ಶನಿವಾರ, ಡಿಸೆಂಬರ್ 7, 2019
25 °C

ತೆವಳುತ್ತಾ ಸಾಗಿದೆ ಇಂದಿರಾ ಕ್ಯಾಂಟೀನ್‌ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆವಳುತ್ತಾ ಸಾಗಿದೆ ಇಂದಿರಾ ಕ್ಯಾಂಟೀನ್‌ ಕಾಮಗಾರಿ

ಬೆಂಗಳೂರು: ನಗರದ ಜನರು ಬಹುನಿರೀಕ್ಷೆಯಿಂದ ಎದುರು ನೋಡುತ್ತಿರುವ ಇಂದಿರಾ ಕ್ಯಾಂಟೀನ್‌ಗಳ ಆರಂಭಕ್ಕೆ(ಆ.15) ಒಂದು ತಿಂಗಳಷ್ಟೆ ಬಾಕಿ ಉಳಿದಿದೆ. ಹಾಗಿದ್ದರೂ ಕ್ಯಾಂಟೀನ್‌ಗಳ ನಿರ್ಮಾಣದ ಕೆಲಸಗಳು ತ್ವರಿತಗತಿಯಲ್ಲಿ ನಡೆಯುತ್ತಿಲ್ಲ.

ಪಾಲಿಕೆಯ 45 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ಆರಂಭವಾಗಿದೆ. 59 ವಾರ್ಡ್‌ಗಳಲ್ಲಿ ಸ್ಥಳ ಗುರುತಿಸಿ, ಕ್ಯಾಂಟೀನ್‌ಗಳ ನಿರ್ಮಾಣದ ಗುತ್ತಿಗೆ ಪಡೆದಿರುವ ಕೆಇಎಫ್‌ ಇನ್ಫ್ರಾ ಕಂಪೆನಿಗೆ ನೀಡಲಾಗಿದೆ. ಉಳಿದ ವಾರ್ಡ್‌ಗಳಲ್ಲಿ ಸೂಕ್ತ ಜಾಗದ ಹುಡುಕಾಟ ನಡೆದಿದೆ.

‘ಲಾರಿ ಹೋಗಲು ಇಲ್ಲ ದಾರಿ’:

‘ಒಂದು ಕ್ಯಾಂಟೀನ್‌ ನಿರ್ಮಾಣಕ್ಕೆ ಕಟ್ಟಡದ 78 ಭಾಗಗಳನ್ನು ಕೃಷ್ಣಗಿರಿಯಿಂದ ತಂದು ಜೋಡಿಸಬೇಕು. ಅವುಗಳನ್ನು ಐದಾರು ಲಾರಿಗಳಲ್ಲಿ ತರಬೇಕು. ಈ ಭಾಗಗಳನ್ನು ಸಾಗಿಸುವ ಲಾರಿಗಳು ಸರಾಗವಾಗಿ ತಲುಪಬಹುದಾದ ಸ್ಥಳಗಳು ಸುಲಭವಾಗಿ ಸಿಗುತ್ತಿಲ್ಲ’ ಎಂದು ಇಂದಿರಾ ಕ್ಯಾಂಟೀನ್‌ ಯೋಜನೆಯ ಉಸ್ತುವಾರಿ ಹೊತ್ತಿರುವ ಬಿಬಿಎಂಪಿಯ ವಿಶೇಷ ಆಯುಕ್ತ ಮನೋಜ್‌ ರಾಜನ್‌ ತಿಳಿಸಿದರು.

‘ಪ್ರತಿದಿನ ಮೂರು–ನಾಲ್ಕು ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ನಿರ್ಮಾಣದ ಸ್ಥಳ ಅಂತಿಮಗೊಳಿಸುತ್ತಿದ್ದೇವೆ.

ಬಿಡಿಭಾಗ ಜೋಡಿಸಿ ಕಟ್ಟಡ ನಿರ್ಮಿಸಲು 4 ದಿನ ಸಾಕು. ಆಗಸ್ಟ್‌ 15ರೊಳಗೆ ಎಲ್ಲ ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

ಪರಿಕರ ಖರೀದಿಗೆ ಕಾರ್ಯಾದೇಶ: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್‌ಗಳ ಕೇಂದ್ರೀಕೃತ ಅಡುಗೆ ಮನೆ ನಿರ್ಮಿಸಲು ಯೋಜಿಸಲಾಗಿದೆ. ಅಡುಗೆ ತಯಾರಿಸಲು ಬೇಕಾದ 52 ಪರಿಕರಗಳನ್ನು ಕೊಳ್ಳಲು 9 ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಅಡುಗೆ ತಯಾರಿಕೆಯ ಹಬೆಯಂತ್ರಗಳು, ಪಾತ್ರೆಗಳು, ತಟ್ಟೆ, ಲೋಟಗಳನ್ನು ಆಗಸ್ಟ್‌ 1ರೊಳಗೆ ಸರಬರಾಜಿಗೆ ಸೂಚಿಸಲಾಗಿದೆ.

ಜುಲೈ 19ಕ್ಕೆ ಕ್ಯಾಟರಿಂಗ್ ಪಟ್ಟಿ: ಅಡುಗೆ ತಯಾರಿ ಮತ್ತು ಕ್ಯಾಂಟೀನ್‌ಗಳಿಗೆ ಸರಬರಾಜಿಗೆ ಕ್ಯಾಟರಿಂಗ್‌ ಸೇವೆ ಒದಗಿಸಲು ಟೆಂಡರ್‌ ಕರೆಯಲಾಗಿದೆ. ಕಡಿಮೆ ಬಿಡ್‌ ಕೂಗುವ ಕ್ಯಾಟರಿಂಗ್‌ ಸೇವಾದಾರರ ಹೆಸರನ್ನು ಜುಲೈ 19ಕ್ಕೆ ಬಹಿರಂಗಪಡಿಸಲಾಗುತ್ತದೆ.

ಕ್ಯಾಟರಿಂಗ್‌ ಸೇವಾದಾರರಿಗೆ ಜುಲೈ 22 ರಿಂದ 20 ದಿನಗಳ ತರಬೇತಿ ನೀಡಲು  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.

ಪ್ರತಿಕ್ರಿಯಿಸಿ (+)