ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನಾಡು ಕಟ್ಟಲು ಮನಸ್ಸು ದುರಸ್ತಿಯಾಗಲಿ

Last Updated 14 ಜುಲೈ 2017, 6:01 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಹೊಸ ನಾಡೊಂದನ್ನು ಕಟ್ಟುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ. ಆದ್ದರಿಂದ ಯಂತ್ರ, ರಸ್ತೆ, ಕಟ್ಟಡ, ವಾಹನ, ಕೊಡೆಗಳಂತೆ ಎಲ್ಲರ ಮನಸ್ಸುಗಳು ದುರಸ್ತಿಯಾದಾಗ ಮಾತ್ರ ಸಮೃದ್ಧ ರಾಷ್ಟ್ರ ನಿರ್ಮಾಣ ಸಾಧ್ಯ’ ಎಂದು ಇತಿಹಾಸ ಸಂಶೋಧಕ ಶ್ರೀಶೈಲಾರಾಧ್ಯ ಅಭಿಪ್ರಾಯಪಟ್ಟರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಸಂಸ್ಕಾರ ಭಾರತಿ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‌ ವ್ಹೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್‌ನಿಂದ ಹಮ್ಮಿಕೊಂಡಿದ್ದ ‘ಗುರುಪೂರ್ಣಿಮೆ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದರು.

ಸ್ವಾತಂತ್ರ್ಯಾನಂತರ ನೂತನ ನಾಡನ್ನು ಕಟ್ಟುವ ಕನಸು ಕಂಡಿದ್ದೇವೆಯೇ ಹೊರತು ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನಗಳು ನಡೆದಿಲ್ಲ. ಆದ್ದರಿಂದ ಯುವಪೀಳಿಗೆ ಇಂತಹ ಮಹತ್ಕಾರ್ಯಕ್ಕೆ ಕೈಜೋಡಿಸುವ ಮೂಲಕ ಸಂಸ್ಕಾರಯುತ ಸುಂದರ ನಾಡು ನಿರ್ಮಿಸಲು ಮುಂದಾಗಬೇಕು ಎಂದರು.

ಎಲ್ಲರೂ ಗುರು ಆಗಬಹುದು: ಗುರು ಆಗಲೂ ಶಿಕ್ಷಕರೇ ಆಗಬೇಕೆಂದೇನಿಲ್ಲ. ತನಗೆ ತಿಳಿದ ಸಾಮಾನ್ಯ ಜ್ಞಾನವನ್ನು 1500 ಮಂದಿ ಮಕ್ಕಳಿಗೆ ಹೇಳಿಕೊಟ್ಟ ಬಾಲಕ ಬಾಬರ್‌ ಆಲಿ ದೇಶ – ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ. ಇದು ನಮ್ಮ ಮಣ್ಣಿನ ವೈಶಿಷ್ಟ್ಯವಾಗಿದ್ದು, ಗುರು ಆಗುವ ಯೋಗ್ಯತೆ ಈ ದೇಶದಲ್ಲಿನ ಪ್ರತಿಯೊಬ್ಬರಿಗೂ ಇದೆ. ಅದನ್ನು ಅರ್ಥ ಮಾಡಿಕೊಳ್ಳಬೇಕಷ್ಟೆ  ಎಂದು ಯುವ ಬ್ರಿಗೇಡ್‌ನ ನಿಖೇತ್‌ರಾಜ್ ತಿಳಿಸಿದರು.

ಇತಿಹಾಸ ನಿರ್ಮಿಸುವ ತಾಕತ್ತು ನಮ್ಮ ಕೈಯಲ್ಲಿದೆ. ಒನಕೆ ಹಿಡಿದು ಶತ್ರುಗಳೊಂದಿಗೆ ಹೋರಾಡಿ ವೀರಸ್ವರ್ಗ ಸೇರಿದ ಮಹಿಳೆ ಭಾರತದಲ್ಲಿ ಬಿಟ್ಟರೆ ಯಾವ ದೇಶದಲ್ಲಿಯೂ ಜನಿಸಿಲ್ಲ. ನಾಡನ್ನು ಉಳಿಸುವ ತಾಕತ್ತು ಹೆಣ್ಣಿಗೂ ಇದೆ ಎಂಬುದನ್ನು ಇಲ್ಲಿನ ಒನಕೆ ಓಬವ್ವ ಸೇರಿದಂತೆ ಅನೇಕ ವೀರ ಮಹಿಳೆಯರು ತೋರಿಸಿದ್ದಾರೆ’ ಎಂದ ಅವರು, ‘ನಮ್ಮ ಬದುಕು ದೇಶಕ್ಕಾಗಿ ಮುಡುಪಾಗಿರಬೇಕು’ ಎಂದು ಸಲಹೆ ನೀಡಿದರು.

ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅಂಬೇಡ್ಕರ್‌ ಅವಿರತ ಶ್ರಮಿಸಿದರು. ಶಿಕ್ಷಕರನ್ನೇ ಪ್ರಶ್ನಿಸುತ್ತಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಮುಂದೆ ವಿಜ್ಞಾನಿ, ರಾಷ್ಟ್ರಪತಿಯಾದರು. ಸಾಮರ್ಥ್ಯದ ಮೂಲಕವೇ  ಸ್ವಾಮಿ ವಿವೇಕಾನಂದರು ವಿಶ್ವದ ಮನ ಗೆದ್ದರು. ಆದ್ದರಿಂದ ಸಾಧಕರಾಗಲು ಧರ್ಮ, ಜಾತಿ, ಬಣ್ಣ, ಹಣ, ಆಸ್ತಿ ಇದ್ಯಾವುದೂ ಮುಖ್ಯವಲ್ಲ.

ಜೀವನದಲ್ಲಿ ಯಾರು ಪರಿಶ್ರಮ ಪಟ್ಟು ಗುರಿ ತಲುಪಲು ಮುಂದೆ ನುಗ್ಗುತ್ತಾರೋ ಅವರು ಪ್ರಖ್ಯಾತರಾಗುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಾಹಿತ್ಯ ವಿಭಾಗದಿಂದ ಶ್ರೀಶೈಲಾರಾಧ್ಯ, ಸಂಗೀತ ವಿಭಾಗದಿಂದ ಕಲಾವಿದೆ ಭಾಮಾ, ಶಿಕ್ಷಣ ವಿಭಾಗದಿಂದ ಪ್ರಾಧ್ಯಾಪಕ ಚಂದ್ರಯ್ಯ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ವಿ.ಎಸ್.ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕಾರ ಭಾರತಿ ಅಧ್ಯಕ್ಷ ಟಿ.ಕೆ. ನಾಗರಾಜ್, ಕಾರ್ಯದರ್ಶಿ ಡಾ.ಕೆ. ರಾಜೀವಲೋಚನ, ಸಂಚಾಲಕ ಟಿ.ಎನ್.ಮಾರುತಿ ಮೋಹನ್, ರೋಟರಿ ಫೋರ್ಟ್ ಅಧ್ಯಕ್ಷ ಅರುಣ್‌ಕುಮಾರ್, ಮುಖ್ಯ ಕಾರ್ಯದರ್ಶಿ ರವೀಂದ್ರ, ಇನ್ನರ್‌ವ್ಹೀಲ್ ಫೋರ್ಟ್ ಅಧ್ಯಕ್ಷೆ ಪ್ರತಿಭಾ ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT