ಶುಕ್ರವಾರ, ಡಿಸೆಂಬರ್ 13, 2019
17 °C

ಗಲಭೆ, ಹಿಂದೂ ಮುಖಂಡರ ಮೇಲಿನ ದಾಳಿಯ ಹಿಂದೆ ಸಿಎಂ, ವೇಣುಗೋಪಾಲ್ ಷಡ್ಯಂತ್ರ ಇದೆ: ಬಿ.ಎಸ್‌. ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಲಭೆ, ಹಿಂದೂ ಮುಖಂಡರ ಮೇಲಿನ ದಾಳಿಯ ಹಿಂದೆ ಸಿಎಂ, ವೇಣುಗೋಪಾಲ್ ಷಡ್ಯಂತ್ರ ಇದೆ: ಬಿ.ಎಸ್‌. ಯಡಿಯೂರಪ್ಪ

ಉಡುಪಿ: ‘ನಿರಂತರವಾಗಿ ನಡೆಯುತ್ತಿರುವ ಗಲಭೆ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಕೊಲೆಯ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾಗಿ ಕೆ.ಸಿ. ವೇಣುಗೋಪಾಲ್ ಅವರ ಕೈವಾಡ ಇದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು.

ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆಗಳನ್ನು ವಿರೋಧಿಸಿ ಹಾಗೂ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಜಿಲ್ಲಾ ಬಿಜೆಪಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕೇರಳದಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಚೇರಿಗೆ ಬೆಂಕಿ ಹಾಕಲಾಯಿತು. ವೇಣುಗೋಪಾಲ್ ಅವರು ರಾಜ್ಯಕ್ಕೆ ಬಂದ ನಂತರ ಅಂತಹ ಘಟನೆಗಳು ಇಲ್ಲಿಯೂ ನಡೆಯುತ್ತಿವೆ. ಇದು ಕರ್ನಾಟಕ, ಕೇರಳ ಅಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು’ ಎಂದರು.

‘ಅಭಿವೃದ್ಧಿ ಕೆಲಸಗಳನ್ನು ಮಾಡಲು ಯೋಗ್ಯತೆ ಇಲ್ಲದ ಈ ಸರ್ಕಾರ ಖಜಾನೆಯ ಲೂಟಿಯಲ್ಲಿ ತೊಡಗಿದೆ. ವರ್ಗಾವಣೆಯ ದಂಧೆ ಮಾಡುತ್ತಿದೆ. ರಾಜ್ಯದಲ್ಲಿ ಕೊಲೆ, ಹಿಂಸಾಚಾರ ಆರಂಭವಾದಾಗಲೇ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಹಿಂದೂ ಮುಖಂಡರ ಕೊಲೆ ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯನ್ನು ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರಿಗೆ ನೀಡಿರುವುದು ಸರಿಯಲ್ಲ, ಅವರನ್ನು ಈ ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಿ’ ಎಂದು ಅವರು ಆಗ್ರಹಿಸಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವ ಬಗ್ಗೆ ರಾಜ್ಯಪಾಲರು ಕೇಂದ್ರಕ್ಕೆ ಈಗಾಗಲೇ ವರದಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯ ವರದಿ ನೀಡಲಾಗುವುದು. ಅಗತ್ಯ ಬಿದ್ದರೆ ಪ್ರಧಾನಿ ಅವರನ್ನೂ ಭೇಟಿ ಮಾಡಲಾಗುವುದು’ ಎಂದರು.

ಆಯುಧಗಳಿಗೆ ಪೂಜೆ ಮಾಡಿ: ‘ಗಲಭೆಗೆ ಕಾರಣರಾದ ಯಾವೊಬ್ಬ ಮುಸಲ್ಮಾನನ ಮನೆಗೂ ಪೊಲೀಸರು ಹೋಗಿಲ್ಲ ಅದೇ ಕಾರಣಕ್ಕೆ ಷಂಡರು ಎಂದು ಕರೆಯಲಾಯಿತು. ಹಿಂದೂಗಳು ಪುಗಸಟ್ಟೆ ಸಿಕ್ಕಿದ್ದಾರೆ ಎಂಬ ಕಾರಣಕ್ಕೆ ಬಂಧಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಾಗಿದೆ. ಇನ್ನೇನು ಆಯುಧ ಪೂಜೆ ಹಬ್ಬ ಹತ್ತಿರ ಬರುತ್ತಿದ್ದು,  ಹಿಂದೂಗಳು ತಮ್ಮ ರಕ್ಷಣೆಗಾಗಿ ಶಸ್ತ್ರಗಳನ್ನು ಪೂಜೆ ಮಾಡಿ. ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕಿದೆ. ಸರ್ಕಾರ ನಮಗೆ ರಕ್ಷಣೆ ಕೊಡುತ್ತದೆ ಅನಿಸುತ್ತಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಹೇಳಿದರು.

‘ಈಗಿನ ಪರಿಸ್ಥಿತಿಯನ್ನು ನೋಡಿದರೆ ಗೃಹ ಇಲಾಖೆ ಮಸೀದಿಯಲ್ಲಿ ಕುಳಿತು ಆಡಳಿತ ನಡೆಸುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಆದ್ದರಿಂದ ಹಿಂದೂ ಸಮಾಜ ಸಂಘಟನೆಗೊಳ್ಳಬೇಕು. ಸಚಿವರಾದ ರಮಾನಾಥ ರೈ ಹಾಗೂ ಯು.ಟಿ. ಖಾದರ್ ಅವರು ರಾಜೀನಾಮೆ ನೀಡುವ ವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ’ ಎಂದರು.

ಹೃದಯ ತಲೆಗೆ ಸಂಪರ್ಕ ಇಲ್ಲ: ‘ಮುಖ್ಯಮಂತ್ರಿ ಅವರ ಹೃದಯ ಮತ್ತು ತಲೆಗೆ ಸಂಪರ್ಕ ಕಡಿದು ಹೋಗಿದೆ. ಮಂಗಳೂರಿಗೆ ಬಂದು ಅದ್ಧೂರಿ ಸಭೆ ನಡೆಸಿದ ಅವರು ಮೃತ ಶರತ್ ಮಡಿವಾಳ ಪಾರ್ಥಿಕವ ಶರೀರ ನೋಡಲು ಹೋಗಲಿಲ್ಲ. ಸಿದ್ದರಾಮಯ್ಯ ಅವರು ಪೊಲೀಸ್ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದಾರೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದರು.

‘ಪೊಲೀಸರು ಸಹ ತಾರತಮ್ಯ ಮಾಡಬಾರದು. ಸರ್ಕಾರ ಬರುತ್ತದೆ ಹೋಗುತ್ತದೆ ಆದರೆ ಇಲಾಖೆ ಮಾತ್ರ ಶಾಶ್ವತ ಎಂಬುದನ್ನು ಅರಿತುಕೊಳ್ಳಬೇಕು. ನಮಗೆ ಅನ್ಯಾಯ ಮಾಡುವ ಪೊಲೀಸ್ ಅಧಿಕಾರಿಗಳನ್ನು ಸಹ ಸುಮ್ಮನೆ ಬಿಡುವುದಿಲ್ಲ. ಉಡುಪಿ ಎಸ್ಪಿ  ಸಹ ನಮ್ಮ ಕಾರ್ಯಕರ್ತರನ್ನು ಬಂಧಿಸುವ ಕೆಲಸ ಮಾಡಿದರೆ ಹೋರಾಟ ಮಾಡುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.

* ತಾಕತ್ತಿದ್ದರೆ ನನ್ನನ್ನು ಮತ್ತು ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿ, ಕಾಂಗ್ರೆಸ್‌ನ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುತ್ತೇವೆ.

-ಶೋಭಾ ಕರಂದ್ಲಾಜೆ, ಸಂಸದೆ

ಪ್ರತಿಕ್ರಿಯಿಸಿ (+)