ಬುಧವಾರ, ಡಿಸೆಂಬರ್ 11, 2019
24 °C

ವೆಂಬ್ಲೆ ಸಂಗೀತೋತ್ಸವ: ಹಿಂದಿ ಸಂಗೀತ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಎ.ಆರ್‌. ರೆಹಮಾನ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವೆಂಬ್ಲೆ ಸಂಗೀತೋತ್ಸವ: ಹಿಂದಿ ಸಂಗೀತ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಎ.ಆರ್‌. ರೆಹಮಾನ್‌

ಮುಂಬೈ: ಬಾಲಿವುಡ್‌ನ ಪ್ರಸಿದ್ಧ ಸಂಗೀತಗಾರ ಎ.ಆರ್‌. ರೆಹಮಾನ್‌ ಹಿಂದಿ ಸಂಗೀತ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಹೌದು, ಇತ್ತೀಚೆಗೆ(ಜೂನ್‌ 8) ಇಂಗ್ಲೆಂಡ್‌ನ ವೆಂಬ್ಲೆಯಲ್ಲಿ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ಎ.ಆರ್‌. ರೆಹಮಾನ್‌ ಅವರು ತಮಿಳು ಹಾಡುಗಳನ್ನೇ ಹೆಚ್ಚಾಗಿ ಹಾಡಿದ್ದು, ಇದೀಗ ಹಿಂದಿ ಸಂಗೀತ ಅಭಿಮಾನಿಗಳು ರಹಮಾನ್‌ ವಿರುದ್ಧ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಕರ್‌ ಪ್ರಶಸ್ತಿ ವಿಜೇತ ಎ.ಆರ್‌. ರೆಹಮಾನ್‌ ಅವರ ಹಿಂದಿ ಹಾಡುಗಳಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಆದರೆ, ಹಿಂದಿ ಹಾಡುಗಳಿಗಿಂತ ತಮಿಳು ಹಾಡುಗಳನ್ನು ಹೆಚ್ಚಾಗಿ ಹಾಡಿರುವುದು ಇದೀಗ ಹಿಂದಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

*

*

*

*

*

*

*

*

'ಹಿಂದಿ ಹಾಡುಗಾರಿಕೆಯಿಂದ ಹೆಚ್ಚು ಪ್ರಖ್ಯಾತಿ ಗಳಿಸಿದ್ದನ್ನು ಎ.ಆರ್‌. ರೆಹಮಾನ್‌ ಮರೆತಂತಿದೆ. ಅಂತರರಾಷ್ಟ್ರೀಯಮಟ್ಟದಲ್ಲಿ ಖ್ಯಾತಿ ಗಳಿಸಲು ಹಿಂದಿ ಸಂಗೀತ ಕಾರಣವಾಯಿತೇ ಹೊರತು ತಮಿಳು ಸಂಗೀತ ಅಲ್ಲ. ನಿಮ್ಮಿಂದ ನಿರಾಸೆ ಆಗಿದೆ' ಎಂದು ಅಭಿಮಾನಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವಾದ ಕುರಿತು ರಹಮಾನ್‌ ಇವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

**

‘ತಾರತಮ್ಯ ಮಾಡಿಲ್ಲ’

ಸಂಗೀತ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಭಾಷಾ ತಾರತಮ್ಯ ಮಾಡಿಲ್ಲ ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.

ರೆಹಮಾನ್‌ ಪ್ರಸ್ತುತಪಡಿಸಿದ ಎಲ್ಲ ಹಾಡುಗಳ ಪಟ್ಟಿಯನ್ನು ಕಾರ್ಯಕ್ರಮ ಆಯೋಜಿಸಿದ್ದ ಹ್ಯೂ ಬಾಕ್ಸ್ ಎಂಟರ್‌ಟೇನ್‌ಮೆಂಟ್‌ ಮತ್ತು ಹಂಸಿಣಿ ಎಂಟರ್‌ಟೇನ್‌ಮೆಂಟ್‌ ಬಿಡುಗಡೆ ಮಾಡಿದೆ.

‘ಸಂಗೀತ ಕಾರ್ಯಕ್ರಮದಲ್ಲಿ 16 ಹಿಂದಿ, 12 ತಮಿಳು ಮತ್ತು 1 ಹಿಂದಿ ಮತ್ತು ತಮಿಳು ಮಿಶ್ರಿತ ಹಾಡುಗಳನ್ನು ಪ್ರಸ್ತುತಪಡಿಸಲಾಗಿದೆ. ಸುಳ್ಳು ಜಾಹೀರಾತು ಪ್ರಕಟಿಸಿಲ್ಲ’ ಎಂದು ಸಂಘಟಕರು ತಿಳಿಸಿದ್ದಾರೆ.

**

‘ಯಾರೂ ಹೊರಗೆ ಹೋಗಿಲ್ಲ’

‘ಸಂಗೀತ ಕಾರ್ಯಕ್ರಮದ ಮಧ್ಯೆಯೇ ಯಾರೂ ಎದ್ದು ಹೋಗಿಲ್ಲ’ ಎಂದು ರೆಹಮಾನ್‌ ಅವರ ಸಹೋದರಿ ಎ.ಆರ್‌. ರೈಹನಾಹ್‌ ತಿಳಿಸಿದ್ದಾರೆ.

‘ನಾವು ಭಾರತೀಯರು. ಸಣ್ಣ ಆಲೋಚನೆಗಳನ್ನು ಮಾಡಬಾರದು.  ನಾವು ಗಡಿ, ಭಾಷೆಗಳನ್ನು ಮೀರಿ ಚಿಂತನೆ ಮಾಡಬೇಕು. ಪ್ರೀತಿ ಮತ್ತು ಸೌಹಾರ್ದತೆಯನ್ನು ಸಂಗೀತ ಮೂಡಿಸುತ್ತದೆ’ ಎಂದು ಅವರು ಹೇಳಿದ್ದಾರೆ.

‘ಕಾರ್ಯಕ್ರಮ ನಡೆದ ಸ್ಥಳದಲ್ಲಿ ಯಾವುದೇ ರೀತಿಯ ಅಸಮಾಧಾನ ವ್ಯಕ್ತವಾಗಲಿಲ್ಲ. ಆದರೆ, ಈಗ ತಡವಾಗಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿರುವುದು ಅಚ್ಚರಿ ಮೂಡಿಸಿದೆ’ ಎಂದು ಅವರು ಹೇಳಿದ್ದಾರೆ.

**

‘ಅಸಹಿಷ್ಣುತೆ ಪ್ರದರ್ಶನ’

ರೆಹಮಾನ್‌ ನಿಲುವಿಗೆ ಅವರ ಹಲವು ಅಭಿಮಾನಿಗಳು  ಬೆಂಬಲ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಹಾಡುಗಾರ್ತಿ ಚಿನ್ಮಯಿ ಶ್ರೀಪಾದ ಅವರು ಟೀಕೆಗಳಿಗೆ ಪ್ರತಿಕ್ರಿಯಿಸಿ ಇದು ಅಸಹಿಷ್ಣುತೆ ಪ್ರದರ್ಶನ ಮತ್ತು ದ್ವಿಮುಖ ನೀತಿ ಎಂದು ಹೇಳಿದ್ದಾರೆ.

‘ರೆಹಮಾನ್‌ ಎರಡು ಆಸ್ಕರ್‌ ಪ್ರಶಸ್ತಿ ಪಡೆದು ಇತಿಹಾಸ ಸೃಷ್ಟಿಸಿದಾಗ ಅವರು ಭಾರತೀಯರಾಗಿದ್ದರು. ಆದರೆ, ಈಗ 7ರಿಂದ 8 ತಮಿಳು ಹಾಡುಗಳಿಂದ  ನಿಮಗೆ ಅಸಮಾಧಾನವಾಗಿದೆ. ಸಂಗೀತಕ್ಕೆ ಗಡಿ ಮತ್ತು ಭಾಷೆಯ ಹಂಗಿಲ್ಲ. ನಿಮ್ಮ ಮಕ್ಕಳು ಸ್ಪೇನ್‌ ಭಾಷೆ ಮಾತನಾಡಬಹುದು. ಬ್ರಿಟನ್‌ನಲ್ಲಿ ವಾಸಿಸಬಹುದು. ಆದರೆ, ಕೇವಲ ತಮಿಳು ಹಾಡು ಕಿವಿಗೆ ಬಿದ್ದ ತಕ್ಷಣ ನೀವು ಆಕ್ರೋಶ ವ್ಯಕ್ತಪಡಿಸುತ್ತೀರಿ’ ಎಂದು ಚಿನ್ಮಯಿ ಶ್ರೀಪಾದ ಟೀಕಿಸಿದ್ದಾರೆ.

ಉತ್ತರ ಭಾರತೀಯರು ದಕ್ಷಿಣ ಭಾರತದಲ್ಲಿ ಹಿಂದಿ ಹೇರುವ ಪ್ರಯತ್ನವನ್ನು ನಡೆಸಿದ್ದಾರೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರೆಹಮಾನ್‌ ಹಿಂದಿಯಲ್ಲಿ ಸಂಗೀತ ಕಾರ್ಯಕ್ರಮವನ್ನೇ ನೀಡಿಲ್ಲವೇ? ಇನ್ನೊಂದು ಭಾಷೆಯಲ್ಲಿನ ಒಂದು ಗಂಟೆಯ ಸಂಗೀತ ಕಾರ್ಯಕ್ರಮ ಆಲಿಸಲು ನಿಮಗೆ ಸಾಧ್ಯವಾಗಿಲ್ಲವೇ? ಹಿಂದಿ ಹೇರಿಕೆ ನಿಲ್ಲಿಸಿ’ ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)