ಶನಿವಾರ, ಡಿಸೆಂಬರ್ 7, 2019
16 °C

ಬಸಿರಿನ ಉಸಿರು...

Published:
Updated:
ಬಸಿರಿನ ಉಸಿರು...

ಹಸಿರು ಬಳೆ, ಹಸಿರು ಸೀರೆ, ಮುಡಿ ತುಂಬ ಮಲ್ಲಿಗೆ.

ಉಡಿ ತುಂಬಿದ ಸಂಭ್ರಮದ ದಿನಗಳು. ನವಮಾಸ ತುಂಬಿತ್ತು. ಮನೆಗೆ ಮಗು ಬರುವ ಕಾತುರ. ಮೊದಲ ಮಳೆ ಧರೆಯ ಸೇರುವ ಸಂಭ್ರಮ. ಅದಕ್ಕೆಂದೇ ಬಣ್ಣ ಬಣ್ಣದ ಆಟಿಕೆ, ತೊಟ್ಟಿಲು, ಉಲ್ಲನ್‌ ಸಾಕ್ಸ್‌ಗಳು, ಗುಲಾಬಿಬಣ್ಣದ ಬಟ್ಟೆಗಳು. ಮನೆಯನ್ನು ಎಷ್ಟು ಶುಚಿಯಾಗಿಟ್ಟರೂ ಸಾಲದು. ಕೆಲಸದವಳ ಮೇಲೆ ಒಂದೇ ಸಮನೆ ಬೈಗುಳದ ಸುರಿಮಳೆ. ಬರುವ ಮನೆಬೆಳಕನ್ನು ಸ್ವಾಗತಿಸಲು ದೇವರ ಮುಂದೆ ದೀಪಗಳ ಸಾಲು. ಹೂ–ಹಣ್ಣಿನ ಹರಕೆ. ಹೊಸ ಮಳೆಯ ಸ್ಪರ್ಶವಾದಾಗ ಮಣ್ಣು ಸಡಿಲಗೊಂಡು ಭೂಮಿತಾಯಿ ಹಸಿರನ್ನುಟ್ಟಂತೆ ನನ್ನ ಕನಸು ಮಡಿಲು ತುಂಬುವ ತವಕ.

ನವಮಾಸಗಳಲ್ಲಿ ಕರಿದ ತಿಂಡಿಗಳಿಂದ ದೂರವಿದ್ದು ಹಣ್ಣು–ಹಂಪಲು ತಿಂದು ಆರೋಗ್ಯವಾಗಿದ್ದೆ. ಅದೇನೋ ಒಂದು ರಾತ್ರಿ ಹೊರಗಡೆ ತುಂಬ ಮಳೆ. ಸುಯ್ಯೆನ್ನುವ ತಂಗಾಳಿ. ನಾಯಿ ಬೊಗಳುವ ಸದ್ದು. ಇದ್ದಕ್ಕಿದ್ದಂತೆ ‘ಅಮ್ಮಾ’ ಎಂದು ಕರೆದ ಸದ್ದು. ‘ಯಾರು? ಯಾರು?’ ಎಂದು ಕೇಳಿದೆ. ‘ಅಮ್ಮಾ! ಈ ಭೂಮಿಗೆ ನಾನು ಬರಲೇಬೇಕೇನಮ್ಮ?’ ನನ್ನ ಬಸುರಿನ ಧ್ವನಿ!! ನಾನು ‘ಏಕೆ ಕಂದ ಹೀಗೆ ಕೇಳುತ್ತಿರುವೆ?’ ಎಂದೆ. ‘ಪ್ರಪಂಚವನ್ನು ನೋಡುವ ಆಸೆಯೇನೋ ಇದೆ ನನಗೆ. ಆದರೆ...!’ ‘ಆದರೆ ಏನು ಕಂದ’ ಎಂದೆ.

‘ನಿನ್ನ ಮಡಿಲಲ್ಲಿ ಎಷ್ಟು ದಿನ ಆಟವಾಡಿಕೊಂಡಿರಲಿ? ಒಂದು ದಿನ ದೊಡ್ಡವಳಾಗಲೇ ಬೇಕಲ್ಲ. ಈ ಕೆಟ್ಟ ಸಮಾಜದಲ್ಲಿ ನಾನು ಬೆಳೆಯುವುದಾದರೂ ಹೇಗೆ? ಕಾಲು ತುಂಬ ಗೆಜ್ಜೆ ಧರಿಸಿ ಅಂಗಳದಲ್ಲಿ ಓಡಾಡುವಂತೆಯೂ ಇಲ್ಲ. ಅಂಕಲ್‌ ಚಾಕ್ಲೇಟ್‌ ಕೊಟ್ಟರೆಂದು ತಿನ್ನುವಂತೆಯೂ ಇಲ್ಲ. ಪಕ್ಕದ ಮನೆಯವರ ಬೆನ್ನೇರಿ ಕೂಸುಮರಿ ಮಾಡಿಸಿಕೊಳ್ಳುವಂತೆಯೂ ಇಲ್ಲ. ದೊಡ್ಡವಳಾದರಂತೂ ಮುಗಿದೇ ಹೋಯಿತು. ಯಾರ ಹತ್ತಿರವೂ ಮಾತನಾಡುವಂತೆಯೂ ಇಲ್ಲ. ಬೆರೆಯುವಂತೆಯೂ ಇಲ್ಲ. ವರದಕ್ಷಿಣೆ, ದೌರ್ಜನ್ಯ, ಅತ್ಯಾಚಾರ ದಿನೇ ದಿನೇ ಹೆಚ್ಚುತ್ತಿದೆ.

ದುಡ್ಡಿನಾಸೆಗೆ ಭವಿಷ್ಯ ತಿದ್ದುವ ಜ್ಯೋತಿಷಿಗಳ ಸಾಲು. ವಿಷಪೂರಿತ ಆಹಾರ. ಕೊಳಕು ಮನಸಿನ ಜನರು. ಕೆಟ್ಟ ಪರಿಸರ, ರೋಗ–ರುಜಿನಗಳು, ಭೂಮಿಗೆ ನಾ ಬಂದಾಗ ನೀನೇ ಸ್ವಾಗತಿಸುತ್ತೀಯೆಂಬ ಭರವಸೆಯು ನನಗಿಲ್ಲ. ಸೂಲಗಿತ್ತಿಯರು ನನ್ನ ಮುಗಿಸಬಹುದು. ಕಳ್ಳ–ಕಾಕರೂ ನನ್ನನ್ನು ದೋಚಬಹುದು.

ನನಗಾಗಿ ಯಾವ ರಕ್ಷಣೆಯೂ ಇಲ್ಲ. ಮಡಿಲಲ್ಲಿ ಮಗುವಾಗುವ ಅವಕಾಶ–ಅದೃಷ್ಟ ಎಲ್ಲರಿಗೂ ಎಲ್ಲಿ ಉಂಟಮ್ಮಾ? ಒಂದು ಗಿಡವಾಗಿ ಹುಟ್ಟಿದರೂ ಸರಿಯೇ? ನೂರಾರು ಜನರಿಗೆ ನೆರಳ ಕೊಡಬಲ್ಲೆ. ಹೆಣ್ಣಾಗಿ ಹುಟ್ಟಿ ನಿನ್ನ ಕಣ್ಣೀರ ನೋಡಲಾರೆ. ಹೆಣ್ಣಾಗಿ ಹುಟ್ಟುವುದಕ್ಕಿಂತ ಮಣ್ಣಾಗುವುದು ಮೇಲು.’

ಮೊಗ್ಗೆ ಮಲ್ಲಿಗೆ ಬಿರಿಯುವಾ ಗಳಿಗೆ. ಹಸಿರುಗಿಡದಲ್ಲಿ ಮೊಗ್ಗೆ ಬಿರಿಯುತ್ತಿದ್ದರೆ, ಅದರ ಗಂಧ ಮನೆಯೆಲ್ಲಾ ಹಬ್ಬಿದದರೆ... ಮೈ ಮನವೆಲ್ಲಾ ಪುಳಕಿತ ಭಾವ; ಹೌದು, ಅದರ ಜೀವನ ಒಂದೇ ದಿನ. ಆ ಶ್ವೇತಸುಂದರಿ ಅರಳಿದಾಗಲೇ ಧನ್ಯತಾ ಭಾವ. ಈ ಪರಿಮಳದ ಸುಂದರಿಯೂ ದೇವರಿನ ಮುಡಿಗೂ ಏರಬಹುದು. ಹಸುವಿನ ಬಾಯಿಗೂ ಸಿಗಬಹುದು. ಕೊಳೆತು ಗೊಬ್ಬರವೂ ಆಗಬಹುದು. ಭಾವನೆಯಿಲ್ಲದೆ, ಭಾವನೆ ಹುಟ್ಟಿಸುವ ಭಾವಜಗತ್ತಿನ ಬಂಧುಗಳವು. ಬಾರದ ಲೋಕಕ್ಕೆ ಹೋಗಿಬಿಡುವ ಭವದ ಮೊಗ್ಗುಗಳು ನಮ್ಮ ಅಸಹಾಯಕತೆಗೆ, ಕಮರಿ ಹೋಗುತ್ತಿವೆ.

‘ಈ ಕೆಟ್ಟ ಪ್ರಪಂಚಕ್ಕೆ ನಾನು ಬರಲೇಬೇಕೇನಮ್ಮಾ? ನಿನ್ನ ಮಡಿಲಲ್ಲೇ ಚಿರನಿದ್ರೆಗೆ ಜಾರಬಾರದೇಕೆ? ಇಲ್ಲಿ ಯಾವ ಭಯವಿಲ್ಲ; ನೆಮ್ಮದಿಯ ನೆಲೆ, ಈ ನಿನ್ನ ಬಸಿರು. ಧ್ವನಿ ಸಣ್ಣದಾಯಿತು. ಮೈ ಬೆವರು ಅಲ್ಲೇ ಕುಸಿದೆ. ಅಂಬುಲೆನ್ಸ್‌ ಹೊಡೆದುಕೊಳ್ಳುವ ಶಬ್ದ ಕೇಳಿ ಬರುತ್ತಿತ್ತು. ದೇಹ ತಣ್ಣಗಾದ ಅನುಭವ.

–ಸೌಮ್ಯ ಜಂಬೆ

ಪ್ರತಿಕ್ರಿಯಿಸಿ (+)