ಬುಧವಾರ, ಡಿಸೆಂಬರ್ 11, 2019
24 °C
ಕಿಮ್ಸ್‌ನಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ

ಕಾರವಾರಕ್ಕೆ ಟ್ರಾಮಾ ಕೇರ್‌ ಸೆಂಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರಕ್ಕೆ ಟ್ರಾಮಾ ಕೇರ್‌ ಸೆಂಟರ್‌

ಕಾರವಾರ: ದ್ವಿತೀಯ ದರ್ಜೆಯ ಟ್ರಾಮಾ ಕೇರ್‌ ಸೆಂಟರ್‌ ಅನ್ನು ಆರಂಭಿಸಲು ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನ­ಗಳ ಸಂಸ್ಥೆಯು (ಕಿಮ್ಸ್‌) ರಾಜ್ಯ ಸರ್ಕಾ­ರಕ್ಕೆ ಪ್ರಸ್ತಾವ ಸಲ್ಲಿಸಿದೆ. ಅದು ಕೇಂದ್ರ ಸರ್ಕಾರಕ್ಕೆ ರವಾನೆಯಾಗಿದ್ದು, ಶೀಘ್ರದ­ಲ್ಲಿಯೇ ಅನುಮೋದನೆ ದೊರಕುವ ನಿರೀಕ್ಷೆ ಗರಿಗೆದರಿದೆ.

ಪ್ರತಿ 100 ಕಿ.ಮೀ.ಗೆ ಟ್ರಾಮಾ ಸೆಂಟರ್ ಇರುವಂತೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿತ್ತು. ಆದರೆ ಮಂಗಳೂರಿ­ನಿಂದ ಕರ್ನಾಟಕ–ಗೋವಾ ಗಡಿಭಾಗ ಕಾರವಾರದವರೆಗೆ ನಡುವೆ ಈ ಸೌಲಭ್ಯ ಇರಲಿಲ್ಲ. ಇದನ್ನು ಮನಗಂಡ ಕಿಮ್ಸ್‌ ಇತ್ತೀಚೆಗೆ ಸೆಂಟರ್‌ನ ಅಗತ್ಯವನ್ನು ವಿವರಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿತ್ತು.

ಸಿಗಲಿದೆ ಉತ್ತಮ ಸೌಲಭ್ಯ: ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ವಿಸ್ತಾರ­ವಾಗಿದೆ. ಘಟ್ಟದ ಮೇಲಿನ ಭಾಗದಲ್ಲಿ ಅಪಘಾತ ಸಂಭವಿಸಿದರೆ ಗಾಯ­ಗೊಂಡವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಬೇಕಿದೆ. ಇನ್ನು ಕರಾ­ವಳಿ ಭಾಗದಲ್ಲಿ ದುರ್ಘಟನೆ ನಡೆದರೆ  ಗಾಯಾಳುಗಳನ್ನು ಮಂಗಳೂರು, ಮಣಿ­ಪಾಲ ಹಾಗೂ ನೆರೆ ರಾಜ್ಯ ಗೋವಾದ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯ­ಬೇಕಾದ ಪರಿಸ್ಥಿತಿ ಇದೆ.

ದೂರದ ಆಸ್ಪತ್ರೆ­ಗಳಿಗೆ ಸಾಗಿಸುವ ಸಂದರ್ಭದಲ್ಲಿ ಮಾರ್ಗಮಧ್ಯೆದಲ್ಲೇ ಗಾಯಾಳುಗಳು ಚಿಕಿತ್ಸೆ ದೊರೆಯದೇ ಕೊನೆಯುಸಿರೆಳೆದ ಅನೇಕ ನಿದರ್ಶನಗಳಿವೆ. ಹತ್ತಿರದಲ್ಲೇ ತುರ್ತು ಚಿಕಿತ್ಸಾ ಸೇವಾ ಸೌಲಭ್ಯ ದೊರೆ­ತಿದ್ದರೆ ಅವರ ಜೀವ ಉಳಿಯುತ್ತಿತ್ತು.  ಹೀಗಾಗಿ ಕಾರವಾರದಲ್ಲಿ ಟ್ರಾಮಾ ಸೆಂಟರ್‌ ಸ್ಥಾಪಿಸಬೇಕು ಎಂಬುದು ಜಿಲ್ಲೆಯ ಜನರ ಬೇಡಿಕೆಯಾಗಿತ್ತು. ಇದೀಗ ಸೆಂಟರ್‌ ಸ್ಥಾಪನೆಯ ಜನರ ಕನಸು ನನಸಾಗುವ ಕಾಲ ಹತ್ತಿರವಾಗಿದೆ.

ಏನಿದು ಟ್ರಾಮಾ ಸೆಂಟರ್‌?:  ಅಪಘಾತ­ದಲ್ಲಿ ಗಾಯಗೊಂಡವರಿಗೆ ಸಕಾಲಕ್ಕೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ ಕೆಲ ಭಾಗಗಳಲ್ಲಿ ಈ ಟ್ರಾಮಾ ಕೇರ್‌ ಸೆಂಟರ್‌ ಅನ್ನು ಸ್ಥಾಪಿಸಲಾಗುತ್ತಿದೆ. ಕೇಂದ್ರದ ಮಾರ್ಗಸೂಚಿಯನ್ವಯ ಈ ಕೇಂದ್ರಗಳಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಅಗತ್ಯ ವೈದ್ಯ ಸಿಬ್ಬಂದಿ ಇರುತ್ತಾರೆ. ಅಪಘಾತ ಸಂದರ್ಭದಲ್ಲಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗದೇ ಸಾವಿಗೀಡಾಗುತ್ತಿರುವ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ.

‘ದ್ವಿತೀಯ ಹಂತದ ಈ ಟ್ರಾಮಾ ಸೆಂಟರ್‌ನಲ್ಲಿ ಎಲುಬು ಮತ್ತು ಮೂಳೆ, ಅರಿವಳಿಕೆ ಹಾಗೂ ಇತರೆ ತಜ್ಞರನ್ನು ಒಳಗೊಂಡು ಕನಿಷ್ಠ 25 ಸಿಬ್ಬಂದಿ ಇರಲಿದ್ದಾರೆ. ಅತ್ಯಾಧುನಿಕ ಎಕ್ಸ್‌ರೇ ಉಪಕರಣಗಳು, ಸುಸಜ್ಜಿತ 20 ಹಾಸಿಗೆ ಸೌಲಭ್ಯಗಳುಳ್ಳ ಕೊಠಡಿ, ಶಸ್ತ್ರ ಚಿಕಿತ್ಸಾ ಕೊಠಡಿ, ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್), ತುರ್ತು ನಿಗಾ ಘಟಕ (ಐಸಿಯು) ಕೂಡ ಇರಲಿದೆ’ ಎಂದು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಶಿವಾನಂದ ದೊಡ್ಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)