ಸೋಮವಾರ, ಡಿಸೆಂಬರ್ 9, 2019
23 °C

ಅಕ್ರಮ ಗಣಿಗಾರಿಕೆ: ಅರಣ್ಯ ಒತ್ತುವರಿ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ರಮ ಗಣಿಗಾರಿಕೆ: ಅರಣ್ಯ ಒತ್ತುವರಿ ಭೀತಿ

ಉಪ್ಪಿನಂಗಡಿ: ಕವಿಗಡಚುವ ಶಬ್ಧ, ಮನೆಗಳಲ್ಲಿ ಬಿರುಕು.. ಅಪಾಯಕಾರಿ ಹೊಂಡ ,ಅಬ್ಬಬ್ಬಾ! ಏನಿದು ಭಯಾನಕ ದೃಶ್ಯ. ಯಾವುದೋ ಹಳೆ ಸಿನಿಮಾದಲ್ಲಿ ಕಾಣುವಂತಹ  ದೃಶ್ಯಗಳು, ಅಗೆದು, ಮೊಗೆದು ಕಲ್ಲು ತೆಗೆದು ಉಂಟಾದ ಬೃಹತ್ ಅಪಾಯದ ಕೂಪ. ತಣ್ಣೀರುಪಂಥ ಗ್ರಾಮದಲ್ಲಿ, ಉಪ್ಪಿನಂಗಡಿ-ಬೆಳ್ತಂಗಡಿ ರಸ್ತೆಯಲ್ಲಿ ಕಲ್ಲೇರಿಯಿಂದ ಮುಂದೆ ಪಾಲೇದು ಸಮೀಪದ ಮಡೆಪ್ಪಾಡಿಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಪಾಲೇದು ಬ್ಲಾಕ್ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಚಿತ್ರಣವಿದು.

‘ಸ್ಪೋಟಕ ಸಿಡಿಸಿ, ಬಳಿಕ ಕಲ್ಲು ಕೋರೆಯ ಆಳದ ಮಧ್ಯದಲ್ಲಿ ಹಿಟಾಚಿ ಬಳಸಿ ಪರಿಸರದಲ್ಲಿ ಭೀತಿ ಮೂಡಿಸುವಂತೆ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ಇದರ ಸುತ್ತಲಿನ ಪರಿಸರದ ಮಡೆಪ್ಪಾಡಿ, ಮಂದಿಲ, ಮಾನ್ಯ, ಪಾಲೇದು, ಬಾಳಿಂಜ, ಹೊಸ ಮನೆ, ಪೆಜಕೊಡಂಗೆ, ಆಚಾರಿಬೆಟ್ಟು ಮೊದಲಾದ ಪರಿಸರದ ನಿವಾಸಿಗಳು ಭೀತಿಗೆ ಒಳಗಾಗಿದ್ದೇವೆ ಜೊತೆಗೆ ಮನೆಗಳು ಬಿರುಕು ಬಿಡಲಾರಂಭಿಸಿ ಸಂತ್ರಸ್ತರಾಗಿದ್ದೇವೆ, ಇದರಿಂದ ನಮ್ಮನ್ನು ಮುಕ್ತಗೊಳಿಸಬೇಕು’ ಎಂದು ಗ್ರಾಮಸ್ಥರು ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿಗೆ ದೂರು ನೀಡಿದ್ದಾರೆ.

‘ತಣ್ಣೀರುಪಂಥ ಗ್ರಾಮದ ಮಡಪ್ಪಾಡಿ ಎಂಬಲ್ಲಿ ಸರ್ವೆ ನಂಬರ್‌ 112/ಪಿ/1ರಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಈ ಪ್ರದೇಶವು ಭಾಗಶಃ ಮೀಸಲು ಅರಣ್ಯ ಭೂಮಿಯಾಗಿದ್ದು, ಇಲ್ಲಿ ಗಣಿಗಾರಿಕೆ ನಡೆಯುತ್ತಿರುವ ಸಂದರ್ಭ ಸ್ಫೋಟಕ ಶಬ್ದಕ್ಕೆ ಸಮೀಪದಲ್ಲಿ ಇರುವ ಕಾಡು ಪ್ರಾಣಿಗಳೂ ಭೀತಿಗೆ ಸಿಲುಕಿ ನೆಲೆ ಕಳೆದುಕೊಳ್ಳುತ್ತಿದೆ, ಜತೆಗೆ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ’ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.

ಅಪಾಯಕಾರಿ ಹೊಂಡ: ‘ಗಣಿಗಾರಿಕೆಯಿಂದಾಗಿ ಸುಮಾರು 1 ಎಕರೆ ಪ್ರದೇಶದಲ್ಲಿ ಸುಮಾರು 300 ಅಡಿ ಆಳಕ್ಕೆ ಬೃಹತ್ ಹೊಂಡ ಬಾಯ್ದೆರೆದು ನಿಂತಿದೆ, ಇದೀಗ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಅಪಾಯ ಎದುರಾಗಿದೆ. ಇದರ ಸಮೀಪ ಶಾಲಾ ಮಕ್ಕಳು, ಜನ, ಜಾನುವಾರು ಸಂಚರಿಸುತ್ತಿದ್ದು, ಯಾವ ಕ್ಷಣದಲ್ಲಿ ಇಲ್ಲಿ ದುರಂತ ನಡೆಯುತ್ತದೆ ಎಂದು ಹೇಳು ವುದು ಅಸಾಧ್ಯ’ ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮದ ಪ್ರಕಾರ ಕಲ್ಲು ಗಣಿಗಾರಿಕೆ ನಡೆಯುವ ಸುತ್ತ ಕಡ್ಡಾಯವಾಗಿ ಸುರ ಕ್ಷತಾ ಕ್ರಮವಾಗಿ 6 ಅಡಿ ತಡೆ ಗೋಡೆಯನ್ನು ನಿರ್ಮಿಸಬೇಕು. ಆದರೆ ಇಲ್ಲಿ ಅಂತಹ ಯಾವುದೇ ಅಡೆ ತಡೆಗಳನ್ನು ನಿರ್ಮಿಸಿಲ್ಲ.

ಕಾರ್ಮಿಕರಿಗೂ ಸುರಕ್ಷಾ ನಿಯಮವಿಲ್ಲ:

ಕಲ್ಲು ಗಣಿಗಾರಿಕೆ ನಡೆಯುವಲ್ಲಿ ಅತ್ಯಂತ ಅಪಾಯಕಾರಿಯಾಗಿ ಯಂತ್ರದ ಮೂಲಕ ಕಲ್ಲು ಸಿಡಿಸುತ್ತಿದ್ದು, ಇದರ ಕಾರ್ಮಿಕರು ನೆಲದಿಂದ ಸುಮಾರು 200 ಅಡಿ ಎತ್ತರದಲ್ಲಿ ಕಲ್ಲು ಬಂಡೆಯ ಮಧ್ಯೆ ಕುಳಿತು ಕಲ್ಲು ಸಿಡಿಸುವುದು ಕಂಡು ಬಂದಿದ್ದು, ಇವರಿಗೆ ಯಾವುದೇ ಸುರಕ್ಷಾ ವ್ಯವಸ್ಥೆ ಇರುವುದಿಲ್ಲ.

ಕಲ್ಲು ಗಣಿಗಾರಿಕೆ ನಡೆಯುವ ಜಮೀನಿಂದ 40 ಮೀಟರ್ ಅಂತರದಲ್ಲಿ ಕುದ್ರಡ್ಕ-ಪಾಲೇದು-ಲಿಂಗಸ್ಥಳ-ಕಕ್ಕೆಪದವು ರಸ್ತೆ ಸಂಪರ್ಕ ಇದ್ದು, ಗಣಿಗಾರಿಕೆಯ ಸ್ಫೋಟಕ್ಕೆ ರಸ್ತೆ ಬರುಕು ಬಿಡುತ್ತಿದೆ. ಮತ್ತು ಅಧಿಕ ಭಾರದ ಕಲ್ಲು ಹೇರಿಕೊಂಡು ಹೋಗುವ ಲಾರಿಗಳಿಂದಾಗಿ ರಸ್ತೆಯ ಉದ್ದಕ್ಕೂ ಹೊಂಡಗಳು ನಿರ್ಮಾಣ ಆಗುತ್ತಿದು, ರಸ್ತೆ ಡಾಂಬರೀಕರಣ ಮಾಡಿದರೂ ಪ್ರಯೋಜನಕ್ಕೆ ಬಾರದ ಸ್ಥಿತಿ ಇಲ್ಲಿ ನಿರ್ಮಾಣ ಆಗಿದೆ’ ಎಂದು ಪರಿಸರದ ಸುಮಾರು 120ಕ್ಕೂ ಹೆಚ್ಚು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ನಿವೇದಿಸಲಾಗಿದೆ.

ಅರಣ್ಯದೊಳಗೆ ಅಕ್ರಮ ರಸ್ತೆ, ಇಲಾಖೆಯಿಂದ ಬಂದ್

ಕಲ್ಲು ಕೋರೆಯಿಂದ ಕ್ರಶರ್ ಮಧ್ಯೆ ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ರಸ್ತೆ ನಿರ್ಮಿಸಿಕೊಂಡಿದ್ದರು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅದರಂತೆ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯದೊಳಗೆ ನಿರ್ಮಿಸಿರುವ ರಸ್ತೆಯನ್ನು ಮಂಗಳವಾರ ರಸ್ತೆ ಮಧ್ಯೆ ಹಿಟಾಚಿ ಮೂಲಕ ಹೊಂಡ ತೋಡಿ ರಸ್ತೆಯನ್ನು ಬಂದ್ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪರವಾನಗಿ ಹೊಂದಿದ್ದೇವೆ

ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಅಕ್ರಮ ಅಲ್ಲ, ಇದಕ್ಕೆ ಪರವಾನಿಗೆ ಪಡೆದಿದ್ದು, ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವುದಿಲ್ಲ ಎಂದು ಕಲ್ಲು ಗಣಿಗಾರಿಕೆ ಮಾಲಕಿ ಸುನಿತಾ ಅವರ ಪರವಾಗಿ ಅವರ ಪತಿ ತಣ್ಣೀರುಪಂಥ ಗ್ರಾಮ ಪಂಚಾಯಿತಿ ಸದಸ್ಯ ಸದಾನಂದ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

 

ಪ್ರತಿಕ್ರಿಯಿಸಿ (+)