ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿಹೋದ ಕೆರೆಗಳ ಡಿನೋಟಿಫೈ:ಆಕ್ಷೇಪ

ಒತ್ತುವರಿದಾರರಿಗೆ ಲಾಭ ಮಾಡಿಕೊಡುವ ಹುನ್ನಾರ– ಸರ್ಕಾರದ ಧೋರಣೆಗೆ ಕಿಡಿ
Last Updated 13 ಜುಲೈ 2017, 19:51 IST
ಅಕ್ಷರ ಗಾತ್ರ

ಬೆಂಗಳೂರು: ಬತ್ತಿಹೋದ ಕೆರೆ, ಕಟ್ಟೆ, ಹಳ್ಳಗಳನ್ನು ಡಿನೋಟಿಫೈ ಮಾಡುವ ಸರ್ಕಾರದ ಯತ್ನದ ಹಿಂದೆ ಒತ್ತುವರಿದಾರರಿಗೆ ಲಾಭ ಮಾಡಿಕೊಡುವ ಹುನ್ನಾರ ಅಡಗಿದೆ ಎಂಬ ಆಪಾದನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

‘ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಕೆರೆ ಒತ್ತುವರಿ ಮತ್ತು ಸಂರಕ್ಷಣೆಗಾಗಿ ರಚಿಸಿರುವ ಸದನ ಸಮಿತಿ’ಯ ಮಧ್ಯಂತರ ವರದಿಯಲ್ಲಿ ಈ ಎರಡೇ ಜಿಲ್ಲೆಗಳಲ್ಲಿ 10,472 ಎಕರೆ ಕೆರೆ ಜಾಗ ಒತ್ತುವರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಪೈಕಿ  7,185 ಎಕರೆ ಪ್ರದೇಶವನ್ನು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿದ್ದಾರೆ.

(ರವಿಕೃಷ್ಣಾ ರೆಡ್ಡಿ)

ಈ ಎರಡೂ ಜಿಲ್ಲೆಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಇದ್ದು, ಒತ್ತುವರಿದಾರರ ಪೈಕಿ ರಾಜಕೀಯ ಪ್ರಭಾವ ಇರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬತ್ತಿಹೋದ ಕೆರೆ, ಕಟ್ಟೆಗಳನ್ನು ಸರ್ಕಾರದ ಸ್ವಾಮ್ಯದಿಂದ ಕೈಬಿಡುವ ಉದ್ದೇಶದ ಹಿಂದೆ ಇಂತಹ ಒತ್ತುವರಿದಾರರಿಗೆ ಅನುಕೂಲ ಮಾಡಿಕೊಡುವ ಚಿಂತನೆ ಇದೆ ಎಂಬ ಆರೋಪವೂ ಕೇಳಿಬಂದಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ  ‘ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ’ಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ, ‘ಬೆಂಗಳೂರಿನಲ್ಲಿ ಹಳೆಯ ಕಟ್ಟಡಗಳ ತ್ಯಾಜ್ಯ ಸುರಿದು ಕೆರೆ, ಕಟ್ಟೆ, ರಾಜಕಾಲುವೆಗಳನ್ನು ದುರುದ್ದೇಶದಿಂದ ಬತ್ತಿಸಲಾಗಿದೆ. ಈಗ ಅವು ಮೂಲಸ್ವರೂಪ ಕಳೆದುಕೊಂಡಿವೆ ಎಂದು  ಹೇಳಿ, ಅದನ್ನು ಡಿನೋಟಿಫೈ ಮಾಡಿದರೆ  ಭವಿಷ್ಯಕ್ಕೆ ಮಾರಕವಾಗಲಿದೆ. ರಾಜ್ಯದ ಜನರಿಗೆ ಮಾಡುವ ಅನ್ಯಾಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಇರುವ ಜಲಮೂಲಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಜಲಕ್ಷಾಮ ಉಂಟಾಗಿದೆ. ಒತ್ತುವರಿಯಿಂದಾಗಿಯೇ  ಬತ್ತಿ ಹೋಗಿರುವ ಕೆರೆ, ಹಳ್ಳಗಳ ಒತ್ತುವರಿ ತೆರವುಗೊಳಿಸಿ  ಪುನುರುಜ್ಜೀವನ ಮಾಡಬೇಕಾದ ಸರ್ಕಾರ ಅವುಗಳನ್ನು ತನ್ನ ಸ್ವಾಮ್ಯದಿಂದ ಕೈಬಿಡಲು ಮುಂದಾಗಿರುವುದು ದೊಡ್ಡ ಲೋಪ. ಇದನ್ನು ತಡೆಯಲು ಎಲ್ಲರೂ ಮುಂದಾಗಬೇಕಿದೆ’ ಎಂದು ಹೇಳಿದರು.

‘ ಬತ್ತಿ ಹೋದ ಕೆರೆಗಳು ಯಾವವು, ಎಷ್ಟು ವರ್ಷದಿಂದ ಅವು ಬತ್ತಿಹೋಗಿವೆ. ಯಾವುದನ್ನೂ ಸರ್ಕಾರಿ ಸ್ವಾಮ್ಯದಿಂದ ಕೈಬಿಡಲಾಗುವುದು ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ಇಲ್ಲದೇ ಇದ್ದರೆ  ಕೆರೆ ಉಳಿಸುವ ಮೂಲ ತತ್ವಕ್ಕೆ ತಿಲಾಂಜಲಿ ಇಟ್ಟಂತಾಗುತ್ತದೆ. ಸದನ ಸಮಿತಿ, ಕೆರೆ  ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಗಳು ನಿರುಪಯುಕ್ತವಾಗುತ್ತವೆ’ ಎಂದು ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

(ಎ.ಟಿ.ರಾಮಸ್ವಾಮಿ)

‘ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ’ಯ ರವಿಕೃಷ್ಣಾ ರೆಡ್ಡಿ, ‘ಕಾಯ್ದೆ ತರಲು ಉದ್ದೇಶಿಸಿರುವ ತಿದ್ದುಪಡಿಯ ವಿವರ ನೋಡಿದರೆ ಕೆರೆಗಳ ಮೂಲ ಸ್ವರೂಪ ಕಳೆಯಲು ಸರ್ಕಾರ ಮುಕ್ತ ಆಹ್ವಾನ ಕೊಡುತ್ತಿದೆ  ಎಂದು ಅನಿಸುತ್ತದೆ. ಮೂಲ ಸ್ವರೂಪ ಕಳೆದುಕೊಂಡ ಕೆರೆಗಳ ಜಾಗವನ್ನು ಯಾರು ಬೇಕಾದರೂ ಉಪಯೋಗಿಸಬಹುದು ಎಂಬ ಸಂದೇಶ ರವಾನಿಸಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

**

ಕಾಯ್ದೆ ತಿದ್ದುಪಡಿ ಮೊದಲು ಬತ್ತಿಹೋದ ಕೆರೆ, ಹಳ್ಳಗಳು ಗುರುತಿಗೆ ಮಾನದಂಡ ರೂಪಿಸಬೇಕು.  ಇಲ್ಲದಿದ್ದರೆ ಕೆರೆ ಬತ್ತಿಸುವವರಿಗೆ ಇದು ದಾರಿ ಮಾಡಿಕೊಡಲಿದೆ
–ಎಸ್‌. ಸುರೇಶಕುಮಾರ್‌, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT