ಸೋಮವಾರ, ಡಿಸೆಂಬರ್ 9, 2019
26 °C
ಸಂಪಾದಕೀಯ

ಕ್ರಿಕೆಟ್‌: ನೂತನ ಗುರುವಿನ ಮಾರ್ಗದರ್ಶನದಲ್ಲಿ ಹೊಸ ಆಶಯ

Published:
Updated:
ಕ್ರಿಕೆಟ್‌: ನೂತನ ಗುರುವಿನ ಮಾರ್ಗದರ್ಶನದಲ್ಲಿ ಹೊಸ ಆಶಯ

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಸ್ಥಾನಕ್ಕೆ ಏರಿರುವ ರವಿಶಾಸ್ತ್ರಿ ಅವರ ಎದುರು ಅನೇಕ ಸವಾಲುಗಳಿವೆ. ರಾಷ್ಟ್ರೀಯ ತಂಡವೆಂದರೆ ಈ ನಾಡಿನ ಅತ್ಯುತ್ತಮ ಆಟಗಾರರ ಸಂಗಮ. ಭಾರತದ ಮಟ್ಟಿಗೆ ಈ ಕ್ರೀಡೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಉತ್ತಮವಾಗಿ ಆಡಿದ ಆಟಗಾರನಿಗೆ ಏಕಾಏಕಿ ತಾರಾಮೌಲ್ಯ ಬಂದುಬಿಡುತ್ತದೆ. ಇಂತಹ ವಾತಾವರಣದಲ್ಲಿ ಆಟಗಾರರಲ್ಲಿ ಅಹಂ ಬೆಳೆಯುವುದೂ ಸಾಮಾನ್ಯ. ಜತೆಗೆ ಪ್ರತಿಯೊಬ್ಬ ಆಟಗಾರನ ಪ್ರತೀ ನಡೆ ಮತ್ತು ಸಾಮರ್ಥ್ಯಕ್ಕೆ ಸಂಬಂಧಿಸಿದ ಮಾಹಿತಿ ಲಕ್ಷಾಂತರ ಕ್ರಿಕೆಟ್‌ಪ್ರಿಯರ ತುದಿನಾಲಿಗೆಯಲ್ಲಿರುತ್ತದೆ. ತಂಡದ ಎಲ್ಲಾ ಆಗುಹೋಗುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕರಾರುವಾಕ್ಕಾದ ಟೀಕೆ, ಮೆಚ್ಚುಗೆಗಳ ಪ್ರವಾಹವನ್ನೇ ಕಾಣಬಹುದು. ಇಂತಹ ವಾತಾವರಣದಲ್ಲಿ ರವಿಶಾಸ್ತ್ರಿಯವರು ಯಾವುದೇ ಆಟಗಾರನ ಬಗ್ಗೆ ಎಂತಹುದೇ ತೀರ್ಮಾನ ತೆಗೆದುಕೊಂಡರೂ ಅದು ಸಾರ್ವಜನಿಕ ಚರ್ಚೆಯ ವಿಷಯವಾಗಿಬಿಡುತ್ತದೆ.

ಪ್ರಸಕ್ತ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತಕ್ಕೆ ಮಹತ್ವದ ಸ್ಥಾನವಿದೆ. ಆ ಎತ್ತರವನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗುವ ಜವಾಬ್ದಾರಿಯೂ ಹೆಗಲ ಮೇಲಿರುತ್ತದೆ. ಈ ಎಲ್ಲಾ ಒತ್ತಡಗಳ ಮಧ್ಯೆ ಆಟಗಾರರ ನಡುವೆ ಸಮನ್ವಯ ಸಾಧಿಸುತ್ತಾ ಉತ್ತಮ ಫಲಿತಾಂಶದತ್ತ ತಂಡವನ್ನು ಕೊಂಡೊಯ್ಯುವ ಜಾಣ್ಮೆಯನ್ನು ರವಿಶಾಸ್ತ್ರಿಯವರು ತೋರಿಸಬೇಕಾಗಿದೆ. ಅವರಿಗೆ ಈ ತೆರನಾದ ಒತ್ತಡ, ಜವಾಬ್ದಾರಿ ಹೊಸತೇನಲ್ಲ. 2014ರಿಂದ 16ರವರೆಗೆ ಇವರು ಭಾರತ ತಂಡದ ನಿರ್ದೇಶಕರಾಗಿದ್ದರು. ಆ ಅವಧಿಯಲ್ಲಿಯೂ ಟೆಸ್ಟ್‌ ಕ್ರಮಾಂಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿತ್ತು. ಜತೆಗೆ ವಿಶ್ವ ಟಿ–20 ಕೂಟದಲ್ಲಿ ನಾಲ್ಕರ ಘಟ್ಟಕ್ಕೇರಿತ್ತು. ಆ ಸಂದರ್ಭದಲ್ಲಿ ಅವರು ಯಾವುದೇ ವಿವಾದಕ್ಕೂ  ಎಡೆ ಕೊಟ್ಟಿರಲಿಲ್ಲ. ಹೀಗಾಗಿ ತಂಡದ ಒಳಗೆ ಅವರು ಎಲ್ಲರಿಗೂ ಸಲ್ಲುವವರಾಗಿದ್ದರು. ವಿರಾಟ್‌ ಕೊಹ್ಲಿಯವರಂತೂ ಶಾಸ್ತ್ರಿಯವರೇ ಕೋಚ್‌ ಆಗಬೇಕೆಂದು ಬಯಸಿದ್ದರು. ಇದೀಗ, ಅವರಿಬ್ಬರ ಹೊಂದಾಣಿಕೆಯಿಂದ ತಂಡ ಹೊಸ ಎತ್ತರದತ್ತ ದಾಪುಗಾಲಿಡುವ ಸಾಧ್ಯತೆ ನಿಚ್ಚಳವಾಗಿದೆ.

ಮುಖ್ಯ ಕೋಚ್‌ ಸ್ಥಾನಕ್ಕೆ ರವಿಶಾಸ್ತ್ರಿಯವರು ಅರ್ಹರು ಎನ್ನುವುದರಲ್ಲಿ ಎರಡು ಮಾತಿಲ್ಲ. ಎಂಬತ್ತರ ದಶಕದ ಆರಂಭದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು ಒಂದು ದಶಕದ ಕಾಲ ರಾಷ್ಟ್ರೀಯ ತಂಡದಲ್ಲಿ ರಾರಾಜಿಸಿದ್ದರು. ಟೆಸ್ಟ್‌, ಏಕದಿನ ಪಂದ್ಯಗಳ ಬ್ಯಾಟಿಂಗ್‌, ಬೌಲಿಂಗ್‌ ಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 19 ವರ್ಷದೊಳಗಿನ ತಂಡದಲ್ಲಿ ಭಾರತ ತಂಡದ ನೇತೃತ್ವ ವಹಿಸಿದ್ದ ಇವರು ರಣಜಿ ಪಂದ್ಯಗಳಲ್ಲಿಯೂ ಎತ್ತರದ ಸಾಮರ್ಥ್ಯ ಮೆರೆದಿದ್ದರು. ಸುಮಾರು ಎರಡು ದಶಕದ ಕಾಲ ಟೆಲಿವಿಷನ್‌ ವೀಕ್ಷಕ ವಿವರಣೆಗಾರರಾಗಿಯೂ ಜನಮನ ಗೆದ್ದಿದ್ದಾರೆ. ವಿಶ್ವ ಟಿ–20 ಕೂಟದ ವೇಳೆ ತಂಡಕ್ಕೆ ತಾವೊಬ್ಬ ಉತ್ತಮ ಮಾರ್ಗದರ್ಶಕ ಎಂಬುದನ್ನೂ ಸಾಬೀತುಪಡಿಸಿದ್ದರು.

ಆದರೆ ಅದೇ ವೇಳೆ ಅವರ ಜತೆಗಿನ ಒಪ್ಪಂದವನ್ನು ನವೀಕರಿಸದೆ, ಹೊಸ ಕೋಚ್‌ ನೇಮಕಕ್ಕೆ ಬಿಸಿಸಿಐ ಅರ್ಹರಿಂದ ಅರ್ಜಿ ಆಹ್ವಾನಿಸಿತ್ತು. ಆಗ ಶಾಸ್ತ್ರಿಯವರೂ ಸಂದರ್ಶನಕ್ಕೆ ಹೋಗಿದ್ದರು. ಆದರೆ ಅನಿಲ್‌ ಕುಂಬ್ಳೆಯವರನ್ನು ಆಯ್ಕೆ ಮಾಡಲಾಯಿತು. ಕುಂಬ್ಳೆಯವರು ಕೋಚ್‌ ಆಗಿದ್ದ ಒಂದು ವರ್ಷದ ಅವಧಿಯಲ್ಲಿ  ಭಾರತ ತಂಡ ಗಮನಾರ್ಹ ಸಾಮರ್ಥ್ಯ ತೋರಿಸಿತ್ತು. ಆದರೆ ತಂಡದ ನಾಯಕ ಕೊಹ್ಲಿಯವರ ಜತೆಗೆ ಕುಂಬ್ಳೆಯವರ ಸಂಬಂಧ ಕೂಡಿ ಬರಲಿಲ್ಲ. ಕುಂಬ್ಳೆ ರಾಜೀನಾಮೆ ನೀಡಿದರು. ಕೋಚ್‌ ಇಲ್ಲದೆಯೇ ಭಾರತ ತಂಡ  ವಿಂಡೀಸ್‌ ಪ್ರವಾಸ ಮುಗಿಸಿತು. ಇದೇ ವೇಳೆ ನೂತನ ಕೋಚ್‌ ಆಯ್ಕೆ ಪ್ರಕ್ರಿಯೆ ದೇಶದಾದ್ಯಂತ ಸುದ್ದಿಯಾಯಿತು.

ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್‌, ಟಾಮ್‌ ಮೂಡಿ, ರಿಚರ್ಡ್‌ ಫೈಬಸ್‌, ಲಾಲ್‌ಚಂದ್‌ ರಜಪೂತ್‌ ಹೆಸರುಗಳು ಚರ್ಚೆಗೆ ಬಂದವು. ಸಚಿನ್‌ ತೆಂಡೂಲ್ಕರ್‌ ಅವರು ಕೊಹ್ಲಿ ಬೆಂಬಲಕ್ಕೆ ನಿಂತಿದ್ದು, ಸೌರವ್‌ ಗಂಗೂಲಿಯವರು ಶಾಸ್ತ್ರಿಯವರ ವಿರುದ್ಧ ಧ್ವನಿ ಎತ್ತಿದ್ದ ಸಂಗತಿಗಳಾವುವೂ ಗುಟ್ಟಾಗಿ ಉಳಿಯಲಿಲ್ಲ. ಕೊನೆಗೂ ತಂಡಕ್ಕೆ ‘ಗುರು’ ಯಾರು ಆಗಬೇಕೆಂದು ನಿರ್ಧರಿಸಿದ್ದು ‘ಶಿಷ್ಯ’ ಕೊಹ್ಲಿಯೇ ಎನ್ನುವುದೊಂದು ವಿಪರ್ಯಾಸ.  ಈ ಆಯ್ಕೆ ಪ್ರಕ್ರಿಯೆಯನ್ನು ನಡೆಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಸಚಿನ್‌, ವಿ.ವಿ.ಎಸ್‌.ಲಕ್ಷ್ಮಣ್‌, ಗಂಗೂಲಿ ಅವರು ಇರುವ ಸಮಿತಿಯನ್ನು ನೇಮಿಸಿತ್ತು. ಆದರೆ ಅಂತಿಮವಾಗಿ ತಂಡದ ನಾಯಕನ ಮಾತಿಗೇ ಮನ್ನಣೆ ಸಿಕ್ಕಿದೆ. ಇದು ಎಷ್ಟರಮಟ್ಟಿಗೆ ಸರಿ, ತಪ್ಪು ಎನ್ನುವುದಕ್ಕಿಂತ ಇಂತಹ ನಾಟಕೀಯ ನಡೆಗಳ ಅಗತ್ಯವಿತ್ತೇ ಎಂಬ ಆತ್ಮವಿಮರ್ಶೆಯನ್ನು ಬಿಸಿಸಿಐ ಮಾಡಿಕೊಳ್ಳಬೇಕಿದೆ. ಅದೇನೇ ಇದ್ದರೂ, ರವಿಶಾಸ್ತ್ರಿಯವರ ಬೆಂಬಲಕ್ಕೆ ಬ್ಯಾಟಿಂಗ್‌  ಸಲಹೆಗಾರರಾಗಿ  ರಾಹುಲ್‌ ದ್ರಾವಿಡ್ ಮತ್ತು ಬೌಲಿಂಗ್‌ ಸಲಹೆಗಾರರಾಗಿ ಜಹೀರ್‌ ಖಾನ್‌ ಕೂಡಾ ಇದ್ದಾರೆ.

2019ರಲ್ಲಿ ಇಂಗ್ಲೆಂಡ್‌ನಲ್ಲಿ ಮುಂದಿನ ವಿಶ್ವಕಪ್‌ ನಡೆಯಲಿದೆ. ಅಲ್ಲಿಯವರೆಗೂ ರವಿಶಾಸ್ತ್ರಿ ಮತ್ತು ವಿರಾಟ್‌ ಕೊಹ್ಲಿಯವರ ಹೊಂದಾಣಿಕೆಯ ದಿಗ್ವಿಜಯ ನಡೆಯಲಿದೆ. ಈ ಅವಧಿಯಲ್ಲಿ ವಿಶ್ವ ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲೂ ಭಾರತ ತಂಡವನ್ನು ಅಗ್ರಮಾನ್ಯವಾಗಿಸುವ ಹೆಗ್ಗುರಿ ರವಿಶಾಸ್ತ್ರಿ ಅವರಿಗಿದೆ.

ಪ್ರತಿಕ್ರಿಯಿಸಿ (+)