ಭಾನುವಾರ, ಡಿಸೆಂಬರ್ 15, 2019
18 °C

ಹೂಳು ತುಂಬಿದ ಕೆರೆಗಳಿಗೆ ನದಿ ನೀರು

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಹೂಳು ತುಂಬಿದ ಕೆರೆಗಳಿಗೆ ನದಿ ನೀರು

ಚಾಮರಾಜನಗರ: ಜಿಲ್ಲೆಯ ಸುಮಾರು 59 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಮತ್ತು ಅಂತರ್ಜಲ ವೃದ್ಧಿಸುವ ಉದ್ದೇಶದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಲಿದ್ದಾರೆ.  ಆದರೆ, ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿನ 24 ಕೆರೆಗಳಿಂದ ಹೂಳೆತ್ತಿ ದಶಕಗಳೇ ಉರುಳಿವೆ.

ನಂಜನಗೂಡಿನ 2, ಚಾಮರಾಜನಗರ ತಾಲ್ಲೂಕಿನ 21 ಮತ್ತು ಯಳಂದೂರು ತಾಲ್ಲೂಕಿನ 1 ಕೆರೆಗೆ ಕಬಿನಿ ನದಿಯ ನೀರು ತುಂಬಿಸಲಾಗುತ್ತದೆ. ನೀರಾವರಿ ಇಲಾಖೆ ದಾಖಲೆಗಳ ಪ್ರಕಾರ ಈ ಎಲ್ಲ ಕೆರೆಗಳ ಒಟ್ಟು ನೀರು ಸಂಗ್ರಹಣೆ ಸಾಮರ್ಥ್ಯ 683.8 ಎಂಸಿಎಫ್‌ಟಿಗಳಷ್ಟಿದೆ.

ಇವು ಭರ್ತಿಯಾದಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಹೂಳು ತುಂಬಿರುವ ಕಾರಣ ಈ ಕೆರೆಗಳ ಸಂಗ್ರಹಣಾ ಸಾಮರ್ಥ್ಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಯೊಬ್ಬರು.

ಹಿಂದೆಯೂ ಹೂಳು ತೆಗೆಸಿರಲಿಲ್ಲ: ನಂಜನಗೂಡು, ಗುಂಡ್ಲುಪೇಟೆ ತಾಲ್ಲೂಕುಗಳ 12 ಕೆರೆಗಳಿಗೆ ನೀರು ತುಂಬಿಸಲಾಗಿತ್ತು. ಇದರಿಂದ ಸುತ್ತಮುತ್ತಲಿನ ಅನೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಿತ್ತು. ಈ ಯೋಜನೆ ಯಶಸ್ಸು ಕಂಡಿದ್ದರಿಂದ 24 ಕೆರೆಗಳಿಗೆ ನೀರು ತುಂಬಿಸಲು 2016ರಲ್ಲಿ ಯೋಜನೆ ಸಿದ್ಧಗೊಂಡಿತ್ತು.

‘ಈ ಹಿಂದಿನ ಯೋಜನೆಯಲ್ಲಿ ಕೆರೆಗಳಿಂದ ಹೂಳೆತ್ತದೆ ಇರುವುದರಿಂದ ಅವುಗಳಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಇಳಿಕೆಯಾಗಿತ್ತು. ಆ ತಪ್ಪನ್ನು ಇಲ್ಲಿ ಸರಿಪಡಿಸಲಾಗುವುದು. ಎಲ್ಲ ಕೆರೆಗಳಿಂದ ಹೂಳು ತೆಗೆಸಲಾಗುವುದು. ಬಳಿಕವೇ ನೀರು ತುಂಬಿಸಲಾಗುವುದು’ ಎಂದೂ ಅವರು ಹೇಳಿದ್ದರು.

ಫೆಬ್ರುವರಿ 14ರಂದು ಚಾಲನೆ ಪಡೆದುಕೊಳ್ಳಬೇಕಿದ್ದ ಯೋಜನೆಯನ್ನು ಮಹದೇವಪ್ರಸಾದ್ ನಿಧನದಿಂದ ಮುಂದೂಡಲಾಗಿತ್ತು. ಈಗ ಯೋಜನೆಗೆ ಅಧಿಕೃತ ಚಾಲನೆ ದೊರಕುತ್ತಿದ್ದು, ಇದುವರೆಗೂ ಯಾವ ಕೆರೆಯಿಂದಲೂ ಹೂಳೆತ್ತಿಲ್ಲ.

ಗಿಡಗಂಟಿ ತುಂಬಿರುವ ಕೆರೆಯಲ್ಲಿಯೇ ಚಾಲನೆ: ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿರುವ ಉಮ್ಮತ್ತೂರು ಗ್ರಾಮದ ಕೆರೆ ಸುಮಾರು 250 ಎಕರೆ ವಿಸ್ತೀರ್ಣ ಹೊಂದಿದ್ದು, 62.70 ಎಂಸಿಎಫ್‌ಟಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

ಆದರೆ, ಈ ಕೆರೆಯ ಬಹುಪಾಲು ಭಾಗವನ್ನು ಜಾಲಿ ಮುಳ್ಳಿನ ಗಿಡಗಳೇ ಆವರಿಸಿಕೊಂಡಿವೆ. ಕೆಲವು ದಿನಗಳಿಂದ ಈಚೆಗಷ್ಟೇ ಶಂಕುಸ್ಥಾಪನೆ ನಡೆಯಲಿರುವ ಜಾಗದಲ್ಲಿನ ಗಿಡಗಂಟಿಗಳನ್ನು ಮಾತ್ರ ತೆರವುಗೊಳಿಸಲಾಗಿದೆ.

ಯೋಜನೆ ಪೂರ್ಣಗೊಳ್ಳಲು ಇನ್ನೂ ಕಾಲಾವಕಾಶ ಇದೆ. ಈ ಅವಧಿಯೊಳಗೆ ಹೂಳು ತೆಗೆಸಲು ಅನುದಾನ ಬಿಡುಗಡೆಯಾಗಬಹುದು ಎಂದು ನೀರಾವರಿ ಇಲಾಖೆಯ ಎಂಜಿನಿಯರ್‌ ಒಬ್ಬರು ತಿಳಿಸಿದರು.

‘ಎರಡು ತಿಂಗಳ ಹಿಂದೆ ಮಳೆ ಬಂದಿರುವುದರಿಂದ ಕೆರೆಯಲ್ಲಿ ತುಸು ನೀರಿದೆ. ಬೇಸಿಗೆಯಲ್ಲಿ ಸಂಪೂರ್ಣ ಒಣಗುತ್ತದೆ. ಈ ಕೆರೆಯಿಂದ ಹೂಳು ತೆಗೆಸಿದ್ದನ್ನು ನಾನು ನೋಡಿಯೇ ಇಲ್ಲ’ ಎಂದು ಉಮ್ಮತ್ತೂರು ಗ್ರಾಮದ ವೃದ್ಧರೊಬ್ಬರು ಹೇಳಿದರು.

ಉಮ್ಮತ್ತೂರು ಕೆರೆ ಬಳಿ ನಿರ್ಮಿಸಿರುವ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸಂಸದ,  ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ವಿವಿಧ  ಶಾಸಕರು, ಜನಪ್ರತಿನಿಧಿಗಳು ಭಾಗವಹಿಸುವರು.

ಅಂಕಿ –ಅಂಶ

₹232 ಕೋಟಿ ಯೋಜನೆಯ ಒಟ್ಟು ವೆಚ್ಚ

0.628 ಟಿಎಂಸಿ ಕೆರೆಗಳಿಗೆ ತುಂಬಿಸುವ ನೀರಿನ ಪ್ರಮಾಣ

51.13 ಕಿ.ಮೀ ರೈಸಿಂಗ್‌ ಮೈನ್‌ ಉದ್ದ

* * 

ನೀರು ಪೂರೈಸುವ ಕೊಳವೆ ಮಾರ್ಗದ ಕಾಮಗಾರಿ ಮತ್ತು ಕೆರೆಗಳಿಂದ ಹೂಳು ತೆಗೆಸುವ ಕೆಲಸ ಏಕಕಾಲಕ್ಕೆ ಶುರುವಾಗಲಿವೆ. ಈ ಸಂಬಂಧ ಟೆಂಡರ್ ಕರೆಯಲಾಗಿದೆ

ಆರ್.ಧ್ರುವನಾರಾಯಣ

ಸಂಸದ

ಪ್ರತಿಕ್ರಿಯಿಸಿ (+)