ಭಾನುವಾರ, ಡಿಸೆಂಬರ್ 8, 2019
21 °C

ತಾಲ್ಲೂಕಿನಲ್ಲಿ ಶೇ10ರಷ್ಟು ಪ್ರದೇಶ ಬಿತ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಲ್ಲೂಕಿನಲ್ಲಿ ಶೇ10ರಷ್ಟು ಪ್ರದೇಶ ಬಿತ್ತನೆ

ಸಂಡೂರು: ಒಂದೆಡೆ ಹೊಲಗಳಲ್ಲಿ ಮೊಳಕೆ ಒಡೆದಿದ್ದ ಪೈರುಗಳು ಮಳೆ ಕೊರತೆಯಿಂದ ಬಾಡುತ್ತಿದ್ದರೆ, ಮತ್ತೊಂದೆಡೆ ಬಿತ್ತನೆಗೆ ಸಿದ್ಧಗೊಳಿಸಲಾದ ಹೊಲಗಳು ಬಿತ್ತನೆಯಾಗದೆ ಬಣಗುಡುತ್ತಿವೆ. ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳಾಗುತ್ತಾ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ, ಜನತೆ ಅದರಲ್ಲೂ ರೈತಾಪಿ ವರ್ಗ ಕಂಗಾಲಾಗಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 30 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿಯನ್ನು ಹೊಂದಲಾಗಿತ್ತು. ಜೂನ್ ಅಂತ್ಯದವರೆಗೆ ತಾಲ್ಲೂಕಿನಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶ ಸೇರಿ ಬಿತ್ತನೆಯಾಗಿರುವುದು ಕೇವಲ ಶೇ 10 ರಷ್ಟು ಪ್ರದೇಶದಲ್ಲಿ (2,992 ಹೆಕ್ಟೇರ್ ಪ್ರದೇಶ) ಮಾತ್ರ.

ಮಳೆಯ ಕೊರತೆ ಕುರಿತು ಮಾತನಾಡಿದ ನಿಡುಗುರ್ತಿ ಗ್ರಾಮದ ರೈತರಾದ ಹನುಮಂತಪ್ಪ, ಟಿ. ವಿನೋದ್‌ರಾಜ್, ಟಿ. ನರಸಿಂಹಪ್ಪ, ‘ಜೂನ್‌ನಲ್ಲಿ ನಮ್ಮ ಭಾಗದಲ್ಲಿ ಸ್ವಲ್ಪ ಮಳೆ ಬಂದಿದ್ದರಿಂದ ಹಲವರು ಬಿತ್ತನೆ ಮಾಡಿದ್ದೆವು. ಆದರೆ ಹಲವು ದಿನಗಳಿಂದ ಮಳೆ ಬಾರದಿರುವುದರಿಂದ ಚಿಗುರೊಡೆದಿದ್ದ ಬೆಳೆಗಳು ಬಾಡತೊಡಗಿವೆ. ಇನ್ನು ಹಲವು ಕಡೆಗಳಲ್ಲಿ ಬಿತ್ತನೆಯಾಗಿಲ್ಲ. ಮಳೆಗಾಗಿ ಎದುರು ನೋಡುತ್ತಿದ್ದೇವೆ. ದೇವರು ಮಳೆಯನ್ನು ಅನುಗ್ರಹಿಸಬೇಕಿದೆ’ ಎಂದರು.

ಮಳೆಯ ಪ್ರಮಾಣ: ತಾಲ್ಲೂಕಿನಲ್ಲಿ ಬೀಳಬೇಕಾದ ಸರಾಸರಿ ಮಳೆಯೂ ಈವರೆಗೆ ಬಿದ್ದಿಲ್ಲ. ಸಂಡೂರು ಹೋಬಳಿ– ಮೇ ಸರಾಸರಿ 68. 97ರಷ್ಟು ಮಳೆಯಾಗಬೇಕಾಗಿತ್ತು. ಜೂನ್ ತಿಂಗಳಲ್ಲಿ 37.60 ಮಿ.ಮೀ (125.55 ಮಿ.ಮೀ). ಚೋರನೂರು ಹೋಬಳಿ– ಮೇ ತಿಂಗಳಲ್ಲಿ 53.30 ಮಿ.ಮೀ (20.80 ಮಿ.ಮೀ), ಜೂನ್ ತಿಂಗಳಲ್ಲಿ 48 ಮಿ.ಮೀ (99.55 ಮಿ.ಮೀ) ಮಳೆಯಾಗಿದೆ.

ಅದೇ ರೀತಿ, ಕುರೆಕುಪ್ಪ ಹೋಬಳಿ–  ಮೇ ತಿಂಗಳಲ್ಲಿ 21 ಮಿ.ಮೀ (13.96 ಮಿ.ಮೀ), ಜೂನ್ ತಿಂಗಳಲ್ಲಿ 32 ಮಿ.ಮೀ (85.53 ಮಿ.ಮೀ). ತಾಲ್ಲೂಕಿನಲ್ಲಿ ಸರಾಸರಿಯಾಗಿ ಮೇ ತಿಂಗಳಲ್ಲಿ 41.43 ಮಿ.ಮೀ ಮಳೆಯಾಗಿದ್ದರೆ, ಜೂನ್ ತಿಂಗಳಲ್ಲಿ 39.20 ಮಿ.ಮೀ. ಮಳೆಯಾಗಿದೆ.

ಮಳೆಗಾಗಿ ಪೂಜೆ, ವ್ರತಾಚರಣೆ: ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ, ಎಲ್ಲೆಡೆ ಮಳೆಗಾಗಿ ಕತ್ತೆ ಮದುವೆ, ತನುಗೊಡ ಪೂಜೆ, ಕಪ್ಪೆ ಮದುವೆ, ವಿಶೇಷ ಭಜನೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ.

ಕೆಲವರು ಮಳೆ ಕೊರತೆಯಾಗುತ್ತಿರುವುದಕ್ಕೆ ಅರಣ್ಯ ನಾಶ ಕಾರಣವಾಗಿದ್ದು, ಪೂಜೆಗಳ ಬದಲಾಗಿ ಗಿಡಮರಗಳನ್ನು ನೆಟ್ಟು ಪೋಷಿಸಿದರೆ, ಮಳೆ ಜಾಸ್ತಿಯಾಗುತ್ತದೆ ಎಂದು ತಮ್ಮ ಅನುಭವದ ನುಡಿಗಳನ್ನಾಡುತ್ತಿದ್ದಾರೆ. ಪೂಜೆ ಮಾಡಿ ವರುಣನ ಕೃಪೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ ತಾಲ್ಲೂಕಿನ ರೈತರು.

ಮಳೆಯ ಪ್ರಮಾಣ ಮಿ.ಮೀ.ಗಳಲ್ಲಿ

50 ಸಂಡೂರು ಹೋಬಳಿಯಲ್ಲಿ ಮೇ ತಿಂಗಳಲ್ಲಿ ಬಿದ್ದ ಮಳೆ

68.97 ಈ ಅವಧಿಯಲ್ಲಿ ಬೀಳಬೇಕಾಗಿದ್ದ ವಾಡಿಕೆ ಮಳೆ ಪ್ರಮಾಣ

48 ಚೋರನೂರು ಹೋಬಳಿಯಲ್ಲಿ ಮೇ ತಿಂಗಳಲ್ಲಿ ಬಿದ್ದ ಮಳೆ

99.55 ಈ ಅವಧಿಯಲ್ಲಿ ಬೀಳಬೇಕಾಗಿದ್ದ ವಾಡಿಕೆ ಮಳೆ ಪ್ರಮಾಣ

* * 

ಮಳೆ ಬಿದ್ದಿಲ್ಲ. ಆದರೆ, ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಬೀಜ ಸಂಗ್ರಹವಿದೆ. ಮಳೆ ಬಂದರೆ, ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ

ಗೌರಾ ಮುಕುಂದರಾವ್

ಸಹಾಯಕ ಕೃಷಿ ನಿರ್ದೇಶಕ, ಸಂಡೂರು

 

ಪ್ರತಿಕ್ರಿಯಿಸಿ (+)