ಶನಿವಾರ, ಡಿಸೆಂಬರ್ 14, 2019
20 °C

ಪರಿಸರಸ್ನೇಹಿ ಗೃಹ ಸಮುಚ್ಚಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಸರಸ್ನೇಹಿ ಗೃಹ ಸಮುಚ್ಚಯ

ಈಗ ಮನೆಗಳು ಕಾಂಕ್ರೀಟಿನಿಂದ ಕಟ್ಟುತ್ತಿದ್ದು, ಇವುಗಳಿಗೆ ಸಿಮೆಂಟ್‌, ಉಕ್ಕನ್ನು ಪ್ರಧಾನವಾಗಿ ಬಳಸಲಾಗುತ್ತಿದೆ. ಇವು ಉಷ್ಣತೆಯನ್ನು ಹೆಚ್ಚು ಹೀರಿಕೊಂಡು, ಪರಿಸರಕ್ಕೆ ಹಾನಿಯುಂಟು ಮಾಡುತ್ತಿವೆ. ಭವಿಷ್ಯದ ಅಪಾಯಗಳನ್ನು ಕಂಡುಕೊಂಡು ಕುಮಾರಿ ಬಿಲ್ಡರ್ಸ್‌ ಪರಿಸರಸ್ನೇಹಿ ಮನೆ ನಿರ್ಮಿಸುತ್ತಿದೆ. ಆರು ವರ್ಷಗಳಲ್ಲಿ ಎಂಟು ಯೋಜನೆಗಳನ್ನು ಪೂರ್ಣಗೊಳಿಸಿರುವ ಕಂಪೆನಿ, ನವೀನ ಬಗೆಯ ವಿನ್ಯಾಸಕ್ಕೆ ಆದ್ಯತೆ ನೀಡುತ್ತಾ ಬಂದಿದೆ.

ಕಟ್ಟಡ ಪರಿಕರಗಳ ಜೊತೆಗೆ ವಿದ್ಯುತ್‌ ಉಳಿತಾಯ, ನೀರಿನ ಮರು ಬಳಕೆ ಸೇರಿದಂತೆ ಪರಿಸರಸ್ನೇಹಿ ಮನೆ ನಿರ್ಮಾಣಕ್ಕೆ ಪೂರಕವಾದ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬೆಳ್ಳಂದೂರಿನ ಕುಮಾರಿ ‘ಅಮರಾಂಥೈನ್‌’ ಯೋಜನೆಯ ಹೆಸರಿನಲ್ಲಿ ಹಸಿರು ಕಟ್ಟಡ ನಿರ್ಮಾಣಕ್ಕೆ ಕಂಪೆನಿ ಮುಂದಾಗಿದೆ.

ತ್ಯಾಜ್ಯವನ್ನು ಕಡಿಮೆ ಮಾಡುವ ಜೊತೆಗೆ ಪುನರ್‌ ಬಳಕೆ ಉದ್ದೇಶವನ್ನು ಇದು ಹೊಂದಿದೆ. ರೂಫ್‌ ಗಾರ್ಡನ್‌, ಸೋಲಾರ್‌ ಪ್ಯಾನೆಲ್‌ಗಳ ಅಳವಡಿಕೆ, ತ್ಯಾಜ್ಯ ನೀರು ಪುನರ್‌ ಬಳಕೆ ವ್ಯವಸ್ಥೆಯನ್ನು ಇದು ಹೊಂದಿದೆ. ನಗರದಲ್ಲಿ ಮನೆಯ ಒಳಾಂಗಣ ವಿಶಾಲವಾಗಿ ಕಾಣುವಂತೆ ವಿನ್ಯಾಸ ಮಾಡುವುದು ಸವಾಲಿನ ಕೆಲಸ. ಮನೆಗೆ ಗಾಳಿ, ಬೆಳಕು ಯಥೇಚ್ಛವಾಗಿ ಇರಬೇಕು ಎಂಬುದು ಎಲ್ಲರ ಬೇಡಿಕೆ. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ನಿಸರ್ಗಸ್ನೇಹಿ ವಿಧಾನಗಳ ಮೂಲಕವೇ ಮನೆ ನಿರ್ಮಿಸುವುದು ಇವರ ಯೋಜನೆ.

‘ಮನೆ ಚಾವಣಿ ನಿರ್ಮಾಣಕ್ಕೆ ಹೆಚ್ಚು ಕಾಂಕ್ರೀಟ್ ಬಳಸುವುದಿಲ್ಲ. ಕಾಂಕ್ರೀಟ್ ಹಾಗೂ ಉಕ್ಕನ್ನು ಕಡಿಮೆ ಬಳಸಿ ಇಟ್ಟಿಗೆಯ ಹಾಲೊಬ್ಲಾಕ್ಸ್ ಅನ್ನು ಬಳಸುತ್ತೇವೆ. ಗಾಳಿ ಬರುವ ದಿಕ್ಕಿಗೆ ದೊಡ್ಡ ಕಿಟಕಿ, ಗಾಳಿ ಹೊರ ಹೋಗುವ ದಿಕ್ಕಿಗೆ ಸಣ್ಣ ಕಿಟಕಿ ಆಳವಡಿಸುತ್ತೇವೆ. ಇದರಿಂದ ಮನೆಯೊಳಗೆ ಗಾಳಿ, ಬೆಳಕು ಎರಡೂ ಸಮೃದ್ಧವಾಗಿ ಬರುತ್ತದೆ’ ಎನ್ನುತ್ತಾರೆ ಕಂಪೆನಿಯ ನಿರ್ದೇಶಕ ಅಶೋಕ್ ನಾಯ್ಡು.

ಫ್ಯಾನ್, ಏಸಿ, ಲೈಟ್‌ಗಳನ್ನು ಆದಷ್ಟು ಕಡಿಮೆ ಬಳಸುವಂತೆ ಮನೆಗಳನ್ನು ವಿನ್ಯಾಸ ಮಾಡುತ್ತಾರೆ. ಮನೆಯಲ್ಲಿ ಸೋಲಾರ್ ಆಳವಡಿಕೆ ಕಡ್ಡಾಯ. ಇದರಿಂದ ವಿದ್ಯುತ್ ಬಿಲ್‌ ಕಡಿತಗೊಳಿಸುವುದು ಅವರ ಉದ್ದೇಶ. 

‘ಕಟ್ಟಡವನ್ನು ಮಣ್ಣಿನ ಬ್ಲಾಕ್‌ಗಳಿಂದ ಕಟ್ಟಲಾಗಿದ್ದು ಇವು ಶೇ. 100ರಷ್ಟು ನೈಸರ್ಗಿಕ ಮತ್ತು ಹಸಿರು ಉತ್ಪನ್ನಗಳಾಗಿವೆ. ಜೊತೆಗೆ ವಿಷಕಾರಿಯಾಗಿರುವುದಿಲ್ಲ. ಆಸ್ಟ್ರೇಲಿಯಾದ ಹಾಲೊ ಕ್ಲೆ ಬಾಕ್ಸ್‌ ಅಳವಡಿಸುವುದರಿಂದ ಒಳಾಂಗಣ ತಂಪಾಗಿರುತ್ತದೆ. ಉಷ್ಣತೆ ಕಡಿಮೆ ಪ್ರಮಾಣದಲ್ಲಿ ಮನೆಯೊಳಗೆ ಪ್ರವೇಶಿಸುತ್ತದೆ’ ಎನ್ನುತ್ತಾರೆ ಅವರು.

ಸರ್ಜಾಪುರ ರಸ್ತೆಯಲ್ಲಿ ನೀರಿನ ಸಮಸ್ಯೆ ಹೆಚ್ಚು. ಇದಕ್ಕೆ ಪರಿಹಾರವಾಗಿ ನೀರಿನ ಪುನರ್ಬಳಕೆ ಮಾಡುವ ಉದ್ದೇಶವನ್ನು ಕಂಪೆನಿ ಹೊಂದಿದೆ. ಶೌಚಾಲಯ ಮತ್ತು ಬಚ್ಚಲಿನ ನೀರನ್ನು ‘ಬ್ಲಾಕ್‌ ವಾಟರ್’ ಮತ್ತು ವಾಷ್‌ಬೇಸಿನ್‌, ಅಡುಗೆ ಮನೆಯಿಂದ ಬರುವ ನೀರನ್ನು ‘ಗ್ರೇ ವಾಟರ್‌’ ಎಂದು ಪ್ರತ್ಯೇಕಿಸಲಾಗುತ್ತದೆ. ಬ್ಲಾಕ್‌ ವಾಟರನ್ನು ಪುನಃ ಶೌಚಾಲಯದ ಬಳಕೆಗೆ, ಗ್ರೇ ವಾಟರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಮಟ್ಟಿಗೆ ಶುದ್ಧೀಕರಿಸುವ ಜೊತೆಗೆ ಮಂದಗತಿಯಲ್ಲಿ ನೀರು ಪೂರೈಕೆಯಾಗುವಂತಹ ಸಾಧನಗಳ ಅಳವಡಿಕೆ, ಮಳೆ ನೀರಿನ ಸಂಗ್ರಹ ಮುಂತಾದ ಸೌಕರ್ಯ ಒಳಗೊಂಡಿರುತ್ತದೆ.

ಪರಿಸರಸ್ನೇಹಿ ಕಟ್ಟಡ ನಿರ್ಮಿಸುವಾಗ ಗಿಡ ನೆಡುವುದನ್ನೇ ಮರೆತರೆ ಹೇಗೇ? ಕಟ್ಟಡದ ಸುತ್ತಮುತ್ತ, ಬಾಲ್ಕನಿಯಲ್ಲೆಲ್ಲ ಗಿಡಗಳನ್ನು ಬೆಳೆಸುವ ಯೋಜನೆಯೂ ಕಂಪೆನಿಗೆ ಇದೆ. ‘ದೀರ್ಘ ಕಾಲ ಬಾಳುವ ಗಿಡಗಳನ್ನು ಬೆಳೆಸಬೇಕು. ಆದರೆ ಯಾವ ಬಗೆಯ ಗಿಡಗಳು ಎಂಬುದು ಇನ್ನು ನಿರ್ಧಾರವಾಗಿಲ್ಲ’ ಎನ್ನುತ್ತಾರೆ ಅಶೋಕ್‌.

‘ಮನೆ ಆಧುನಿಕವಾಗಿರುವುದರ ಜೊತೆಗೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಿರ್ಮಿಸಬೇಕು. ಕಟ್ಟಡ ನಿರ್ಮಾಣದಿಂದ ಪರಿಸರಕ್ಕೆ ಹೆಚ್ಚು ತೊಂದರೆಯಾಗಬಾರದು’ ಎಂಬ ಉದ್ದೇಶದಿಂದ ಈ ಯೋಜನೆ ಕೈಗೊಂಡೆವು ಎನ್ನುತ್ತಾರೆ ಅಶೋಕ್‌.

ಪ್ರತಿಕ್ರಿಯಿಸಿ (+)