ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘15 ದಿನಗಳಲ್ಲಿ ಆನ್‌ಲೈನ್‌ ಅರ್ಜಿ ವ್ಯವಸ್ಥೆ’

Last Updated 13 ಜುಲೈ 2017, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದ್ಯುತ್‌ ಹೊಸ ಸಂಪರ್ಕ, ಹೆಸರು ವರ್ಗಾವಣೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರುತ್ತೇವೆ’ ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಪಿ. ಚೋಳನ್‌ ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ (ಎಫ್‌ಕೆಸಿಸಿಐ) ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಇಂಧನ ಸಚಿವರು 15 ದಿನಗಳೊಳಗೆ ಈ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ಹೊಸ ಸಂಪರ್ಕಕ್ಕೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. 24 ಗಂಟೆಗಳಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ. ಅರ್ಜಿ ಸಲ್ಲಿಕೆಯ ನಮೂನೆಯನ್ನೂ ಸರಳೀಕರಿಸಲಾಗಿದೆ’ ಎಂದರು.

‘ಕೈಗಾರಿಕೆಗಳಿಗಾಗಿ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೂ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ. ಗ್ರಾಹಕರು ಖರ್ಚು ಮಾಡಿರುವ ವಿದ್ಯುತ್‌ ಹಾಗೂ ದರದ ಮಾಹಿತಿಯೂ ಲಭ್ಯವಾಗಲಿದೆ. ದೂರು ಅಥವಾ ಸಲಹೆಗಳನ್ನು ನೀಡಬಹುದು. ದೂರುಗಳು ನೇರವಾಗಿ ನಮ್ಮ ಗಮನಕ್ಕೆ ಬರುತ್ತವೆ. ಇದರಿಂದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಸೇವಾ ಕೇಂದ್ರಗಳ ಸ್ಥಾಪನೆ: ‘ಕೈಗಾರಿಕೆಗಳ ವಿದ್ಯುತ್‌ ಸಮಸ್ಯೆಗಳಿಗೆ ಸ್ಪಂದಿಸಲು ಸೇವಾ ಕೇಂದ್ರಗಳನ್ನು ಸ್ಥಾಪಿಸುತ್ತೇವೆ. 27 ಕೈಗಾರಿಕಾ ಪ್ರದೇಶಗಳಿದ್ದು, ಆರಂಭಿಕವಾಗಿ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಸ್ಥಾಪನೆ ಮಾಡುತ್ತೇವೆ. ಒಬ್ಬರು ಕಾರ್ಯಪಾಲಕ ಎಂಜಿನಿಯರ್‌ ಅಥವಾ ಕಿರಿಯ ಎಂಜಿನಿಯರ್‌, 10 ಮಂದಿ ಸಿಬ್ಬಂದಿ, ಒಂದು ವಾಹನವನ್ನು ಕೊಡುತ್ತೇವೆ. ಜತೆಗೆ, ಎಇ ಅಥವಾ ಜೆಇ ಅವರಿಗೆ ₹5 ಲಕ್ಷ ಕೊಡುತ್ತೇವೆ.  ಯಾವುದೇ ಸಮಸ್ಯೆಗಳಿದ್ದರೂ ಅವರು ಕೂಡಲೇ ಸ್ಥಳಕ್ಕೆ ಹೋಗಿ ಪರಿಹರಿಸಲಿದ್ದಾರೆ’ ಎಂದು ಹೇಳಿದರು.

‘ಕೈಗಾರಿಕೆಗಳು ಜಾಗ ಕೊಟ್ಟರೆ ನಾಳೆಯೇ ಸೇವಾ ಕೇಂದ್ರಗಳನ್ನು ಸ್ಥಾಪಿಸುತ್ತೇವೆ. ಇದಕ್ಕೆ ಬೇಕಾದ ಹಣವನ್ನು ನಾವೇ ಭರಿಸುತ್ತೇವೆ’ ಎಂದರು.

‘ಬೆಸ್ಕಾಂಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಏಳು ಮಾದರಿ ಉಪ ವಿಭಾಗಗಳನ್ನು ಮಾಡುತ್ತೇವೆ. ಪ್ರಾಯೋಗಿಕವಾಗಿ ಎಚ್‌ಎಸ್‌ಆರ್‌ ಉಪ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದರು.

‘ಪ್ರತಿದಿನ ದಟ್ಟಣೆ ಅವಧಿಯಲ್ಲಿ 4,500 ಮೆಗಾವಾಟ್‌ ವಿದ್ಯುತ್‌ ಬೇಡಿಕೆ ಇರುತ್ತದೆ. 1,000 ಮೆಗಾವಾಟ್‌ ವಿದ್ಯುತ್‌ ಖರೀದಿಗೆ ಅನುಮತಿ ಸಿಕ್ಕಿದೆ. ಇನ್ನೂ ಮೂರು ತಿಂಗಳು ವಿದ್ಯುತ್‌ ಸಮಸ್ಯೆ ಇರುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT