ಮಂಗಳವಾರ, ಡಿಸೆಂಬರ್ 10, 2019
17 °C

ಇದು ಒಂದು ಮೊಟ್ಟೆಯ ಯಶಸ್ಸು!

Published:
Updated:
ಇದು ಒಂದು ಮೊಟ್ಟೆಯ ಯಶಸ್ಸು!

ಬೋಳುಮಂಡೆಯವರ ಸುಖ, ದುಃಖಗಳಿಗೆ ಮಿಡಿದ ಸಿನಿಮಾ ‘ಒಂದು ಮೊಟ್ಟೆಯ ಕಥೆ’ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಸಾಧಿಸುವತ್ತ ಮುನ್ನುಗ್ಗುತ್ತಿದೆ. ಚಿತ್ರದ ನಿರ್ಮಾಪಕ ಪವನ್ ಕುಮಾರ್ ಅವರೇ ಈ ವಿಷಯ ಬಹಿರಂಗ‍ಪಡಿಸಿದ್ದಾರೆ. ಚಿತ್ರದ ವಿತರಣೆಯ ಹೊಣೆ ಹೊತ್ತಿರುವ ಜಾಕ್ ಮಂಜು, ಪವನ್ ಮಾತಿಗೆ ಅನುಮೋದನೆ ಸೂಚಿಸಿದ್ದಾರೆ.

ಹಿಂದಿನ ಶುಕ್ರವಾರ (ಜುಲೈ 7) ತೆರೆಗೆ ಬಂದ ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಬಗ್ಗೆ ಪ್ರೇಕ್ಷಕರು ತಮ್ಮ ಮೆಚ್ಚುಗೆಯ ಮಾತುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಈಗಾಗಲೇ ಹಂಚಿಕೊಂಡಿದ್ದಾರೆ. ಸಿನಿಮಾ ವೀಕ್ಷಿಸಲು ಜನ ಚಿತ್ರಮಂದಿರಗಳತ್ತ ಬರುತ್ತಿದ್ದಾರೆ. ಇದು ಚಿತ್ರತಂಡಕ್ಕೆ ಖುಷಿ ತಂದಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿತ್ತು.

ನಿರ್ಮಾಪಕ ಪವನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಖುಷ್ ಆಗಿ ಕುಳಿತಿದ್ದರು – ಅವರ ಖುಷಿ ಸಹಜವೇ ಆಗಿತ್ತು. ನಿರ್ದೇಶಕ ರಾಜ್ ಬಿ. ಶೆಟ್ಟಿ, ಸಹ ನಿರ್ಮಾಪಕ ಸುಹಾನ್ ಪ್ರಸಾದ್, ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್ ಹಾಗೂ ಚಿತ್ರದ ಸಹ ಕಲಾವಿದರು ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

‘ಏಕಪರದೆಯ 15ರಿಂದ 20 ಚಿತ್ರ ಮಂದಿರಗಳಲ್ಲಿ ಈಗ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮುಂದಿನ ವಾರದಿಂದ 50ರಿಂದ 60 ಚಿತ್ರಮಂದಿರಗಳಲ್ಲಿ ಪ್ರದರ್ಶನದ ವ್ಯವಸ್ಥೆ ಇರಲಿದೆ. ಮೊದಲು ಈ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳು ಅಷ್ಟೇನೂ ಸಿಗುತ್ತಿರಲಿಲ್ಲ. ಈಗ ನಮ್ಮನ್ನು ಕರೆದು, ಚಿತ್ರಮಂದಿರ ನೀಡುತ್ತಿದ್ದಾರೆ’ ಎಂದರು ಜಾಕ್ ಮಂಜು. ಸಿನಿಮಾ ಯಶಸ್ಸು ಕಂಡಿದೆ ಎಂದು ಹೇಳಿದರೂ, ಇದುವರೆಗೆ ಸಂಗ್ರಹವಾಗಿರುವ ಹಣದ ಮೊತ್ತ ಎಷ್ಟು ಎಂಬುದನ್ನು ನಿರ್ಮಾಪಕರಾಗಲಿ, ಮಂಜು ಅವರಾಗಲಿ ಹೇಳಲಿಲ್ಲ.

‘ಸಿನಿಮಾ ಈ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂದು ಭಾವಿಸಿರಲಿಲ್ಲ. ಎಲ್ಲರಿಗೂ ಧನ್ಯವಾದಗಳು’ ಎಂದು ಹೇಳಿ ರಾಜ್ ಶೆಟ್ಟಿ ಮಾತು ಮುಗಿಸಿದರು. ಸಿನಿಮಾ ತಂಡದ ಬಹುತೇಕರ ಮಾತು ಇದೇ ಆಗಿತ್ತು. ‘ಮೊಟ್ಟೆ’ ಸಿನಿಮಾ ಜರ್ಮನಿಯಲ್ಲಿ ಜುಲೈ 15ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪ್ರತಿಕ್ರಿಯಿಸಿ (+)