ಶುಕ್ರವಾರ, ಡಿಸೆಂಬರ್ 6, 2019
17 °C

ಕಡಲೆಕಾಯಿ ಸಿಪ್ಪೆಯೊಳಗೆ ಗಾಂಜಾ ರವಾನೆ! ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಬೆಳಕಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಲೆಕಾಯಿ ಸಿಪ್ಪೆಯೊಳಗೆ ಗಾಂಜಾ ರವಾನೆ! ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಬೆಳಕಿಗೆ

ಬೆಳಗಾವಿ: ಇಲ್ಲಿನ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹದ ಕೆಲ ಕೈದಿಗಳಿಗೆ ಕಡಲೆಕಾಯಿ ಸಿಪ್ಪೆಯೊಳಗೆ ಗಾಂಜಾ ತುಂಬಿ ರವಾನಿಸುತ್ತಿದ್ದುದು ಬೆಳಕಿಗೆ ಬಂದಿದೆ.

ಹೊರಗಿನ ವ್ಯಕ್ತಿಯೊಬ್ಬರು ಕೈದಿಯೊಬ್ಬನಿಗೆ ತಂದುಕೊಟ್ಟಿದ್ದ ಕಡಲೆಕಾಯಿಯನ್ನು ಅಧಿಕಾರಿಗಳು ಪರಿಶೀಲಿಸಿದಾಗ ಅಕ್ರಮ ಗೊತ್ತಾಗಿದೆ. ಕಾರಾಗೃಹದ ಗೇಟಿನ ಬಳಿಯ ಸಂದರ್ಶಕರ ಕೊಠಡಿಯಲ್ಲಿ ಪತ್ತೆಯಾದ ಎರಡು ಮುಷ್ಟಿಯಷ್ಟು ಕಡಲೆಕಾಯಿಯೊಳಗೆ ಗಾಂಜಾ ತುಂಬಲಾಗಿತ್ತು.

ಈ ಘಟನೆಯಿಂದ ಎಚ್ಚೆತ್ತುಕೊಂಡ ಸಿಬ್ಬಂದಿ, ಕೈದಿಗಳ ಕಡೆಯವರು ಕಡಲೆಕಾಯಿ ತಂದುಕೊಡುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ.

‘ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಘಟನೆ ಒಂದೂವರೆ ತಿಂಗಳ ಹಿಂದೆ ನಡೆದಿದೆ. ಕೈದಿಗಳಿಗೆ ಅವರ ಕಡೆಯವರು ಕಡಲೆಬೀಜವನ್ನು ತಂದುಕೊಟ್ಟಿದ್ದರೆ ಅನುಮಾನ ಇರುತ್ತಿರಲಿಲ್ಲ. ತಿನ್ನಲು ಎಂದುಕೊಳ್ಳಬಹುದಿತ್ತು. ಆದರೆ, ಕಡಲೆಕಾಯಿ ಸಿಪ್ಪೆ ಸಮೇತ ಇದ್ದದ್ದು ಅನುಮಾನಕ್ಕೆ ಕಾರಣವಾಗಿ ಪರಿಶೀಲಿಸಲಾಯಿತು. ಕಡಲೆಕಾಯಿಯಲ್ಲಿ ಸಿಪ್ಪೆ ಬಿಡಿಸಿ ಬೀಜವನ್ನು ತೆಗೆದು ಆ ಜಾಗದಲ್ಲಿ ಗಾಂಜಾ ತುಂಬಿ ಮತ್ತೆ ಸಿಪ್ಪೆಯನ್ನು ಅಂಟಿಸಿ ಪೂರೈಸಲಾಗಿತ್ತು. ಅವುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ. ಇದರಿಂದ ಅಕ್ರಮಕ್ಕೆ ಕಡಿವಾಣ ಬಿದ್ದಿದೆ’ ಎಂದು ಅಧೀಕ್ಷಕ ಟಿ.ಪಿ. ಶೇಷ 'ಪ್ರಜಾವಾಣಿ'ಗೆ ತಿಳಿಸಿದರು.

‘ಕಾರಾಗೃಹಗಳಲ್ಲಿ ಕೈದಿಗಳಿಗೆ ಗಾಂಜಾ ಪೂರೈಸಲಾಗುತ್ತಿದೆ ಎನ್ನುವ ಆರೋಪವನ್ನು ಡಿಐಜಿ ಡಿ.ರೂಪಾ ಮಾಡಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಇಂತಹ ಅಕ್ರಮಗಳಲ್ಲಿ ಸಿಬ್ಬಂದಿ ಭಾಗಿಯಾಗಿರುವುದಿಲ್ಲ. ಕೈದಿಗಳ ಕಡೆಯವರು ಬೇರೆ ಬೇರೆ ರೀತಿಯಲ್ಲಿ ಗಾಂಜಾ ತಂದುಕೊಡುತ್ತಾರೆ. ಆದರೆ, ನಾವು ತಡೆಯುತ್ತಿದ್ದೇವೆ. ಕೈದಿಗಳು ಅಕ್ರಮ ಚಟುವಟಿಕೆ ನಡೆಸುವುದಕ್ಕೆ ಅವಕಾಶ ನೀಡುತ್ತಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ’ ಎನ್ನುತ್ತಾರೆ ಅವರು.

‘ಗಾಂಜಾ ತುಂಬಿದ್ದ ಕಡೆಲೆಕಾಯಿ ಒಬ್ಬ ಕೈದಿ ಬಳಿ ಮಾತ್ರವೇ ಸಿಕ್ಕಿದೆ. ಆತನಿಗೆ ತಂದುಕೊಟ್ಟವರು ಯಾರು ಎನ್ನುವುದು ಗೊತ್ತಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೈದಿಗಳು ಅಕ್ರಮಕ್ಕೆ ಅನ್ಯ ದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ. ಅದನ್ನು ತಪ್ಪಿಸುವುದಕ್ಕೆ ನಾವು ನಿತ್ಯವೂ ಕಾರ್ಯಪ್ರವೃತ್ತವಾಗಿರುತ್ತೇವೆ’ ಎಂದರು.

ಪ್ರತಿಕ್ರಿಯಿಸಿ (+)