ಸೋಮವಾರ, ಡಿಸೆಂಬರ್ 16, 2019
18 °C

ಗ್ರಾಹಕರ ಮನೆ ಬಾಗಿಲಿಗೆ ಆರ್‌ಐಸಿಟಿ ಸೇವೆ

ಚಂದ್ರಕಾಂತ ಮಸಾನಿ . Updated:

ಅಕ್ಷರ ಗಾತ್ರ : | |

ಗ್ರಾಹಕರ ಮನೆ ಬಾಗಿಲಿಗೆ ಆರ್‌ಐಸಿಟಿ ಸೇವೆ

ಬೀದರ್: ಅಂಚೆ ಇಲಾಖೆಯು ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಎಲೆಕ್ಟ್ರಾನಿಕ್‌ ತಂತ್ರಜ್ಞಾನದ ಮೂಲಕ ಮನೆ ಬಾಗಿಲಿಗೆ ಸೇವೆ ನೀಡಲು ಆರಂಭಿಸಿದೆ. ಪರಂಪರೆ ನಗರದಿಂದಲೇ ಸೇವೆಗೆ ಚಾಲನೆ ನೀಡಿದ್ದು, 15 ದಿನಗಳಲ್ಲಿ ಜಿಲ್ಲೆಯ ಎಲ್ಲ 271 ಅಂಚೆ ಕಚೇರಿಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಾನಿಕ್ ಸೇವೆ ದೊರೆಯಲಿದೆ.

ಡಿಜಿಟಲ್‌ ಇಂಡಿಯಾ ಅಭಿಯಾನದ ಮೂಲಕ ಪರಿಚಯಿಸಲಾದ ಗ್ರಾಮೀಣ ಮಾಹಿತಿ ಹಾಗೂ ಸಂಪರ್ಕ ತಂತ್ರಜ್ಞಾನ (ಆರ್‌ಐಸಿಟಿ) ಹೆಸರಿನ 271 ಉಪಕರಣಗಳು ಈಗಾಗಲೇ ಬೀದರ್‌ನ ಪ್ರಧಾನ ಅಂಚೆ ಕಚೇರಿಗೆ ಬಂದಿವೆ. ಗ್ರಾಹಕರಿಗೆ ತ್ವರಿತ ಸೇವೆ ಒದಗಿಸುವ ದಿಸೆಯಲ್ಲಿ ತಾಂತ್ರಿಕ ತಜ್ಞರು 90 ಅಂಚೆ ಸಿಬ್ಬಂದಿಗೆ ತರಬೇತಿ ನೀಡಿದ್ದಾರೆ. ಒಂದು ವಾರದ ಅವಧಿಯಲ್ಲಿ ಇನ್ನುಳಿದ ಸಿಬ್ಬಂದಿಗೂ ತರಬೇತಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಆರ್‌ಐಸಿಟಿ,ಇಂಟರ್ನೆಟ್‌  ಸಂಪರ್ಕದ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿದೆ. ಇಂಟರ್ನೆಟ್‌  ಸಂಪರ್ಕ ಒಂದೊಮ್ಮೆ ಕಡಿತಗೊಂಡರೂ ಸಿಬ್ಬಂದಿ ನಡೆಸಿದ ವ್ಯವಹಾರದ ಅಂಕಿಅಂಶಗಳು ಉಪಕರಣದಲ್ಲೇ ದಾಖಲಾಗಲಿವೆ.

ನಂತರ ಈ ಉಪಕರಣವನ್ನು ಅಂಚೆ ಕಚೇರಿಯಲ್ಲಿರುವ ಕಂಪ್ಯೂಟರ್‌ಗೆ ಜೋಡಿಸಿದರೆ ಸಾಕು ಎಲ್ಲ ಅಂಕಿಸಂಖ್ಯೆಗಳು ತ್ವರಿತವಾಗಿ ಅಪ್‌ಡೇಟ್‌ ಆಗಲಿವೆ. ಎಲೆಕ್ಟ್ರಾನಿಕ್ ಉಪಕರಣಕ್ಕೆ ಹೆಚ್ಚುವರಿ ಬ್ಯಾಟರಿ ಕೊಡಲಾಗಿದೆ. ಸೋಲಾರ್‌ ಪ್ಯಾನಲ್‌ನಿಂದ ಬ್ಯಾಟರಿ ಚಾರ್ಜ್‌ ಮಾಡುವ ವ್ಯವಸ್ಥೆಯೂ ಕಲ್ಪಿಸಲಾಗಿದೆ. ಒಟ್ಟಾರೆ ಉಪಕರಣವು ಯಾವುದೇ ಅಡೆತಡೆ ಇಲ್ಲದೆ ನಿರಂತರವಾಗಿ ಕಾರ್ಯ ನಿರ್ವಹಿಸಲಿದೆ.

ಉಪ ಹಾಗೂ ಗ್ರಾಮೀಣ ಅಂಚೆ ಕಚೇರಿಯ ಸಿಬ್ಬಂದಿ ಬೆಳಿಗ್ಗೆ ಮೂರು ತಾಸು ಕಚೇರಿಯಲ್ಲಿಯೇ ವ್ಯವಹಾರ ನಡೆಸಲಿದ್ದಾರೆ. ಮಧ್ಯಾಹ್ನ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸೇವೆ ಕೊಡಲಿದ್ದಾರೆ. ಇನ್ನು ಗ್ರಾಹಕರು ಸ್ಥಳದಲ್ಲೇ ಉಳಿತಾಯ ಖಾತೆಯಲ್ಲಿ ಹಣ ಜಮಾ ಮಾಡಬಹುದು, ಹಣ ತೆಗೆದುಕೊಳ್ಳಬಹುದು. ₹ 5 ಸಾವಿರಕ್ಕಿಂತ ಹೆಚ್ಚಿನ ಅಗತ್ಯವಿದ್ದರೆ ಅಂಚೆ ಕಚೇರಿಗೆ ಕರೆ ಮಾಡಿ ಖಾತೆ ಸಂಖ್ಯೆ, ಬೇಕಾದ ಮೊತ್ತವನ್ನು ತಿಳಿಸಿದರೆ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಹಣವನ್ನು ನೀಡಲಿದ್ದಾರೆ. ಗ್ರಾಹಕರಿಗೆ ಪ್ರತಿಯೊಂದು ವ್ಯವಹಾರದ ರಸೀದಿಯನ್ನೂ ಕೊಡಲಿದ್ದಾರೆ.

‘ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಚಾಲಕ ಟಿಕೆಟ್‌ ಕೊಡುವ ಯಂತ್ರದ ಮಾದರಿಯಲ್ಲಿಯೇ ಆರ್‌ಐಸಿಟಿ ಉಪಕರಣ ಇದೆ. ಸಿಬ್ಬಂದಿಯ ಹೆಬ್ಬೆರಳ ಗುರುತನ್ನು ಪಾಸ್‌ವರ್ಡ್‌ ಆಗಿ ಬಳಸಲಾಗಿದೆ. ಪ್ರತಿಯೊಂದು ವ್ಯವಹಾರದ ಅಂಕಿಅಂಶಗಳು  ಉಪಕರಣದಲ್ಲಿ ದಾಖಲಾಗುತ್ತವೆ. ಇದೇ ಅವಧಿಯಲ್ಲಿ ಅಂಚೆ ಕಚೇರಿಯಲ್ಲಿರುವ ಕಂಪ್ಯೂಟರ್‌ಗೆ ಸಂದೇಶ ತಲುಪುತ್ತವೆ’ ಎಂದು ಅಂಚೆ ಅಧೀಕ್ಷಕ ಎಸ್‌.ಎಸ್‌.ಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರ್‌ಐಸಿಟಿ ಉಪಕರಣದಲ್ಲಿ ಜಿಪಿಆರ್‌ಎಸ್‌ ಹಾಗೂ ಏರ್‌ಟೆಲ್‌ ಸಿಮ್‌ ಅಳವಡಿಸಿರುವ ಕಾರಣ ಪ್ರತಿ ಕ್ಷಣದ ವ್ಯವಹಾರದ ಮಾಹಿತಿ ಅಂಚೆ ಕಚೇರಿಯಲ್ಲಿರುವ ಕಂಪ್ಯೂಟರ್‌ನಲ್ಲಿ ಅಪಡೇಟ್‌ ಆಗುತ್ತದೆ. ಅಂಚೆ ಸಿಬ್ಬಂದಿ ಯಾವ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಷ್ಟು ವ್ಯವಹಾರ ಆಗಿದೆ ಎನ್ನುವ ಮಾಹಿತಿ ಸಹ ತ್ವರಿತವಾಗಿ ಲಭ್ಯವಾಗಲಿದೆ. ಪ್ರತಿಯೊಂದು ವ್ಯವಹಾರ ಪಾರದರ್ಶಕವಾಗಿ ನಡೆಯಲಿದೆ’ ಎಂದು ಹೇಳಿದರು.

‘ಗಡಿ ಪ್ರದೇಶದಲ್ಲಿರುವ ಜನರು ಮನೆಯಲ್ಲೇ ಕುಳಿತು ಬ್ಯಾಂಕಿಂಗ್‌ ವ್ಯವಹಾರ ಮಾಡಲು ಅನುಕೂಲವಾಗಿರುವುದರಿಂದ ಹಣಕಾಸಿನ ವ್ಯವಹಾರ ದ್ವಿಗುಣಗೊಳ್ಳಲಿದೆ. ಗ್ರಾಮೀಣ ಜನರಿಗೆ ಗುಣಮಟ್ಟದ ಸೇವೆ ದೊರೆಯಲಿದೆ. ಮೊದಲ ಹಂತದಲ್ಲಿ ಉಳಿತಾಯ ಖಾತೆಯ ವ್ಯವಹಾರಕ್ಕೆ ಮಾತ್ರ ಪ್ರಾಮುಖ್ಯ ನೀಡಲಾಗಿದೆ. ಬರುವ ದಿನಗಳಲ್ಲಿ ಮನಿ ಆರ್ಡರ್‌ ಸಹ ಪಡೆಯಲು ಸಾಧ್ಯವಾಗಲಿದೆ’ ಎಂದು ಅಂಚೆ ಇಲಾಖೆಯ ಸಿಸ್ಟಮ್‌ ಆಡ್ಮಿನ್‌ಸ್ಟ್ರೇಟರ್ ಪ್ರಕಾಶ ಅವರು ತಿಳಿಸಿದರು.

* * 

ಬೀದರ್‌ನ ಗುರುದ್ವಾರ ಹಾಗೂ ಗಾಂಧಿ ಗಂಜ್‌ ಕಚೇರಿಯಲ್ಲಿ ಮೂರು ದಿನಗಳಿಂದ ಆರ್‌ಐಸಿಟಿ ಉಪಕರಣಗಳ ಬಳಕೆ ಆರಂಭವಾಗಿದೆ.

ಎಸ್‌.ಎಸ್‌.ಪಾಟೀಲ್

ಅಂಚೆ ಅಧೀಕ್ಷಕರು

ಪ್ರತಿಕ್ರಿಯಿಸಿ (+)