ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಸೌಧ ಬಿಟ್ಟುಕೊಡಿ...

Last Updated 5 ನವೆಂಬರ್ 2017, 14:30 IST
ಅಕ್ಷರ ಗಾತ್ರ

ಇದೀಗ ‘ಕಲಾಸೌಧ ಉಳಿಸಿ’ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಸಾಂಸ್ಕೃತಿಕ ಮನಸ್ಸುಗಳು, ರಂಗಪ್ರೇಮಿಗಳು ಪಾಲಿಕೆ ವಿರುದ್ಧ ಸಹಿ ಹಾಕಿದ್ದಾರೆ...

ಕಲಾಸೌಧ ರಂಗತಂಡಗಳಿಗೆ ತಮ್ಮ ನಾಟಕಗಳ ಪ್ರದರ್ಶನಕ್ಕೆ ಮುಖ್ಯ ವೇದಿಕೆಯಾಗಿತ್ತು. ಸುಮಾರು 40 ಕಲಾತಂಡಗಳು ಈ ರಂಗಮಂದಿರದ ಮೂಲಕ ಗುರುತಿಸಿಕೊಂಡಿವೆ. ಇಲ್ಲಿಯವರೆಗೆ ಸುಮಾರು 2,500 ನಾಟಕಗಳು ಇಲ್ಲಿ ಪ್ರದರ್ಶನಗೊಂಡಿವೆ. ಹೀಗಾಗಿ ರಂಗಭೂಮಿಗೆ ಕೆಟ್ಟ ಪರಿಣಾಮ ಆಗಬಹುದು ಎಂದು ಬಹುತೇಕರು ಪ್ರತಿಕ್ರಿಯಿಸಿದ್ದಾರೆ. ಇದಲ್ಲದೇ ಕಲಾಸೌಧದ ಹೊರಗಿನ ಆವರಣದಲ್ಲಿ ಕಾರ್ಯಕ್ರಮ ನಡೆಸಿ ವಿರೋಧ ವ್ಯಕ್ತಪಡಿಸಿದ್ದಾರೆ.

’ನಗರದ ಎಲ್ಲಾ ರಂಗಮಮದಿರಗಳಿಗಿಂತ ಕಲಾಸೌಧ ಕಡಿಮೆ ಬಾಡಿಗೆಗೆ ಸಿಗುತ್ತಿತ್ತು. ಅಲ್ಲಿ ವ್ಯವಸ್ಥಿತ ನಿರ್ವಹಣೆ ಸರಿಯಿಲ್ಲದಿದ್ದರೂ ರಂಗತಂಡಕ್ಕೆ ಹೆಚ್ಚೇನೂ ಅನಾನುಕೂಲವಾಗುತ್ತಿರಲಿಲ್ಲ. ಅಲ್ಲಿ ನಾಟಕ ಅಭ್ಯಾಸಕ್ಕೂ ಜಾಗ ಸಿಗುತ್ತಿತ್ತು. ಈಗ ಬಿಬಿಎಂಪಿ ದಿಢೀರ್‌ ಬಾಡಿಗೆ ಜಾಸ್ತಿ ಮಾಡಿದರೆ ರಂಗತಂಡಗಳು ಎಲ್ಲಿಗೆ ಹೋಗಬೇಕು’ ಎಂಬುದು ಸಾತ್ವಿಕ ಹಾಗೂ ರಂಗಪಯಣ ತಂಡದ ನಯನಾ ಜೆ.ಸೂಡ ಪ್ರಶ್ನೆ.

’ಈ ಮೊದಲು ಟೌನ್‌ಹಾಲ್ ದಿನದ ಬಾಡಿಗೆ ಆರು ಸಾವಿರ ಇತ್ತು. ಒಂದೇ ಬಾರಿ ₹50–60 ಸಾವಿರ ಏರಿಕೆ ಮಾಡಿದರು. ಹೀಗಾಗಿ ಎಲ್ಲಾ ರಂಗತಂಡಗಳು ಕಲಾಸೌಧವನ್ನು ಅವಲಂಭಿಸಿದೆವು. ಈಗ ಕಲಾಸೌಧವನ್ನೂ ಕಸಿದುಕೊಳ್ಳುತ್ತಿದ್ದಾರೆ. ಕಲಾಸೌಧವನ್ನು‌ ನೃತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೊಡಲಿ. ಆದರೆ ವಾಣಿಜ್ಯ ಉದ್ದೇಶಕ್ಕೆ ನೀಡಬಾರದು’ ಎಂಬುದು ನಯನಾ ಆತಂಕ.

‘ಅನೇಕ ರಂಗತಂಡಗಳಿಗೆ, ಕಲಾವಿದರಿಗೆ ಕೆ.ಎಚ್‌.ಕಲಾಸೌಧದ ಜತೆ ಭಾವನಾತ್ಮಕ ನಂಟಿದೆ. ನಾನು ಕೆ.ಎಚ್‌.ಕಲಾಸೌಧದ ಉದ್ಘಾಟನಾ ಸಮಾರಂಭದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದೆ. ನಾಟಕಗಳನ್ನು ನೋಡುವುದಕ್ಕೆ, ನಮ್ಮ ತಂಡದ ನಾಟಕಗಳ ಪ್ರದರ್ಶನಕ್ಕಾಗಿ ನೂರಾರು ಬಾರಿ ಅಲ್ಲಿಗೆ ಹೋಗಿದ್ದೇನೆ. ಈಗ ಆರು ತಿಂಗಳಿಂದ ಬಿಬಿಎಂಪಿ ಅದಕ್ಕೆ ಬೀಗ ಹಾಕಿದೆ. ಅಧಿಕಾರಶಾಹಿ ಶಕ್ತಿಗಳ ನಡುವೆ ಕಲಾಸೌಧ ಸಿಕ್ಕಿ ಹಾಕಿಕೊಂಡಿದೆ. ಗೊಂದಲದಲ್ಲಿದೆ. ಅದನ್ನು ಆದಷ್ಟು ಬೇಗ ಪರಿಹರಿಸಿ, ಕಲಾತಂಡಗಳಿಗೆ ಪ್ರದರ್ಶನ ಮಾಡಲು ಅವಕಾಶ ಮಾಡಿಕೊಡಬೇಕು’ ಎಂಬುದು ಹಿನ್ನೆಲೆ ಗಾಯಕಿ, ರಂಗಭೂಮಿ ನಟಿ ಎಂ.ಡಿ ಪಲ್ಲವಿ ಒತ್ತಾಯ.

ಕಲಾಸೌಧ ಅನೇಕ ರಂಗತಂಡಗ್ಳನ್ನು ಪೋಷಿಸಿದೆ. ಈ ದಿಢೀರ್‌ ₹40 ಸಾವಿರ ಬಾಡಿಗೆ ಮಾಡಿದರೆ ನಾಟಕ ಪ್ರದರ್ಶನ ಮಾಡಲು ಸಾಧ್ಯವಿಲ್ಲ. ರಂಗತಂಡ ಒಂದು ನಾಟಕ ಪ್ರದರ್ಶನಕ್ಕೆ ತಿಂಗಳುಗಟ್ಟಲೆ ರಿಹರ್ಸಲ್‌ ಮಾಡಿರುತ್ತದೆ. ನಾಟಕಗಳ ವಿನ್ಯಾಸ,  ಬೆಳಕು, ತಂತ್ರಜ್ಞಾನ ಈ ಖರ್ಚು ನಡುವೆ ಬಾಡಿಗೆ ಜಾಸ್ತಿ ಮಾಡಿದರೆ ರಂಗತಂಡಗಳು ರಂಗಭೂಮಿಯಿಂದ ದೂರವಾಗಬಹುದು. ರಂಗಭೂಮಿಗಾಗಿ ಕಲಾಸೌಧ ಉಳಿಯಬೇಕು’ ಎಂದು ಪಲ್ಲವಿ ಹೇಳಿದರು.

’ಹೊಸ ರಂಗತಂಡಗಳಿಗಾಗಿ ಕೆ.ಎಚ್‌.ಕಲಾಸೌಧ ಕಡಿಮೆ ಬಾಡಿಗೆಗೆ ಸಿಗುವಂತಾಗಬೇಕು’ ಎಂಬ ಆಗ್ರಹ ಅಭಿನಯ ತರಂಗ ನಾಟಕ ಶಾಲೆಯ ಗೌರಿ ದತ್ತು ಅವರದು. ‘ಈಗ ಯುವಜನರು ರಂಗಭೂಮಿ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ ನಾಟಕಗಳ ಪ್ರದರ್ಶನಕ್ಕೆ ನಗರದಲ್ಲಿ ಬೆರಳೆಣಿಕೆಯಷ್ಟೇ ವೇದಿಕೆಗಳಿವೆ. ಫೆಬ್ರುವರಿಯಿಂದ ಕಲಾಸೌಧವನ್ನು ಮುಚ್ಚಿದ್ದಾರೆ. ಇನ್ನೂ ಕೆಲವು ರಂಗಮಂದಿರಗಳು ಬಿಬಿಎಂಪಿ ನಿರ್ಲಕ್ಷ್ಯದಿಂದ ಬಳಕೆಗೆ ಇಲ್ಲದಂತಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಬಿಬಿಎಂಪಿ ಯಾರಿಗೆ ಟೆಂಡರ್‌ ನೀಡುತ್ತದೆ ಎಂಬುದು ಮುಖ್ಯ ಅಲ್ಲ. ಬೇಗ ತೆರೆಯಬೇಕು. ಅಲ್ಲಿ ಚೆನ್ನಾಗಿ ನಿರ್ವಹಣೆ ಮಾಡಬೇಕು. ನಾಟಕ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕು’ ಎಂಬುದು ಗೌರಿದತ್ತು ಆಗ್ರಹ.

***

ರಂಗ ಚಟುವಟಿಕೆಗಳಿಗೇ ಬೇಕು

ಕಲಾಸೌಧದಲ್ಲಿ ನಮ್ಮ ತಂಡದ ಆರು ನಾಟಕಗಳ 20ಕ್ಕೂ ಹೆಚ್ಚು ಪ್ರದರ್ಶನಗಳು ನಡೆದಿವೆ. ಇವತ್ತು ನಗರದಲ್ಲಿ ರಂಗಮಂದಿರಗಳ ಕೊರತೆಯಿದೆ.ನಾಟಕಗಳ ಪ್ರದರ್ಶನಕ್ಕೆ ಮೊದಲು ರವೀಂದ್ರ ಕಲಾಕ್ಷೇತ್ರ ಮಾತ್ರ ಇತ್ತು. ಆಮೇಲೆ ರಂಗಶಂಕರ, ಸೇವಾಸದನ, ಕಲಾಗ್ರಾಮ, ಹೀಗೆ ಒಂದೊಂದು ಕಡೆ ನಾಟಕಗಳ ಪ್ರದರ್ಶನಕ್ಕೆ ಹೆಚ್ಚು ಅವಕಾಶಗಳು ಸಿಕ್ಕಿವೆ. ಈಗ ಕಲಾಸೌಧದಿಂದ ಬೆಂಗಳೂರು ದಕ್ಷಿಣ ಭಾಗದ ನಾಟಕಪ್ರಿಯರಿಗೆ ನಾಟಕ ವೀಕ್ಷಣೆ ಮಾಡಲು ಅನುಕೂಲವಾಗುತ್ತಿತ್ತು. ರಂಗಭೂಮಿ ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ಕಲಾಸೌಧದಿಂದ ಬಹಳ ಪ್ರಯೋಜನ ಆಗಿದೆ. ಕಲಾಸೌಧದಲ್ಲಿ ಸೌಂಡ್‌ ಸಿಸ್ಟಂ, ಬೆಳಕು ವ್ಯವಸ್ಥೆ ಚೆನ್ನಾಗಿರಲಿಲ್ಲ. ಅದನ್ನು ಬೇಗ ಟೆಂಡರ್‌ ಕರೆದು ಚೆನ್ನಾಗಿ ನಿರ್ವಹಣೆ ಮಾಡಬೇಕು.

–ಟಿ.ರಘು, ಸ್ನೇಹರಂಗ ತಂಡ

*

ಎಲ್ಲಿ ಹೋಗಲಿ?

ರಂಗಚಟುವಟಿಕೆಗಳಿಗೆ ಕಲಾಸೌಧ ಪೂರಕವಾಗಿತ್ತು. ರವೀಂದ್ರ ಕಲಾಕ್ಷೇತ್ರ  ನಗರದ ಮುಖ್ಯ ಭಾಗದಲ್ಲಿರುವುದರಿಂದ ಮತ್ತು ಅದರ ಬಾಡಿಗೆಯೂ ಕಡಿಮೆ ಇರುವುದರಿಂದ ಅಲ್ಲಿಗೆ 30 ದಿನಕ್ಕೆ 300 ಅರ್ಜಿಗಳು ಬರುತ್ತವೆ. ಹೀಗಾಗಿ ಎಲ್ಲಾ ತಂಡಗಳಿಗೆ ಅಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಸಿಗುವುದು ಕಷ್ಟ. ಈಗ ಕಲಾಸೌಧವನ್ನೂ ಕಲ್ಯಾಣ ಮಂಟಪ ಮಾಡಲು ಹೊರಟರೆ ನಾವು ಏನು ಮಾಡಬೇಕು?

ರಂಗಶಂಕರದಲ್ಲಿ ವಾರಾಂತ್ಯದಲ್ಲಿ ಮೊದಲೇ ನಾಟಕಗಳು ಬುಕ್‌ ಆಗಿರುತ್ತವೆ. ಹೀಗಾಗಿ ಕಲಾಸೌಧವನ್ನು ಸಾಂಸ್ಕೃತಿಕ ಕ್ಷೇತ್ರಕ್ಕೆ ಸೀಮಿತವಾಗಿರಲಿ. ಬಾಡಿಗೆಯನ್ನು 2–3 ಸಾವಿರ ಜಾಸ್ತಿ ಮಾಡಲಿ. ಅದರೆ ತೀರಾ 40–50 ಸಾವಿರ ಜಾಸ್ತಿ ಮಾಡಿದರೆ ಹೇಗೆ? ಈಗ ಭರತನಾಟ್ಯ ರಂಗಪ್ರವೇಶದಂತಹ ಕಾರ್ಯಕ್ರಮಕ್ಕೆ ಭಾರಿ ದುಡ್ಡು ಖರ್ಚು ಮಾಡ್ತಾರೆ. ಅದು ವೈಯಕ್ತಿಕ ಕಾರ್ಯಕ್ರಮ. ಅವರು ಕೊಡಬಹುದು. ಆದರೆ ನಾಟಕ ಪ್ರದರ್ಶನ ತಂಡದ ಕೆಲಸ. ಎಲ್ಲರೂ ಅಷ್ಟು ಬಾಡಿಗೆ ನೀಡಲಾಗುವುದಿಲ್ಲ.

–ಶೋಭಾ ವೆಂಕಟೇಶ್‌, ವಿಜಯನಗರ ಬಿಂಬ

*

ನಗರದಲ್ಲಿ ಬಡಾವಣೆಗೊಂದರಂತೆ ರಂಗಮಂದಿರಗಳು ಇರಬೇಕೆಂಬುದು ನಮ್ಮ ಅಭಿಲಾಷೆ. ಆದರೆ ಈಗ ಇರುವ ಕಲಾಸೌಧವನ್ನೇ ಮುಚ್ಚಲು ಹೊರಟಿದ್ದಾರೆ. ಇದರ ವಿರುದ್ಧ ಅಭಿಯಾನ ಆರಂಭಿಸಿ, ಎಲ್ಲರ ಸಹಿ ಸಂಗ್ರಹ ಮಾಡಿ ಮುಖ್ಯಮಂತ್ರಿಗೆ ತಲುಪಿಸುತ್ತೇವೆ. ಪ್ರತಿಭಟನೆಯ ವಿಡಿಯೊ ಮಾಡಿ ಅದನ್ನು ಎಲ್ಲರಿಗೂ ತಲುಪುವಂತೆ ಮಾಡುತ್ತೇವೆ. ಕಲಾಸವಧಕ್ಕೆ ಬೀಗ ಬೇಗ ತೆರೆಯಬೇಕು ಎಂದು ಅದರ ಆವರಣದಲ್ಲಿ ಈಗ ಕಾರ್ಯಕ್ರಮ ನಡೆಸುತ್ತಿದ್ದೇವೆ. ನಮ್ಮ ನೃತ್ಯ ತಂಡದ ಪ್ರದರ್ಶನ ಶನಿವಾರ ನಡೆಯಲಿದೆ.

–ಸ್ನೇಹಾ ಕಪ್ಪಣ್ಣ, ಭ್ರಾಮರಿ ಡಾನ್ಸ್‌ ರೆಪರ್ಟರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT