ಭಾನುವಾರ, ಡಿಸೆಂಬರ್ 8, 2019
21 °C
ಶೇ 12ರಷ್ಟು ಜಿಎಸ್‌ಟಿ * ಕೇಂದ್ರ ಸರ್ಕಾರ ಮಹಿಳಾ ವಿರೋಧಿ ಅಲ್ಲ: ಸಚಿವೆ

ನ್ಯಾಪ್‌ಕಿನ್‌ ತೆರಿಗೆಗೆ ಸಮರ್ಥನೆ

Published:
Updated:
ನ್ಯಾಪ್‌ಕಿನ್‌ ತೆರಿಗೆಗೆ ಸಮರ್ಥನೆ

ಮೈಸೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ವಿಧಿಸುತ್ತಿರುವ ಶೇ 12ರಷ್ಟು ತೆರಿಗೆಯನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಇಲ್ಲಿ ಗುರುವಾರ ಸಮರ್ಥಿಸಿಕೊಂಡರು.

ಉದ್ಯಮಿಗಳ ಜೊತೆಗಿನ ಜಿಎಸ್‌ಟಿ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು. ‘ಕೇಂದ್ರ ಸರ್ಕಾರವು ಮಹಿಳಾ ವಿರೋಧಿ ಎಂಬ ಕೂಗು ಎದ್ದಿದೆ. ನಾವು ಖಂಡಿತ ಮಹಿಳಾ ವಿರೋಧಿ ಅಲ್ಲ. ಈ ಹಿಂದೆ ಪರೋಕ್ಷ ತೆರಿಗೆ ವ್ಯವಸ್ಥೆಯಡಿ ವಿಧಿಸುತ್ತಿದ್ದ ತೆರಿಗೆಗಿಂತ ಕಡಿಮೆ ಇದೆ’ ಎಂದರು.

‘ಈಗಿರುವ ತೆರಿಗೆ ವ್ಯವಸ್ಥೆಯಿಂದ ಸ್ಥಳೀಯ ಮಟ್ಟದ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಗಲಿದೆ. ಅಲ್ಲದೆ, ವಿದೇಶಗಳಿಂದ ಬರುತ್ತಿದ್ದ ದುಬಾರಿ ನ್ಯಾಪ್‌ಕಿನ್‌ಗಳಿಗೆ ಕಡಿವಾಣ ಬೀಳಲಿದೆ. ಕಳಪೆ ನ್ಯಾಪ್‌ಕಿನ್‌ಗಳ ತಯಾರಿಕೆಯನ್ನು ನಿಯಂತ್ರಿಸಬಹುದು. ‘ಜಿಎಸ್‌ಟಿ ದರ ವಿಧಿಸಿರುವುದು ಕೇಂದ್ರ ಸರ್ಕಾರ ಅಲ್ಲ. ಇದು ಜಿಎಸ್‌ಟಿ ಮಂಡಳಿಯ ನಿರ್ಧಾರ. ಅದರಲ್ಲಿ ಎಲ್ಲಾ ರಾಜ್ಯಗಳ ಹಣಕಾಸು ಸಚಿವರು ಹಾಗೂ ಕೇಂದ್ರ ಹಣಕಾಸು ಸಚಿವರು ಇರುತ್ತಾರೆ. ಈ ಸಂಬಂಧ ತಪ್ಪು ಕಲ್ಪನೆಗಳು ಬೇಡ’ ಎಂದರು.

31ರೊಳಗೆ ಬಗೆಹರಿಸಿ: ಜಿಎಸ್‌ಟಿ ಸಂಬಂಧ ಉದ್ಭವಿಸುವ ಸಮಸ್ಯೆಗಳನ್ನು ಜುಲೈ 31ರೊಳಗೆ ಬಗೆಹರಿಸುವಂತೆ ಮೈಸೂರು ವಲಯ ಜಿಎಸ್‌ಟಿ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು.

‘ಉದ್ಯಮಿಗಳು ಅಥವಾ ಮಾಲೀಕರು ಸಮಸ್ಯೆ ಹೊತ್ತು ನಿಮ್ಮ ಬಳಿ ಬರುತ್ತಾರೆಂದು ಕಾಯಬೇಡಿ. ನೀವೇ ಖುದ್ದಾಗಿ ಭೇಟಿ ನೀಡಿ ವಿವಿಧ ವಲಯಗಳ ಸಮಸ್ಯೆ ಬಗೆಹರಿಸಬೇಕು. ಜಿಎಸ್‌ಟಿ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಮೊದಲು ನೀವು ಚೆನ್ನಾಗಿ ತಿಳಿದುಕೊಂಡಿರಬೇಕು. ಏನು ಕೆಲಸ ಮಾಡಿದ್ದೀರಿ ಎಂಬುದರ ಬಗ್ಗೆ ಪ್ರತಿ ವಾರ ನನಗೆ ವರದಿ ನೀಡಬೇಕು’ ಎಂದರು.

**

ಹಳೆಯ ಚಿನ್ನಾಭರಣಕ್ಕೆ ಜಿಎಸ್‌ಟಿ ಇಲ್ಲ

ನವದೆಹಲಿ: ವ್ಯಕ್ತಿಗಳು ಮಾರಾಟ ಮಾಡುವ ಹಳೆಯ ಚಿನ್ನಾಭರಣಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯಿಸುವುದಿಲ್ಲ ಎಂದು ರೆವಿನ್ಯೂ  ಇಲಾಖೆಯು ಗುರುವಾರ ಸ್ಪಷ್ಟನೆ ನೀಡಿದೆ.

ಹಳೆಯ ಚಿನ್ನಾಭರಣ, ಕಾರ್‌ ಮತ್ತು ಬೈಕ್‌ಗಳ ಮಾರಾಟದಲ್ಲಿ ವ್ಯಾಪಾರ – ವಹಿವಾಟಿನ ಆಸಕ್ತಿ ಇರುವುದಿಲ್ಲ. ಹೀಗಾಗಿ ಇವುಗಳ ಮಾರಾಟವು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ  ಎಂದು ಇಲಾಖೆಯು ಹೇಳಿಕೆಯಲ್ಲಿ ವಿವರಣೆ ನೀಡಿದೆ.

ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಅವರು ಬುಧವಾರ ನೀಡಿದ್ದ ಹೇಳಿಕೆಗೆ ಇಲಾಖೆಯೇ ಈಗ ಸ್ಪಷ್ಟನೆ ನೀಡಿದೆ.

ಹಳೆಯ ಚಿನ್ನಾಭರಣಗಳನ್ನು ಮಾರಾಟ ಮಾಡುವುದು ವ್ಯಕ್ತಿಯ ವ್ಯಾಪಾರ ಉದ್ದೇಶ ಆಗಿರಲಾರದು ಎನ್ನುವ ಕಾರಣಕ್ಕೆ ಜಿಎಸ್‌ಟಿಗೆ ಒಳಪಡುವುದಿಲ್ಲ ಎಂದು ತಿಳಿಸಲಾಗಿದೆ.

ವ್ಯಕ್ತಿಗಳು ತಮ್ಮ ಬಳಿಯ ಹಳೆಯ ಚಿನ್ನವನ್ನು  ಚಿನ್ನಾಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿದಾಗ ಜಿಎಸ್‌ಟಿಯ ಸೆಕ್ಷನ್‌ 9 (4)ರ ನಿಯಮಗಳು ಅನ್ವಯವಾಗುವುದಿಲ್ಲ. ರಿವರ್ಸ್‌ ಚಾರ್ಜ್‌ ವ್ಯವಸ್ಥೆಯಡಿ (ಆರ್‌ಸಿಎಂ) ಇಂತಹ ಖರೀದಿಗೆ ವ್ಯಾಪಾರಿಯೂ ತೆರಿಗೆ ಪಾವತಿಸಬೇಕಾಗಿಲ್ಲ. ಈ ನಿಯಮವು ಹಳೆಯ ಕಾರ್‌, ಬೈಕ್‌ಗಳಿಗೂ ಅನ್ವಯಿಸುತ್ತದೆ ಎಂದು ವಿವರಣೆ ನೀಡಲಾಗಿದೆ.

ಹಳೆಯ ಚಿನ್ನಾಭರಣಗಳ ಮಾರಾಟದ ಮೇಲೆ ಶೇ 3ರಷ್ಟು ಜಿಎಸ್‌ಟಿ ಅನ್ವಯಿಸಲಿದೆ ಎಂದು ಆಧಿಯಾ ಹೇಳಿದ್ದರು.

ಪ್ರತಿಕ್ರಿಯಿಸಿ (+)