ಸೋಮವಾರ, ಡಿಸೆಂಬರ್ 16, 2019
18 °C
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸಂಶೋಧನೆ

ಮೂತ್ರ ಪರೀಕ್ಷೆಯಿಂದ ರೋಗ ಪತ್ತೆ?

ಎನ್‌. ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಮೂತ್ರ ಪರೀಕ್ಷೆಯಿಂದ ರೋಗ ಪತ್ತೆ?

ಬೆಂಗಳೂರು: ‘ನವಜಾತ ಶಿಶುವಿನ ಮೂತ್ರಪಿಂಡದ (ಕಿಡ್ನಿ) ಸಮಸ್ಯೆಯನ್ನು ಮೂತ್ರಪರೀಕ್ಷೆ ಮೂಲಕ ಪತ್ತೆ ಮಾಡಲು ಸಾಧ್ಯವೇ?’

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಹಭಾಗಿತ್ವದಲ್ಲಿ ನಡೆಸುತ್ತಿರುವ ಸಂಶೋಧನೆ ಇದು.

ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಆನಂದ ಅಲ್ಲಾಡಿ ಹಾಗೂ ಐಐಎಸ್‌ಸಿಯ ಜೀವರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಉತ್ಪಾಲ್‌ ತಾತು ನೇತೃತ್ವದಲ್ಲಿ ಸಂಶೋಧನೆ ನಡೆಯುತ್ತಿದೆ.

ಈ ಬಗ್ಗೆ ಆನಂದ ಅಲ್ಲಾಡಿ ವಿವರಿಸುವುದು ಹೀಗೆ– ‘ಗರ್ಭಾವಸ್ಥೆಯಲ್ಲಿರುವ ಭ್ರೂಣದಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೂರು ಗರ್ಭಿಣಿಯರ ಪೈಕಿ ಒಬ್ಬರಲ್ಲಿ ಇಂತಹ ದೋಷ ಇರುತ್ತದೆ. ಇದನ್ನು ಉದಾಸೀನ ಮಾಡಿದರೆ ಮಗುವಿನ ಕಿಡ್ನಿ ವಿಫಲವಾಗುವ ಸಾಧ್ಯತೆ ಹೆಚ್ಚು.’

‘ಮಕ್ಕಳಲ್ಲಿ ಮೂರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಿಡ್ನಿಯ ನಾಳಗಳಲ್ಲಿ ಬ್ಲಾಕ್‌ ಆಗುವುದು, ಸ್ವಲ್ಪ ಬ್ಲಾಕ್‌ ಆಗುವುದು ಹಾಗೂ ಮೂತ್ರವು ಮೂತ್ರಕೋಶಕ್ಕೆ ಬಂದ ಬಳಿಕ ಮತ್ತೆ ಮೇಲೆ ಹೋಗುವುದು.’

‘ಶೇ 50ರಷ್ಟು ಗರ್ಭಿಣಿಯರಲ್ಲಿ ಕಿಡ್ನಿ ಸಮಸ್ಯೆಯ ಲಕ್ಷಣಗಳು ಗೋಚರಿಸಿದರೂ ಅದು ಗಂಭೀರ ಸ್ವರೂಪದ್ದಾಗಿರುವುದಿಲ್ಲ.  ಶೇ 30ರಷ್ಟು ಗರ್ಭಿಣಿಯರ ಶಿಶುಗಳಲ್ಲಿ ಮೂತ್ರವು ಮೂತ್ರಕೋಶಕ್ಕೆ ಬಂದ ಬಳಿಕ ವಾಪಸ್‌ ಹೋಗುತ್ತದೆ. ಇದರಿಂದ ಕಿಡ್ನಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. ಶೇ 20ರಷ್ಟು ಮಂದಿಯಲ್ಲಿ ಕಿಡ್ನಿಯಲ್ಲಿ ಬ್ಲಾಕ್‌ಗಳಿರುತ್ತವೆ. ಇಂತಹ ಮಕ್ಕಳಿಗೆ 6 ತಿಂಗಳ ಒಳಗೆ ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸಬೇಕು.’

ವಿವಿಧ ಪರೀಕ್ಷೆ: ‘ಈ ಸಮಸ್ಯೆಗಳನ್ನು ಪತ್ತೆ ಹಚ್ಚಬೇಕಾದರೆ ಸ್ಕ್ಯಾನಿಂಗ್‌, ಆಲ್ಟ್ರಾಸೌಂಡ್‌, ಎಕ್ಸ್‌ರೇ ಪರೀಕ್ಷೆಗಳನ್ನು ಮಾಡಬೇಕು. ಇದಕ್ಕೆ ಸಮಯ ಹಾಗೂ ದುಬಾರಿ ವೆಚ್ಚವಾಗುತ್ತದೆ. ಆದರೂ ಕೆಲವೊಮ್ಮೆ ನಿಖರವಾಗಿ ರೋಗ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಮೂರು ರೀತಿಯ ಕಿಡ್ನಿ ಸಮಸ್ಯೆ ಇರುವಂತಹ ಮಕ್ಕಳನ್ನು ಆಲ್ಟ್ರಾಸೌಂಡ್‌ ಮಾಡಿದಾಗ, ಒಂದೇ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಇದರಿಂದ ಯಾವ ಮಗುವಿಗೆ ಎಂತಹ ಸಮಸ್ಯೆ ಇದೆ ಎಂಬುದು ನಿಖರವಾಗಿ ಗೊತ್ತಾಗುವುದಿಲ್ಲ.’

‘ವಂಶವಾಹಿಯಲ್ಲಿ ಸಮಸ್ಯೆ ಇದ್ದಾಗ ಜೀನ್‌ನಲ್ಲಿ ಮಾಲಿಕ್ಯೂಲ್‌ಗಳು ಉತ್ಪತ್ತಿಯಾಗುತ್ತವೆ. ಅವು ರಕ್ತ, ಮೂತ್ರದಲ್ಲಿ ಇರುತ್ತವೆ. ಕಿಡ್ನಿ ಸಮಸ್ಯೆ ಇರುವ ಮಕ್ಕಳಲ್ಲಿ ಮಾಲಿಕ್ಯೂಲ್‌ಗಳು ಯಾವ ಪ್ರಮಾಣದಲ್ಲಿವೆ ಎಂಬುದನ್ನು ಪತ್ತೆ ಮಾಡುತ್ತೇವೆ.’

ಪ್ರೊಟಿಯೊಮಿಕ್ಸ್‌ ವಿಶ್ಲೇಷಣೆ: ‘ಮಕ್ಕಳ ಮೂತ್ರದಲ್ಲಿ ಪ್ರೊಟೀನ್‌ ಇರುತ್ತದೆ. ಹೀಗಾಗಿ ಮೂರು ರೀತಿಯ ಕಿಡ್ನಿ ಸಮಸ್ಯೆ ಇರುವ ಮಕ್ಕಳು ಹಾಗೂ ಸಾಮಾನ್ಯ ಮಕ್ಕಳ ಮೂತ್ರದ ಮಾದರಿಯನ್ನು ಪಡೆದು ಪರೀಕ್ಷೆ ಮಾಡುತ್ತೇವೆ. ಕಾಯಿಲೆ ಇರುವ ಮಕ್ಕಳ ಮೂತ್ರದಲ್ಲಿ ಯಾವ ಪ್ರೊಟೀನ್‌ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂಬುದನ್ನು ಪತ್ತೆ ಮಾಡಬೇಕು. ಇದನ್ನು ಮೂತ್ರ ಪ್ರೊಟಿಯೋಮಿಕ್ಸ್‌ ವಿಶ್ಲೇಷಣೆ ಎನ್ನುತ್ತಾರೆ.’

‘ಈ ಸಂಶೋಧನೆ ಯಶಸ್ವಿಯಾದರೆ, ಮಗುವಿನ ಮೂತ್ರದಲ್ಲಿರುವ ಪ್ರೊಟೀನ್‌ ಆಧಾರದ ಮೇಲೆ ಇಂತಹದ್ದೇ ಕಿಡ್ನಿ ಸಮಸ್ಯೆ ಎಂಬುದನ್ನು ನಿಖರವಾಗಿ ಗುರುತಿಸಬಹುದು’ ಎಂದು ವಿವರಿಸಿದರು.

ಮೂತ್ರದ ಮಾದರಿ ಸಂಗ್ರಹ

‘ನಾವು ಈ ವರ್ಷದಿಂದ ಸಂಶೋಧನೆ ಆರಂಭಿಸಿದ್ದೇವೆ. ಕಿಡ್ನಿ ಸಮಸ್ಯೆ ಇರುವ 40–50 ಮಕ್ಕಳ ಮೂತ್ರದ ಮಾದರಿಯನ್ನು ಸಂಗ್ರಹಿಸಬೇಕಿದೆ. ಈಗ 15–20 ಮಕ್ಕಳ ಮೂತ್ರವನ್ನು ಸಂಗ್ರಹಿಸಿದ್ದೇವೆ’ ಎಂದು ಆನಂದ ಅಲ್ಲಾಡಿ ತಿಳಿಸಿದರು.

‘ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಅಥವಾ ಪರೀಕ್ಷೆಗಳಿಗೆ ಒಳಗಾಗಿರುವ ಮಗುವಿನ ಮೂತ್ರ ಸಂಗ್ರಹಿಸುವುದರಿಂದ ಫಲಿತಾಂಶದಲ್ಲಿ ವ್ಯತ್ಯಾಸ ಉಂಟಾಗಬಹುದು. ಹೀಗಾಗಿ ಮೊದಲ ಬಾರಿಗೆ ಕಿಡ್ನಿ ಸಮಸ್ಯೆಗೆ ತುತ್ತಾಗಿರುವ ಮಗುವಿನ ಮೂತ್ರವನ್ನು ಸಂಗ್ರಹಿಸಬೇಕು. ಇದಕ್ಕಾಗಿ ಸಮಯ ಹಿಡಿಯಲಿದೆ’ ಎಂದರು.

ಪರ್ಯಾಯ ಚಿಕಿತ್ಸೆಗೆ ಒತ್ತು

‘ಸ್ಕ್ಯಾನಿಂಗ್‌ ಮಾಡದೆಯೇ ಮಗುವಿನ ಮೂತ್ರದ ಪ್ರೊಟೀನ್‌ ಆಧಾರದ ಮೇಲೆ ರೋಗ ವಾಸಿಯಾಗುವ ಪ್ರಮಾಣವನ್ನೂ ಅಳೆಯಬಹುದು. ಮಕ್ಕಳು ಬದುಕುಳಿಯುವ ಸಾಧ್ಯತೆ ಬಗ್ಗೆ ಮೊದಲೇ ತಿಳಿಯಲಿದೆ. ಇದರಿಂದ ಪರ್ಯಾಯ ಚಿಕಿತ್ಸೆಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತದೆ’ ಎಂದು ಅಲ್ಲಾಡಿ ತಿಳಿಸಿದರು.

ಅಂಕಿ–ಅಂಶ

₹38ಲಕ್ಷ, ಮೂತ್ರದ ಪ್ರೊಟಿಯೋಮಿಕ್ಸ್‌ ವಿಶ್ಲೇಷಣೆ ಸಂಶೋಧನೆಯ ಒಟ್ಟು ವೆಚ್ಚ

₹36ಲಕ್ಷ ಐಐಎಸ್‌ಸಿ ಭರಿಸುತ್ತಿರುವ ಹಣ

₹2ಲಕ್ಷ, ರಾಜೀವ್‌ ಗಾಂಧಿ ಆರೋಗ್ಯ ವಿ.ವಿ ನೀಡುತ್ತಿರುವ ಹಣ

ಪ್ರತಿಕ್ರಿಯಿಸಿ (+)