ಶುಕ್ರವಾರ, ಡಿಸೆಂಬರ್ 6, 2019
17 °C
ಒಂದು ತಾಸಿನ ಪಂದ್ಯದಲ್ಲಿ ಗೆಲುವು ದಾಖಲಿಸಿದ ಸ್ಪೇನ್ ಆಟಗಾರ್ತಿ

ವಿಂಬಲ್ಡನ್‌: ಫೈನಲ್‌ಗೆ ಮುಗುರುಜಾ ಲಗ್ಗೆ

Published:
Updated:
ವಿಂಬಲ್ಡನ್‌: ಫೈನಲ್‌ಗೆ ಮುಗುರುಜಾ ಲಗ್ಗೆ

ಲಂಡನ್‌: ಎದುರಾಳಿಯನ್ನು ಏಕಪಕ್ಷೀಯವಾಗಿ ಮಣಿಸಿದ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಫೈನಲ್‌ ಪ್ರವೇಶಿಸಿದರು.

ಗುರುವಾರ ಇಲ್ಲಿ ನಡೆದ ಸೆಮಿ ಫೈನಲ್‌ ಪಂದ್ಯದಲ್ಲಿ ಅವರು ಸ್ಲೊವಾಕಿ ಯಾದ ಮ್ಯಾಗ್ಡಲಿನಾ ರೈಬರಿಕೋವ ವಿರುದ್ಧ 6–1, 6–1ರಿಂದ ಜಯ ಸಾಧಿಸಿದರು. ಈ ಮೂಲಕ ಮೂರು ವರ್ಷಗಳಲ್ಲಿ ಎರಡು ಬಾರಿ ವಿಂಬಲ್ಡನ್‌ ಟೂರ್ನಿಯ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು. 2015ರ ಫೈನಲ್‌ನಲ್ಲಿ ಅವರು ಅಮೆರಿಕದ ಸೆರೆನಾ ವಿಲಿಯಮ್ಸ್ ವಿರುದ್ಧ ಸೋತಿದ್ದರು.

ಭರವಸೆಯಿಂದ ಅಂಗಳಕ್ಕೆ ಇಳಿದ ಮುಗುರುಜಾ ವಿಶ್ವದ 87ನೇ ಕ್ರಮಾಂಕದ ಆಟಗಾರ್ತಿಯನ್ನು 64 ನಿಮಿಷಗಳಲ್ಲಿ ಮಣಿಸಿದರು. ಮೂರನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾ ಮತ್ತು ಕೋಕೊ ವಾಂಡೆರ್‌ವೇಗ್ ಅವರನ್ನು ಸೋಲಿಸಿ ನಾಲ್ಕರ ಘಟ್ಟ ಪ್ರವೇಶಿಸಿದ್ದ ರೈಬರಿಕೋವ ಗುರುವಾರದ ಪಂದ್ಯದಲ್ಲಿ ಮೊದಲ ಹತ್ತು ನಿಮಿಷ ದಲ್ಲೇ 0–3ರ ಹಿನ್ನಡೆ ಅನುಭವಿಸಿದರು.

ನಂತರ ಗಾಬರಿಯಿಂದಲೇ ಆಡಿ ದರು. ಹೀಗಾಗಿ ಮುಗುರುಜಾ ಪಂದ್ಯದ ಮೇಲೆ ಪೂರ್ಣ ಆಧಿಪತ್ಯ ಸ್ಥಾಪಿಸಿದರು.

ಕಳೆದ ವರ್ಷ ಫ್ರೆಂಚ್ ಓಪನ್‌ ಪ್ರಶಸ್ತಿ ಗೆದ್ದಿದ್ದ ಮುಗುರುಜಾ ಇಲ್ಲಿ ಆಟದ ಎಲ್ಲ ವಿಭಾಗದಲ್ಲೂ ಗಮನ ಸೆಳೆದರು. ಬ್ಯಾಕ್‌ಹ್ಯಾಂಡ್‌ನಲ್ಲಿ ಅಮೋಘ ಹೊಡೆತ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿ ದರು. ಪ್ರಬಲ ಸರ್ವ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು ನೆಟ್‌ ಬಳಿ ತೆರಳಿ ಬಿರುಗಾಳಿಯ ವೇಗದಲ್ಲಿ ಚೆಂಡನ್ನು ಹಿಂದಿರುಗಿಸಿದರು.

ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಪ್ರಶಸ್ತಿ ಗೆದ್ದ ಏಕೈಕ ಸ್ಪ್ಯಾನಿಷ್ ಆಟಗಾರ್ತಿ ಎಂಬ ದಾಖಲೆ ಹೊಂದಿರುವ  ಕೊಂಚಿತಾ ಮಾರ್ಟಿನೆಜ್ ಅವರ ಗರಡಿಯಲ್ಲಿ  ಮುಗುರುಜಾ ಪಳಗಿದ್ದಾರೆ.

**

ಶತಕದ ಪಂದ್ಯದಲ್ಲಿ ಗೆದ್ದು ಬೀಗಿದ ಫೆಡರರ್‌

ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಪುರುಷರ ವಿಭಾಗದ ಸೆಮಿಫೈನಲ್‌ ತಲುಪಿದ್ದು ದಾಖಲೆಯ ಎಂಟನೇ ಪ್ರಶಸ್ತಿಯತ್ತ ಹೆಜ್ಜೆ ಇರಿಸಿದ್ದಾರೆ. ಇಲ್ಲಿನ ಆಲ್ ಇಂಗ್ಲೆಂಡ್‌ ಕ್ಲಬ್ ಅಂಗಳದಲ್ಲಿ ಬುಧವಾರ ರಾತ್ರಿ  50ನೇ ಗ್ರ್ಯಾಂಡ್‌ಸ್ಲ್ಯಾಮ್‌ ಕ್ವಾರ್ಟರ್‌ಫೈನಲ್‌ ಆಡಿದ ಅವರು ಕೆನಡಾದ ಮಿಲೋಸ್ ರಾನಿಕ್‌ ಅವರನ್ನು 6–4, 6–2, 7–6 (7/7) ಸೆಟ್‌ಗಳಿಂದ ಮಣಿಸಿದರು.

ಇದು ಈ ಅಂಗಳದಲ್ಲಿ ಅವರ 100ನೇ ಪಂದ್ಯ ಆಗಿತ್ತು.

ಈ ಜಯದೊಂದಿಗೆ ವಿಂಬಲ್ಡನ್‌ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ ಎರಡನೇ ಹಿರಿಯ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು. 1974ರ ಟೂರ್ನಿಯಲ್ಲಿ ರನ್ನರ್‌ ಅಪ್ ಆಗಿದ್ದ ಕೆನ್‌ ರೋಸ್‌ವೆಲ್‌ 39ನೇ ವಯಸ್ಸಿನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರು. ರೋಜರ್‌ ಫೆಡರರ್‌ ಅವರಿಗೆ ಈಗ 35ರ ಹರಯ.

ಬುಧವಾರ ಆ್ಯಂಡಿ ಮರ್ರೆ ಮತ್ತು ನೊವಾಕ್‌ ಜೊಕೊವಿಚ್‌ ಟೂರ್ನಿಯಿಂದ ಹೊರಬಿದ್ದಿದ್ದರು. ರಫೆಲ್‌ ನಡಾಲ್‌ ನಾಲ್ಕನೇ ಸುತ್ತಿನಲ್ಲೇ ಸೋಲುಂಡಿದ್ದರು. ಹೀಗಾಗಿ ವಿಂಬಲ್ಡನ್‌ ಪ್ರಶಸ್ತಿ ಗೆಲ್ಲಲು ಮತ್ತು ದಾಖಲೆ ನಿರ್ಮಿಸಲು ಫೆಡರರ್ ಅವರಿಗೆ ಉತ್ತಮ ಅವಕಾಶ ಲಭಿಸಿದೆ. ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಅವರು ಥಾಮಸ್ ಬರ್ಡಿಕ್‌ ವಿರುದ್ಧ ಸೆಣಸುವರು.

2016 ಮತ್ತು 2017ರ ಫ್ರೆಂಚ್ ಓಪನ್‌ನಲ್ಲಿ ಆಡದೇ ಇದ್ದ ಫೆಡರರ್‌ ಕಳೆದ ಬಾರಿ ವಿಂಬಲ್ಡನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ರಾನಿಕ್‌ ಎದುರು ಸೋಲು ಕಂಡಿದ್ದರು. ನಂತರ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವರ್ಷದ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ನಲ್ಲಿ ಲಯಕ್ಕೆ ಮರಳಿ ಪ್ರಶಸ್ತಿ ಗೆದ್ದು 18ನೇ ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

**

ಹೊರಬಿದ್ದ ಜೊಕೊವಿಚ್‌

ಸರ್ಬಿಯಾದ ನೊವಾಕ್ ಜೊಕೊವಿಚ್ ಬುಧವಾರ ರಾತ್ರಿ ನಿರಾಸೆ ಅನುಭವಿಸಿದರು. ಥಾಮಸ್ ಬರ್ಡಿಕ್‌ ವಿರುದ್ಧ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಬಲಗೈ ನೋವಿಗೆ ಒಳಗಾದ ಅವರು ಪಂದ್ಯವನ್ನು ಪೂರ್ತಿಗೊಳಿಸಲಾಗದೆ ಮರಳಿದರು. ಮೊದಲ ಸೆಟ್‌ನಲ್ಲಿ ಪ್ರಯಾಸದ ಗೆಲುವು ಸಾಧಿಸಿದ ನೊವಾಕ್ ಎರಡನೇ ಸೆಟ್‌ನಲ್ಲಿ 2–0ಯಿಂದ ಹಿನ್ನಡೆ ಅನುಭವಿಸಿದ್ದಾಗ ಅಂಗಳ ತೊರೆಯಲು ನಿರ್ಧರಿಸಿದರು.

‘ಶಸ್ತ್ರಚಿಕಿತ್ಸೆ ಬೇಕು ಎಂದು ವೈದ್ಯರು ಹೇಳಬಹುದು. ಅದಕ್ಕೆ ಒಪ್ಪದಿದ್ದರೆ ಔಷಧಿಗಳನ್ನು ಸೇವಿಸುತ್ತ ಆಡಬೇಕಾದೀತು. ಆದರೆ ನಾನು ಇದೆರಡನ್ನೂ ಬಯಸುವುದಿಲ್ಲ. ದೀರ್ಘ ಕಾಲದ ವಿಶ್ರಾಂತಿ ಪಡೆಯುವುದೇ ಒಳ್ಳೆಯದು ಎಂದು ನನಗನಿಸುತ್ತದೆ’ ಎಂದು ಜೊಕೊವಿಚ್‌ ಹೇಳಿದರು.

**

ಬೋಪಣ್ಣ ಕ್ವಾರ್ಟರ್‌ಗೆ; ಸಾನಿಯಾಗೆ ಸೋಲು

ಲಂಡನ್‌: ಕರ್ನಾಟಕದ ರೋಹನ್‌ ಬೋಪಣ್ಣ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಆದರೆ ಸಾನಿಯಾ ಮಿರ್ಜಾ ಮಿಶ್ರ ಡಬಲ್ಸ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.

(ರೋಹನ್‌ ಬೋಪಣ್ಣ (ಬಲ) ಮತ್ತು ಗಾಬ್ರಿಯೆಲಾ ದಬ್ರೋವ್‌ಸ್ಕಿ)

10ನೇ ಶ್ರೇಯಾಂಕದ ಬೋಪಣ್ಣ ಮತ್ತು ಕೆನಡಾದ ಗಾಬ್ರಿಯೆಲಾ ದಬ್ರೋವ್‌ಸ್ಕಿ ಕ್ರೊವೇಷಿಯಾದ ನಿಕೋಲಾ ಮೆಕ್ಟಿಕ್‌ ಮತ್ತು ಅನಾ ಕೊಂಜುಹ್‌ ಅವರನ್ನು 7–6, 6–2ರಿಂದ ಮಣಿಸಿದರು. ಮೂರನೇ ಸುತ್ತಿನ ಪಂದ್ಯ ಕೇವಲ 59 ನಿಮಿಷದಲ್ಲಿ ಮುಕ್ತಾಯಗೊಂಡಿತು. ಭಾರತ–ಕೆನಡಾ ಜೋಡಿ ಎಂಟರ ಘಟ್ಟದ ಪಂದ್ಯದಲ್ಲಿ  ಫಿನ್‌ಲ್ಯಾಂಡ್‌ನ ಹೆನ್ರಿ ಕಾಂಟಿನೆನ್ ಮತ್ತು ಅಮೆರಿಕದ ಹಿದರ್‌ ವ್ಯಾಟ್ಸನ್‌ ಅವರನ್ನು ಎದುರಿಸುವರು.

ಏಕಪಕ್ಷೀಯವಾದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಹೆನ್ರಿ ಕಾಂಟಿನೆನ್‌ ಮತ್ತು ಹಿದರ್‌ ಜೋಡಿ ಸಾನಿಯಾ ಮಿರ್ಜಾ ಹಾಗೂ ಕ್ರೊವೆೇಷಿಯಾದ ಇವಾನ್‌ ದೋಡಿಗ್‌ ಅವರನ್ನು 7–6, 6–4ರಿಂದ ಮಣಿಸಿದರು. ಈ ಪಂದ್ಯ 53 ನಿಮಿಷದಲ್ಲಿ ಮುಗಿದಿತ್ತು.

ಪ್ರತಿಕ್ರಿಯಿಸಿ (+)