ಮಂಗಳವಾರ, ಡಿಸೆಂಬರ್ 10, 2019
16 °C

ಏನಾದ್ರೂ ಕೇಳ್ಬೋದು

Published:
Updated:
ಏನಾದ್ರೂ ಕೇಳ್ಬೋದು

* ನಾನು ಚಿಕ್ಕ ವಯಸ್ಸಿನಿಂದಲೂ ಒಂಟಿಯಾಗಿ ಬೆಳೆದೆ. ನನ್ನ ಮನೆ, ಅಕ್ಕಂದಿರು, ತೋಟ – ಇವೇ ಜೀವನವಾಗಿತ್ತು. ಆಗ ನಾನು ಯಾರನ್ನೂ ಮುಖ ಎತ್ತಿ ಮಾತನಾಡಿಸುತ್ತಿರಲಿಲ್ಲ. ನನಗೆ ಈಗ ಸರಕಾರಿ ಕೆಲಸ ದೊರಕಿದೆ. ಇಲ್ಲಿ ನಾನು ಜನರ ಜೊತೆ ಮಾತನಾಡುವಾಗ ಭಯದಿಂದ ಮಾತನಾಡುತ್ತೇನೆ. ಕೆಲವೊಂದು ಸಲ ಅನೇಕರು ಒಟ್ಟಿಗೆ ಮಾತನಾಡಿದರೆ ಏನು ಮಾಡಬೇಕೆಂಬುದು ತಿಳಿಯುವುದಿಲ್ಲ. ಇದರ ಮಧ್ಯೆ ನಮ್ಮ ಉನ್ನತ ಅಧಿಕಾರಿ ಫೋನ್ ಮಾಡಿ ಯಾವಾಗಲೂ ರೇಗುತ್ತಾರೆ. ಆಗ ನನ್ನ ಮನಸ್ಸಿನಲ್ಲಿ ಅದೇ ಉಳಿದುಕೊಂಡುಬಿಡುತ್ತದೆ. ಮನೆಗೆ ಬಂದಮೇಲೆ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಇದು ವಾರಗಟ್ಟಲೆ ಮುಂದುವರಿಯುತ್ತದೆ.  ದಯವಿಟ್ಟು ಪರಿಹಾರ ತಿಳಿಸಿ.

ಕೆಲವು ಸಮಯದಿಂದ ನೀವು ಸಮಾಜಿಕ ಜೀವನದಿಂದ ದೂರ ಉಳಿದಿದ್ದಿರಿ. ಇದರಿಂದ ಮತ್ತೆ ಸಮಾಜದ ಜೊತೆ ಬೆರೆಯಲು ನಿಮಗೆ ಕಷ್ಟವಾಗುತ್ತಿದೆ. ಸ್ವಲ್ಪ ಸಮಯ ಕೊಡಿ; ಎಲ್ಲವೂ ಒಳ್ಳೆಯದಾಗುತ್ತದೆ. ನ್ಯೂಸ್ ಪೇಪರ್ ಓದುವುದು, ಸುತ್ತಲಿನ ಜನರ ಜೊತೆ ಮಾತನಾಡುವುದು ಮಾಡಿ. ಇದರಿಂದ ನೀವು ಅ‍ಪ್‌ಡೇಟ್ ಆಗುತ್ತೀರಾ. ಪ್ರತಿದಿನ ಕನ್ನಡಿ ಮುಂದೆ ನಿಂತು ಏನಾದರೂ ಓದಿ. ಇದರಿಂದ ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತದೆ. ಕೆಲಸದ ಮೇಲೆ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ಆಗ ಯಾರು ಕೂಡ ನಿಮ್ಮನ್ನು ದೂಷಿಸಲು ಸಾಧ್ಯವಾಗದು. ಹೊಸ ಸ್ನೇಹಿತರನ್ನು ಸಂಪಾದಿಸಿ. ಅವರು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸಲು ಸಹಾಯ ಮಾಡುತ್ತಾರೆ. ಚಿಂತಿಸಬೇಡಿ, ಕಾಲವೇ ಎಲ್ಲವನ್ನು ಸರಿಪಡಿಸುತ್ತದೆ.

* ನನ್ನ ಹೆಸರು ಲಕ್ಷ್ಮಿ, 26 ವರ್ಷ. ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದು, ಈಗ ಕೆಲಸ ಬಿಟ್ಟಿದ್ದೇನೆ. ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ; ಅವರು ಕೂಡ ನನ್ನನ್ನು ಪ್ರೀತಿಸುತ್ತಿದ್ದಾರೆ. ಅವರು ಪೊಲೀಸ್‌. ಅವರ ಮನೆಯಲ್ಲಿ ನಮ್ಮ ಮದುವೆಗೆ ಒಪ್ಪಿಲ್ಲ. ಆದರೆ ಅವರು ನನ್ನ ಬಳಿ ತುಂಬ ಆತ್ಮೀಯವಾಗಿದ್ದರು. ನಮ್ಮಿಬ್ಬರ ನಡುವೆ ಬಾಂಧವ್ಯ ಚೆನ್ನಾಗಿತ್ತು. ಅವರು ತುಂಬಾ ಸಾಧನೆ ಮಾಡಬೇಕು ಎಂದು ಕನಸು ಕಾಣುವವರು. ಆದರೆ ಮನೆಯಲ್ಲಿ ಒಪ್ಪಿಲ್ಲ ಎನ್ನುವ ಕಾರಣಕ್ಕೆ, ನಾನು ಅವರಿಗೆ ಸೂಕ್ತವಲ್ಲ ಎಂದು ಹೇಳಿ ದೂರವಾದರು. ನನಗೆ ಈಗಲೂ ಅವರು ಒಳ್ಳೆಯವರು ಎಂದೆನಿಸುತ್ತದೆ. ಮನಸ್ಸು ಸರಿಯಿಲ್ಲ. ಓದುವುದಕ್ಕು ಆಗುತ್ತಿಲ್ಲ. ಎಲ್ಲರ ನಂಬಿಕೆ ಕಳೆದುಕೊಂಡೆ ಎಂಬ ಕೊರಗು ನನಗೆ. ಆದರೆ ನನಗೆ ಸಾಧನೆ ಮಾಡಬೇಕು ಎಂದು ತುಂಬ ಆಸೆಯಿದೆ. ನನಗೆ ಸಲಹೆ ನೀಡಿ.

ನೀವು ಒಬ್ಬರನ್ನು ಪ್ರೀತಿಸುತ್ತಿದ್ದಾಗ ಅವರನ್ನು ಅರ್ಥಮಾಡಿಕೊಳ್ಳವುದು ತುಂಬ ಮುಖ್ಯ. ಹಾಗಾಗಿ ಈಗ ನೀವು ಅವರ ನಿರ್ಧಾರವನ್ನು ಒ‍ಪ್ಪಿಕೊಂಡಿದ್ದೀರಿ. ಮತ್ತೆ ಹಿಂದೆ ತಿರುಗಿ ನೋಡಬೇಡಿ. ತನ್ನ ಸ್ವಂತ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳಲಾಗದ ವ್ಯಕ್ತಿಯನ್ನು ಮದುವೆಯಾಗದಿರುವುದೇ ಒಳ್ಳೆಯದು. ಅದನ್ನು ಒಪ್ಪಿಕೊಂಡು ಮುಂದೆ ಸಾಗಿ.

ಜೀವನದಲ್ಲಿ ತುಂಬ ಅವಕಾಶಗಳು ಬರುತ್ತವೆ. ಒಂದು ಬಾಗಿಲು ಮುಚ್ಚಿತು ಎಂದರೆ ಇನ್ನೊಂದು ಬಾ‌ಗಿಲು ನಮಗಾಗಿ ತೆರೆದಿರುತ್ತದೆ. ಆದ್ದರಿಂದ ಭೂತಕಾಲದ ಬಗ್ಗೆಯೇ ಚಿಂತಿಸುತ್ತಿರಬೇಡಿ. ಅದನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗುವುದು ಉತ್ತಮ. ನಿಮ್ಮನ್ನು ನೀವು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇದರಿಂದ ಕೆಟ್ಟ ಯೋಚನೆಗಳು ನಿಮ್ಮನ್ನು ಏನು ಮಾಡಲು ಸಾಧ್ಯವಾಗುವುದಿಲ್ಲ. ಸ್ನೇಹಿತರು ಹಾಗೂ ಕುಟುಂಬದವರ ಸಹಾಯವನ್ನು ಪಡೆದುಕೊಳ್ಳಿ. ನಿಮ್ಮ ಯೋಚನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಜೀವನ ಸುಂದರವಾಗಿದೆ. ಅದರೊಂದಿಗೆ ಜೀವಿಸಿ.

* ನನಗೆ 22 ವರ್ಷ. ನಾನು ದಾವಣಗೆರೆಯವನು. ನಾನು ಬಿ.ಕಾಂ. ಓದಿದ್ದು, ಪೂರ್ತಿ ಮಾಡಲಾಗಲಿಲ್ಲ. ನಮ್ಮದು ಅಂಗಡಿ ಇದೆ. ನನಗೆ ಬೇಕಾಗಿರುವುದು ಎಲ್ಲವೂ ಇದೆ. ಆದರೆ ನನಗೆ ಏನೋ ಕಳೆದುಕೊಂಡಿದ್ದೀನಿ – ಅನ್ನುವ ಅನುಭವದ ಜೊತೆಗೆ ದುಃಖವಾಗುತ್ತದೆ. ಈಗ ನಮ್ಮ ಆಟೋಮೊಬೈಲ್ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನ್ನ ಮೇಲೆ ನನಗೇ ಸಿಟ್ಟು. ಅಲ್ಲದೇ ಎಲ್ಲರ ಮೇಲೂ ಆಗಾಗ ರೇಗಾಡುತ್ತ ಇರುತ್ತೀನಿ. ಜಾಸ್ತಿ ಮಾತಾಡುತ್ತೇವೆ – ಅಂತ ಅಮ್ಮ ಹೇಳುತ್ತಿರುತ್ತಾರೆ. ದಯವಿಟ್ಟು ನನಗೆ ಸಲಹೆ ನೀಡಿ.

ಮೊದಲು ನೀವು ಬಿ.ಕಾಂ. ಡಿಗ್ರಿಯನ್ನು ಮುಗಿಸಿ. ಅದು ನಿಮ್ಮ ಮೊದಲ ಆಧ್ಯತೆಯಾಗಿರಬೇಕು. ಡಿಗ್ರಿ ಮುಗಿಸಿದ ಮೇಲೆ ನಿಮಗೆ ಮುಂದಿನ ಓದಿನ ಮೇಲೆ ಆಸಕ್ತಿ ಹುಟ್ಟಬಹುದು ಮತ್ತು ನೀವು ಸ್ನಾತಕೋತ್ತರ ಪದವಿಯನ್ನೂ ಪಡೆಯಬಹುದು. ಅದು ನಿಮಲ್ಲಿ ಆತ್ಮವಿಶ್ವಾಸ ಹಾಗೂ ಆತ್ಮಗೌರವವನ್ನು ಹೆಚ್ಚಿಸಬಹುದು. ಕೆಲವೊಮ್ಮೆ ನಮ್ಮ ಬಳಿ ಜೀವನದಲ್ಲಿ ಎಲ್ಲವೂ ಇದ್ದರು ಏನೋ ಕೊರತೆ ಇದೆ ಎಂದು ಅನ್ನಿಸಬಹುದು. ‘ನನ್ನಿಂದ ಏನು ಮಾಡಲು ಸಾಧ್ಯವಾಗಿಲ್ಲ’ ಎಂಬ ಅಪರಾಧಿ ಭಾವನೆಯಿಂದ ಹಾಗೆ ಅನ್ನಿಸಬಹುದು. ಹಾಗಾಗಿ ಉತ್ತಮ ಶಿಕ್ಷಣ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಅಂಗಡಿ ಬಾಗಿಲು ನಿಮಗಾಗಿ ಎಂದಿಗೂ ತೆರೆದಿರುತ್ತದೆ. ಇದರಿಂದ ನಿಮ್ಮ ಅಂಗಡಿಯಲ್ಲಿ ಹೊಸ ಬದಲಾವಣೆಗಳನ್ನು ತರಬಹುದು.

* ನಮ್ಮ ಮನೆಯಲ್ಲಿ ಯಾರೂ ಯಾರ ಮಾತನ್ನೂ ಕೇಳುತ್ತಿಲ್ಲ. ಯಾರನ್ನು ಕಂಡರೆ ಯಾರಿಗೂ ಆಗುವುದಿಲ್ಲ. ನೆಮ್ಮದಿ ಇಲ್ಲ. ಅಣ್ಣನ ಹೆಂಡತಿ ಎಲ್ಲರನ್ನು ತನ್ನ ಹಿಡಿತಕ್ಕೆ ತಂದುಕೊಂಡಿದ್ದಾಳೆ. ಮನೆಯಲ್ಲಿ ಯಾರಿಗೂ ಖುಷಿಯಿಲ್ಲ. ನಮಗೆ ಖುಷಿಯ ದಿನಗಳು ಸಿಗುತ್ತವೆಯೆ? ನಾವು ನೆಮ್ಮದಿ ಕಾಣುತ್ತೇವೆಯೆ?

ಒಂದು ಕುಟುಂಬದಲ್ಲಿ ಸಂಬಂಧಗಳನ್ನು ನಿರ್ವಹಣೆ ಮಾಡುವುದು ಒಂದು ಕಲೆ. ಇದರಲ್ಲಿ ಕುಟುಂಬದ ಎಲ್ಲರ ಪಾತ್ರವೂ ಮುಖ್ಯ. ಇದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಒಬ್ಬರ ಮೇಲೆ ಇನ್ನೋಬ್ಬರು ಏನನ್ನೋ ನಿರೀಕ್ಷೆ ಮಾಡುವುದರಿಂದ ಇಂತಹ ಸಂಘರ್ಷಗಳು ಹುಟ್ಟಿಕೊಳ್ಳುತ್ತವೆ. ಒಬ್ಬರ ಮೇಲೆ ಒಬ್ಬರು ನಂಬಿಕೆ ಇಲ್ಲದಿದ್ದರೆ, ಕುಟುಂಬದವರ ನಡುವೆ ಆರೋಗ್ಯಕರ ಸಂವಹನ ಇಲ್ಲದಿದ್ದರೆ ಈ ರೀತಿ ಆಗುತ್ತದೆ. ಕುಟುಂಬದ ಪ್ರತಿಯೊಬ್ಬರು ಕೌಟುಂಬಿಕ ಬಾಂಧವ್ಯವನ್ನು ವೃದ್ಧಿಸಿಕೊಳ್ಳಲು ಕೈ ಜೋಡಿಸಬೇಕು. ಹೀಗೆ ಮಾಡುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ. ಸಣ್ಣಪುಟ್ಟ ಪಿಕ್‌ನಿಕ್‌ಗಳನ್ನು ಆಯೋಜಿಸಿ, ಇದರಿಂದ ಕುಟುಂಬದವರೆಲ್ಲರೂ ಒಟ್ಟಿಗೆ ಸೇರಲು ಸಾಧ್ಯ. ಇದು ಕುಟುಂಬ ಸದಸ್ಯರ ನಡುವೆ ಬಾಂಧವ್ಯವನ್ನು ವೃದ್ಧಿಸಲು ಸಹಾಯವಾಗುತ್ತದೆ. ಮೊದಲು ನೀವು ಇದರ ನೇತೃತ್ವ ವಹಿಸಿಕೊಳ್ಳಿ. ಅನಂತರ ನಿಧಾನವಾಗಿ ನಿಮ್ಮ ಕುಟುಂಬದವರನ್ನು ಸೇರಿಸಿಕೊಳ್ಳಿ. ಖುಷಿ ಖುಷಿಯಾಗಿರಿ. ಆಗ ಎಲ್ಲ ಕೆಲಸಗಳು ಸಾಂಗವಾಗಿ ನಡೆಯುತ್ತವೆ.

*–ಸುನೀತಾ ರಾವ್‌,

ಆಪ್ತ ಸಮಾಲೋಚಕಿ

ಪ್ರತಿಕ್ರಿಯಿಸಿ (+)