ಶುಕ್ರವಾರ, ಡಿಸೆಂಬರ್ 6, 2019
17 °C
ಎನ್‌ಕೌಂಟರ್ ಮಾಡಲು ಪೊಲೀಸರ ತಂತ್ರ

ಪೊಲೀಸ್ ವಶದಿಂದ ತಪ್ಪಿಸಿಕೊಂಡಿದ್ದ ರೌಡಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್ ವಶದಿಂದ ತಪ್ಪಿಸಿಕೊಂಡಿದ್ದ ರೌಡಿ ಸೆರೆ

ಬೆಂಗಳೂರು: ಪೊಲೀಸ್ ವಶದಿಂದ ತಪ್ಪಿಸಿಕೊಂಡಿದ್ದ ರೌಡಿ ಪ್ರಶಾಂತ್‌ (26), ಮೈಸೂರಿನ ಚಾಮುಂಡಿ ಬೆಟ್ಟ ರಸ್ತೆಯಲ್ಲಿ ಬುಧವಾರ ವೈಟ್‌ಫೀಲ್ಡ್ ವಿಭಾಗದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪಿ.ಎ (ಆಪ್ತ ಸಹಾಯಕ) ವಿನಯ್ ಅಪಹರಣ ಯತ್ನ ಪ್ರಕರಣದಲ್ಲಿ ಪ್ರಶಾಂತ್ ಪ್ರಮುಖ ಆರೋಪಿಯಾಗಿದ್ದಾನೆ.

ಜುಲೈ 8ರಂದು ಪ್ರಶಾಂತ್‌ನನ್ನು ಕೋಲಾರದಲ್ಲಿ ಬಂಧಿಸಿದ್ದ ಎಚ್‌ಎಎಲ್ ಪೊಲೀಸರು, ಸಹಚರರ ಮನೆ ತೋರಿಸುವಂತೆ ಅದೇ ದಿನ ರಾತ್ರಿ 8.30ರ ಸುಮಾರಿಗೆ ಕೆ.ಆರ್.ಪುರಕ್ಕೆ ಕರೆದೊಯ್ದಿದ್ದರು. ಈ ವೇಳೆ ಮೂತ್ರ ವಿಸರ್ಜನೆ ಮಾಡಬೇಕೆಂದು ಜೀಪ್ ನಿಲ್ಲಿಸಿದ್ದ ಆತ, ಪೊಲೀಸರ ಗಮನ ಬೇರೆಡೆ ಸೆಳೆದು ಓಡಿ ಹೋಗಿದ್ದ. ಆತನ ಬಂಧನಕ್ಕೆ ವೈಟ್‌ಫೀಲ್ಡ್ ಡಿಸಿಪಿ ನಾರಾಯಣ್ ಅವರು ಮೂರು ತಂಡಗಳನ್ನು ರಚಿಸಿದ್ದರು.

ತಮಿಳುನಾಡು ಸೇರಿದ್ದ: ‘ಪೊಲೀಸ್ ವಶದಿಂದ ತಪ್ಪಿಸಿಕೊಂಡು ತಮಿಳುನಾಡು ಸೇರಿದ್ದ ಪ್ರಶಾಂತ್, ನಗರದಲ್ಲಿರುವ ತನ್ನ ಸಹಚರರ ಜತೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ. ಕರೆಗಳ ವಿವರ ಪರಿಶೀಲಿಸಿದಾಗ, ಆ ಸಹಚರರು ಯಾರು ಎಂಬುದು ಗೊತ್ತಾಯಿತು. ತಕ್ಷಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು. ಆಗ ಪ್ರಶಾಂತ್ ತಮಿಳುನಾಡಿನಲ್ಲಿರುವ ವಿಚಾರ ತಿಳಿಯಿತು’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಆ ನಂತರ ಸಿಬ್ಬಂದಿಯ ಒಂದು ತಂಡವನ್ನು ತಮಿಳುನಾಡಿಗೆ ಕಳುಹಿಸಿದೆವು. ತನ್ನ ಅಡಗುತಾಣದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿರುವ ವಿಚಾರತಿಳಿದುಕೊಂಡ ಪ್ರಶಾಂತ್, ಅಲ್ಲಿಂದ ಬುಧವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ನಗರಕ್ಕೆ ವಾಪಸಾಗಿದ್ದ.’

‘ಬಾತ್ಮೀದಾರರಿಂದ ಈ ಸಂಗತಿ ಗೊತ್ತಾಗಿ, ನಗರದಲ್ಲಿದ್ದ ಇನ್ನೊಂದು ತಂಡ ಕಾರ್ಯಾಚರಣೆ ಪ್ರಾರಂಭಿಸಿತ್ತು. ಆದರೆ, ಆರೋಪಿ ತಕ್ಷಣವೇ ಮೈಸೂರಿನ ಕಡೆಗೆ ಪ್ರಯಾಣಿಸಿದ್ದ.’

‘ಮಧ್ಯಾಹ್ನ 12.30ರ ಸುಮಾರಿಗೆ ಆತ ಚಾಮುಂಡಿಬೆಟ್ಟ ರಸ್ತೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಯಿತು. ಅಲ್ಲಿ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದೆವು. ನಂತರ 43ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, 5 ದಿನ ಕಸ್ಟಡಿಗೆ ಪಡೆದುಕೊಂಡೆವು’ ಎಂದು ಮಾಹಿತಿ ನೀಡಿದರು.

25 ಪ್ರಕರಣ: ‘ಪ್ರಶಾಂತ್ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 25ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. 2016ರಲ್ಲಿ ಎಚ್‌ಎಎಲ್ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರು ಸೇರಿಸಲಾಗಿತ್ತು. ಈಶ್ವರಪ್ಪ ಪಿ.ಎ ವಿನಯ್ ಅವರನ್ನು ಅಪಹರಿಸಲು ಈತನೇ ಸುಪಾರಿ ಪಡೆದಿದ್ದ ಎನ್ನಲಾಗಿದೆ. ಈ ನಿಟ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಎನ್‌ಕೌಂಟರ್ ಮಾಡುತ್ತಾರೆ’

‘ಪೊಲೀಸರು ಮಗನನ್ನು ಎನ್‌ಕೌಂಟರ್ ಮಾಡುವ ಉದ್ದೇಶ ಹೊಂದಿದ್ದರು. ಹೀಗಾಗಿ, ಆತ ತಪ್ಪಿಸಿಕೊಂಡು ಪರಾರಿಯಾದನೆಂದು ಕತೆ ಕಟ್ಟಿದ್ದರು. ಇಷ್ಟು ದಿನ ಮಗನನ್ನು ಕೂಡಿಟ್ಟಿದ್ದ ಪೊಲೀಸರು, ನಾವು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುತ್ತಿದ್ದಂತೆಯೇ ಹೊರಗೆ ಕರೆದುಕೊಂಡು ಬಂದಿದ್ದಾರೆ. 9 ತಿಂಗಳ ಹಿಂದೆ ಹಿರಿಯ ಮಗ ವಿನೋದ್‌ನನ್ನು ಕಳೆದುಕೊಂಡಿದ್ದೇನೆ. ಈಗ ಈತನನ್ನೂ ಕಳೆದುಕೊಳ್ಳುವ ಭೀತಿ ಎದುರಾಗಿದೆ’ ಎಂದು ಪ್ರಶಾಂತ್ ತಾಯಿ ಮೇನಕಮ್ಮ ದುಃಖತಪ್ತರಾದರು.

ಪತ್ನಿ ಎಂದು ಹೇಬಿಯಸ್ ಕಾರ್ಪಸ್

‘ನನ್ನ ಪತಿ ಪ್ರಶಾಂತ್ ಅವರನ್ನು ಅಕ್ರಮ ಬಂಧನದಲ್ಲಿ ಇಟ್ಟುಕೊಂಡಿರುವ ಪೊಲೀಸರು, ಆತ ತಪ್ಪಿಸಿಕೊಂಡಿದ್ದಾನೆ ಎಂದು ಸುಳ್ಳು ಹೇಳುತ್ತಿದ್ದಾರೆ. ದಯವಿಟ್ಟು ನನ್ನ ಗಂಡನನ್ನು ಹುಡುಕಿಕೊಡಿ’ ಎಂದು ಅರ್ಚನಾ ಎಂಬುವರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದರೆ, ‘ಅರ್ಚನಾ ಪ್ರಶಾಂತ್‌ನ ಪತ್ನಿಯೇ ಅಲ್ಲ. ಅವರು ಸಂತೋಷ್ ಎಂಬುವರ ಹೆಂಡತಿ’ ಎಂದು ಪೊಲೀಸರು ಹೇಳಿದ್ದಾರೆ.

* ಪ್ರಶಾಂತ್ ಪರಾರಿ ಪ್ರಕರಣದ ಬಗ್ಗೆ ಎಸಿಪಿ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಸಿಬ್ಬಂದಿಯ ಕರ್ತವ್ಯ ಲೋಪ ಸಾಬೀತಾದರೆ, ಕ್ರಮ ತೆಗೆದುಕೊಳ್ಳಲಾಗುವುದು

- ನಾರಾಯಣ್ ಡಿಸಿಪಿ, ವೈಟ್‌ಫೀಲ್ಡ್ ವಿಭಾಗ

ಪ್ರತಿಕ್ರಿಯಿಸಿ (+)