ಶುಕ್ರವಾರ, ಡಿಸೆಂಬರ್ 6, 2019
17 °C
ಎಫ್ಎಆರ್‌ ನಿಯಮ ಬದಲಾವಣೆಗೆ ಕರಡು ಅಧಿಸೂಚನೆ ಪ್ರಕಟ

ಬಹುಮಹಡಿ ಕಟ್ಟಡ ಇನ್ನು ದುಬಾರಿ

ಪಿ.ಎಂ. ರಘುನಂದನ್ Updated:

ಅಕ್ಷರ ಗಾತ್ರ : | |

ಬಹುಮಹಡಿ ಕಟ್ಟಡ ಇನ್ನು ದುಬಾರಿ

ಬೆಂಗಳೂರು:  ನಗರ ಪ್ರದೇಶಗಳಲ್ಲಿ ಇರುವ ನಿವೇಶನದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಇನ್ನು ಮುಂದೆ ದುಬಾರಿ ಆಗಲಿದೆ.

‘ಪ್ರೀಮಿಯಂ’  ಫ್ಲೋರ್‌ ಏರಿಯಾ  ರೇಷಿಯೊ (ಎಫ್‌ಎಆರ್‌) ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಇದು ಜಾರಿಯಾದರೆ, ವಿಶಾಲವಾಗಿ ಮನೆ ಅಥವಾ ವಾಣಿಜ್ಯ ಕಟ್ಟಡ ಇರಬೇಕು ಎಂಬ ಉದ್ದೇಶದಿಂದ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸುವ ಮುನ್ನ ಪ್ರತಿಯೊಬ್ಬರೂ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕೆ ಅಧಿಕ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಸಾಮಾನ್ಯ ವಲಯ ನಿಯಮಗಳ  ಕರಡು ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಇದೇ ಜುಲೈ 1ರಂದು  ಪ್ರಕಟಿಸಿದೆ.

ಈಗ ಜಾರಿಯಲ್ಲಿರುವ  ಎಫ್‌ಎಆರ್‌ ಅನುಮತಿ ಮಿತಿಯನ್ನು ಕಡಿಮೆ ಮಾಡಲು ಸರ್ಕಾರ ಉದ್ದೇಶಿಸಿದೆ. ಈ ಮಿತಿಗಿಂತ ಹೆಚ್ಚಿನ ಅಂತಸ್ತು ಕಟ್ಟಲು ಮತ್ತು ವಿಶಾಲ ಮನೆ, ಕಟ್ಟಡ ನಿರ್ಮಿಸಲು ಬಯಸಿದರೆ, ಅಂತಹವರು ‘ಪ್ರೀಮಿಯಂ’ ಎಫ್‌ಎಆರ್‌ ಖರೀದಿಸಬೇಕಾಗುತ್ತದೆ. ಇದಕ್ಕೆ  ಪ್ರತ್ಯೇಕವಾಗಿ ಭೂಮಿಯ ಮಾರ್ಗಸೂಚಿ ದರದ (ಗೈಡ್‌ಲೈನ್ಸ್‌ ವ್ಯಾಲ್ಯು) ಆಧಾರದಲ್ಲಿ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ, ಅನುಮತಿಸಿದ ವ್ಯಾಪ್ತಿಯಲ್ಲಿ ವಿಶಾಲ ಕಟ್ಟಡ ಕಟ್ಟಲು ಶುಲ್ಕ ನೀಡಬೇಕಾಗಿಲ್ಲ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಯೋಜನಾ ಪ್ರಾಧಿಕಾರ ಮತ್ತು ರಾಜ್ಯದ ವಿವಿಧ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ  ಇದು ಅನ್ವಯವಾಗುತ್ತದೆ.

ಉದಾಹರಣೆಗೆ ಬೆಂಗಳೂರಿನಲ್ಲಿ 1,200 ಚದರ ಅಡಿ ನಿವೇಶನದಲ್ಲಿ 1,800 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಿಸಬಹುದು. ಇಲ್ಲಿ  ರಸ್ತೆಯ ವಿಸ್ತೀರ್ಣ 7.5 ಮೀಟರ್‌ಗಳಿದ್ದರೆ ನಿರ್ಮಾಣಕ್ಕೆ ಅನುಮತಿ ಇರುವ ಫ್ಲೋರ್‌ ಏರಿಯಾ ರೇಷಿಯೊ 1.5 ಮೀಟರ್‌ಗಳು.  ಇದೇ ಕಟ್ಟಡದಲ್ಲಿ 1 ಮೀಟರ್‌ನಷ್ಟು ಪ್ರೀಮಿಯಂ ಎಫ್‌ಎಆರ್‌ ಪಡೆಯಲು ಅವಕಾಶ ನೀಡಲಾಗುತ್ತದೆ.

ಇದೇ ನಿವೇಶನದಲ್ಲಿ 2,400 ಅಡಿ ವಿಸ್ತೀರ್ಣದ ಕಟ್ಟಡ  ನಿರ್ಮಿಸಬೇಕಾದರೆ, 800 ಚದರ ಅಡಿ ವಿಸ್ತೀರ್ಣವನ್ನು ಪ್ರೀಮಿಯಂ ಎಫ್‌ಎಆರ್‌ ಮೂಲಕ ಖರೀದಿಸಿದ ಬಳಿಕವೇ ನಿರ್ಮಾಣ ಮಾಡಬೇಕಾಗುತ್ತದೆ. ಈ ನಿವೇಶನದ  ಮಾರ್ಗಸೂಚಿ ದರ ಚದರಡಿಗೆ ₹3,000 ಇದ್ದರೆ, ಅನುಮತಿ ಹೊಂದಿದ ಎಫ್‌ಎಆರ್‌ ಪ್ರದೇಶಕ್ಕೆ ಪ್ರತಿ ಚದರಡಿಗೆ ₹ 1,000 ಶುಲ್ಕ ವಿಧಿಸಲಾಗುತ್ತದೆ. ಈ ಲೆಕ್ಕಾಚಾರದಲ್ಲಿ 1,200 ಅಡಿ ವಿಸ್ತೀರ್ಣದ ಹೆಚ್ಚುವರಿ ಮಹಡಿ ಕಟ್ಟಬೇಕಾದರೆ ಸುಮಾರು ₹12 ಲಕ್ಷ ಎಫ್‌ಎಆರ್‌ ಪಾವತಿಸಬೇಕಾಗುತ್ತದೆ. ಈಗಿರುವ ಬೆಂಗಳೂರಿನ ಮಾಸ್ಟರ್‌ ಪ್ಲಾನ್‌ ಅನ್ವಯ ರಸ್ತೆಗೆ ಅಭಿಮುಖವಾಗಿ ಇರುವ 1,200 ಚದರಡಿ ನಿವೇಶನದಲ್ಲಿ 12 ಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿ 1.75 ಮೀಟರ್‌ ಎಫ್‌ಎಆರ್‌ಗೆ ಅನುಮತಿ ಇದೆ.

‘ಈ ಪ್ರಸ್ತಾವನೆಯಿಂದ ಬಿಬಿಎಂಪಿಯಂತಹ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಆದಾಯ ಸಿಗಲಿದೆ. ಇದರಿಂದ ರಸ್ತೆ ಅಗಲೀಕರಣದಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದು. ಪ್ರೀಮಿಯಂ ಎಫ್‌ಎಆರ್‌ ಮೂಲಕ ಗಳಿಸಿದ ಆದಾಯವನ್ನು ರಸ್ತೆ ಅಗಲ ಮಾಡುವ ಉದ್ದೇಶಕ್ಕೆ ಬಳಸುವುದನ್ನು ಸರ್ಕಾರ ಕಡ್ಡಾಯ ಮಾಡಲಿದೆ’ ಎನ್ನುತ್ತಾರೆ ನಗರ ಯೋಜನೆ ನಿರ್ದೇಶಕ ಎಲ್‌. ಶಶಿಕುಮಾರ್‌.

‘ಪ್ರಸ್ತುತ ಬೆಂಗಳೂರಿನಲ್ಲಿರುವ ಅನುಮತಿ ಹೊಂದಿದ ಎಫ್ಎಆರ್‌ ಅತ್ಯಧಿಕ. ಒಮ್ಮೆ ಇದನ್ನು ತಗ್ಗಿಸಿದರೆ, ಟಿಡಿಆರ್‌ (ಟ್ರಾನ್ಸ್‌ಫರೆಬಲ್‌ ಡೆವಲಪ್‌ಮೆಂಟ್‌ ರೈಟ್ಸ್‌) ಕೂಡ ಹೆಚ್ಚುತ್ತದೆ. ಅನುಮತಿ  ಮಿತಿಗಿಂತ ಹೆಚ್ಚಿನ ಪ್ರದೇಶದಲ್ಲಿ ಕಟ್ಟಡ ಕಟ್ಟಬೇಕಿದ್ದರೆ   ಪ್ರೀಮಿಯಂ ಎಫ್‌ಎಆರ್‌ ಮತ್ತು ಟಿಡಿಆರ್‌  ಸೌಲಭ್ಯ ಬಳಸಿಕೊಳ್ಳಬಹುದು’ ಎಂದೂ ಅವರು ತಿಳಿಸಿದರು.

ಈಗ ಮಂಗಳೂರು ಮಹಾನಗರ ಪಾಲಿಕೆ ಮಾತ್ರ ಪ್ರೀಮಿಯಂ ಎಫ್‌ಎಆರ್‌ ಅನ್ನು ಮಾರಾಟ ಮಾಡುತ್ತಿದೆ. ಬೆಂಗಳೂರಿನಲ್ಲಿ ಅನುಮತಿ ಇರುವ ಎಫ್‌ಎಆರ್‌ 3.25 ಮೀಟರ್‌, ನಮ್ಮ ಮೆಟ್ರೊ ಸುತ್ತಲಿನ 150 ಮೀಟರ್‌ ವ್ಯಾಪ್ತಿಯಲ್ಲಿ ಎಫ್‌ಎಆರ್‌ 4 ಮೀಟರ್‌ಗಳಷ್ಟಿದೆ.

ಪ್ರತಿಕ್ರಿಯಿಸಿ (+)