ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಆರೋಗ್ಯ

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

ಇದೀಗ ಮಳೆಗಾಲ. ಬೇಸಿಗೆಯ ದಿನಗಳಲ್ಲಿ ಕಡು ಬಿಸಿಲಿನ ಧಗೆಗೆ ದೇಹ ನೊಂದು ಬೆಂದಿರುತ್ತದೆ. ಹಾಗಾಗಿ ದೇಹದ ರೋಗನಿರೋಧಕ ಶಕ್ತಿಯೂ ಕುಸಿದಿರುತ್ತದೆ. ಜ್ವರ, ಶೀತದಂತಹ ಕಾಯಿಲೆಗಳ ಸೋಂಕು ತಗಲುವ ಸಂಭವವಿದೆ. ಹಾಗಾಗಿ ಎಚ್ಚರಿಕೆ ಅಗತ್ಯ. ನೆಲದ ಮಣ್ಣು ಮಳೆಯ ನೀರಿನ ದೆಸೆಯಿಂದ ಹುಳಿಯಾಗುತ್ತದೆ.

ಆ ನೆಲದ ಮೇಲೆ ಹರಿದ ನೀರು ಸಹಜವಾಗಿ ಹುಳಿಯ ರಸವನ್ನು ಹೊಂದುತ್ತದೆ. ಅಂತಹ ನೀರು ಹಾಗೆಯೇ ಕುಡಿದರೆ ಕಾಯಿಲೆ ಖಂಡಿತ. ಕುದಿಸಿದ ನೀರು ಕುಡಿದರೆ ಕ್ಷೇಮ. ಇಡೀ ಕೇರಳದ ಉದ್ದಗಲಕ್ಕೆ ಬಹುತೇಕ ಎಲ್ಲ ಋತುಗಳಲ್ಲಿ ಎಲ್ಲ ಹೋಟೆಲುಗಳಲ್ಲಿ ಬಿಸಿನೀರು ಕೊಡುವ ಗುಟ್ಟು ಏನೆಂದರೆ ಗಿರಾಕಿಗಳ ಆರೋಗ್ಯರಕ್ಷಣೆ.

ನಾವು ಉಸಿರಾಡುವ ಗಾಳಿಯಲ್ಲಿ ಸಹಜವಾಗಿ ತೇವಾಂಶದ ಪ್ರಮಾಣ ಅಧಿಕವಾಗಿದೆ. ಆದ್ದರಿಂದ ನೆಗಡಿ, ಮೂಗುಕಟ್ಟುವಿಕೆ, ತಲೆನೋವು, ಉಬ್ಬಸದಂತಹ ಬೇನೆಗಳಿಗೆ ಆಸ್ಪದವಿದೆ. ಸದಾ ಬಿಸಿನೀರು ಕುಡಿದರೆ ಅಂತಹ ಬಾಧೆಗಳಿಗೆ ಕಡಿವಾಣ. ಹಸಿಶುಂಠಿ ಮತ್ತು ಕಾಳು ಮೆಣಸುಪುಡಿಯನ್ನು ಹಾಕಿದ ನೀರು ಕುಡಿದರೆ ಅಂತಹ ಶೀತಜನಿತ ಕಾಯಿಲೆಗಳಿಗೆ ಪರಿಹಾರವಿದೆ.

ದೇಹದಲ್ಲಿ ವಾತದೋಷವು ಹೆಚ್ಚುವ ಶ್ರಾಯಆಷಾಢ ಮತ್ತು ಶ್ರಾವಣ. ಆದ್ದರಿಂದ ದೇಹಕ್ಕೆ ದಣಿವಾಗುವ ಅತಿ ವ್ಯಾಯಾಮದಿಂದ ದೂರವಿರುವುದು ಲೇಸು. ಆಷಾಢಮಾಸದಲ್ಲಿ ಸ್ತ್ರೀಪ್ರಸಂಗದಿಂದ ದೂರ ಇರುವ ಲೋಕರೂಢಿಯ ರಿವಾಜಿನ ಹಿಂದೆ ಅಂಥದ್ದೇ ಅರೋಗ್ಯಸೂತ್ರವಿದೆ. ಹಗಲಿನ ನಿದ್ದೆ ಈ ಋತುವಿಗೆ ವರ್ಜ್ಯ. ಉಕ್ಕುವ ನದಿಯಲ್ಲಿ ಹರಿದು ಬರುವ ಹೊಸ ನೀರು ಹಾಗೆಯೇ ಬಳಸಬಾರದು. ಉದರಾಗ್ನಿ ಅಷ್ಟು ತೀಕ್ಷ್ಣ ಇರದು. ಹಾಗಾಗಿ ಹಿಟ್ಟು ಕದಡಿದ ದ್ರವ ಆಹಾರದಂತಹ ವಸ್ತುಗಳನ್ನು ಸೇವಿಸಿದರೆ ಅದು ಜೀರ್ಣವಾಗದು. ಜೇನನ್ನು ಬಳಸುವುದು ಅತ್ಯಂತ ಸೂಕ್ತ.

ಟೋಪಚಾರದಲ್ಲಿ ಹುಳಿ, ಉಪ್ಪು ಮತ್ತು ಅಲ್ಪಶಃ ಮಧುರ ರಸಕ್ಕೆ ಒತ್ತು ನೀಡಲು ಅಡ್ಡಿ ಇಲ್ಲ. ಚಾತುರ್ಮಾಸ್ಯದ ಅಡುಗೆ ಮತ್ತು ಊಟದ ಹಿಂದೆ ಇಂತಹದೆ ಆರೋಗ್ಯಸೂತ್ರಗಳಿವೆ. ಶಾಕ, ದ್ವಿದಳಧಾನ್ಯಗಳು, ಹಾಲು ಮತ್ತು ಮೊಸರಿನಂಥ ನಾಲ್ಕು ಬಗೆಯ ಆಹಾರಸಾಮಗ್ರಿಗಳಿಗೆ ನಿಷೇಧ ಹೇರಿರುವುದರ ಹಿಂದೆ ಮಳೆಗಾಲದ ಕುತ್ತುಗಳಿಂದ ಪಾರಾಗುವ ಜಾಣ್ಮೆ ಇದೆ. ಜಾಠರಾಗ್ನಿಯನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಹೀಗೆ ಮಾಡುವುದರಿಂದ ವ್ಯಾಧಿಗಳಿಂದ ದೂರವಿರಲು ಸಾಧ್ಯ.

ಪಡವಲಕಾಯಿ, ಬೆಂಡೆಕಾಯಿ, ಸೋರೇಕಾಯಿ, ಸುವರ್ಣಗಡ್ಡೆ ಮತ್ತು ಬೂದುಗುಂಬಳಕಾಯಿಯನ್ನು ಮಾತ್ರ ಬಳಸುವುದರಿಂದ ಹಿತವಿದೆ. ಉಳಿದ ತರಕಾರಿಗಳಿಂದ ವಾತದೋಷ ಹೆಚ್ಚುತ್ತದೆ. ಬಗೆಬಗೆಯ ನೋವುಗಳಿಗೆ ಅದು ಹಾದಿ ಮಾಡಿಕೊಡುತ್ತದೆ. ಲಿಂಬೆ, ಮಾದಳಹಣ್ಣು, ಸಿಹಿ ದ್ರಾಕ್ಷಿ, ಮಾವು, ಕೊಬ್ಬರಿ, ತೆಂಗಿನ ಕಾಯಿ, ಬೆಳ್ಳುಳ್ಳಿ, ಜೀರಿಗೆ, ಕಾಳು ಮೆಣಸನ್ನು ಬಳಸುವುದರಿಂದ ಆರೋಗ್ಯದ ರಕ್ಷಣೆಯಾಗುತ್ತದೆ. ಚಾತುರ್ಮಾಸ್ಯದ ಅಡುಗೆಗಳಿಗೆ ಕೆಂಪು ಮೆಣಸನ್ನು ಬಳಸದಿರುವುದರ ಹಿಂದೆ ಇಂಥದ್ದೇ ಆಲೋಚನೆಯಿದೆ.

ತುಪ್ಪದ ಬಳಕೆಗೆ ಒತ್ತು ನೀಡಿರಿ. ಶುಚಿಯಾದ ಹತ್ತಿಯ ಹಾಗೂ ಬೆಚ್ಚನೆಯ ಬಟ್ಟೆಗಳನ್ನು ಧರಿಸಿರಿ. ಬೀಸು ಗಾಳಿಯ ಮತ್ತು ಮಳೆಯ ಹಾಗೂ ಮೋಡದಡಿ ಓಡಾಡದಿರಿ. ತಲೆಯಿಂದ ಪಾದದ ತನಕ ಇಡೀ ಮೈಗೆ ದಿನಾಲೂ ಬಿಸಿ ಎಳ್ಳೆಣ್ಣೆಯನ್ನು ಹಚ್ಚಿರಿ. ಅರೆ ತಾಸು ಬಿಟ್ಟು ಸೀಗೆಯ ಪುಡಿ, ಚಿಗರೆಪುಡಿ, ಕಡಲೆಹಿಟ್ಟಿನಿಂದ ತಲೆ–ಮೈಕೈಗಳನ್ನು ಉಜ್ಜಿ ಜಿಡ್ಡನ್ನು ತೆಗೆಯಿರಿ. ಅದು ಚರ್ಮಾರೋಗ್ಯಕ್ಕೆ ಮಾತ್ರ ಅಲ್ಲ, ದೃಢಕಾಯಕ್ಕೂ ಪೂರಕ. ಇವೆಲ್ಲ ಕಾಯಿಲೆಗಳನ್ನು ತಡೆಯಲು ಸುಲಭ ಉಪಾಯಗಳು.

ಹಳಸಿದ ತಂಗಳು ಆಹಾರಗಳ ಸೇವನೆ ಬೇಡ. ಸುಲಭವಾಗಿ ಪಚನವಾಗದ ದ್ರವ, ಮದ್ಯ, ಗುರುವಾದ ಮಾಂಸಾಹಾರ, ಬಹಳ ಉಪ್ಪು, ಸಬ್ಬಕ್ಕಿ, ದ್ವಿದಳ ಧಾನ್ಯ, ಹುರಿದ ಧಾನ್ಯ, ಸೌತೆಕಾಯಿ, ಸೀಬೆ, ಪನೀರ್, ನೇರಳೆಹಣ್ಣು – ಇಂಥವುಗಳ ಸೇವನೆ ಮಳೆಗಾಲಕ್ಕೆ ಹಿತವಲ್ಲ. ಅತಿಘಾಟಿನ ಅತ್ತರು, ಪರಿಮಳ ರಾಸಾಯನಿಕ, ತೇವದ ಕೋಣೆಯ ವಾಸ, ಒಣಗದ ಬಟ್ಟೆಗಳನ್ನು ಧರಿಸುವುದು, ಅತಿ ವೇಗದ ನಡಿಗೆ, ಫ್ರಿಜ್‌ನಿಂದ ತೆಗೆದು ಹಾಗೆಯೇ ಶೀತಲ ವಸ್ತುಗಳ ಬಳಕೆ, ತಂಪಾದ ಜಲಪಾನ ತರವಲ್ಲ.

ಬೆಚ್ಚಗೆಯ ಕೋಣೆಯಲ್ಲಿ ವಾಸ ಮಾಡುವುದು ಉತ್ತಮ. ಅಕಾಲದ ಬಿಸಿಲಿಗೆ ಕೂಡ ಮೈ ಒಡ್ಡಬಾರದು. ಮಳೆಗಾಲದಲ್ಲಿ ವಾಸ್ತವವಾಗಿ ಬೀಳುವಷ್ಟು ಪ್ರಮಾಣದ ಮಳೆ ಬೀಳಬೇಕು. ಅದು ಬೀಳದೆ ಇದ್ದರೂ ಕೂಡ ಋತುವಿನ ‘ಮಿಥ್ಯಾಯೋಗ’ ಎಂಬ ಉಲ್ಲೇಖ ಶಾಸ್ತ್ರದಲ್ಲಿದೆ. ಅದು ಕೂಡ ರೋಗಕ್ಕೆ ಕಾರಣವೇ. ಅಂಥ ಪ್ರಸಂಗದಲ್ಲೂ ಆಯುರ್ವೇದ ರೀತ್ಯಾ ಮಳೆಗಾಲದ ಆಹಾರ ಮತ್ತು ಆಚಾರಗಳ ಅನುಷ್ಠಾನ ಸೂಕ್ತ ಎಂಬ ಉಲ್ಲೇಖಗಳಿವೆ.

ಮಳೆಗಾಲಕ್ಕೆ ಇರಲಿ ಎಚ್ಚರ
ಮಳೆಗಾಲದಲ್ಲಿ ಹಲವು ರೋಗಗಳು ಕಾಡುವುದುಂಟು. ಸರಿಯಾದ ಪ್ರಮಾಣದಲ್ಲಿ ಮಳೆ ಬಿದ್ದರೆ ಆಗ ಅದನ್ನು ‘ಮಳೆಗಾಲ’ ಎನ್ನಬಹುದು. ಆದರೆ ಮಳೆಗಾಲದಲ್ಲಿ ಮಳೆ ಕಡಿಮೆ ಬಿದ್ದರೂ ಕಾಯಿಲೆಗಳಿಗೆ ಆಹ್ವಾನ ತಪ್ಪದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT