ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ವಿ.ವಿ: ಅಬ್ಬಬ್ಬಾ ಭಾರದ ಶುಲ್ಕ!

ಸ್ವಯಂ ಹಣಕಾಸು ಯೋಜನೆಯಡಿ ಕೋರ್ಸ್‌ಗಳ ಅಧ್ವಾನ, ವಿದ್ಯಾರ್ಥಿಗಳ ವಿರೋಧ
Last Updated 13 ಜುಲೈ 2017, 11:09 IST
ಅಕ್ಷರ ಗಾತ್ರ

ತುಮಕೂರು: ಕೇವಲ ಒಂದೇ ಜಿಲ್ಲೆ ವ್ಯಾಪ್ತಿಗಷ್ಟೆ ಸೀಮಿತವಾಗಿ ಆರಂಭಗೊಂಡ ದೇಶದ ಮೊದಲ ವಿ.ವಿ ಎಂಬ ಹೆಗ್ಗಳಿಕೆಯ ತುಮಕೂರು ವಿಶ್ವವಿದ್ಯಾನಿಲಯವು ಶುಲ್ಕದ ವಿಚಾರದಲ್ಲಿ ಮಾತ್ರ ಬೇರೆ ವಿಶ್ವವಿದ್ಯಾಲಯಗಳನ್ನು ಮೀರಿಸುತ್ತಿದೆ.

ಮೂಲ ಸೌಲಭ್ಯದಲ್ಲೂ ಹಿಂದೆ ಉಳಿದಿರುವ ವಿ.ವಿಯು ಅತಿ ಹೆಚ್ಚು ಶುಲ್ಕ ವಿಧಿಸುವ ಮೂಲಕ ವಿದ್ಯಾರ್ಥಿಗಳ ಬೆನ್ನಿಗೆ ಬರೆ ಎಳೆಯುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಇದೆ.

ಈ ಆರೋಪಕ್ಕೆ ಮತ್ತೊಂದಿಷ್ಟು ಪುಷ್ಟಿಕೊಡುವಂತೆ ಈ ವರ್ಷದಿಂದ ಸ್ವಯಂ ಹಣಕಾಸು ಯೋಜನೆಯಡಿ ಆರಂಭಿಸಿರುವ ಕೋರ್ಸ್‌ಗಳಿಗೆ ಬೇಕಾಬಿಟ್ಟಿ ಶುಲ್ಕ ವಿಧಿಸುವ ಮೂಲಕ ಮಧ್ಯಮ ವರ್ಗ ಹಾಗೂ ಬಡ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಗಗನ ಕುಸುಮವಾಗುವಂತೆ ಮಾಡಿದೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.

ಈ ವರ್ಷದಿಂದ ಸ್ವಯಂ ಹಣಕಾಸು  ಯೋಜನೆಯಡಿ ಸ್ನಾತಕೋತ್ತರ ವಿಭಾಗದಲ್ಲಿ ಎಂಎ –ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಎಂಸಿಎ,  ಮನಃಶಾಸ್ತ್ರ (ಸೈಕಾಲಜಿ) ವಿಭಾಗಗಳನ್ನು ತೆರೆಯಲಾಗಿದೆ. ಆದರೆ ಇವುಗಳಿಗೆ ವಿಧಿಸಿರುವ ಶುಲ್ಕ ಮಾತ್ರ ಹುಬ್ಬೇರಿಸುವಂತೆ ಇದೆ.

ಪತ್ರಿಕೋದ್ಯಮ ಎಂಎಗೆ ಸೆಮಿಸ್ಟರ್‌ಗೆ ₹ 25 ಸಾವಿರ ಶುಲ್ಕ ವಿಧಿಸಲಾಗಿದೆ. ಅಂದರೆ ಎರಡು ವರ್ಷಗಳ ಈ ಕೋರ್ಸ್‌ಗೆ ವಿದ್ಯಾರ್ಥಿಗಳು ಬರೋಬ್ಬರಿ ₹ 1 ಲಕ್ಷ ಶುಲ್ಕ ಭರಿಸಬೇಕಾಗಿದೆ.

ಇನ್ನೂ ಎಂಸಿಎಗೆ ಸೆಮಿಸ್ಟರ್‌ ₹ 40 ಸಾವಿರ ಶುಲ್ಕ ವಿಧಿಸಲಾಗಿದೆ. ಅಂದರೆ ಎರಡು ವರ್ಷಗಳ ಈ ಕೋರ್ಸ್‌ಗೆ ₹1.60 ಲಕ್ಷ ಶುಲ್ಕ ಭರಿಸಬೇಕಾಗಿದೆ. ಸೈಕಾಲಜಿ ಸ್ನಾತಕೋತರ ಪದವಿಗೆ ಸೆಮಿಸ್ಟರ್‌ಗೆ ₹25 ಸಾವಿರ ವಿಧಿಸಲಾಗಿದೆ. ಈ ಪದವಿ ಪಡೆಯಲು ₹ 1 ಲಕ್ಷ ವ್ಯಯಿಸಬೇಕಾಗಿದೆ.

ಶುಲ್ಕ ಅಲ್ಲದೆ ಹಾಸ್ಟೆಲ್‌ ಮತ್ತಿತರ ಖರ್ಚುಗಳಿಗೆ ವರ್ಷಕ್ಕೆ ₹1 ಲಕ್ಷವಾದರೂ ವ್ಯಯಿಸಬೇಕು. ಇಷ್ಟೊಂದು ಹಣ ಖರ್ಚು ಮಾಡಿ ಓದುವ ಶಕ್ತಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.

ಸಾರ್ವಜನಿಕ ಆಡಳಿತ, ವಿಪತ್ತು ನಿರ್ವಹಣೆ ಕೋರ್ಸ್‌ಗಳನ್ನು ಸಹ ಸ್ವಯಂ ಹಣಕಾಸು ಯೋಜನೆಯಡಿ ಆರಂಭಿಸಿದ್ದು, ಇವುಗಳಿಗೆ ಸೆಮಿಸ್ಟರ್‌ಗೆ ₹ 11 ಸಾವಿರ ಶುಲ್ಕ ವಿಧಿಸಲಾಗಿದೆ. ಇದು ಸಹ ಹೆಚ್ಚೆ ಆಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಎಲ್ಲ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 15 ಅರ್ಜಿ ಸಲ್ಲಿಸಲು ಕಡೆ ದಿನವಾಗಿದೆ.  ಜುಲೈ 27ರಂದು ಕೌನ್ಸೆಲಿಂಗ್ ನಡೆಯಲಿದೆ.

***

ದುಬಾರಿ ಶುಲ್ಕ , ವಿದ್ಯಾರ್ಥಿಗಳಿಗೆ ಸೌಲಭ್ಯ ಮಾತ್ರ ಇಲ್ಲ

ಇಷ್ಟೊಂದು ದುಬಾರಿ ಶುಲ್ಕ ಕಟ್ಟಿದ ವಿದ್ಯಾರ್ಥಿಗಳಿಗೆ ಸೌಲಭ್ಯ ಮಾತ್ರ ಇಲ್ಲವಾಗಿದೆ. ಹೊಸ ಕೋರ್ಸ್‌ಗಳನ್ನು ಆರಂಭಿಸಿದರೂ ಈವರೆಗೂ ಕಾಲೇಜಿನ ಕೊಠಡಿ ಎಲ್ಲಿವೆ ಎಂಬುದೇ ಯಾರಿಗೂ ಗೊತ್ತಿಲ್ಲ. ಏನೇನು ಸೌಲಭ್ಯಗಳಿವೆ ಎಂಬುದನ್ನು ವಿ.ವಿ. ಹೇಳಿಲ್ಲ.

ಮೂಲಗಳ ಪ್ರಕಾರ, ‘ ಈ ಎಲ್ಲ ಕೋರ್ಸ್‌ಗಳಿಗೆ ಪ್ರತ್ಯೇಕ ಕಟ್ಟಡ ಇಲ್ಲ. ಕಲಾ ಕಾಲೇಜು ಬಳಸಿಕೊಂಡು ಕೋರ್ಸ್‌ ಆರಂಭಿಸುವ ಚಿಂತನೆ ವಿ.ವಿಗೆ ಇದೆ’ ಎಂದು ಹೇಳಲಾಗುತ್ತಿದೆ. ‘ಕಂಪ್ಯೂಟರ್‌ ಲ್ಯಾಬ್ ಸಹ ಇಲ್ಲ. ಪ್ರಾಧ್ಯಾಪಕರು ಇಲ್ಲ. ಒಟ್ಟಾರೆ ಅಸ್ತವ್ಯಸ್ತವಾಗಿ ಕೋರ್ಸ್ ಆರಂಭಿಸಲಾಗುತ್ತಿದೆ. ಯಾವುದೇ ಸೌಲಭ್ಯ ಇಲ್ಲ’ ಎನ್ನಲಾಗಿದೆ.

‘ಕಲಾ ಕಾಲೇಜಿನಲ್ಲಿ ಕೊಠಡಿಗಳು ಸಾಲದೆ ಅನೇಕ ಕೋರ್ಸ್‌ಗಳನ್ನು ಶಿಫ್ಟ್‌ (ಪಾಳಿ) ಆಧಾರದಲ್ಲಿ  ನಡೆಸಲಾಗುತ್ತಿದೆ. ಇದರಿಂದಾಗಿ ದೂರದ ತಾಲ್ಲೂಕುಗಳ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗ ಯಾವುದೇ ಸಿದ್ಧತೆ ಇಲ್ಲದೆ ದುಬಾರಿ ಶುಲ್ಕ ವಿಧಿಸಿ ಮತ್ತಷ್ಟು ಕೋರ್ಸ್‌ಗಳ ಆರಂಭಿಸಿರುವುದು ಇನ್ನೊಂದಿಷ್ಟು ಸಮಸ್ಯೆ ಸೃಷ್ಟಿಸಲಿದೆ ಹೊರತು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಕಷ್ಟ’ ಎಂಬ ಮಾತುಗಳು ಕೇಳಿಬಂದಿವೆ.

***

ಸ್ವಲ್ಪ ಜಾಸ್ತಿಯಾಗಿದೆ

‘ಈ ಕೋರ್ಸ್‌ಗಳಿಗೆ ಸರ್ಕಾರದಿಂದ ಯಾವುದೇ ಸಹಾಯ ಸಿಗುವುದಿಲ್ಲ.  ಎಲ್ಲ ಖರ್ಚು ವೆಚ್ಚಗಳನ್ನು ವಿ.ವಿಯೇ ಭರಿಸಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಶುಲ್ಕ ವಿಧಿಸಲಾಗಿದೆ’ ಎಂದು ವಿ.ವಿ ಕುಲಪತಿ ಪ್ರೊ. ವೆಂಕಟೇಶ್ವರಲು ಪ್ರತಿಕ್ರಿಯಿಸಿದರು.

ಶುಲ್ಕ ಹೆಚ್ಚಿದ್ದರೂ ಪರಿಶಿಷ್ಟರು, ಹಿಂದುಳಿದ ವರ್ಗದವರಿಗೆ  ಸರ್ಕಾರದಿಂದ ಶುಲ್ಕ ವಾಪಸ್‌ ಬರಲಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ  ಖಾಸಗಿ ವಿ.ವಿಗಳಿಗೆ ಹೋಲಿಸಿದರೆ ಈ ಶುಲ್ಕ ಕಡಿಮೆ ಅಲ್ಲವೇ ಎಂದು ಹೇಳಿದರು.

ಮುಂದಿನ ವರ್ಷಗಳಲ್ಲಿ ಉತ್ತಮ ಸೌಲಭ್ಯ ನೀಡಲಾಗುವುದು. ಉತ್ತಮ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಎಂಸಿಎ ಕೋರ್ಸ್‌ ಶುಲ್ಕ ರಾಜ್ಯದ ಉಳಿದ ಎಲ್ಲ ವಿ.ವಿಗಳಿಗಿಂತ ಶೇ 10ರಷ್ಟು ಶುಲ್ಕ ಕಡಿಮೆ ಇದೆ ಎಂದು ಹೇಳಿದರು.

***

ಎಂಜಿನಿಯರಿಂಗ್ ಶುಲ್ಕಕ್ಕಿಂತ ಹೆಚ್ಚು!

‘ವಿ.ವಿ ವಿಧಿಸಿರುವ ಶುಲ್ಕ ಎಂಜಿನಿಯರಿಂಗ್ ಪ್ರವೇಶದ ಶುಲ್ಕಕ್ಕಿಂತ ಹೆಚ್ಚಾಗಿದೆ. ಸರ್ಕಾರಿ ಕೋಟಾದಲ್ಲಿ ಎಂಜಿನಿಯರಿಂಗ್ ಪ್ರವೇಶಕ್ಕೆ  ₹ 19,050 ಇದೆ. ಆದರೆ ವಿ.ವಿಯ ಶುಲ್ಕ ಇದನ್ನು ಮೀರಿದೆ’ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

‘ಕಡು ಬಡತನದ ವಿದ್ಯಾರ್ಥಿಗಳಿಗೆ ಸೂಪರ್ ನ್ಯೂಮರರಿ (ಸಂಖ್ಯಾಧಿಕ ಕೋಟಾ) ಕೋಟಾದಡಿ ಸೀಟು ಸಿಕ್ಕರೆ ಅದರ ಶುಲ್ಕ ಕೇವಲ ₹ 3500  ಇದೆ. ಆದರೆ ಇಲ್ಲಿ ನೋಡಿದರೆ ವಿ.ವಿ, ಬಡ ವಿದ್ಯಾರ್ಥಿಗಳು ಓದದಂಥ ಕೆಲಸ ಮಾಡಿದೆ’ ಎಂಬ ಆಕ್ರೋಶದ ಮಾತುಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT