ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದ ಬೆಳಕು ಚೆಲ್ಲುವ ಪ್ರಾಚ್ಯವಸ್ತು

Last Updated 14 ಜುಲೈ 2017, 6:12 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಾಚ್ಯವಸ್ತುಗಳು ಸಮುದಾಯದ ಪ್ರಾಚೀನ ಜೀವನ ವಿಧಾನ, ಸಾಂಸ್ಕೃತಿಕ ಬದಲಾವಣೆಗಳ ಮೇಲೆ ಬೆಳಕು ಚೆಲ್ಲುತ್ತವೆ ಎಂದು ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ಸಹಾಯಕ ನಿರ್ದೇಶಕ ಶೇಜೇಶ್ವರ ಮಾಹಿತಿ ನೀಡಿದರು.

ಶಿವಪ್ಪನಾಯಕ ಅರಮನೆ ಮೈದಾನದ ಆವರಣದಲ್ಲಿ ಗುರುವಾರ ಜಿಲ್ಲಾ ಪಂಚಾಯ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚ್ಯವಸ್ತುಗಳು ಇತಿಹಾಸದ ಆಕರಗಳಾಗಿವೆ. ಪ್ರಾಚೀನ ಕಾಲದ ವಸ್ತುಗಳು ಅಧ್ಯಯನದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿವೆ. ಎಲ್ಲರೂ ಅವುಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿಂದಿನ ಕಾಲದ ಬಳಕೆಯ ಕೆಲ ಪಾತ್ರೆಗಳು, ಪರಿಕರಗಳು, ಸಂಗ್ರಹಗಳು, ಪೂಜಾ ಸಾಮಗ್ರಿ, ವಿಗ್ರಹ, ನಾಣ್ಯ, ಆಯುಧಗಳು ಇಂದಿನ ದಿನದಲ್ಲಿ ಮೌಲ್ಯ ಕಳೆದುಕೊಂಡು ಜನರ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕೆಲವು ಗುಜರಿ ಅಂಗಡಿಗಳ ಪಾಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಶೇಷವಾಗಿ ಸಂಗ್ರಹಿಸಲಾದ ಇಂತಹ ವಸ್ತುಗಳ ಮೂಲ ಹಾಗೂ ಇತಿಹಾಸದ ಮೇಲೆ ಬೆಳಕು ಚೆಲ್ಲಿದಾಗ ಇನ್ನಷ್ಟು ರೋಚಕ, ಕುತೂಹಲದ ಸಂಗತಿಗಳು ಬೆಳಕಿಗೆ ಬರಲಿವೆ ಎಂದರು. ಹಳೆಯ ಕಾಲದ ಅಪರೂಪದ ವಸ್ತುಗಳ ಇರುವಿಕೆ ಕುರಿತು ಇಲಾಖೆಯ ಗಮನ ಸೆಳೆದಲ್ಲಿ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಮಾತನಾಡಿ, ‘ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪುರಾತನ ಶಿಲ್ಪಕಲೆಗಳಲ್ಲಿ ಕೆತ್ತನೆಗಳು, ಕುಸುರಿ ಕಲೆಗಳು
ಇಂದಿಗೂ ಮಾದರಿಯಾಗಿವೆ. ಇತಿಹಾಸ ಕಾರರು ನೀಡಿದ ಘಟನೆ ಅರಿತು ಆಯಾ ಕಾಲದ ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಪರಂಪರೆ ಅನುಸರಿಸಬಹುದು’
ಎಂದು ಹೇಳಿದರು.

‘ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ. ರಾಜ ಮಹಾರಾಜರ ಕಾಲದ ಆಳ್ವಿಕೆ, ಅಂದಿನ ಕಾಲದ ಸಂಸ್ಕೃತಿ, ಬಳಕೆಯಲ್ಲಿದ್ದ ವಸ್ತುಗಳು, ಕೆತ್ತನೆ, ಶಿಲ್ಪಕಲೆಗಳ ಬಗ್ಗೆ ಮಕ್ಕಳಿಗೆ ಅರಿವು ಮುಖ್ಯ. ಪ್ರಾಚೀನ ಕಾಲದ ವಸ್ತುಗಳು ನಾಡಿನ ಶ್ರೀಮಂತಿಕೆಯ ದ್ಯೋತಕ’ ಎಂದು ಬಣ್ಣಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ವಶಿಕ್ಷಣ ಅಭಿಯಾನದ ಮುದ್ದಪ್ಪ, ದೇವಾನಂದ, ವಿಷಯ ಪರಿವೀಕ್ಷಕರಾದ ವೀಣಾ, ವಿನೋದಾ ಕುಮಾರಿ,  ತಾಲ್ಲೂಕು ಮಟ್ಟದ ಸ್ಪರ್ಧೆ ಗಳಲ್ಲಿ ವಿಜೇತ ವಿದ್ಯಾರ್ಥಿಗಳು ಇದ್ದರು.

* * 

ಸ್ಮಾರಕಗಳ ಮೂರ್ತ, ಅಮೂರ್ತ ಸಂಸ್ಕೃತಿಯ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ವಿವಿಧ ಸ್ಪರ್ಧೆ ಆಯೋಜಿಸಿ, ಪ್ರೋತ್ಸಾಹಿಸಲಾಗುತ್ತಿದೆ.
–ಶೇಜೇಶ್ವರ, ಸಹಾಯಕ ನಿರ್ದೇಶಕ, ಪ್ರಾಚ್ಯವಸ್ತುಗಳ ಸಂಗ್ರಹಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT