ಶುಕ್ರವಾರ, ಡಿಸೆಂಬರ್ 6, 2019
17 °C
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾದ ಮಳೆ ಪ್ರಮಾಣ: ರೈತಾಪಿ ವರ್ಗಕ್ಕೆ ಸಂಕಷ್ಟ

ಮಳೆ ಬಾರದೇ ಸೊರಗಿದ ಬೆಳೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಬಾರದೇ ಸೊರಗಿದ ಬೆಳೆಗಳು

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಇಂದಿಗೆ ಬರೋಬ್ಬರಿ ಕಳೆದ ಒಂದು ವರ್ಷದ ಹಿಂದೆ ತಾಲ್ಲೂಕಿನ ಜೀವನದಿ ಕೃಷ್ಣಾ ಸೇರಿದಂತೆ ಉಪ ನದಿಗಳು ಒಡಲು ಉಕ್ಕಿ ಹರಿಯುತ್ತಿದ್ದವು. ನದಿಗಳು ಉಕ್ಕೇರಿ ಹರಿದ ಪರಿಣಾಮವಾಗಿ ಪರಿಣಾಮವಾಗಿ ಕೆಳಮಟ್ಟದ ನಾಲ್ಕು ಸೇತುವೆಗಳು ಜಲಾವೃತಗೊಂಡಿದ್ದವು. ಆದರೆ, ಪ್ರಸಕ್ತ ವರ್ಷ ನದಿಗಳ ಪಾತ್ರ ತುಂಬುವಷ್ಟೂ ನದಿಗಳಿಗೆ ನೀರು ಹರಿದು ಬರುತ್ತಿಲ್ಲ.

ಕಳೆದ ವರ್ಷದ ಜೂನ್‌ ಅಂತ್ಯದ ವೇಳೆಗೆ ಮೈದುಂಬಿಕೊಂಡು ಹರಿಯು ತ್ತಿದ್ದ ಕೃಷ್ಣಾ ಮತ್ತು ದೂಧಗಂಗಾ, ವೇದಗಂಗಾ ನದಿಗಳಿಗೆ ಜೀವಕಳೆ ಬಂದಿತ್ತು. ಮಲಿಕವಾಡ–ದತ್ತವಾಡ, ಕಾರದಗಾ–ಭೋಜ ಮತ್ತು ವೇದಗಂಗಾ ನದಿಗೆ ಇರುವ ಜತ್ರಾಟ–ಭೀವಶಿ, ಅಕ್ಕೋಳ–ಸಿದ್ನಾಳ ಮತ್ತು ಭೋಜವಾಡಿ–ಕುನ್ನೂರ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆಗಳು ಮುಳುಗಡೆಯಾಗಿದ್ದವು.

ಆದರೆ, ಪ್ರಸಕ್ತ ವರ್ಷ ನದಿಗಳ ಜಲಾನಯನ ಪ್ರದೇಶಗಳಲ್ಲಿ ಮಳೆ ಆಭಾವದಿಂದಾಗಿ ತಾಲ್ಲೂಕಿನ ವಿವಿಧ ನದಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ.

ಸೊರಗಿರುವ ನದಿಗಳು: ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳಿಂದ ಅನೇಕ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜೂನ್‌ ತಿಂಗಳಿನಲ್ಲಿ ನದಿಗಳಲ್ಲಿ ನೀರಿನ ಹರಿವಿನಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದ್ದರಿಂದ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿತ್ತು.

ಅಂತಹ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಎದುರಾಗಿತ್ತು. ಜೂನ್ ಅಂತ್ಯದ ವೇಳೆಗೆ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಕೆಲ ದಿನಗಳ ಕಾಲ ಮಳೆಯಾಗಿದ್ದರಿಂದ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳಿಗೆ ಕೊಂಚ ಮಟ್ಟಿಗೆ ನೀರು ಹರಿದು ಬರುತ್ತಿದೆ. ಕುಂಟುತ್ತಾ ಸಾಗಿರುವ ಬಿತ್ತನೆ: ತಾಲ್ಲೂಕಿನಲ್ಲಿ ಪ್ರತಿ ವರ್ಷ ಜೂನ್‌–ಜುಲೈ ತಿಂಗಳುಗಳಲ್ಲಿ ಸರಾಸರಿ 194.6 ಮಿ.ಮೀ. ಮಳೆ ಆಗಬೇಕಾಗಿತ್ತು.

ಆದರೆ, 125.01 ಮಿ.ಮೀ ಮಳೆ ಆಗಿದೆ. ಶೇ 36 ಮಿ.ಮೀ ಮಳೆ ಕೊರತೆ ಉಂಟಾಗಿದೆ. ಹೀಗಾಗಿ ತಾಲ್ಲೂಕಿನಲ್ಲಿ ಇದುವರೆಗೆ ಕೇವಲ ಶೇ 38 ರಷ್ಟು ಮಾತ್ರ ಬಿತ್ತನೆ ಆಗಿದೆ. ಮಳೆಯಾಶ್ರಿತ ಪ್ರದೇಶ ದಲ್ಲಿ ಬಿತ್ತನೆ ಮಾಡಿರುವ ಬಹುತೇಕ ಬೆಳೆಗಳೂ ಮಳೆ ಅಭಾವದಿಂದ ಕಮರುವ ಸ್ಥಿತಿಯಲ್ಲಿವೆ.

‘ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 84,515 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, 38,130 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ. ಪ್ರಸಕ್ತ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದರಿಂದ ಸೋಯಾ ಮತ್ತು ಹೆಸರು ಬಿತ್ತನೆ ಮಾಡಿದರೆ ಇಳುವರಿ ಕುಂಠಿತಗೊಳ್ಳುತ್ತದೆ. ಗೋವಿನ ಜೋಳ ಬಿತ್ತನೆಗೆ ತಾಲ್ಲೂಕಿನ ರೈತರು ಮುಂದಾಗಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಬಿ. ತಿಳಿಸಿದರು.

ಸುಧಾಕರ ತಳವಾರ

ಪ್ರತಿಕ್ರಿಯಿಸಿ (+)