ಶನಿವಾರ, ಡಿಸೆಂಬರ್ 7, 2019
16 °C

‘ಹೇಮೆ’ಗಾಗಿ ಬೃಹತ್ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹೇಮೆ’ಗಾಗಿ ಬೃಹತ್ ಮೆರವಣಿಗೆ

ಕೆ.ಆರ್.ಪೇಟೆ: ತಾಲ್ಲೂಕಿನ ಹೇಮಾವತಿ ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು, ಹೇಮಗಿರಿ ಮತ್ತು ಅಕ್ಕಿಹೆಬ್ಬಾಳು ನದಿ ಅಣೆಕಟ್ಟೆಯ ನಾಲೆಗಳಿಗೆ  ಹಾಗೂ ಕೆರೆಗಳಿಗೆ ಕೂಡಲೇ ನೀರು ಬಿಡುಗಡೆ ಮಾಡಬೇಕು. ರೈತರ ಎಲ್ಲ ಬಗೆಯ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.

ಹೇಮಾವತಿ ನೀರಿನ ಹಕ್ಕಿಗಾಗಿ ತಾಲ್ಲೂಕು ರೈತಸಂಘ, ವಿವಿಧ ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಸಾಕಷ್ಟು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರಿಂದ ಪಟ್ಟಣ ದಾದ್ಯಂತ ಗುರುವಾರ ಎಲ್ಲೆಲ್ಲೂ ಹಸಿರು ಶಾಲು, ಕನ್ನಡಧ್ವಜಗಳು ರಾರಾಜಿಸಿದವು. 

ಪಟ್ಟಣದ ಪ್ರವಾಸಿ ಮಂದಿರದ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ರೈತರು ಎತ್ತಿನ ಗಾಡಿ ಜತೆ ಪಾಲ್ಗೊಂಡಿದ್ದು ವಿಶೇಷ ಮೆರುಗು ತಂದಿತ್ತು. ಮಿನಿ ವಿಧಾನಸೌಧದವರೆಗೂ ‘ಹೇಮೆ ನಮ್ಮವಳು’. ‘ಅವಳನ್ನು ಬಳಸುವ ಹಕ್ಕನ್ನು ಕಿತ್ತು ಕೊಳ್ಳಬೇಡಿ’, ‘ತಾಲ್ಲೂಕಿನ ಎಲ್ಲ ಕೆರೆ–ಕಟ್ಟೆಗಳಿಗೆ ನೀರು ತುಂಬಿಸಿ’ –‘ಅನ್ನದಾತನ ಜೀವ ಉಳಿಸಿ’, ‘ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ– ಕಾಲುವೆಗಳಿಗೆ ನೀರು ಹರಿಸಿ’ ಎಂಬ ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ಸಾಗಿದರು.

ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ‘ಪೂರ್ವ ಸೂಚನೆಯಿಲ್ಲದೆ ಕೆ ಆರ್ ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಸರ್ಕಾರದ ಕ್ರಮ ನಾಚಿಕೆಗೇಡಿನದ್ದಾಗಿದೆ. ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಣೆಕಟ್ಟೆಗಳು ತುಂಬುವ ಮೊದಲೇ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ತಮಿಳುನಾಡಿಗೆ ‘ನೀರಿನ ಭಾಗ್ಯ’ ಎಂದು ವ್ಯಂಗ್ಯವಾಡಿದರು.

‘ತಾಲ್ಲೂಕಿನಲ್ಲಿರುವ ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ, ಹೇಮಗಿರಿ ನಾಲೆಗಳಿಗೂ ನೀರಾವರಿ ಸಲಹಾ ಸಮಿತಿ ಸಭೆಗೂ ಯಾವುದೇ ಸಂಬಂಧವಿಲ್ಲ. ಇವು ನೂರಾರು ವರ್ಷಗಳಷ್ಟು ಹಳೆಯ ನಾಲೆಗಳಾಗಿವೆ. ಅವೆಲ್ಲವೂ ನದಿಯ ನೀರಿನ ಹರಿವನ್ನು ಆಧರಿಸಿರುವುದರಿಂದ ತಕ್ಷಣವೇ ಈ ನಾಲೆಗಳಿಗೆ ನೀರು ಹರಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಮು, ಗೌರವಾಧ್ಯಕ್ಷ ಕೊಣಸಾಲೆ ನರಸರಾಜು, ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ರಾಜೇಗೌಡ, ರಾಜ್ಯ ಘಟಕದ ಉಪಾಧ್ಯಕ್ಷ ಮಂದಗೆರೆ ಜಯರಾಂ, ತಾಲ್ಲೂಕು ಘಟಕದ ಅಧ್ಯಕ್ಷ ಮರವನಹಳ್ಳಿ ಶಂಕರ್, ಕರವೇ ಅಧ್ಯಕ್ಷ ಹೊನ್ನೇನಹಳ್ಳಿವೇಣು  ಸೇರಿದಂತೆ ರೈತ ಮುಖಂಡರು, ಕರವೇ ಕಾರ್ಯಕರ್ತರು, ರೈತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ  ಸಭೆಗೆ ಬಂದು ಮಾತನಾಡಿದ ಗೊರೂರು ಜಲಾಶಯದ ಮುಖ್ಯ ಎಂಜಿನಿಯರ್ ಪ್ರಸನ್ನ, ರೈತರ ಬೇಡಿಕೆಗಳನ್ನು ನೀರಾವರಿ ಸಲಹಾಸಮಿತಿ ಹಾಗೂ ಮುಖ್ಯಮಂತ್ರಿ ಗಮನಕ್ಕೆ ತಂದು ನೀರು ಬಿಡುಗಡೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು. ತಹಶೀಲ್ದಾರ್ ಕೆ.ರತ್ನಾ, ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

7ನೇ ದಿನಕ್ಕೆ ಧರಣಿ; ವಕೀಲರ ಬೆಂಬಲ

ಮದ್ದೂರು: ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ಧರಣಿ ಗುರುವಾರ 7ನೇ ದಿನಕ್ಕೆ ಕಾಲಿಟ್ಟಿತು. 

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕೆ.ರಮೇಶಗೌಡ ನೇತೃತ್ವದಲ್ಲಿ ಕಳೆದ ರಾತ್ರಿಯೂ ಕೆರೆಯಂಗಳದಲ್ಲಿ ಅಡುಗೆ ತಯಾರಿಸಿ ಊಟ ಮಾಡಿದ ಪ್ರತಿಭಟನಾಕಾರರು, ಅಲ್ಲಿಯೇ ರಾತ್ರಿ ಕಳೆದರು. ಬೆಳಿಗ್ಗೆ ಉಪಾಹಾರ ತಯಾರಿಸಿ ಸೇವಿಸಿದರು. ತಮಿಳು ನಾಡಿಗೆ ನೀರು ನಿಲ್ಲಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಘೋಷಿಸಿದರು.

ಕಲಾಪ ಬಹಿಷ್ಕಾರ:  ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಎಂ.ಸಿ.ಅಶೋಕ್‌ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ  ಜಿಲ್ಲೆಯ ರೈತರ ಹಿತ ರಕ್ಷಣೆಗೆ ಮುಂದಾಗದೆ ತಮಿಳುನಾಡಿನ ರೈತರ ಹಿತರಕ್ಷಣೆಗೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ.

ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಜಿಲ್ಲೆಯ ನಾಲೆ, ಕೆರೆ– ಕಟ್ಟೆಗಳಿಗೆ ನೀರು ಬಿಡುಗಡೆಗೆ ಸರ್ಕಾರ ಮುಂದಾಗಬೇಕೆಂದು ಎಂದು ಆಗ್ರಹಿಸಿದರು. ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಹಾಗೂ ರೈತರ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತಾರತಮ್ಯ ಎಸಗುತ್ತಿದೆ.

ಆರು ದಿನಗಳಿಂದ ಧರಣಿ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲರಾದ ರವಿಕುಮಾರ್, ಕೆಂಪೇಗೌಡ, ಸಂತೋಷ್, ಪ್ರಭಾಕರ್, ಚಂದ್ರಶೇಖರ್, ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪೂರು ರಾಜೇಶ್, ವೇದಿಕೆ ಸದಸ್ಯರಾದ ಗುಂಡ ಮಹೇಶ್, ಹುರುಗಲವಾಡಿ ರಾಮಯ್ಯ, ಚೆನ್ನಪ್ಪ, ವೀರಪ್ಪ, ವಿನಯ್ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)