ಭಾನುವಾರ, ಡಿಸೆಂಬರ್ 15, 2019
18 °C
ಇಸ್ಲಾಂ ಭಯೋತ್ಪಾದನೆ ತಡೆಯಲು ಕಠಿಣ ಕ್ರಮ: ಸರ್ಕಾರದ ಸಮರ್ಥನೆ

ಚೀನಾ: ‘ಪೊಲೀಸ್‌ ರಾಜ್ಯ’ದಲ್ಲಿ ‘ಉಯಿಗರ್‌’ ಸಮುದಾಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಚೀನಾ: ‘ಪೊಲೀಸ್‌ ರಾಜ್ಯ’ದಲ್ಲಿ ‘ಉಯಿಗರ್‌’ ಸಮುದಾಯ

ಕಷ್ಗರ್‌(ಚೀನಾ): ಚೀನಾದ ಪಶ್ಚಿಮ ಭಾಗದ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ‘ಉಯಿಗರ್‌’ ಮುಸ್ಲಿಂ ಸಮುದಾಯ ಪೊಲೀಸ್‌ ನಿಗಾದಲ್ಲೇ ಬದುಕು ಸಾಗಿಸುತ್ತಿದೆ.

ಈ ಪ್ರಾಂತ್ಯದಲ್ಲಿರುವ ‘ಉಯಿಗರ್‌’ ಸಮುದಾಯದ ಮೇಲೆ ಸರ್ಕಾರವು ಹಲವು ರೀತಿಯ ನಿರ್ಬಂಧಗಳನ್ನು ಹೇರಿದ್ದು, ಸಾರ್ವಜನಿಕ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನಿರಾಕರಿಸಲಾಗಿದೆ. ಜತೆಗೆ ಗಡ್ಡ ಬಿಡಲು ಷರತ್ತು ವಿಧಿಸಿದೆ.

ಹಲವು ವರ್ಷಗಳ ಕಾಲ ಈ ಪ್ರಾಂತ್ಯದ ಕಷ್ಗರ್‌ ನಗರದ ಪ್ರಮುಖ ಮಸೀದಿ ಹೊರಗೆ ಜನದಟ್ಟಣೆ ಇರುತ್ತಿತ್ತು. ರಮ್ಜಾನ್‌ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಇಲ್ಲಿ ಮುಸ್ಲಿಮರು ಸೇರುವುದು ಸಾಮಾನ್ಯವಾಗಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಸೀದಿ ಒಳಗೆ ಪ್ರವೇಶಿಸುವ ಮುನ್ನ ಲೋಹ ಶೋಧಕದ ಮೂಲಕ ತಪಾಸಣೆಗೆ ಒಳಪಡಬೇಕು.

ನಗರದ ಸುತ್ತಮುತ್ತ ಸಹ ಸರ್ಕಾರ ಹಲವು ತಪಾಸಣಾ ಠಾಣೆಗಳನ್ನು ಸ್ಥಾಪಿಸಿದೆ. ಪ್ರಾರ್ಥನೆಗೆ ತೆರಳುವವರನ್ನು ನಿರ್ಬಂಧಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಕೆಲವು ವ್ಯಾಪಾರಿಗಳು ದೂರುತ್ತಾರೆ.

ಇಸ್ಲಾಂ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ತಡೆಯಲು ಈ ರೀತಿಯ ನಿರ್ಬಂಧಗಳನ್ನು ಹೇರಲಾಗಿದೆ. ಜತೆಗೆ ಭದ್ರತೆ ದೃಷ್ಟಿಯಿಂದ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ ಎಂದು ಸರ್ಕಾರ  ಸಮರ್ಥಿಸಿಕೊಂಡಿದೆ. 2009ರಿಂದ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ನಿರ್ಬಂಧಗಳನ್ನು ಹೇರಲು ಮತ್ತು ಹೆಜ್ಜೆ ಹೆಜ್ಜೆಗೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲು ಚೀನಾ ಸರ್ಕಾರ ಆರಂಭಿಸಿತು.

ಕಳೆದ ವರ್ಷ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಉಕ್ಕಿನ ಮಹಾ ಗೋಡೆಯನ್ನು ಕ್ಸಿನ್‌ಜಿಯಾಂಗ್‌ ಪ್ರಾಂತ್ಯದ ಸುತ್ತ ನಿರ್ಮಿಸುವಂತೆ ಆದೇಶಿಸಿದ್ದರು.

ಇರಾಕ್‌ನಲ್ಲಿನ ಐಎಸ್‌ ಉಗ್ರ ಸಂಘಟನೆಯಲ್ಲಿದ್ದ ‘ಉಯಿಗರ್‌’ ಸಮುದಾಯದ ಕೆಲವು ಮುಸ್ಲಿಮರು ಸ್ವದೇಶಕ್ಕೆ ತೆರಳಿ ನದಿಯಂತೆ ರಕ್ತ ಹರಿಸುವುದಾಗಿ ಹೇಳಿಕೆ ನೀಡಿದ ಬಳಿಕ ಚೀನಾ ಅಧ್ಯಕ್ಷರು ಈ ಕ್ರಮಕ್ಕೆ ಸೂಚಿಸಿದ್ದರು.

ಕ್ಸಿನ್‌ಜಿಯಾಂಗ್‌ನ ಪ್ರತಿಯೊಂದು ಬ್ಲಾಕ್‌ನಲ್ಲಿಯೂ ಪೊಲೀಸ್‌ ಠಾಣೆಗಳನ್ನು ಆರಂಭಿಸಲಾಗಿದೆ. ಎಲ್ಲೆಡೆ ನಿಗಾವಹಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಪಾರ ಸಂಖ್ಯೆಯಲ್ಲಿ ಅಳವಡಿಸಲಾಗಿದೆ.

ಶಾಲೆಗಳಲ್ಲಿಯೂ ‘ಅಸ್‌–ಸಲಾಂ ಅಲೈಕುಮ್‌’ ಎಂದು ಶುಭಾಶಯ ಕೋರದಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ಶಿಕ್ಷಕರು ಮತ್ತು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಇಸ್ಲಾಂ ಶಬ್ದ ಪ್ರತ್ಯೇಕತಾವಾದಕ್ಕೆ ಸಮಾನ ಅರ್ಥ ನೀಡುತ್ತದೆ ಎಂದು ಸರ್ಕಾರ ಭಾವಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)