ಶುಕ್ರವಾರ, ಡಿಸೆಂಬರ್ 6, 2019
18 °C

ಬೆರಗಿಗೆ ಬಣ್ಣ ತುಂಬಿ ಬೆಳಗಿದ ಕಲಾವಿದ

Published:
Updated:
ಬೆರಗಿಗೆ ಬಣ್ಣ ತುಂಬಿ ಬೆಳಗಿದ ಕಲಾವಿದ

ಅಮ್ಮ ಅಡುಗೆ ಮನೆಗೆ ಕಾಲಿಡುತ್ತಿದ್ದಂತೆಯೇ, ಅವರ ಹಿಂದೆಯೇ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡುತ್ತಿತ್ತು ಮಗು. ಅಲ್ಲಿ ಅಮ್ಮ ಕಲಸಿಟ್ಟ ಚಪಾತಿ ಹಿಟ್ಟಿನಲ್ಲಿ ಮಗುವಿಗೆ ಬೊಂಬೆ ಮಾಡುವ ಆತುರ. ಒಡಿಶಾದ ಪ್ರಶಾಂತ್‌ ಕುಮಾರ್‌ ಬಾರಿಕ್‌ ಎಂಬ ಕಲಾವಿದನ ಬಾಲ್ಯ ಹಾಗಿತ್ತು.

ಪ್ರಶಾಂತ್‌ಗೆ ಬಾಲ್ಯದಿಂದಲೂ ಕಲೆ ಬಗ್ಗೆ ಆಸಕ್ತಿ. ಶಾಲಾ ದಿನಗಳಲ್ಲಿ ಇವರು ತಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಗಳನ್ನು ಗೋಧಿ ಹಿಟ್ಟಿನಿಂದ ರಚಿಸುತ್ತಿದ್ದರು. ಶಾಲೆಯಲ್ಲಿ ಮೇಸ್ಟ್ರು ಪಾಠ ಮಾಡುತ್ತಿದ್ದರೆ, ಕೊನೆಯ ಬೆಂಚಿನಲ್ಲಿ ಇವರು ಚಿತ್ರ ಬಿಡಿಸುತ್ತಿದ್ದರು. ಅದಕ್ಕಾಗಿ ಎಷ್ಟೋ ಬಾರಿ ಮೇಷ್ಟ್ರ ಕೆಂಗಣ್ಣಿಗೆ ಗುರಿಯಾಗಿದ್ದರು. 

ಪ್ರಶಾಂತ್‌ ಹತ್ತನೇ ತರಗತಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದಾಗ, ವಿಜ್ಞಾನ ವಿಷಯ ಓದಿ ಇಂಜಿನಿಯರ್‌ ಆಗುವಂತೆ ಮನೆ ಮಂದಿ ದುಂಬಾಲುಬಿದ್ದರು. ಪಿಯುಸಿ ನಂತರ ಪೋಷಕರ ಮನವೊಲಿಸಿ, ಚಿತ್ರಕಲಾ ವಿಭಾಗಕ್ಕೆ ಸೇರ್ಪಡೆಯಾಗಲು ಹೋದರು. ಆದರೆ ದಿನಾಂಕ ಮುಗಿದಿದ್ದ ಕಾರಣ, ಕಲಾ ವಿಭಾಗ (ಇಂಗ್ಲಿಷ್‌) ಸೇರಿದರು. ಆದರೂ ಮನಸ್ಸು ಮಾತ್ರ ಚಿತ್ರ ಕಲೆಯತ್ತಲೇ ಸೆಳೆಯುತ್ತಿತ್ತು.

ಎರಡನೇ ವರ್ಷದ ಬಿ.ಎ (ಇಂಗ್ಲಿಷ್‌) ಓದುತ್ತಿದ್ದಾಗ, ಇಂಗ್ಲಿಷ್‌ ಅರ್ಧಕ್ಕೆ ಬಿಟ್ಟು ಕಲಾ ವಿಭಾಗಕ್ಕೆ ಸೇರಿದರು. ಆಗ ಮನೆಯವರಿಗೆ ಈ ವಿಚಾರ ತಿಳಿಸಿರಲಿಲ್ಲ. ಕೊನೆಗೊಂದು ದಿನ ಸುದ್ದಿ ತಿಳಿದ ಅಪ್ಪನಿಗೆ ಸಿಟ್ಟು ಬಂದು, ಕಾಲೇಜಿನ ಶುಲ್ಕಕ್ಕೂ ಹಣ ನೀಡಲು ನಿರಾಕರಿಸಿದರು. ಕಲಾ ಶಿಕ್ಷಣ ಮುಂದುವರೆಸಲು ಮಕ್ಕಳಿಗೆ ಚಿತ್ರಕಲಾ ತರಗತಿ ನಡೆಸಲು ಆರಂಭಿಸಿದರು. ಅವಕಾಶಗಳನ್ನು ಅರಸಿ ಬೆಂಗಳೂರಿಗೆ ಬಂದ ಪ್ರಶಾಂತ್‌ ಸದ್ಯ ಬೆಂಗಳೂರಿನ ಯುನೈಟೆಡ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ಧಾರೆ.

ರೇಖಾಚಿತ್ರ, ಭಿತ್ತಿಚಿತ್ರ, ಶಿಲ್ಪಕಲೆ, ಮಣ್ಣಿನ ಕಲಾಕೃತಿಗಳನ್ನು ಇವರು ರಚಿಸುತ್ತಾರೆ. ಸಮಾಜದಲ್ಲಿ ಮಹಿಳೆಯ ಸಾಮಾಜಿಕ ಸ್ಥಾನಮಾನ, ಅವಳು ವಹಿಸುವ ಪಾತ್ರಗಳು, ಮಹಿಳಾ ಸ್ವಾತಂತ್ರ್ಯ ಇವರ ಕಲೆಯ ಮೂಲ ವಸ್ತು. ಪ್ರಶಾಂತ್‌ರ ಕಲಾಕೃತಿಗಳು ದುಬೈ, ಅಮೆರಿಕ, ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಮಾರಾಟವಾಗಿವೆ. ಇದುವರೆಗೂ ಸಾಕಷ್ಟ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.

ಪ್ರಶಾಂತ್‌ ಕಲೆಯನ್ನು ಗುರುತಿಸಿ, ಬಹುಮಾನಗಳು, ಪುರಸ್ಕಾರಗಳು ಅರಸಿ ಬರತೊಡಗಿದಾಗ ಮನೆಯವರಿಗೂ ಇವರ ಕಲೆಯ ಮಹತ್ವ ಅರಿವಾಯಿತು. ಈಗ ಆರಂಭವಾದ ಪ್ರಶಾಂತರ ಕಲಾ ಜೀವನ ಇಂದು ಸುಗಮವಾಗಿ ಸಾಗುತ್ತಿದೆ.

ಮೀನುಗಳೆಂದರೆ ಇಷ್ಟ!

ಅದೇನೋ ಗೊತ್ತಿಲ್ಲ. ಮೊದಲಿನಿಂದಲೂ ಮೀನುಗಳೆಂದರೆ ಎಲ್ಲಲ್ಲದ ಕುತೂಹಲ ಎನ್ನುವ ಪ್ರಶಾಂತ್‌ ಮಣ್ಣಿನಿಂದ ತರಹೇವಾರಿ ಮೀನುಗಳ ಕಲಾಕೃತಿಗಳನ್ನು ರಚಿಸುತ್ತಾರೆ.

ಪ್ರತಿಕ್ರಿಯಿಸಿ (+)