ಶುಕ್ರವಾರ, ಡಿಸೆಂಬರ್ 13, 2019
16 °C

₹ 5.8 ಲಕ್ಷಕ್ಕೆ ಶೌಚಾಲಯದ ಗುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₹ 5.8 ಲಕ್ಷಕ್ಕೆ ಶೌಚಾಲಯದ ಗುತ್ತಿಗೆ

ಚಿಕ್ಕಬಳ್ಳಾಪುರ: ನಗರದ ನಗರಸಭೆಯ ಖಾಸಗಿ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯ, ಬಸ್‌ ನಿಲುಗಡೆ ಪ್ರದೇಶ, ಪಾರ್ಕಿಂಗ್ ಜಾಗದ ಬಹಿರಂಗ ಹರಾಜು ಪ್ರಕ್ರಿಯೆ ಗುರುವಾರ ನಿಲ್ದಾಣದ ಆವರಣದಲ್ಲಿ ನಡೆಯಿತು. ಇತ್ತೀಚೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಕಾರಣ ನಿಲ್ದಾಣದಲ್ಲಿರುವ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಲಾಯಿತು.

ಶೌಚಾಲಯ ಹರಾಜಿನಲ್ಲಿ ಒಟ್ಟು ಏಳು ಬಿಡ್‌ದಾರರು ಭಾಗವಹಿಸಿದ್ದರು. ಆ ಪೈಕಿ ಅರುಣ್‌ ಕುಮಾರ್ ಎಂಬುವರು ₹ 5.8 ಲಕ್ಷಕ್ಕೆ ಶೌಚಾಲಯದ ವಾರ್ಷಿಕ ಗುತ್ತಿಗೆ ತಮ್ಮದಾಗಿಸಿಕೊಂಡರು. ಬಸ್‌ ನಿಲುಗಡೆ ಪ್ರದೇಶ ಮತ್ತು  ಪಾರ್ಕಿಂಗ್‌ ಜಾಗದ ವಾರ್ಷಿಕ ಹರಾಜು ಮೊತ್ತ ಹೆಚ್ಚಾಯಿತು ಎನ್ನುವ ಕಾರಣಕ್ಕೆ ಆ ಹರಾಜುಗಳಲ್ಲಿ ಯಾವುದೇ ಬಿಡ್‌ದಾರರು ಭಾಗವಹಿಸಲಿಲ್ಲ.

ಕಳೆದ ಮಾರ್ಚ್‌ 13 ರಂದು ಖಾಸಗಿ ಬಸ್‌ ನಿಲ್ದಾಣದ ಶೌಚಾಲಯದ ಹರಾಜು ಪ್ರಕ್ರಿಯೆ ನಡೆದಿತ್ತು. ಅದರಲ್ಲಿ ಎಚ್‌.ವಿ .ಶ್ರೀನಿವಾಸ್ ಎಂಬುವರು ₹ 6.6 ಲಕ್ಷಕ್ಕೆ ಶೌಚಾಲಯದ ವಾರ್ಷಿಕ ಗುತ್ತಿಗೆ ಕೂಗಿ ತಮ್ಮದಾಗಿಸಿಕೊಂಡಿದ್ದರು. ಬಳಿಕ ಹರಾಜು ಠೇವಣಿಯ ಮೊತ್ತವನ್ನು ಪಾವತಿಸದ ಶ್ರೀನಿವಾಸ್ ನಗರಸಭೆಯತ್ತ ತಲೆ ಹಾಕಲಿಲ್ಲ. ಹೀಗಾಗಿ ಹರಾಜಿಗೂ ಮುನ್ನ ಅವರು ಪಾವತಿಸಿದ್ದ ₹ 50 ಸಾವಿರ ಠೇವಣಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡ ಆಯುಕ್ತರು ಶೌಚಾಲಯದ ಮರು ಹರಾಜಿಗೆ ಮುಂದಾಗಿದ್ದರು.

ಖಾಸಗಿ ಬಸ್‌ ನಿಲುಗಡೆ ಪ್ರದೇಶಕ್ಕೆ ವಾರ್ಷಿಕ ಹರಾಜು ಮೊತ್ತ ₹ 12 ಲಕ್ಷ, ಪಾರ್ಕಿಂಗ್‌ ಜಾಗಕ್ಕೆ ₹ 9.50 ಲಕ್ಷ ನಿಗದಿಪಡಿಸಲಾಗಿತ್ತು. ಈವರೆಗೆ ಕಡಿಮೆ ಮೊತ್ತ ಪಾವತಿಸಿ ವಾರ್ಷಿಕ ಗುತ್ತಿಗೆ ಪಡೆಯುತ್ತಿದ್ದ ಬಿಡ್‌ದಾರರು ಇದೇ ಮೊದಲ ಬಾರಿ ಏರಿಕೆಯಾದ ಮೊತ್ತ ನೋಡಿ ಹರಾಜಿನಲ್ಲಿ ಭಾಗವಹಿಸಲು ಹಿಂಜರಿದರು.

ಈ ಕುರಿತು ಮಾಹಿತಿ ನೀಡಿದ ನಗರಸಭೆಯ ಆಯುಕ್ತ ಉಮಾಕಾಂತ್‌ ಅವರು, ‘ಬಿಡ್‌ದಾರ ಶೌಚಾಲಯದ  ಹರಾಜು ಠೇವಣಿಯ ಪೂರ್ಣ ಮೊತ್ತ ಪಾವತಿಸುತ್ತಿದ್ದಂತೆ ಶೌಚಾಲಯ ಕಾರ್ಯಾರಂಭ ಮಾಡಲಿದೆ. ಬಸ್‌ ನಿಲುಗಡೆ ಪ್ರದೇಶ ಮತ್ತು  ಪಾರ್ಕಿಂಗ್‌ ಜಾಗವನ್ನು ಮರು ಹರಾಜು ನಡೆಸಲಾಗುತ್ತದೆ.

ಮಳಿಗೆ ಹರಾಜು ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಕಾರಣ  ಆ ಹರಾಜು ರದ್ದುಗೊಳಿಸಿದ್ದೇವೆ. ನ್ಯಾಯಾಲಯ ನೀಡುವ ಆದೇಶದಂತೆ ಮಳಿಗೆ ಹರಾಜು ನಡೆಸಲಾಗುತ್ತದೆ’ ಎಂದು ತಿಳಿಸಿದರು.

ರದ್ದಾದ ಮಳಿಗೆ ಹರಾಜು

ಹಳೆ ಬಸ್‌ ನಿಲ್ದಾಣದಲ್ಲಿದ್ದ ಮಳಿಗೆಗಳಲ್ಲಿ ಅನೇಕ ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದ ವರ್ತಕರು ನೂತನ ಖಾಸಗಿ ನಿಲ್ದಾಣದಲ್ಲಿರುವ ಮಳಿಗೆಗಳನ್ನು ಈ ಹಿಂದೆ ಜಿಲ್ಲಾಧಿಕಾರಿ ಅವರು ನೀಡಿರುವ ಆಶ್ವಾಸನೆಯಂತೆ ತಮಗೆ ನೀಡಬೇಕೆಂದು ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರಿಗೆ ಮನವಿ ಸಲ್ಲಿಸಿದ್ದರು.

ಇದಕ್ಕೆ ಒಪ್ಪದ ಜಿಲ್ಲಾಧಿಕಾರಿ ಅವರು ಮಳಿಗೆಗಳನ್ನು ಹರಾಜು ಹಾಕಲು ಕ್ರಮಕೈಗೊಂಡಿದ್ದರು. ಇದನ್ನು ಪ್ರಶ್ನಿಸಿ ಹಳೆ ಬಸ್‌ ನಿಲ್ದಾಣದ ವರ್ತಕರ ಸಂಘದ ಪದಾಧಿಕಾರಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಮಳಿಗೆಗಳ ಹರಾಜಿಗೆ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿತ್ತು.

* *

ಬಿಡ್‌ದಾರರು ಬಸ್‌ ನಿಲುಗಡೆ ಪ್ರದೇಶ ಮತ್ತು  ಪಾರ್ಕಿಂಗ್‌ ಜಾಗದ ಹರಾಜು ಮೊತ್ತ ಹೆಚ್ಚಾಯಿತು ಎಂದು ಹರಾಜಿನಲ್ಲಿ ಭಾಗವಹಿಸಲಿಲ್ಲ. ಮರು ಹರಾಜಿಗೆ ಉದ್ದೇಶಿಸಲಾಗಿದೆ.

ಉಮಾಕಾಂತ್

ನಗರಸಭೆ ಆಯುಕ್ತ

ಪ್ರತಿಕ್ರಿಯಿಸಿ (+)