ಭಾನುವಾರ, ಡಿಸೆಂಬರ್ 8, 2019
19 °C

ಪೊಲೀಸ್‌ ವೆಬ್‌ಸೈಟ್‌; ಶೀಘ್ರ ಲೋಕಾರ್ಪಣೆ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಪೊಲೀಸ್‌ ವೆಬ್‌ಸೈಟ್‌; ಶೀಘ್ರ ಲೋಕಾರ್ಪಣೆ

ಬೆಳಗಾವಿ: ನಗರ ಪೊಲೀಸ್ ಆಯುಕ್ತರ ಕಚೇರಿಯು ಹೈಟೆಕ್ ಆಗುತ್ತಿದ್ದು, ನಾಗರಿಕರ ಜೊತೆಗಿನ ಬಾಂಧವ್ಯ ವೃದ್ಧಿಸಿಕೊಳ್ಳಲು ವೆಬ್‌ಸೈಟ್‌ www.belagavi citypolice.in ನಿರ್ಮಿಸುತ್ತಿದ್ದು, ಸದ್ಯದಲ್ಲಿಯೇ ಉದ್ಘಾಟನೆಗೊಳ್ಳಲಿದೆ. ಕಮಿಷನರೇಟ್‌ ವ್ಯಾಪ್ತಿಯಲ್ಲಿರುವ ಎಲ್ಲ ಠಾಣೆ ಹಾಗೂ ಸಿಬ್ಬಂದಿಗಳ ಮಾಹಿತಿ ಸೇರಿದಂತೆ ಇತರ ಮಾಹಿತಿಗಳನ್ನು ಕೂಡ ಅಪ್‌ಲೋಡ್‌ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಸಾಕಷ್ಟು ಉಪಯುಕ್ತವಾದ ಮಾಹಿತಿಯನ್ನು ಒಳಗೊಂಡಿದೆ.

ಮೊದಲ ಪುಟದಲ್ಲಿ ನಗರ ಪೊಲೀಸ್‌ ಆಯುಕ್ತರು ಸೇರಿದಂತೆ ಪ್ರಮುಖ ಅಧಿಕಾರಿಗಳ ಫೋಟೊ ಸಮೇತ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ತುರ್ತು ಪರಿಸ್ಥಿತಿಯ ಸಹಾಯವಾಣಿ– 100, ಪೊಲೀಸ್‌ ಕಂಟ್ರೋಲ್‌ ರೂಂ 0831– 2405233, ಮಹಿಳಾ ಸಹಾಯವಾಣಿ– 1091 ಮಕ್ಕಳ ಸಹಾಯವಾಣಿ– 1098 ನೀಡಲಾಗಿದೆ.

ಠಾಣೆಗಳ ಸಂಪೂರ್ಣ ವಿವರ: ನಗರ ವ್ಯಾಪ್ತಿಯಲ್ಲಿ 16 ಠಾಣೆಗಳಿವೆ. ಇದಲ್ಲದೇ, ಸಾಂಬ್ರಾ ಹಾಗೂ ಸುವರ್ಣ ವಿಧಾನಸೌಧದಲ್ಲಿ ಔಟ್‌ಪೋಸ್ಟ್‌ ಇದೆ. ಪ್ರತಿಯೊಂದು ಠಾಣೆಯ ಫೋಟೊ, ಅಲ್ಲಿನ ಉಸ್ತುವಾರಿ ಅಧಿಕಾರಿ, ಅವರ ಭಾವಚಿತ್ರ, ಮೊಬೈಲ್‌ ಸಂಖ್ಯೆ, ಠಾಣೆಯ ಸ್ಥಿರ ದೂರವಾಣಿ ಹಾಗೂ ಠಾಣೆಯ ವ್ಯಾಪ್ತಿ ಪ್ರದೇಶದ ವಿವರವನ್ನು ನೀಡಲಾಗಿದೆ. ಇದಲ್ಲದೇ ಪ್ರತಿಯೊಂದು ಠಾಣೆಯ ಇ– ಮೇಲ್‌ ವಿಳಾಸವನ್ನು ಕೂಡ ನೀಡಲಾಗಿದೆ. 

ಎಫ್‌ಐಆರ್‌ ಮಾಹಿತಿ: ದೂರುದಾರರು ದಾಖಲಿಸಿರುವ ಎಫ್‌ಐಆರ್‌ ಮಾಹಿತಿಯ ಬಗ್ಗೆ ನೀಡಲಾಗಿದೆ. ಎಫ್‌ಐಆರ್‌– ಕಿಂಡಿಯ ಮೂಲಕ ಕರ್ನಾಟಕ ರಾಜ್ಯ ಪೊಲೀಸ್‌ ವೆಬ್‌ಸೈಟ್‌ಗೆ (http:// www.ksp.gov.in/fir.aspx) ಲಿಂಕ್‌ ನೀಡಲಾಗಿದೆ. ರಾಜ್ಯದ ಯಾವುದೇ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದರೂ ಅದರ ಮಾಹಿತಿಯನ್ನು ಇಲ್ಲಿ ಪಡೆಯಬಹುದಾಗಿದೆ.

ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೂ ಇಲ್ಲಿಂದ ಲಿಂಕ್‌ ನೀಡಲಾಗಿದೆ. ಪೊಲೀಸ್‌ ನೇಮಕಾತಿಯ ಮಾಹಿತಿ ನೀಡಲಾಗಿದೆ. ‘ಸಕಾಲ’ ಯೋಜನೆಯಡಿ ಲಭ್ಯ ಇರುವ ಪೊಲೀಸ್‌ ಇಲಾಖೆಯ ಕಾರ್ಯಗಳ ಬಗ್ಗೆ ವಿವರಣೆ ನೀಡಲಾಗಿದೆ. ಪಾಸ್‌ಪೋರ್ಟ್‌ ಮಾಹಿತಿಯ ಪರಿಶೀಲನೆ, ಪೆಟ್ರೋಲ್‌ ಬಂಕ್‌ ತೆರೆಯಲು ನಿರಾಕ್ಷೇಪಣಾ ಪತ್ರ, ಮೆರವಣಿಗೆ ನಡೆಸಲು ಅನುಮತಿ, ಬಂದೂಕು ಹೊಂದಲು ಪರವಾನಗಿ ನವೀಕರಣ ಸೇರಿದಂತೆ ಸುಮಾರು 21 ಸೇವೆಗಳನ್ನು ಸಕಾಲ ಅಡಿ ಸೇರಿಸಲಾಗಿದೆ.

ಬೆಳಗಾವಿ ಇತಿಹಾಸ: ಬೆಳಗಾವಿಯ ಇತಿಹಾಸ ಹಾಗೂ ಇಲ್ಲಿನ ಸುಂದರ ತಾಣಗಳನ್ನು ವೆಬ್‌ಸೈಟ್‌ನಲ್ಲಿ ಸೇರಿಸಲಾಗಿದೆ. ರಟ್ಟರ ಆಡಳಿತದಿಂದ ಆರಂಭವಾಗುವ ಇತಿಹಾಸವನ್ನು ಮೆಲುಕು ಹಾಕಲಾಗಿದೆ.

ಸುರಕ್ಷತೆ ಬಗ್ಗೆ ಮಾಹಿತಿ;  ಬ್ಯಾಂಕಿಂಗ್‌ ವ್ಯವಹಾರದಲ್ಲಿ ಯಾವ ರೀತಿಯ ಮುಂಜಾಗ್ರತೆ ವಹಿಸಬೇಕು, ಏನಾದರೂ ತೊಂದರೆಯಾದರೆ ಯಾವ ರೀತಿ ಎದುರಿಸಬೇಕು, ಉದ್ಯೋಗ ಮಾಡುವ ಸ್ಥಳದಲ್ಲಿ ಯಾವ ರೀತಿಯ ಎಚ್ಚರಿಕೆ ವಹಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಲಾಗಿದೆ.

ಇತ್ತೀಚೆಗೆ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವ ರೀತಿ ವಹಿವಾಟು ನಡೆಸಬೇಕು. ಯಾವ ದಾಖಲಾತಿಗಳು ಮಹತ್ವದ್ದು, ಯಾವುದನ್ನೆಲ್ಲ ಪರಿಶೀಲಿಸಬೇಕು ಎನ್ನುವ ಮಾಹಿತಿ ಇದರಲ್ಲಿದೆ.

ಮನೆಯಲ್ಲಿ ವಯಸ್ಸಾದವರು ಇದ್ದರೆ ಯಾವ ರೀತಿ ಸುರಕ್ಷತೆ ಕೈಗೊಳ್ಳಬೇಕು. ಮನೆಗೆಲಸಕ್ಕೆ ಆಳುಗಳನ್ನು ನೇಮಿಸುವಾಗ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ವಿವರಣೆ ನೀಡಲಾಗಿದೆ. ಭಾರತೀಯ ದಂಡ ಸಂಹಿತೆ, ಕರ್ನಾಟಕ ಪೊಲೀಸ್‌ ಕಾನೂನುಗಳ ಬಗ್ಗೆ ಮಾಹಿತಿಯನ್ನೂ ನೀಡಲಾಗಿದೆ.

ಕನ್ನಡ ಕಾಣೆ!

ವೆಬ್‌ಸೈಟ್‌ ಸಂಪೂರ್ಣವಾಗಿ ಇಂಗ್ಲಿಷ್‌ಮಯವಾಗಿದ್ದು, ಕನ್ನಡ ಕಾಣೆಯಾಗಿದೆ. ಸರ್ಕಾರದ ಇತರ ಇಲಾಖೆಗಳಲ್ಲಿ ಇರುವಂತೆ ಕನ್ನಡದಲ್ಲೂ ಆವೃತ್ತಿ ಆರಂಭಿಸಬೇಕು ಎನ್ನುವುದು ನಾಗರಿಕ ಬೇಡಿಕೆಯಾಗಿದೆ.

* * 

ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಹಾಗೂ ಸರ್ಕಾರದ ಆದೇಶದಂತೆ ವೆಬ್‌ಸೈಟ್‌ ಸಿದ್ಧಪಡಿಸಲಾಗುತ್ತಿದೆ

ಅಮರನಾಥ ರೆಡ್ಡಿ

ಡಿಸಿಪಿ

ಪ್ರತಿಕ್ರಿಯಿಸಿ (+)