ಭಾನುವಾರ, ಡಿಸೆಂಬರ್ 8, 2019
21 °C

ಸೀಮಂತಕ್ಕೆ ಶೌಚಾಲಯ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೀಮಂತಕ್ಕೆ ಶೌಚಾಲಯ ಕೊಡುಗೆ

ದಾವಣಗೆರೆ: ಜಿಲ್ಲೆಯನ್ನು ಬಯಲು ಬಹಿರ್ದೆಸೆಮುಕ್ತ ಜಿಲ್ಲೆಯನ್ನಾಗಿ ಮಾಡಲು ಕಾರ್ಯತಂತ್ರ ರೂಪಿಸಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಈ ಅಭಿಯಾನಕ್ಕೆ ಸಹಕರಿಸುವ ಮೂಲಕ ಅಕ್ಟೋಬರ್‌ 2ರೊಳಗೆ ಪ್ರತಿ ಕುಟುಂಬವು ಶೌಚಾಲಯ ಹೊಂದಿರು ವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಎಸ್‌.ಅಶ್ವತಿ ಸೂಚಿಸಿದರು

ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸ್ವಚ್ಛ ಭಾರತ ಅಭಿಯಾನದ ನೋಡಲ್‌ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಶೌಚಾಲಯ ಕಟ್ಟಿಸಲು ಜನರ ಮನವೊಲಿಸುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡಲಾಗುವುದು. ದಾವಣಗೆರೆಯನ್ನು ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಮಾಡುವಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು. ಒಂದು ವೇಳೆ ಶೌಚಾಲಯ ನಿರ್ಮಿಸಲು ಅಸಹಕಾರ ತೋರುವವರಿಗೆ ಸರ್ಕಾರದ ಸೌಲಭ್ಯಗಳನ್ನು ಕಡಿತಗೊ ಳಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ 15,600ಕ್ಕೂ ಹೆಚ್ಚು ಗರ್ಭಿಣಿಯರಿದ್ದು, ಅವರಿಗೆ ಸೀಮಂತದ ಕೊಡುಗೆಯಾಗಿ ಶೌಚಾಲಯ ನಿರ್ಮಿಸಿ ಕೊಡಲು ಉದ್ದೇಶಿಸಲಾಗಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಬಾಕಿ ಇರುವ 85,209 ವೈಯಕ್ತಿಕ ಶೌಚಾಲಯಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.

ಇದರೊಂದಿಗೆ ವಿಶೇಷ ಅಭಿಯಾನದ ಮೂಲಕ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ 200 ಶೌಚಾಲಯ ನಿರ್ಮಾಣದಂತೆ 233 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ  ಒಟ್ಟು 46,600 ಶೌಚಾಲಯಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.

ನೋಡಲ್‌ ಅಧಿಕಾರಿಗಳ ನೇಮಕ: ಶೌಚಾಲಯ ನಿರ್ಮಾಣ ಅಭಿ ಯಾನದ ಯಶಸ್ಸಿಗಾಗಿ ಈಗಾಗಲೇ ಜಿಲ್ಲೆಯ 24 ಹೋಬಳಿಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಕಟ್ಟಡ ಸಾಮಗ್ರಿ, ಮರಳು, ಹಾಗೂ ಫಲಾನುಭವಿಗಳ ಬ್ಯಾಂಕ್‌ ಖಾತೆ ಹಣ ವರ್ಗಾವಣೆ ಈ ಎಲ್ಲಾ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

₹ 150 ಪ್ರೋತ್ಸಾಹಧನ: ಗರ್ಭಿಣಿಯರ ಮನವೊಲಿಸಿ, ಶೌಚಾಲಯ ನಿರ್ಮಿಸುವಲ್ಲಿ ಯಶಸ್ವಿಯಾದ ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ₹ 150 ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು. ಶಾಲೆಯ ಪ್ರಾರ್ಥನೆ ವೇಳೆ ವಿದ್ಯಾರ್ಥಿಗಳಿಗೆ ‘ಸ್ವಚ್ಛ ಭಾರತ್‌’, ‘ಸ್ವಚ್ಛ ಶಾಲೆ’ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಡಿಡಿಪಿಐ ಎಚ್‌.ಎಂ.ಪ್ರೇಮಾ ಅವರಿಗೆ ಸಲಹೆ ನೀಡಿದರು.

ದಾವಣಗೆರೆ, ಹೊನ್ನಾಳಿ, ಹರಿಹರ ಹಾಗೂ ಚನ್ನಗಿರಿ ತಾಲ್ಲೂಕುಗಳನ್ನು ಅಕ್ಟೋಬರ್‌ 2ಕ್ಕೆ ಬಯಲು ಶೌಚಮುಕ್ತ ತಾಲ್ಲೂಕು ಗಳನ್ನಾಗಿ ಘೋಷಿಸಲಾಗು ವುದು. ಡಿಸೆಂಬರ್‌ನಲ್ಲಿ ಜಗಳೂರು ಮತ್ತು ಹರಪನಹಳ್ಳಿ ತಾಲ್ಲೂಕುಗಳನ್ನು ಬಯಲು ಬಹಿರ್ದೆಸೆಮುಕ್ತ ತಾಲ್ಲೂಕುಗಳನ್ನಾಗಿ ಘೋಷಿಸುವ ಗುರಿ ಹೊಂದಲಾಗಿದೆ.

ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯ್ತಿಯ ಅಧಿಕಾರಿಗಳು ಹಾಗೂ ನಿಯೋಜಿತ ನೋಡಲ್‌ ಅಧಿಕಾರಿಗಳು ಸಹಕರಿಸಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಕ್ಷರಪ್ಪ, ಯೋಜನಾ ನಿರ್ದೇಶಕ ರಂಗಸ್ವಾಮಿ ಹಾಗೂ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)