ಗುರುವಾರ , ಡಿಸೆಂಬರ್ 12, 2019
17 °C

ಹೊಂದಾಣಿಕೆ ಎಂಬುದೇ ಬದುಕು

Published:
Updated:
ಹೊಂದಾಣಿಕೆ ಎಂಬುದೇ ಬದುಕು

ಯಾವುದೇ ಕೋರ್ಟ್–ಕಚೇರಿಗಳಿಂದ ನೆಮ್ಮದಿ ಎಂಬುದು ಸಿಗಲು ಸಾಧ್ಯವೇ ಇಲ್ಲ ಎಂಬ ಅರಿವನ್ನು ಮಕ್ಕಳಿಗೆ ಮೂಡಿಸುವುದು ಪ್ರತಿಯೊಬ್ಬ ಅಪ್ಪ, ಅಮ್ಮನ ಕರ್ತವ್ಯ. ಬದುಕು ಎಂಬುದು ಹೊಂದಾಣಿಕೆಯ ಹೊದಿಕೆಯಾಗಬೇಕು.

ಬದುಕನ್ನು ಅನೇಕರು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸಿರುತ್ತಾರೆ. ಬದುಕು ಹೀಗೇ ಇರಬೇಕೆಂದು ನಿರ್ಧರಿಸಲು ಯಾರಿಗೂ ಸಾಧ್ಯವಿಲ್ಲ. ಅವೆಲ್ಲವೂ ನಿಸರ್ಗವೇ ನಿರ್ಮಿಸಿರುವ ನಿಯಮ – ಎನ್ನುವುದು ಹಲವಾರ ವಾದ. ಅವೆಲ್ಲವು ಸುಳ್ಳು, ಬದುಕನ್ನು ನಾವೇ ರೂಪಿಸಿಕೊಂಡರೆ ಅದು ನಾವಂದುಕೊಂಡಂತೆ ಇರುತ್ತದೆ – ಎಂಬುದು ಕೆಲವರ ವಾಗ್ವಾದ.

ಬದುಕಿನ ಬಗೆಗೆ ನೂರಾರು ಮಾತುಗಳು ಹುಟ್ಟಿಕೊಂಡಿವೆ; ಹಾಗೆಯೇ ಅವನ್ನು ಗಟ್ಟಿಗೊಳಿಸಿವೆ. ತಮ್ಮ ತಮ್ಮ ಕನಸು ಮತ್ತು ಮಿತಿಯೊಳಗೆ ಆರಂಭಗೊಳ್ಳುವ ಬದುಕಿಗೆ ಮನಸ್ಸೊಂದು ವೇದಿಕೆಯಾಗುತ್ತದೆ. ಅಂತಹ ಪವಿತ್ರವಾದ ಮನಸ್ಸುಗಳನ್ನು ನಮ್ಮ ಸಮಾಜ ಮತ್ತು ಪರಿಸರ ಜೊತೆಗೆ ಕುಟುಂಬವೂ ಸೇರಿ ಎರಡು ವಿಭಾಗಗಳನ್ನು ಮಾಡಿ ಭಿನ್ನವಾಗಿಯೇ ಬೆಳೆಸಿಬಿಡುತ್ತವೆ.

ಒಂದು ಗಡಸು ಮನಸ್ಸು (ಗಂಡಸು ಮನಸ್ಸು); ಮತ್ತೊಂದು ಸೂಕ್ಷ್ಮ ಮನಸ್ಸು (ಹೆಂಗರಳಿನ ಮನಸ್ಸು). ಹೀಗೆ ಎರಡು ಮನಃಸ್ಥಿತಿಗಳು ಒಂದೇ ಸಮಾಜದಲ್ಲಿ ಒಂದೇ ಪರಿಸರದಲ್ಲಿ, ಒಂದೇ ಮನೆಯೊಳಗೆ ಭಿನ್ನ ಭಿನ್ನವಾಗಿಯೇ ರೂಪುಗೊಳ್ಳುವುದು ಆಶ್ಚರ್ಯದ ಸಂಗತಿಯಾಗಿರುತ್ತದೆ. ‘ಗಡಸು ಮನಸ್ಸು’ ಸದಾ ಕಾಲ ಬದುಕನ್ನು ಸವಾಲಾಗಿ ಸ್ವೀಕರಿಸಬೇಕೆಂತಲೂ, ಬದಲಾವಣೆಗೆ ಹೊಂದಿಕೊಳ್ಳಬೇಕೆಂತಲೂ, ಯಾವುದೇ ವ್ಯತ್ಯಾಸ ಘಟಿಸಿದರೂ (ಶೀಲ ಕಳೆದುಕೊಂಡರೂ) ಧೈರ್ಯವಾಗಿ ಎದುರಿಸಬೇಕೆಂತಲೂ, ಹೇಳಿ, ಹೇಳಿ, ಅವುಗಳನ್ನು ಆಚರಣೆಗೆ ತಂದು ದಶದಿಕ್ಕುಗಳಿಗೂ ಹರಡಿಸಿ ಬಿಟ್ಟಿರುತ್ತಾರೆ. ಪುರುಷಕೇಂದ್ರ ವ್ಯವಸ್ಥೆಯನ್ನು ನಿರ್ಮಾಣ ಮಾಡಿ, ಈಗಾಗಲೇ ಶತಮಾನಗಳು ಕಳೆದುಹೋಗಿವೆ.

ಅಂತೆಯೇ ಅದೇ ವ್ಯವಸ್ಥೆ ಹೆಣ್ಣುಮಕ್ಕಳನ್ನು ಬೇರೆಯಾಗಿಯೇ ಬೆಳೆಸಲು ಪ್ರಾರಂಭಿಸುತ್ತದೆ. ಹೆಣ್ಣುಮಕ್ಕಳು ತಲೆ ಬಾಗಿಸಿ ನಡೆಯಬೇಕೆಂತಲೂ, ತನ್ನ ಎಲ್ಲ ನೋವುಗಳನ್ನು ತನ್ನೊಡಲೊಳಗೆ ಇರಿಸಿಕೊಳ್ಳಬೇಕೆಂತಲೂ ತನ್ನ ಪ್ರಾಣಕ್ಕಿಂತಲೂ ಶೀಲವೇ ಮುಖ್ಯವೆಂತಲೂ, ಯಾವುದೇ ಕಾರಣಕ್ಕೂ ಯಾರ ವಿರುದ್ಧದವೂ (ಆಕೆಯ ಮನಸ್ಸಿಗೆ ನೋವಾದರೂ ಕೂಡ) ತಿರುಗಿ ಮಾತನಾಡಬಾರದೆಂತಲೂ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂತಲೂ, ಹೇಳುತ್ತಲೇ ಬೆಳೆಸುವ ಹೆಂಗರುಳಿನ ಮನಸ್ಸನ್ನು ಭಾವನಾತ್ಮಕವಾಗಿ ಬಂಧಿಸಿಬಿಡುತ್ತಾರೆ.

ಹೀಗೆ ಒಂದೇ ಸೂರಿನಡಿ ಎರಡು ರೀತಿಯಲ್ಲಿ ಮನಸ್ಸುಗಳು ಭಿನ್ನರೂಪಗಳನ್ನು ಪಡೆದುಕೊಳ್ಳುತ್ತವೆ. ಇಂತಹ ಪರಿಸ್ಥಿತಿಯೊಳಗೆ ರೂಪುಗೊಂಡ ಎರಡು ಮನಃಸ್ಥಿತಿಗಳು ಒಂದಾಗಿ ದಾಂಪತ್ಯಜೀವನವನ್ನು ನಡೆಸುವಾಗ ಅನೇಕ ಅತಿರೇಕದ ಅವಸರದ ಅವಘಡಗಳನ್ನು ಸೃಷ್ಟಿಸಿಕೊಂಡುಬಿಡುತ್ತಾರೆ. ಸುಂದರ ಬದುಕನ್ನು ಅತಂತ್ರಗೊಳಿಸಿಕೊಂಡುಬಿಡುತ್ತಾರೆ.

ಸಾಮಾಜಿಕ ಜೀವನ ಬದಲಾಗಲಾರಂಭಿಸಿದ ದಿನಗಳಿಂದಲೂ ಕೌಟುಂಬಿಕ ವ್ಯವಸ್ಥೆಯೂ ಕೂಡ ಸ್ಥಾನಪಲ್ಲಟವಾಗುತ್ತಿರುವುದು ಸತ್ಯ. ದಿನನಿತ್ಯದ ಬದುಕಿನಲ್ಲಿ ಸಾಮರಸ್ಯ, ಸಮಾಧಾನ, ಸಂಯಮ, ತಾಳ್ಮೆ, ಮಾನವೀಯ ಮೌಲ್ಯಗಳು ಕ್ಷೀಣಿಸತೊಡಗಿವೆ. ಆದುದರಿಂದಲೇ ಬದುಕು ಕೂಡ ಕೂಡು–ಕಳೆಯುವ ಲೆಕ್ಕದ ಮೊತ್ತವಾಗುತ್ತಲಿದೆ. ಯಾರ ಮಾತನ್ನ ಯಾರೂ ಕೇಳುವ ಗೋಜಿಗೆ ಹೋಗುವುದಿಲ್ಲ. ಯಾರ ದುಗುಡಗಳನ್ನು ಯಾರೂ ಲೆಕ್ಕಿಸುತ್ತಿಲ್ಲ. ಪ್ರೀತಿ, ಪ್ರೇಮ, ತ್ಯಾಗ, ವ್ಯವಧಾನ, ಸಮಾಧಾನಗಳು ಕೇವಲ ಪಠ್ಯಗಳ ಪಠಣಗಳಾಗಿವೆ.

ಆದುದರಿಂದಲೇ ಅಪರಾಧಗಳು ಕೇವಲ ವ್ಯಾವಹಾರಿಕ ಜಾಗಗಳಲ್ಲಿ ಮಾತ್ರ ಘಟಿಸದೆ ಕುಟುಂಬದೊಳಕ್ಕೂ ಪ್ರವೇಶ ಪಡೆದಿವೆ. ಸಣ್ಣ ಸಣ್ಣ ಅನುಮಾನಗಳ ಮೂಲಕ ಪ್ರವೇಶ ಪಡೆದ ಎಷ್ಟೋ ಮನಃಸ್ಥಿತಿಗಳು ವ್ಯಾಘ್ರತೆಯನ್ನು ಮೈಗೂಡಿಸಿಕೊಂಡಿವೆ. ಕೆಟ್ಟ ಚಟಗಳಿಗೆ ಬಲಿಯಾಗಿ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳಲಾರಂಭಿಸಿವೆ.

ಇಂತಹ ಯಾವುದೇ ಸಮಸ್ಯೆಗಳನ್ನು ಸಾಮರಸ್ಯದಿಂದ ಬಗೆಹರಿಸಲು ಮನೆಗಳಲ್ಲಿ ಹಿರಿಯ ತಲೆಮಾರಿನವರು ಇಲ್ಲವಾಗಿರುವುದು ಮುಖ್ಯ ಕಾರಣವೆಂದು ಭಾವಿಸಬಹುದು. ಇಂತಹ ಪರಿಸ್ಥಿತಿಯೊಳಗೆ ಬದುಕು ಅರಳುವುದರ ಬದಲು ಕೆರಳಲು ಕಾರಣವಾಗುತ್ತದೆ. ಇಂತಹ ಪರಿಸರದೊಳಗೆ ಬೆಳೆದ ಎಷ್ಟೋ ಮಕ್ಕಳು ಸಮಾಜಘಾತಕರಾಗಿ ರೂಪುಗೊಂಡಿದ್ದಾರೆ. ಕೆಲವರು ದಂಪತಿಗಳು ಸಂಪಾದನೆಯ ಹುಚ್ಚನ್ನು ಮೈಗೂಡಿಸಿಕೊಂಡು ಮಕ್ಕಳನ್ನು ಹಾಸ್ಟೇಲ್‌ಗಳಲ್ಲಿ ಮತ್ತು ರೆಸಿಡೆನ್ಸಿ ಶಾಲೆಗಳಲ್ಲಿ ಸೇರಿಸಿಬಿಡುತ್ತಾರೆ.

ಕಲಿಯುವ ಶಾಲೆಗಳಲ್ಲಿ ವಿದ್ಯೆಗೆ ಮೊದಲ ಆದ್ಯತೆಯನ್ನು ಕಲ್ಪಿಸಲಾಗುತ್ತದೆ. ಅಲ್ಲಿ ನಂತರದ ಯಾವ ಆದ್ಯತೆಗಳಿಗೂ ಬೆಲೆ ಕೊಡಲಾಗಿರುವುದಿಲ್ಲ. ಆದುದರಿಂದಲೇ ಅಂತಹ ಶಾಲೆಯಲ್ಲಿ ಕಲಿತ ಮಕ್ಕಳು ಉದ್ಯೋಗಕ್ಕೆ ಮೊದಲ ಆದ್ಯತೆಯನ್ನು ಕೊಟ್ಟು ವಿದೇಶೀವಾಸಿಗಳಾಗುತ್ತಾರೆ.

ತೊಂಬತ್ತರ ದಶಕದಲ್ಲಿ ಕೆಲವು ಕೌಟುಂಬಿಕ ದೌರ್ಜನ್ಯಗಳು, ದೂರುಗಳು, ದಾಖಲಾಗುತ್ತಿದ್ದವು. ಆ ದೂರುಗಳನ್ನು ಕ್ರಿಮಿನಲ್ ನ್ಯಾಯಾಲಯದಲ್ಲಿಯೇ ಹೂಡಲಾಗುತ್ತಿತ್ತು; ಪರಿಹಾರವನ್ನು ಪಡೆಯಲಾಗುತ್ತಿತು. ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗುತ್ತಿರುವುದರಿಂದ ಕುಟುಂಬದ ವ್ಯಾಜ್ಯಗಳನ್ನು ಪರಿಹರಿಸಲು ಈಗ ಕುಟುಂಬ ನ್ಯಾಯಾಲಯಗಳು ವಿಶೇಷವಾಗಿ ರೂಪುಗೊಳ್ಳುತ್ತಿವೆ. ಕೆಲವೊಂದು ಜಿಲ್ಲೆಗಳಲ್ಲಿ ಮಾತ್ರ ತಲೆ ಎತ್ತಿದ ಕುಟುಂಬ ನ್ಯಾಯಾಲಯಗಳು ಈಗ ಎಲ್ಲ ಜಿಲ್ಲೆಗಳಲ್ಲೂ ಜೀವ ಪಡೆಯಲಾರಂಭಿಸಿರುವುದು ಆತಂಕಕಾರಿ ಬೆಳವಣಿಗೆ.

ನ್ಯಾಯಾಲಯಗಳಲ್ಲಿ ವ್ಯಾಜ್ಯ ಹೂಡುವ ಮೊದಲು ಮಹಿಳಾ ಆಯೋಗದಲ್ಲಿ, ಸಾಂತ್ವನ ಕೇಂದ್ರಗಳಲ್ಲಿ, ಪೂರ್ವಭಾವಿ ದಾವೆ ಹೂಡುವ ಕೇಂದ್ರಗಳಲ್ಲಿ ಸಮಾಲೊಚನೆಗಳಿಗೆ ಎರಡೂ ಕುಟುಂಬಗಳನ್ನು ಒಳಪಡಿಸಿದಾಗ ಕೆಲವೊಂದು ಸಣ್ಣಪುಟ್ಟ ಹೊಂದಾಣಿಕೆಯ ಕೊರತೆಗಳು ಕಾಣಸಿಗುತ್ತವೆ. ಕೆಲವಂತೂ ಬಗೆಹರಿಸಲು ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ಬಂದು ನಿಂತಿರುತ್ತವೆ. ಕೆಲವರಂತೂ ಹಟಕ್ಕೆ ಬಿದ್ದವರಂತೆ ದಾವೆಯನ್ನು ಹೂಡಲು ತೀರ್ಮಾನಿಸಿಯೇ ಸುಳ್ಳುಕತೆಗಳನ್ನು ಹೆಣೆದುಬಿಟ್ಟಿರುತ್ತಾರೆ.

ಅಂತಹ ಎಷ್ಟೋ ಸಮಸ್ಯೆಗಳಿಗೆ ಉತ್ತರ ಹುಡುಕುವುದು ಕಷ್ಟ ಸಾಧ್ಯವಾಗುತ್ತದೆ. ಸಮಾಲೋಚನೆಗೆ ಒಳಪಡಿಸುವ ಸಮಯದಲ್ಲಿ ಗಂಡಿನ ಕಡೆಯವರನ್ನು ಸಾಮರಸ್ಯದ ಕೊರತೆಯನ್ನು ಕುರಿತು ಪ್ರಶ್ನೆ ಮಾಡಿದರೆ ಅವರು ಹೇಳುವ ಮಾತುಗಳೆಂದರೆ – ‘ಏನೇ ಹೇಳಿ, ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಕೊಟ್ಟಿದ್ದು ಜಾಸ್ತಿನೇ ಆಯಿತು. ಅವರಿಗೆ ವಿದ್ಯೆ, ಉದ್ಯೋಗ ಕೊಟ್ಟಿದ್ದು, ದೊಡ್ಡ ತಪ್ಪು.

ಹೊಂದಾಣಿಕೆ ಮಾಡಿಕೊಂಡು ಹೋಗುವ ಗುಣ ಹೆಣ್ಣುಮಕ್ಕಳಲ್ಲಿ ಕಡಿಮೆಯಾಗಿದೆ. ಗಂಡ ಹೊಡೆಯದೆ, ಬೈಯದೆ, ಮನೆಯಿಂದ ಹೊರಹಾಕದೆ, ಇನ್ಯಾರು ಅಂತಹ ಶಿಕ್ಷೆ ಕೊಡಲು ಸಾಧ್ಯ. ಅದಕ್ಕೊಂದು ಕೌಟುಂಬಿಕ ದೌರ್ಜನ್ಯ ತಡೆಕಾಯಿದೆ ಎಂಬ ಹೊಸ ಕಾನೂನುನ್ನು ಬೇರೆ ಜಾರಿಗೆ ತರಲಾಗಿದೆ.’ ಹೀಗೆ ಅವರಿಗೆ ತೋಚಿದಂತೆ ಗೊಣಗುತ್ತಾರೆ.

ಅದೇ ವೇದಿಕೆಯಲ್ಲಿ ಹೆಣ್ಣಿನ ಕಡೆಯವರನ್ನು ಕರೆದು ಕಾರಣ ಕೇಳಿದರೆ – ‘ಈಗಿನ ಕಾಲದಲ್ಲಿ ಹೊಡಿ, ಬಡಿ ಸಂಸ್ಕೃತಿಯನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಅವರ ಕುಟುಂಬದವರಿಗೆ ತಾಳ್ಮೆ ಅನ್ನೊದೇ ಇಲ್ಲ; ಹೊಂದಾಣಿಕೆ ಮಾಡಿಕೊಳ್ಳುವ ಮನಃಸ್ಥಿತಿಯಂತೂ ಇಲ್ಲವೇ ಇಲ್ಲ. ನಾನು ನನ್ನ ಮಗಳಿಗೆ ವಿದ್ಯೆ ಕೊಟ್ಟಿದ್ದೇನೆ. ನನ್ನ ಮಗಳ ಸಂಪಾದನೆ ಪೂರ್ತಾ ಆತನ ಜೇಬಿಗೆ ನೇರ ಸೇರುತ್ತದೆ.  ಮಗಳಿಗೆ ಮದುವೆಯಾದ 2–3 ತಿಂಗಳಲ್ಲಿ ನೆಮ್ಮದಿ ಕೊಟ್ಟಿಲ್ಲವೆಂದರೆ ಹೇಗೆ? ಅವಳ ಕೈಯಲ್ಲಿ ಉದ್ಯೋಗವಿದೆ, ಡೈವರ್ಸ್ ಕೊಡಿಸಿಬಿಡಿ’ ಎಂದು ವಾದಿಸುತ್ತಾರೆ. ಕೆಲವರಂತೂ ವಾದ ವಿವಾದಗಳನ್ನು ಮಾಡಿಕೊಳ್ಳುತ್ತಾ ಕೈ-ಕೈ ಮಿಲಾಯಿಸಿಯೇ ಬಿಡುತ್ತಾರೆ.

ಅನಂತರದಲ್ಲಿ ಅಂತಹ ಸಣ್ಣ ಸಣ್ಣ ವ್ಯತ್ಯಾಸಗಳೇ ಮಾನಸಿಕ ಒತ್ತಡಗಳಾಗಿ ಪರಿವರ್ತಿವಾಗುತ್ತವೆ. ಇಂತಹ ಅಸಮಾಧಾನಗಳು ಒತ್ತಡಗಳು ದೈಹಿಕ ಮತ್ತು ಮಾನಸಿಕ ನೋವಿಗೆ ಕಾರಣವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಕೂಡ ಕೋರ್ಟ್–ಕಚೇರಿಗಳಿಗೆ ಅಲೆಯುವುದನ್ನೇ ವೃತ್ತಿಯನ್ನಾಗಿಸಿಕೊಂಡವರಂತೆ ಕಾಣುತ್ತಾರೆ. ಮದುವೆಯಾದ ಹೊಸದರಲ್ಲಾದರೆ ಹೊಂದಾಣಿಕೆಯ ಕೊರತೆ ಇರಬಹು

ದೆಂದು ಭಾವಿಸಬಹುದು. ಆದರೆ ಎಷ್ಟೋ ಕುಟುಂಬಗಳು 25–30 ವರ್ಷಗಳಾದರೂ ಪರಸ್ಪರ ಅರ್ಥಮಾಡಿಕೊಳ್ಳದೇ ವಿನಾ ಕಾರಣ ಒಬ್ಬರನ್ನೊಬ್ಬರು ದೂಷಿಸುವುದರಲ್ಲಿಯೇ ಅವರ ಮುಕ್ಕಾಲು ಭಾಗ ಆಯುಸ್ಸನ್ನು ಮುಗಿಸಿಬಿಡುತ್ತಾರೆ.

ಮೊನ್ನೆ ಮೊನ್ನೆಯಷ್ಟೇ ನನ್ನ ಬಳಿಗೆ ಒಬ್ಬ ಮಹಿಳೆ ಕಾನೂನು ಸಲಹೆ ಪಡೆಯಲು ಬಂದಿದ್ದರು. ಮದುವೆಯಾಗಿ, ಈಗಾಗಲೇ 33 ವರ್ಷಗಳನ್ನು ಪೂರೈಸಿರುವ ಆಕೆ ಇಳಿವಯಸ್ಸಿನಲ್ಲಿ ವಿಚ್ಛೇದನ ಪಡೆಯಲು ಮಾರ್ಗೋಪಾಯ ಕೇಳಲು ಮುಜುಗರ ಪಡುತ್ತಿದ್ದರು. ಗಂಡನಿಗೆ 65 ವರ್ಷ, ಹೆಂಡತಿಗೆ 55 ವರ್ಷ; ಅವರ ವಿಚ್ಛೇದನಕ್ಕೆ ಕಾರಣ ಹೊಂದಾಣಿಕೆಯ ಕೊರತೆ. ಈ ವಿಚಾರವನ್ನು ಕೇಳಿದ ನನಗೆ ಏನೂ ಹೇಳಲು ತೋಚಲಿಲ್ಲ. ‘ಯಾರಾದರೂ ಒಬ್ಬರು ಸೋತರೆ, ಖಂಡಿತ ನಿಮ್ಮ ಬದುಕು ಸುಂದರವಾಗಿರುತ್ತದೆ.

ಈ ಇಳಿ ವಯಸ್ಸಿನಲ್ಲಿ ಕೋರ್ಟ್–ಕಚೇರಿ ಅಷ್ಟು ಒಳ್ಳೆಯದಲ್ಲ’ ಎಂದು ಹೇಳಿದೆ. ಆರೋಗ್ಯಸಮಸ್ಯೆ ಇಬ್ಬರಿಗೂ ಕಾಡುತ್ತಿರುವುದರಿಂದ ಸ್ವಲ್ಪ ಸಹಿಸಿಕೊಳ್ಳಲು ಪ್ರಯತ್ನಿಸಿ ತಿಳಿವಳಿಕೆ ಹೇಳಿದೆ. ಅಷ್ಟಕ್ಕೇ ಆಕೆ ಗಳಗಳನೇ ಅಳಲಾರಂಭಿಸಿದಳು. ‘ಸೋತು ಸೋತು ಸಾಯುವ ಹಂತಕ್ಕೆ ಬಂದಿದ್ದೇನೆ. ಇನ್ನೂ ಮುಂದೆ ಸೋಲಲು ಸಾಧ್ಯವೇ ಇಲ್ಲ, ದಯಮಾಡಿ ಸಲಹೆ ಕೊಡಿ’ ಎಂದು ಬೇಡಿದರು.

‘ನಿಮಗೆ ಮಕ್ಕಳಿಲ್ಲವೆ’ – ಎಂದು ಕೇಳಿದೆ. ‘ಇಬ್ಬರಿದ್ದಾರೆ. ಅವರು ಹೊರದೇಶದಲ್ಲಿದ್ದಾರೆ. ಅವರ ಜೀವನ ಕೂಡ ಸರಿಯಾಗಿಲ್ಲ. ಅವರ ಜೊತೆ ನಾನು ಯಾವುದೆ ನೋವುಗಳನ್ನು ಹೇಳಿಕೊಳ್ಳುವ ಪ್ರಯತ್ನವನ್ನು ಮಾಡಿಲ್ಲ’ ಎಂದರು. ಅವರು ಈಗ ನ್ಯಾಯಾಲಯಕ್ಕೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಜಗಳಗಳ ಮಧ್ಯದಲ್ಲಿ ಮಕ್ಕಳು ಬಲಿಪಶುಗಳಾಗುತ್ತಾರೆ.

 ಇಂತಹ ಪರಿಸರದಲ್ಲಿ ಬೆಳೆದ ಎಷ್ಟೋ ಮಕ್ಕಳು ಬದುಕನ್ನು ಹೊಂದಾಣಿಕೆ ಮಾಡಿಕೊಳ್ಳುವುದರ ಬದಲು ಹೋರಾಟವಾಗಿ ಪರಿವರ್ತಿಸಿಕೊಂಡುಬಿಡುತ್ತಾರೆ. ಕೆಲವರಂತೂ ಮಾನಸಿಕ ರೋಗಿಗಳಾಗುತ್ತಾರೆ. ದಾಂಪತ್ಯಜೀವನಕ್ಕೆ ಬೇಕಾದ ಸಂಯಮ, ತಾಳ್ಮೆಗಳು ಮರೆಯಾಗಿ, ಅಸಹನೆ, ಅಸಡ್ಡೆಯು ಸೇರ್ಪಡೆಯಾಗಿ ಮನಸ್ಸನ್ನು ಘಾಸಿಗೊಳಿಸಿಬಿಡುತ್ತವೆ.

ಯಾವುದೇ ಕೋರ್ಟ್–ಕಚೇರಿಗಳಿಂದ ನೆಮ್ಮದಿ ಎಂಬುದು ಸಿಗಲು ಸಾಧ್ಯವೇ ಇಲ್ಲ ಎಂಬ ಅರಿವನ್ನು ಮಕ್ಕಳಿಗೆ ಮೂಡಿಸುವುದು ಪ್ರತಿಯೊಬ್ಬ ಅಪ್ಪ, ಅಮ್ಮನ ಕರ್ತವ್ಯ. ಬದುಕು ಎಂಬುದು ಹೊಂದಾಣಿಕೆಯ ಹೊದಿಕೆಯಾಗಬೇಕು. ಆದುದರಿಂದಲೇ ನಮ್ಮ ರಾಷ್ಟ್ರಕವಿ ಜಿ.ಎಸ್.ಎಸ್.ರವರು ‘ಹೊಂದಾಣಿಕೆ ಎಂಬುದು ಎಷ್ಟು ಕಷ್ಟ ಈ ನಾಲ್ಕು ದಿನದ ಬದುಕಿನಲ್ಲಿ’ ಎಂದು ಹೇಳಿರಬಹುದು. ಹೆಣ್ಣಾಗಲಿ, ಗಂಡಾಗಲಿ, ತಾಳ್ಮೆ–ಸಹನೆಯಿಂದ ಬದುಕನ್ನು ಪ್ರೀತಿಸಬೇಕು, ಪರಸ್ಪರ ಗೌರವಿಸಬೇಕು, ಆಗ ಮಾತ್ರ ಬದುಕಿನಲ್ಲಿ ಉಲ್ಲಾಸವನ್ನು ಕಾಣಲು ಸಾಧ್ಯವಾಗುತ್ತದೆ.

 

ಸಹನೆ–ತಾಳ್ಮೆ ಇರಲಿ

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಕೂಡ ಕೋರ್ಟ್–ಕಚೇರಿಗಳಿಗೆ ಅಲೆಯುವುದೇ ಕೆಲವರಿಗೆ ವೃತ್ತಿಯಾದಂತಿದೆ. ಮದುವೆಯಾದ ಹೊಸದರಲ್ಲಾದರೇ ಹೊಂದಾಣಿಕೆಯ ಕೊರತೆ ಇರಬಹುದೆಂದು ಭಾವಿಸಬಹುದು. ಆದರೆ ಎಷ್ಟೋ ಕುಟುಂಬಗಳು 25–30 ವರ್ಷಗಳಾದರೂ ಪರಸ್ಪರ ಅರ್ಥಮಾಡಿ-ಕೊಳ್ಳದೇ ವಿನಾ ಕಾರಣ ಒಬ್ಬರನ್ನೊಬ್ಬರು ದೂಷಿಸುವುದರಲ್ಲಿಯೇ ಅವರ ಮುಕ್ಕಾಲು ಭಾಗ ಆಯುಸ್ಸನ್ನು ಮುಗಿಸಿಬಿಡುತ್ತಾರೆ. ಹೆಣ್ಣಾಗಲಿ, ಗಂಡಾಗಲಿ, ತಾಳ್ಮೆ–ಸಹನೆಯಿಂದ ಬದುಕನ್ನು ಪ್ರೀತಿಸಬೇಕು, ಪರಸ್ಪರ ಗೌರವಿಸಬೇಕು, ಆಗ ಮಾತ್ರ ಬದುಕಿನಲ್ಲಿ ನವ ಉಲ್ಲಾಸವನ್ನು ಕಾಣಲು ಸಾಧ್ಯವಾಗುತ್ತದೆ.

(ಲೇಖಕಿ ಕರ್ನಾಟಕ ಮಹಿಳಾ ರಾಜ್ಯ ಆಯೋಗದ ಹಿಂದಿನ ಅಧ್ಯಕ್ಷೆ)

ಪ್ರತಿಕ್ರಿಯಿಸಿ (+)