ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ಗೆ ಬರಲಿದೆ ‘ಕುವೆಂಪು ಮಲೆನಾಡು’

Last Updated 13 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಪುಷ್ಪಗಳಲ್ಲಿ ಮಲೆನಾಡಿನ ಸೊಬಗು ಮೈದೇಳಲಿದೆ.

1967ರಲ್ಲಿ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಗಾಗಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಅದರ ಸುವರ್ಣ ಮಹೋತ್ಸವದ ನೆನಪಿನಲ್ಲಿ ‘ಕುವೆಂಪು ಮಲೆನಾಡ’ನ್ನು ನಿರ್ಮಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ತೋಟಗಾರಿಕಾ ಇಲಾಖೆ, ಮೈಸೂರು ಉದ್ಯಾನಕಲಾ ಸಂಘ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ಪ್ರತಿಷ್ಠಾನ ಜೊತೆಯಾಗಿ ಇದನ್ನು ಸಿದ್ಧಗೊಳಿಸುತ್ತಿವೆ.

ಮಹಾಕವಿ ಕುವೆಂಪು ಜನ್ಮಸ್ಥಾನ ಕುಪ್ಪಳಿಯ ಮನೆ, ಅವರ ಬರಹಕ್ಕೆ ಸ್ಫೂರ್ತಿಯಾದ ಕವಿಶೈಲ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು.
ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಗದೀಶ್, ‘ಜಗತ್ಪ್ರಸಿದ್ಧ ಜೋಗ ಜಲಪಾತದ ಮಾದರಿಯನ್ನೂ ನಾವು ರೂಪಿಸುತ್ತಿದ್ದೇವೆ. ಜೋಗ ಜಲಪಾತದ ಕುರಿತು ಕುವೆಂಪು ಅವರು  ಬರೆದ ಸಾಲುಗಳನ್ನು ಹಾಕುತ್ತೇವೆ. ಈ ಮೂಲಕ ಲಾಲ್‌ಬಾಗ್‌ನಲ್ಲಿ ಪುಟ್ಟ ಮಲೆನಾಡನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಕುವೆಂಪು ಅವರ ಪ್ರಮುಖ ಕೃತಿಗಳಾದ ರಾಮಾಯಣ ದರ್ಶನಂ, ಕಾನೂರ ಸುಬ್ಬಮ್ಮ ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು ಪುಸ್ತಕಗಳ ಹಸ್ತಪ್ರತಿಗಳನ್ನು ಪ್ರದರ್ಶನದಲ್ಲಿ ಇಡುತ್ತೇವೆ. ಕುರ್ಚಿ ಮೇಲೆ ಕುಳಿತಿರುವ ಕುವೆಂಪು ಅವರ ಪ್ರಖ್ಯಾತ ಭಾವಚಿತ್ರ ಹಾಗೂ ಕವಿಸಮಾಧಿಯ ಮಾದರಿ  ಇರಲಿದೆ’ ಎಂದು ವಿವರಿಸಿದರು.

‘ಕುವೆಂಪು ಅವರ ಕವಿತೆಗಳಲ್ಲಿ ಬರುವ ಗರಿಕೆ, ಇಬ್ಬನಿ, ಹಸಿರನ್ನು ಇಲ್ಲಿ ಕಾಣಬಹುದು. ಈಗಾಗಲೇ ಕುವೆಂಪು ಮನೆ ಮತ್ತು ಕವಿಶೈಲದ ಮಾದರಿ ಥರ್ಮಾಕೋಲ್‌ನಲ್ಲಿ ಸಿದ್ಧವಾಗಿದೆ. ಅದನ್ನು ನಿರ್ಮಿಸಲು ಲಕ್ಷಗಟ್ಟಲೆ ಡಚ್ ಗುಲಾಬಿ ಹೂಗಳನ್ನು ತರಿಸಲಾಗುತ್ತಿದೆ’ ಎಂದರು. ಗಾಜಿನ ಮನೆಯ ಹೊರಗಡೆಯೂ ಕುವೆಂಪು ಅವರಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಕುವೆಂಪು ಬದುಕಿನ ಚಿತ್ರಣಗಳ ಛಾಯಾಚಿತ್ರ ಪ್ರದರ್ಶನ, ಮರಿಗೌಡ ಸ್ಮಾರಕ ಭವನದಲ್ಲಿ ಪ್ರತಿದಿನ ರಾಮಾಯಣ ದರ್ಶನಂ ಭಾಗಗಳ ಗೀತನಾಟಕ, ಕವನಗಳ ಸಂಗೀತೋತ್ಸವ ನಡೆಯಲಿದೆ.

ಇದರ ಜೊತೆಗೆ ವಿಶ್ವಮಾನವ ಸಂದೇಶ ಮತ್ತು ಮಂತ್ರಮಾಗಲ್ಯದ ಭಿತ್ತಿಪತ್ರಗಳನ್ನೂ ಅಲ್ಲಲ್ಲಿ ಇರಿಸಿ, ಆ ಮೂಲಕ ರಾಷ್ಟ್ರಕವಿ ಕುರಿತು ನಗರದ ಜನರಿಗೆ ತಿಳಿಸಿಕೊಡುವ ಪ್ರಯತ್ನವನ್ನೂ ಇಲಾಖೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT