ಭಾನುವಾರ, ಡಿಸೆಂಬರ್ 15, 2019
23 °C

ಸ್ನೇಹಿತರು ಸೇರಿ ಮಾಡಿದ 'ಸ್ನೇಹಚಕ್ರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ನೇಹಿತರು ಸೇರಿ ಮಾಡಿದ 'ಸ್ನೇಹಚಕ್ರ'

ಒಂದಿಷ್ಟು ಜನ ಸ್ನೇಹಿತರು ಸೇರಿ ರೂಪಿಸಿರುವ ಚಿತ್ರ ‘ಸ್ನೇಹಚಕ್ರ’. ಇದು ಹೊಸಬರ ಚಿತ್ರವೂ ಹೌದು. ಸ್ನೇಹಿತರು ಸೇರಿ ಮಾಡಿರುವುದೊಂದೇ ಇದರ ಹೆಚ್ಚುಗಾರಿಕೆ ಅಲ್ಲ. ಈ ಚಿತ್ರದ ಕಥೆ ಕೂಡ ಸ್ನೇಹಿತರ ನಡುವೆ ನಡೆಯುವಂಥದ್ದು. ಚಿತ್ರದ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಈಚೆಗೆ ಸುದ್ದಿಗೋಷ್ಠಿ ಕರೆದಿತ್ತು.

‘ಸ್ನೇಹಿತರೆಲ್ಲ ಸೇರಿಕೊಂಡು ಒಂದು ಸಿನಿಮಾ ಮಾಡಿದ್ದೇವೆ. ಇದರಲ್ಲಿ ಪ್ರೀತಿಯ ಕಥಾವಸ್ತು ಕೂಡ ಇದೆ. ಈ ಕಥೆ ಸಿನಿಮಾ ಆಗಿ ಬಂದಿರುವುದರ ಹಿಂದೆ ನಾಯಕ ನಟ ವಿಜಯ ವೆಂಕಟ್ ಅವರ ಪಾತ್ರ ದೊಡ್ಡದಿದೆ’ ಎಂದರು ಸಿನಿಮಾ ನಿರ್ಮಾಪಕ ಸುರೇಶ್ ಕುಮಾರ್ ಎಸ್. ಈ ಚಿತ್ರದ ನಾಯಕ ನಟಿಯ ಹೆಸರು ಅನ್ವಿತಾ. ಸಿನಿಮಾ ಜುಲೈ 21ಕ್ಕೆ ಬಿಡುಗಡೆ ಆಗುವ ನಿರೀಕ್ಷೆ ಇದೆ.

‘ಸ್ನೇಹಿತರ ನಡುವೆ ನಡೆಯುವ ಚಿಕ್ಕ ಕಥೆ ಇದು. ಸಿನಿಮಾದ ಸೆಕೆಂಡ್ ಹಾಫ್‌ನಲ್ಲಿ ಒಂದು ಟ್ವಿಸ್ಟ್ ಇದೆ. ಮೊದಲಾರ್ಧದಲ್ಲಿ ಪ್ರೀತಿ, ಪ್ರೇಮ, ಕಾಲೇಜು ಸುತ್ತ ಸಿನಿಮಾ ಕಥೆ ಸುತ್ತುತ್ತ ಇರುತ್ತದೆ’ ಎಂದು ಕಥೆಯ ಬಗ್ಗೆ ತುಸು ವಿವರ ನೀಡಿದರು ವಿಜಯ ವೆಂಕಟ್. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅವರ ಬಗ್ಗೆಯೇ ಈ ಚಿತ್ರದಲ್ಲಿ ಒಂದು ಹಾಡು ಇದೆ.

ಇದಕ್ಕೆ ಕಾರಣವೇನು ಎಂದು ಕೇಳಿದಾಗ, ‘ನಾನು ವೈಯಕ್ತಿಕ ಜೀವನದಲ್ಲಿ ಅಪ್ಪು ಅವರ ಅಭಿಮಾನಿ. ಈ ಸಿನಿಮಾದ ಪಾತ್ರದಲ್ಲೂ ನಾನು ಅವರ ಅಭಿಮಾನಿ ಆಗಿ ಕಾಣಿಸಿಕೊಂಡಿದ್ದೇನೆ’ ಎಂದರು ನಾಯಕ ನಟ. ಚಿತ್ರದಲ್ಲಿ ನಾಯಕ ತನ್ನ ಸ್ನೇಹಿತರಿಗೆ ಏನೇ ತೊಂದರೆಯಾದರೂ ಅವರ ನೆರವಿಗೆ ಧಾವಿಸುತ್ತಾನೆ.

‘ಸಿನಿಮಾಕ್ಕೆ ಹಣ ಹೂಡಿಕೆ ಮಾಡುವುದು ಅಂದರೆ ಹರಿಯುವ ನದಿಗೆ ಚಿಲ್ಲರೆ ಎಸೆದು, ನಂತರ ಅದನ್ನು ಹುಡುಕಿದಂತೆಯೇ ಸರಿ. ಹೀಗಿದ್ದರೂ ನಿರ್ಮಾಪಕರು ನಮ್ಮನ್ನು ನಂಬಿ ಹಣ ಹೂಡಿದ್ದಾರೆ’ ಎಂದು ಕೃತಜ್ಞತೆ ಅರ್ಪಿಸಿ ಮಾತು ಮುಗಿಸಿದರು ವಿಜಯ ವೆಂಕಟ್. ಇದು ಮಂಜು ವಿಷ್ಣುವರ್ಧನ್ ನಿರ್ದೇಶನದ ಸಿನಿಮಾ.

ಕೊನೆಯಲ್ಲಿ ಮಾತನಾಡುವ ಸರದಿ ನಟಿ ಅನ್ವಿತಾ ಅವರದಾಗಿತ್ತು. ‘ಇದು ಸ್ನೇಹಕ್ಕೆ ಸಂಬಂಧಿಸಿದ ಸಿನಿಮಾ. ಸಿನಿಮಾದ ಮೊದಲಾರ್ಧ ಹಾಸ್ಯಕ್ಕೆ ಮೀಸಲಾಗಿದೆ. ನಂತರದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದೆ’ ಎಂದು ಚುಟುಕಾಗಿ ಹೇಳಿ ಮಾತು ಮುಗಿಸಿದರು ಅವರು.

ಪ್ರತಿಕ್ರಿಯಿಸಿ (+)