ಬುಧವಾರ, ಡಿಸೆಂಬರ್ 11, 2019
25 °C
ರಾಜಕೀಯ ಒತ್ತಡಕ್ಕೆ ಮಣಿದು ಶಿಕ್ಷಕರನ್ನು ನಿಯೋಜಿಸದ ಬಿಇಒ: ಆರೋಪ

ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆ ತೋರಿ ಬೇರೆ ಶಾಲೆಗೆ ನಿಯೋಜನೆಗೊಂಡಿರುವ ಶಿಕ್ಷಕನ ರಾಜಕೀಯ ಒತ್ತಡಕ್ಕೆ ಮಣಿದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಅವರು ನಮ್ಮ ಶಾಲೆಗೆ ಬೇರೆ ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮಸ್ಥರು ಬುಧವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 10 ಗಂಟೆಯಿಂದ ಆರಂಭಗೊಂಡ ಪ್ರತಿಭಟನೆ ಮಧ್ಯಾಹ್ನ 3 ಗಂಟೆ ವರೆಗೆ ನಡೆಯಿತು. ಈ ವೇಳೆ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಕುಳಿತು ಪಾಠ ಕೇಳಿದರು. ಮಧ್ಯಾಹ್ನದ ಬಳಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಗುರುವಾರ ಶಾಲೆಗೆ ಬೇರೊಬ್ಬ ಶಿಕ್ಷಕನನ್ನು ನಿಯೋಜಿಸುವ ಭರವಸೆ ದೊರೆತ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಈ ವೇಳೆ ಮಾತನಾಡಿದ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷ ಎಸ್‌.ವಿ.ಗಂಗರಾಜು, ‘ಕಳೆದ ವರ್ಷದ ಏಪ್ರಿಲ್‌ನಲ್ಲಿ ಶಾಲೆಯಲ್ಲಿ ಶಿಕ್ಷಕ ನಾರಾಯಣಪ್ಪ ಎಂಬುವರು ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾರಣ ಅವರನ್ನು ಬೇರೆ ಶಾಲೆಗೆ ನಿಯೋಜನೆ ಮೇಲೆ ಕಳುಹಿಸಲಾಗಿತ್ತು.

ಮೂರು ಶಾಲೆಗಳಲ್ಲಿ ಅವರನ್ನು ಹಿಂದಕ್ಕೆ ಕಳುಹಿಸಲಾಗಿತ್ತು. ಸದ್ಯ ಅವರು ಹಿರೆನಾಗವಲ್ಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಪುನಃ ಇದೇ ಶಾಲೆಗೆ ಬರಲು ರಾಜಕಾರಣಿಗಳ ಮೂಲಕ ಬಿಇಒ ಅವರ ಮೇಲೆ ರಾಜಕೀಯ ಒತ್ತಡ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬಿಇಒ ಎನ್.ಶ್ರೀಕಂಠ ಅವರು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಶಾಲೆಗೆ ಬೇರೆ ಶಿಕ್ಷಕರನ್ನು ನಿಯೋಜನೆ ಮಾಡುತ್ತಿಲ್ಲ. ಅನೇಕ ಬಾರಿ ಬಿಇಒ. ಡಿಡಿಪಿಐ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರೂ ಬಿಇಒ ಹೊಸ ಶಿಕ್ಷಕರನ್ನು ನಿಯೋಜಿಸುವ ನಾಟಕವಾಡುತ್ತಿದ್ದಾರೆ ವಿನಾ ನಿಯೋಜಿಸುತ್ತಿಲ್ಲ. ಶಾಲೆಯಲ್ಲಿ ಒಂದರಿಂದ ಏಳನೇ ತರಗತಿ ವರೆಗೆ 63 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಅವರಿಗೆ ಕೇವಲ ಇಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶಿಕ್ಷಣ ಇಲಾಖೆ ನಿಯಮಾವಳಿ ಪ್ರಕಾರ ಈ ಶಾಲೆಗೆ ನಾಲ್ಕು ಶಿಕ್ಷಕರನ್ನು ನಿಯೋಜಿಸಬೇಕು. ಆದರೆ ಈವರೆಗೆ ಇಬ್ಬರು ಶಿಕ್ಷಕರೇ ಏಳು ತರಗತಿಗಳನ್ನು ಸಂಭಾಳಿಸುತ್ತಿದ್ದಾರೆ. ಶಿಕ್ಷಕ ಮತ್ತು ಬಿಇಒ ಅವರ ಕುತಂತ್ರದಿಂದ ಅಮಾಯಕ ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ. ಒಂದೊಮ್ಮೆ ಕೊಟ್ಟ ಮಾತಿನಂತೆ ಕೂಡಲೇ ಶಿಕ್ಷಕರನ್ನು ನಿಯೋಜಿಸದಿದ್ದರೆ ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಗ್ರಾಮದ ನಿವಾಸಿ ವೆಂಕಟೇಶಪ್ಪ ಮಾತನಾಡಿ, ‘ಇತ್ತೀಚೆಗೆ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಶಿಕ್ಷಕರು ಪಾಠ ಪ್ರವಚನ ಬಿಟ್ಟು ಸಲ್ಲದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಡಿಡಿಪಿಐ, ಬಿಇಒ ಅವರು ಲಂಚದ ಆಸೆಗೆ, ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅನೈತಿಕ ಕೆಲಸ ಮಾಡುವ, ಭ್ರಷ್ಟ ಶಿಕ್ಷಕರ ತಲೆ ಕಾಯುವ ಕೆಲಸ ಮಾಡುತ್ತಿದ್ದಾರೆ. ಪರಿಣಾಮ ಸರ್ಕಾರಿ ಶಾಲೆಗಳ ಫಲಿತಾಂಶ ನೆಲಕಚ್ಚಿ, ಪೋಷಕರು ಖಾಸಗಿ ಶಾಲೆಗಳತ್ತ ಆಕರ್ಷಿತರಾಗುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಉಪಾಧ್ಯಕ್ಷೆ ಪಾರಿಜಾತಮ್ಮ, ಸದಸ್ಯರಾದ ಶಕುಂತಲಾ, ಶಿವಮ್ಮ, ಎಸ್‌.ವಿ.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯೆ ಮುನಿರತ್ನಮ್ಮ, ಮುಖಂಡರಾದ ಗುರಪ್ಪ, ಶ್ರೀನಿವಾಸ್ ರೆಡ್ಡಿ ಪ್ರತಿಭಟನೆಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)