ಬುಧವಾರ, ಡಿಸೆಂಬರ್ 11, 2019
19 °C

ಜಂಟಿ ಸಮೀಕ್ಷೆ ನಡೆಸಿ, ತಿಂಗಳೊಳಗೆ ವರದಿ ಸಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಂಟಿ ಸಮೀಕ್ಷೆ ನಡೆಸಿ, ತಿಂಗಳೊಳಗೆ ವರದಿ ಸಲ್ಲಿಸಿ

ಹಾಸನ: ನಗರದ ಡೇರಿ ವೃತ್ತದಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆ ನಿರ್ಮಾಣಕ್ಕೆ ಜಮೀನು ಕಳೆದುಕೊಂಡಿರುವ ಉದ್ದೂರಿನ ರೈತರ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ತಿಂಗಳೊಳಗಾಗಿ ವಾಸ್ತವ ವರದಿ ಸಲ್ಲಿಸುವಂತೆ   ವಿಧಾನಸಭೆಯ ಅರ್ಜಿ ಸಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಮಿತಿಯ ಸದಸ್ಯರಾದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರ ಎಂ.ಪಿ. ಅಪಚ್ಚು ರಂಜನ್  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಿಂಗ್ ರಸ್ತೆ ಕಾಮಗಾರಿ ವಿಚಾರ ಚರ್ಚೆ ನಡೆಸಿ ಈ ನಿರ್ದೇಶನ ನೀಡಲಾಯಿತು.

ಸಮಿತಿಯ ಸದಸ್ಯ, ಶಾಸಕ ಎಚ್.ಎಸ್. ಪ್ರಕಾಶ್, ತರೀಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ್, ಕುಣಿಗಲ್ ಕ್ಷೇತ್ರದ ಶಾಸಕ ಡಿ.ನಾಗರಾಜ್, ವಿಧಾನ ಸಭೆ ಉಪಕಾರ್ಯದರ್ಶಿ ಲತಾ ಅವರು ರಿಂಗ್ ರಸ್ತೆ ನಿರ್ಮಾಣ ವಿಳಂಬ ಕುರಿತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಉಪವಿಭಾಗಾಧಿಕಾರಿ ಹಾಗೂ ಭೂಮಾಲೀಕರ ಅಭಿಪ್ರಾಯಗಳನ್ನು ಆಲಿಸಿದರು.

ಹುಡಾ ಆಯುಕ್ತ ರಮೇಶ್, ನಗರದ ಡೇರಿ ವೃತ್ತದಿಂದ ಬೇಲೂರು ರಸ್ತೆವರೆಗೆ ಒಟ್ಟು 9 ಕಿ.ಮೀ ಮಾರ್ಗದಲ್ಲಿ ಈಗಾಗಲೇ 7 ಕಿ.ಮೀ ರಸ್ತೆ ನಿರ್ಮಾಣವಾಗಿದೆ. ಉದ್ದೂರು ವ್ಯಾಪ್ತಿಯಲ್ಲಿ 2 ಕಿ.ಮೀ ರಸ್ತೆ ನಿರ್ಮಾಣಕ್ಕೆ 14 ಎಕರೆ ಜಮೀನು ಅಗತ್ಯವಿದೆ. ಇದರಿಂದ 60 ಮಂದಿ ಭಾಗಷಃ ಅಥವಾ ಪೂರ್ಣ ಭೂಮಿ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದರು.

‘ನಗರಾಭಿವೃದ್ಧಿ ಪ್ರಾಧಿಕಾರ ತಯಾರಿಸಿರುವ ಮಾಹಿತಿಯಲ್ಲಿ ಲೋಪಗಳಿವೆ. ಈ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವವರು ಸುಮಾರು 38 ಮಂದಿ ಮಾತ್ರ. ಇದರಲ್ಲಿ ಅನೇಕರು ತಮ್ಮ ಪೂರ್ಣ ಅಥವಾ ಬಹುಪಾಲು ಜಮೀನು ಕಳೆದುಕೊಂಡಿದ್ದಾರೆ. ಕಳೆದ 22 ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ ಬೆಳೆ ಪರಿಹಾರ ಮತ್ತು ಈಗಿನ ದರದಂತೆ ಪರಿಹಾರ ದೊರಕಿಸಿಕೊಡಬೇಕು’ ಎಂದು  ಭೂಮಾಲೀಕರು ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್  ಮಾತನಾಡಿ, ಸಮರ್ಪಕ ಭೂ ದಾಖಲೆಗಳು ಇಲ್ಲದಿರುವುದು ಗೊಂದಲಕ್ಕೆ ಕಾರಣ. ರೈತರು ಅರ್ಜಿ ಸಲ್ಲಿಸಿದಲ್ಲಿ ಶೀಘ್ರವಾಗಿ ದುರಸ್ತಿ, ಖಾತೆ ಬದಲಾವಣೆಗಳನ್ನು ನಿಯಮಬದ್ಧವಾಗಿ ಮಾಡಿಕೊಡಲಾಗುವುದು. ಭೂಮಾಲೀಕರು ತಮ್ಮ ಹೆಸರು ಬಿಟ್ಟಿದಲ್ಲಿ ಅಥವಾ ಪೌತಿ ಖಾತೆ ಬದಲಾವಣೆ, ವರ್ಗಾವಣೆಯಾಗಬೇಕಾದಲ್ಲಿ  ಅರ್ಜಿ ಸಲ್ಲಿಸಿದರೆ ವಿಳಂಬವಿಲ್ಲದಂತೆ ದಾಖಲೆ ಸರಿಪಡಿಸಿಕೊಡಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಪ್ಪಚ್ಚು ರಂಜನ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ನೀಡುತ್ತಿರುವ ವಿವರ ಹಾಗೂ ರೈತರು ಹೇಳುತ್ತಿರುವ ಮಾಹಿತಿಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಹಾಗಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಉಪವಿಭಾಗಾಧಿಕಾರಿ ಮತ್ತು ಭೂ ದಾಖಲೆಗಳ ಉಪನಿರ್ದೇಶಕರು ಜಂಟಿ ಸಮೀಕ್ಷೆ ನಡೆಸಿ ತಿಂಗಳೊಳಗಾಗಿ ವರದಿ ಸಲ್ಲಿಸಬೇಕು ಎಂದರು.

ಎಚ್.ಎಸ್. ಪ್ರಕಾಶ್ ಮಾತನಾಡಿ,  ‘ಜಾಗ ಕಳೆದುಕೊಂಡವರಿಗೆ ಉಳಿದಿರುವ ಜಾಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದಲೇ ಅಲಿನೇಷನ್ ಮಾಡಿ ಅಭಿವೃಧ್ಧಿ ಮಾಡಿಕೊಡಲಾಗುವುದು. ಅದಕ್ಕೂ ಮುನ್ನ ಭೂ ದಾಖಲೆಗಳನ್ನು ಸರಿಪಡಿಸಬೇಕು.

ಪರಿಹಾರವಾಗಿ ಕೆಲವರು ನಿವೇಶನ ಪಡೆದಿದ್ದಾರೆ. ರಸ್ತೆ ನಿರ್ಮಾಣದಿಂದ ಭೂಮಿಯ ಬೆಲೆಯೂ ಹೆಚ್ಚಾಗಿದೆ’ ಎಂದರು. ಶಾಸಕ ಶ್ರೀನಿವಾಸ್ ಹಾಗೂ ನಾಗರಾಜಯ್ಯ ಅವರು ಸಮಸ್ಯೆ ಬಗೆಹರಿಸಲು  ಅಧಿಕಾರಿಗಳು, ಜನಪ್ರತಿನಿಧಿಗಳು, ಭೂಮಾಲೀಕರು ಒಮ್ಮತಾಭಿಪ್ರಾಯಕ್ಕೆ ಬರುವುದು ಸೂಕ್ತ ಎಂದು ಹೇಳಿದರು.

ಇದೇ ವೇಳೆ ಹಾಸನ ಕೊಡಗು ಸಂಪರ್ಕ ಕಲ್ಪಿಸುವ ಕಲ್ಲಾರೆ-ಜನಾರ್ದನ ಹಳ್ಳಿ ಸೇತುವೆಯ ಮಾರ್ಗದ ಸಂಪರ್ಕ ರಸ್ತೆ ಕಾಮಗಾರಿಯನ್ನು 3 ತಿಂಗಳಲ್ಲಿ ಮುಕ್ತಾಯಗೊಳಿಸುವಂತೆ ಸದಸ್ಯರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಸನ-ಕೊಡಗು ನಡುವೆ ಸಂಪರ್ಕ ಕಲ್ಪಿಸುವ ಆಲೂರು ತಾಲ್ಲೂಕಿನ ಕಲ್ಲಾರೆ ಬಳಿ ನಿರ್ಮಿಸಲಾಗಿರುವ ಸೇತುವೆ ಕಾಮಗಾರಿಯನ್ನು ಅರ್ಜಿ ಸಮಿತಿ ವೀಕ್ಷಿಸಿತು. ಅಧಿಕಾರಿಗಳಾದ ಪ್ರಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹಾಜರಿದ್ದರು.

ರಸ್ತೆ ಕಾಮಗಾರಿ ಪರಿಶೀಲನೆ

ಹಾಸನ: ಶಿವಶಂಕರ್ ರೆಡ್ಡಿ ನೇತೃತ್ವದ ಅರ್ಜಿ ಸಮಿತಿ ಡೇರಿ ವೃತ್ತದಿಂದ ಉದ್ದೂರಿನವರೆಗೆ ನಡೆದಿರುವ ರಿಂಗ್ ರಸ್ತೆ ಕಾಮಗಾರಿ ಪರಿಶೀಲಿಸಿತು. ಉದ್ದೂರಿನ ಬಳಿ ಕಾಮಗಾರಿ ಸ್ಥಗಿತವಾಗಿರುವುದನ್ನು ಗಮನಿಸಿ ಸ್ಥಳೀಯ ರೈತರೊಂದಿಗೆ ಚರ್ಚೆ ನಡೆಸಿತು.

ಸುದೀರ್ಘ ಕಾಲದ ಸಮಸ್ಯೆ

ಹಾಸನ: ಸುದೀರ್ಘ ಕಾಲದಿಂದ ಸಮಸ್ಯೆ ಮುಂದುವರಿದಿದೆ. ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಮಾಲೀಕರು ಹಾಗೂ ಸಾರ್ವಜನಿಕರ ಹಿತ ಸಾಧ್ಯವಾಗುವಂತಹ ಶಿಫಾರಸು ಮಾಡಲಾಗುವುದು. ಅದಕ್ಕೆ ಸರಿಯಾದ ದಾಖಲೆಗಳನ್ನು ಅಧಿಕಾರಿಗಳು ಶೀಘ್ರವಾಗಿ ಒದಗಿಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್‌ ಹೇಳಿದರು.

* * 

ಒಟ್ಟು 14 ಕಿ.ಮೀ. ಕಾಮಗಾರಿ ಪೈಕಿ 9 ಕಿ.ಮೀ. ರಸ್ತೆ ನಿರ್ಮಿಸಲಾಗಿದ್ದು, ರೈತರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದಿನ ಕಾಮಗಾರಿ ಕೈಗೊಳ್ಳಲು ಆಗುತ್ತಿಲ್ಲ

ರಮೇಶ್

ನಗರಾಭಿವೃದ್ಧಿ  ಪ್ರಾಧಿಕಾರದ ಆಯುಕ್ತ

ಪ್ರತಿಕ್ರಿಯಿಸಿ (+)