ಸೋಮವಾರ, ಡಿಸೆಂಬರ್ 9, 2019
23 °C
ನಿಲುವು ಸಡಿಲಿಸದ ನಿತೀಶ್‌ ಕುಮಾರ್‌

ಜೆಡಿಯು– ಆರ್‌ಜೆಡಿ ಮಹಾಮೈತ್ರಿ ಮೇಲೆ ತೂಗುಗತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡಿಯು– ಆರ್‌ಜೆಡಿ ಮಹಾಮೈತ್ರಿ ಮೇಲೆ ತೂಗುಗತ್ತಿ

ಪಟ್ನಾ: ಮುಂದಿನ 48 ಗಂಟೆಗಳಲ್ಲಿ ಬಿಹಾರದಲ್ಲಿ ರಾಜಕೀಯ ಚಿತ್ರಣ ಬದಲಾಗಲಿದೆಯೇ? ಸದ್ಯದ ಪರಿಸ್ಥಿತಿ ನೋಡಿದರೆ ಹಾಗೆ ಅನ್ನಿಸುತ್ತಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ವಿಚಾರದಲ್ಲಿ ನಂಬಿಕೆಗೆ ಯೋಗ್ಯವಾದ ರೀತಿಯಲ್ಲಿ ಕಾನೂನಾತ್ಮಕ ವಿವರಣೆ ಕೊಡಲು ಇಲ್ಲವೇ ಉಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ತೇಜಸ್ವಿ ಯಾದವ್‌ಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೀಡಿರುವ ಅನೌಪಚಾರಿಕ ಗಡುವು  ಶನಿವಾರಕ್ಕೆ ಮುಗಿಯಲಿದೆ.

ಈ ವಿಚಾರದಲ್ಲಿ ಜೆಡಿಯು ಹಾಗೂ ಆರ್‌ಜೆಡಿಗಳು ತಮ್ಮ ನಿಲುವುಗಳಿಗೇ ಅಂಟಿಕೊಂಡಿರುವುದರಿಂದ ಮಹಾ ಮೈತ್ರಿಕೂಟ ಹೋಳಾಗುವತ್ತ ಸಾಗಿದೆ.

ತೇಜಸ್ವಿ ಪ್ರಕರಣದಲ್ಲಿ ನಿತೀಶ್ ಕುಮಾರ್‌ ಅವರು ನಿಲುವು ಸಡಿಲಗೊಳಿಸುವ ಲಕ್ಷಣ ಕಂಡು ಬರುತ್ತಿಲ್ಲ. ‘ಭೂಮಿ ಪಡೆದು ಹೋಟೆಲ್‌ ಗುತ್ತಿಗೆ’ ಹಗರಣ ನಡೆದಾಗ ತಾನು ಇನ್ನೂ ವಯಸ್ಕನಾಗಿರಲಿಲ್ಲ ಎಂಬ ತೇಜಸ್ವಿ ಯಾದವ್‌ ವಾದ ಸಮರ್ಥನೀಯವಲ್ಲ ಎಂಬುದು ನಿತೀಶ್‌ ಅಭಿಪ್ರಾಯವಾಗಿದೆ.

‘ಇಂತಹ ವಾದಗಳು ಆರ್‌ಜೆಡಿ ಬೆಂಬಲಿಗರನ್ನು ಖುಷಿಪಡಿಸಬಹುದು. ಆದರೆ ತೇಜಸ್ವಿ ಅವರನ್ನು ದೋಷಮುಕ್ತಗೊಳಿಸಲು ಇದು ಸಾಲದು’ ಎಂದು ನಿತೀಶ್‌ ತಮ್ಮ ಪಕ್ಷದೊಳಗಿನ ಆಪ್ತ ಮುಖಂಡರ ಜೊತೆ ಹೇಳಿದ್ದಾರೆ ಎನ್ನಲಾಗಿದೆ.

‘ತೇಜಸ್ವಿ ಅವರಿಗೆ ನೀಡಿದ ಸಮಯ ಮುಗಿಯುತ್ತಿದೆ. ಬುದ್ಧಿವಂತರಾದವರು ಈ ಸುಳಿವುಗಳನ್ನು ಅರ್ಥಮಾಡಿಕೊಳ್ಳುತ್ತಾರೆ’ ಎಂದು ಜೆಡಿಯು ವಕ್ತಾರ ಅಜಯ್‌ ಅಲೋಕ್‌ ಹೇಳಿದ್ದಾರೆ.

ಗಡುವು ಮುಗಿದ ನಂತರ ತೇಜಸ್ವಿ ಅವರು ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡಿದರೆ, ಸಾಮೂಹಿಕವಾಗಿ ಪದತ್ಯಾಗ ಮಾಡಲು ಆರ್‌ಜೆಡಿ ಸಚಿವರು ಚಿಂತನೆ ನಡೆಸಿದ್ದಾರೆ.

ಬಿಜೆಪಿ ಸಲಹೆ: ಈ ಮಧ್ಯೆ, ಹಿರಿಯ ಮುಖಂಡ ಮತ್ತು ಹಣಕಾಸು ಸಚಿವ ಅಬ್ದುಲ್  ಬಾರಿ ಸಿದ್ದಿಕಿ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡುವಂತೆ ಬಿಜೆಪಿ ನಾಯಕ ಸುಶೀಲ್‌ ಮೋದಿ ಆರ್‌ಜೆಡಿಗೆ ಸಲಹೆ ಮಾಡಿದ್ದಾರೆ.

**

ಕಾಂಗ್ರೆಸ್‌ ಬೆಂಬಲ?

ಲಾಲು ಪ್ರಸಾದ್‌ ಅವರೊಂದಿಗೆ ವ್ಯವಹರಿಸುವುದು ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಕಷ್ಟ ಎಂದೆನಿಸಿದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧದ ಹೋರಾಟದಲ್ಲಿ ಜೆಡಿಯುಗಿಂತ ಆರ್‌ಜೆಡಿಯನ್ನು ಅವಲಂಬಿಸುವುದು ಹೆಚ್ಚು ಸೂಕ್ತ ಎಂದು  ಕಾಂಗ್ರೆಸ್‌ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ಇದರ ನಡುವೆ, ಲಾಲು ಹಾಗೂ ಅವರ ಕುಟುಂಬದ ಸದಸ್ಯರು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದರೂ ನಿತೀಶ್‌ ಕುಮಾರ್‌ ಅವರು ಆರ್‌ಜೆಡಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವುದಿಲ್ಲ ಮತ್ತು 2015ರಲ್ಲಿ ಮೋದಿ ಅವರ ಗೆಲುವಿನ ಓಘಕ್ಕೆ ತಡೆಯೊಡ್ಡಿದ್ದ ಮಹಾ ಮೈತ್ರಿಯನ್ನು ಬಲಿ ಕೊಡುವುದಿಲ್ಲ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ವ್ಯಕ್ತಪಡಿಸಿದೆ.

ಪ್ರತಿಕ್ರಿಯಿಸಿ (+)