರೆ. ಪಾಲಿಕೆಯ ಕಾಲು ಭಾಗ ಸಿಬ್ಬಂದಿ  ಡೆಂಗಿ ಮಾತ್ರವಲ್ಲದೆ ಬೇರೆ ಬೇರೆ ಜ್ವರಗಳಿಂದ ನರುಳುತ್ತಿದ್ದಾರೆ. ನನಗೂ ಡೆಂಗಿ ಜ್ವರ ಬಂದಿತ್ತು’ ಎಂದು ಎಂಜಿನಿಯರ್ ವಸಂತ್  ಹೇಳಿದರು.

ದಿನೇ ದಿನೇ ಜ್ವರ ಪೀಡಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಅಲ್ಲಲ್ಲಿ ಸಾವಿಗೀಡಾದ ವರದಿಗಳು ಕೇಳಿ ಬರುತ್ತಿವೆ. ಆದರೆ ಆರೋಗ್ಯ ಇಲಾಖೆ ಸಾವು ಆಗಿರುವ ಬಗ್ಗೆ ಖಚಿತಪಡಿಸುತ್ತಿಲ್ಲ.

ಹಳ್ಳಿಗಳಲ್ಲಿ ಸಾಮೂಹಿಕವಾಗಿ ಜನರು ಜ್ವರ ಪೀಡಿತರಾಗುತ್ತಿದ್ದಾರೆ. ಹಳ್ಳಿಗಳಲ್ಲಿರುವ ಕ್ಲಿನಿಕ್‌ಗಳು, ಸರ್ಕಾರಿ ಆಸ್ಪತ್ರೆಗಳು ಸಹ ತುಂಬಿ ತುಳುಕುತ್ತಿವೆ. ಮೂರು–ನಾಲ್ಕು ದಿನ ಚಿಕಿತ್ಸೆ ಪಡೆದವರು ಗುಣಮುಖರಾಗದೆ ತುಮಕೂರು– ಬೆಂಗಳೂರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.

‘ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಬಹುತೇಕ ಗ್ರಾಮಗಳಲ್ಲಿ ಡೆಂಗಿ ಕಾಣಿಸಿಕೊಂಡಿದೆ. ಹಲವಾರು ಜನರು ತುಮಕೂರು, ಬೆಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಸಿ.ಎಸ್‌.ಪುರ ಗ್ರಾ.ಪಂ ಅಧ್ಯಕ್ಷೆ ಉಷಾ ರಂಗೇಗೌಡ ತಿಳಿಸಿದರು.

‘ಫಾಗಿಂಗ್ ಮಾಡಲು ಬೇಕಾದ ಪೈರೊಥರಮ್‌ ದ್ರಾವಣ ಇಲ್ಲ. ಮೂರು ದಿನಗಳಿಂದ ಪ್ರಾಥಮಿಕ ಆಸ್ಪತ್ರೆ ವೈದ್ಯರನ್ನು ಕೇಳುತ್ತಿದ್ದೇವೆ. ಇವೊತ್ತು ಕೊಟ್ಟಿದ್ದಾರೆ. ನಾಳೆಯಿಂದ ಫಾಗಿಂಗ್ ಆರಂಭಿಸಬೇಕು’ ಎಂದು ಹೇಳಿದರು.

‘ನಮ್ಮೂರಿನಲ್ಲಿ ಏಳು ಜನರು ಡೆಂಗಿ ಪೀಡಿತರಾಗಿದ್ದಾರೆ. ಮೂವರಿಗೆ ಚಿಕಿತ್ಸೆ ಸಾಧ್ಯವಾಗದೆ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ. ಇಷ್ಟಾದರೂ  ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಲು ಗ್ರಾಮ ಪಂಚಾಯಿತಿಗೆ ಸಾಧ್ಯವಾಗಿಲ್ಲ’ ಎಂದು ಸದಸ್ಯೆ ಗೀತಾ ರಾಮಕೃಷ್ಣ ಹೇಳಿದರು.

***

ತುರ್ತು ಸಭೆಗೆ ಪಾಲಿಕೆ ಸದಸ್ಯರ ಪತ್ರ

ನಗರದಲ್ಲಿ ಹೆಚ್ಚುತ್ತಿರುವ ಡೆಂಗಿ, ಚಿಕೂನ್ ಗುನ್ಯಾ ಜ್ವರಗಳಿಗೆ ನಿಯಂತ್ರಣ ಸಾಧ್ಯವಾಗದ ಕಾರಣ ಕೂಡಲೇ ತುರ್ತು ಸಭೆ ಕರೆಯಬೇಕೆಂದು ಪಾಲಿಕೆಯ ಹದಿನೈದು ಸದಸ್ಯರು ಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೆ ಬುಧವಾರ ಪತ್ರ ಬರೆದಿದ್ದಾರೆ.

‘ಇಡೀ ನಗರ ಡೆಂಗಿಯಿಂದ ಬಳಲುತ್ತಿದೆ. ಪಾಲಿಕೆ ಏನೇನು ಕ್ರಮ ತೆಗೆದುಕೊಂಡಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಆರೋಗ್ಯ ಇಲಾಖೆ, ಪಾಲಿಕೆ ಸದಸ್ಯರ ಪರಸ್ಪರ ಸಹಕಾರದಲ್ಲಿ ಡೆಂಗಿ ನಿಯಂತ್ರಣ ಕೆಲಸ ಆಗಬೇಕು. ಆದರೆ ಆರೋಗ್ಯ ಇಲಾಖೆಯವರು ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ’ ಎಂದು ಹೇಳಿದ್ದಾರೆ.

ಜಿಲ್ಲಾಸ್ಪತ್ರೆ, ಮಹಾನಗರ ಪಾಲಿಕೆಯಲ್ಲಿ ಪ್ರತ್ಯೇಕವಾಗಿ ರಕ್ತ  ಪರೀಕ್ಷಾ ಕೇಂದ್ರಗಳನ್ನು ತೆರೆಯಬೇಕು ಎಂದು ಸದಸ್ಯರು ಒತ್ತಾಯಿಸಿದ್ದಾರೆ.

***

ಆದೇಶ ರದ್ದುಪಡಿಸಲಿ

ನಗರದಲ್ಲಿ ಹಂದಿಗಳನ್ನು ಹಿಡಿಯದಂತೆ ಈ ಹಿಂದಿನ ಜಿಲ್ಲಾಧಿಕಾರಿ ಸತ್ಯಮೂರ್ತಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ನಗರದಲ್ಲಿ ಹಂದಿಗಳ ಕಾಟ ವಿಪರೀತವಾಗಿದೆ. ಜಿಲ್ಲಾಧಿಕಾರಿ ಆದೇಶದ ಕಾರಣ ಹಂದಿಗಳನ್ನು ನಗರದಿಂದ ಹೊರಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

‘ಹಂದಿ ಜೋಗರ ಸಮಸ್ಯೆಯನ್ನು ಬಗೆಹರಿಸಬೇಕು. ನಗರ ಸಾಂಕ್ರಾಮಿಕ ರೋಗ ಪೀಡಿತವಾಗಿರುವುದಿಂದ ನಗರ ಜನರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಮೋಹನ್‌ ರಾಜ್ ಅವರು ಕೂಡಲೇ ಆದೇಶ ರದ್ದುಪಡಿಸಬೇಕು’ ಎಂದು ಪಾಲಿಕೆ ಸದಸ್ಯ ಟಿ.ಆರ್‌.ನಾಗರಾಜ್‌  ಹೇಳಿದರು.

***

₹ 500 ಪಡೆಯುವಲ್ಲಿ ₹900!
ಡೆಂಗಿ ಕಾರ್ಡ್‌ ಪರೀಕ್ಷೆಗೆ ₹ 500 ಪಡೆಯಬೇಕೆಂದು ಸರ್ಕಾರ ನಿಗದಿಪಡಿಸಿದೆ. ಆದರೆ ಎಲ್ಲ ಖಾಸಗಿ ಪ್ರಯೋಗಾಲಯಗಳಲ್ಲೂ ₹ 900 ಪಡೆಯುತ್ತಿದ್ದಾರೆ. ಆದರೂ ಆರೋಗ್ಯ ಇಲಾಖೆ ಮೌನವಾಗಿದೆ.

‘ನನ್ನ ಮಗನ ಪರೀಕ್ಷೆಗೆ ಸಿ.ಎಸ್‌.ಪುರದಲ್ಲಿರುವ ಲ್ಯಾಬ್‌ನವರು ₹ 900 ಪಡೆದರು’ ಎಂದು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು         ತ್ತಿರುವ ರೋಗಿ ಕೃಷ್ಣಾ   ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT