ಮಂಗಳವಾರ, ಡಿಸೆಂಬರ್ 10, 2019
18 °C

ಸ್ಯಾನಿಟರಿ ಪ್ಯಾಡ್‌ ಜಿಎಸ್‌ಟಿ ತೆರಿಗೆ ಬೇಡ

Published:
Updated:
ಸ್ಯಾನಿಟರಿ ಪ್ಯಾಡ್‌ ಜಿಎಸ್‌ಟಿ ತೆರಿಗೆ ಬೇಡ

ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಜಿಎಸ್‌ಟಿ ತೆರಿಗೆ ವಿಧಿಸಿರುವ ಬಗ್ಗೆ ಓದುಗರ ಪ್ರತಿಕ್ರಿಯೆ ಕೇಳಿದ್ದೆವು. ಅತ್ಯುತ್ತಮ ಸ್ಪಂದನ ದೊರಕಿದೆ. ಅವುಗಳನ್ನು ಪ್ರತಿದಿನ ಇಲ್ಲಿ ಪ್ರಕಟಿಸಲಾಗುತ್ತಿದೆ. ಅಂದ ಹಾಗೆ ನಿಮ್ಮ ಪ್ರಕಾರ, ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಶೇ.12 ತೆರಿಗೆ ವಿಧಿಸಿದ್ದು ಸರಿಯೇ? ನಿಮ್ಮ ಅಭಿಪ್ರಾಯವನ್ನು ಬರೆದು, ನಿಮ್ಮ ಭಾವಚಿತ್ರದೊಂದಿಗೆ ನಮಗೆ ಕಳುಹಿಸಿ. ನಮ್ಮ ವಾಟ್ಸಾಪ್‌ ಸಂಖ್ಯೆ: 95133 22931; ಇಮೇಲ್: metropv@prajavani.co.in

ಆ ಮೂರು ದಿನಗಳ ಯಾತನೆ ಅನುಭವಿಸುವ ಹೆಣ್ಣುಮಕ್ಕಳಿಗೆ ಮಾತ್ರ ಗೊತ್ತು. ಈ ಸಮಾಜದಲ್ಲಿ ಮುಟ್ಟಿನ ಕುರಿತು ಕೀಳು ಮನಸ್ಥಿತಿ ಬೆಳೆದಿರುವ ಪರಿಣಾಮವಾಗಿ ಆ ಕುರಿತು ಮೊದಲೇ ಅಸಡ್ಡೆಗೊಳಗಾದ ಹೆಣ್ಣುಮಕ್ಕಳು ಮನಬಿಚ್ಚಿ ಮಾತನಾಡದ ಸ್ಥಿತಿ ಇಂದಿಗೂ ಇದೆ. ಇದೇ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿರುವುದು ಗ್ರಾಮೀಣ ಭಾರತದ ವಾಸ್ತವ. ಇಂತಹ ವಿಷಯಗಳನ್ನು ಸರಕಾರಗಳು ತಾಯ್ತನದ ದೃಷ್ಟಿಯಿಂದ ನೋಡಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಆ ದಿನಗಳಲ್ಲಿ ಮಹಿಳೆಯರಿಗೆ ಅಗತ್ಯವಾದ ಸ್ಯಾನಿಟರಿ ನ್ಯಾಪಕಿನ್ ಮೇಲೆ ಶೇ 12 ಜಿ.ಎಸ್.ಟಿ ವಿಧಿಸಿರುವುದು ಖಂಡನೀಯ. ಕೂಡಲೇ ಸರಕಾರ ಈ ತೆರಿಗೆಯನ್ನು ಹಿಂಪಡೆದು ಉತ್ತಮ ಗುಣಮಟ್ಟದ ಪರಿಸರಸ್ನೇಹಿ ಸ್ಯಾನಿಟರಿ ನ್ಯಾಪಕಿನ್‌ಗಳನ್ನು ಉಚಿತವಾಗಿ ವಿತರಿಸಲು ಮುಂದಾಗಬೇಕು.

–ರೇಣುಕಾ ಕಹಾರ

ಕಾಗಜ್ ಫೌಂಡೇಶನ್, ಎಚ್.ಎಸ್.ಆರ್ ಲೇಔಟ್‌

*

ಮೇಲ್ವರ್ಗದವರು ಟ್ಯಾಂಪೂನ್ ಬಳಸಲಿ, ಕೆಳವರ್ಗದವರು ಬಟ್ಟೆ ಬಳಸಲಿ ಎಂಬ ದ್ವಿಮುಖ ಧೋರಣೆ ಏನಾದರೂ ಸರ್ಕಾರಕ್ಕಿದೆಯೇ? ತಮ್ಮ ಮಾಸಿಕ ಋತುಸ್ರಾವವನ್ನು ನಿಭಾಯಿಸಲೂ ಹೆಣ್ಣುಮಕ್ಕಳು ಸರ್ಕಾರವನ್ನು ಗೋಗರೆಯಬೇಕಾದ ಪರಿಸ್ಥಿತಿಯನ್ನು ತಂದಿಟ್ಟ ಸರ್ಕಾರದ ‘ಸ್ವಚ್ಛ ಭಾರತ’ ಅಭಿಯಾನದ ಪೊಳ್ಳುತನವನ್ನು ಈ ಜಿಎಸ್‍ಟಿ ಬಯಲಿಗೆಳೆದಿದೆ.

–ಡಾ. ಸುಧಾ. ಕೆ., ಮಲ್ಲೇಶ್ವರ

*

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳಿಗೆ ಕೋಟಿಗಟ್ಟಲೆ ಮೀಸಲಿಡುವುದರ ಜೊತೆಗೆ ಎಲ್ಲ ವರ್ಗದ ಹೆಣ್ಣುಮಕ್ಕಳ ಅತ್ಯವಶ್ಯಕ ವಸ್ತುವಾದ ಈ ನ್ಯಾಪ್‌ಕಿನ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದಿರುವುದನ್ನು ಕಿತ್ತು ಹಾಕಬೇಕಿದೆ. ಅಷ್ಟೇ ಅಲ್ಲ ನ್ಯಾಪ್‌ಕಿನ್‌ಗಳನ್ನು ಎಲ್ಲ ಆಸ್ಪತ್ರೆ ಹಾಗೂ ಮೆಡಿಕಲ್‌ ಶಾಪ್‌ಗಳಲ್ಲಿ ಉಚಿತವಾಗಿ ವಿತರಿಸಿದರೆ ಸರ್ಕಾರದ ಬೊಕ್ಕಸಕ್ಕೆ ಯಾವ ನಷ್ಟವೂ ಇರುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಸರ್ಕಾರದ ಹಲವು ಕೋಟಿ ರೂಪಾಯಿಗಳಲ್ಲಿ ಸ್ವಲ್ಪ ಭಾಗ ಇಂತಹ ಒಳ್ಳೆಯ ಕಾರ್ಯಕ್ಕೆ ಬಳಕೆಯಾದರೆ ದೇಶದ ಎಲ್ಲ ಹೆಣ್ಣು ಮಕ್ಕಳೂ ಸಂತೋಷಪಡುತ್ತಾರೆ.

–ಎನ್‌.ಡಿ ಸತೀಶ್‌. ಎನ್‌.ಆರ್‌.ಕಾಲೋನಿ

*

ನಮ್ಮ ದೇಶದ ಹೆಣ್ಣುಮಕ್ಕಳ ಪರವಾಗಿ ಸ್ಯಾನಿಟರಿ ನ್ಶಾಪ್‌ಕಿನ್‌ ಮೇಲಿನ ತೆರಿಗೆಯನ್ನು ವಿರೋಧಿಸುತ್ತೇನೆ. ಋತುಚಕ್ರ ಸಮಯದಲ್ಲಿ ಮಹಿಳೆಯರು ಅನುಭವಿಸುವ ಸಂಕಟವನ್ನು ಹೇಳತೀರದು. ಇಂತಹ ಸಮಯದಲ್ಲಿ ಅವರ ಆರೋಗ್ಶ ಕಾಪಾಡಿಕೊಳ್ಳುವುದೂ ಮುಖ್ಯ. ಈಗೀಗ 9ರಿಂದ 11 ವರ್ಷದ, ಏನೂ ತಿಳಿಯದ ಮಕ್ಕಳು ಕೂಡ ಋತುಮತಿಯರಾಗುತ್ತಿದ್ದಾರೆ. ಅವರಿಗೆ ಸ್ಶಾನಿಟರಿ ನ್ಶಾಪ್‌ಕಿನ್‌ ಉತ್ತಮ. ಅದ್ದರಿಂದ ಸ್ಶಾನಿಟರಿ ನ್ಶಾಪ್‌ಕಿನ್‌ ಮೇಲಿನ ತೆರಿಗೆಯನ್ನು ಈ ದೇಶದ ಪ್ರಜೆಗಳಾದ ನಾವೆಲ್ಲರು ವಿರೋಧಿಸೋಣ.

–ಅಶೋಕ, ನೆಲಮಂಗಲ

*

ಮೊದಲು ವ್ಯಾಟ್ ಇದ್ದು ಈಗ ಜಿಎಸ್ಟಿ ಅಡಿಯಲ್ಲಿ ನ್ಯಾಪ್‌ಕಿನ್‌ಗಳ ಮೇಲಿನ ತೆರಿಗೆ ಕಡಿಮೆಯಾಗಿದೆ. ಆದರೆ ಇದು ಐಷಾರಾಮಿ ವಸ್ತುವಲ್ಲ, ಜತೆಗೆ ಮಹಿಳೆಯರಿಗೆ ಅಗತ್ಯ ವಸ್ತುವಾಗಿದೆ. ಕೇಂದ್ರ ಸರ್ಕಾರ ಮನಸ್ಸು ಮಾಡಿ ನ್ಯಾಪ್‌ಕಿನ್ ಮೇಲೆ ಕನಿಷ್ಠ ತೆರಿಗೆ ವಿಧಿಸಿದರೆ ಎಲ್ಲ ಬಡ ಮಹಿಳೆಯರಿಗೂ ಅನುಕೂಲವಾಗುತ್ತದೆ.

–ಕುಮಾರಿ ಭುವನ, ದಯಾನಂದ ಸಾಗರ್ ಕಾಲೇಜು

*

ಹೆಣ್ಣುಮಕ್ಕಳ ಅತ್ಯಗತ್ಯ ವಸ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಆರೋಗ್ಯದ ದೃಷ್ಟಿಯಿಂದ ಮೊದಲ ಸ್ಥಾನ. ಇತ್ತೀಚೆಗೆ ಬಹಳ ಸಣ್ಣ ವಯಸ್ಸಿನಲ್ಲೇ ಪ್ರೌಢವಸ್ಥಗೆ ಬರುವ ಹೆಣ್ಣುಮಕ್ಕಳು ಅದರ ಬಳಕೆಯನ್ನೇ ಅರಿಯದ ಮುಗ್ಧರು. ಹೀಗಾಗಿ ಅಂತಹ ವಯಸ್ಸಿನವರಿಗೆ ಅದರಿಂದ ಬಹಳ ಪ್ರಯೋಜನವಾಗಿದೆ. ದುಬಾರಿ ಅಲಂಕಾರಿಕ ವಸ್ತುಗಳಾದ ಕ್ರೀಂ ಫೇಸ್‌ವಾಶ್‌, ಸುಗಂಧದ್ರವ್ಯಕ್ಕೆ ಜಿಎಸ್‌ಟಿ ಇರಲಿ. ಆದರೆ ನ್ಯಾಪ್‌ಕಿನ್‌ಗೆ ಯಾಕೆ ತೆರಿಗೆ? ಇದರಿಂದ ಬಂದ ತೆರಿಗೆಯಲ್ಲಿ ಸರ್ಕಾರ ನಡೆಸುತ್ತೇವೆಂದು ಹೇಳುವುದು ಬೌಧ್ಧಿಕ ದಿವಾಳಿತನ ಹಾಗೂ ಮೂರ್ಖತನದ ಪರಮಾವಧಿ.

–ಪ್ರೆನ್ಸಿ ಪೆರೇರಾ, ಬಸವೇಶ್ವರನಗರ

*

ಅನಾದಿಕಾಲದಿಂದಲೂ ಮಹಿಳೆಯರಿಗೆ ಕಷ್ಟ. ಅವರಿಗೆ ಮತ್ತಷ್ಟು ತೊಂದರೆ ಕೊಡಲು ಕೇಂದ್ರ ಸರ್ಕಾರವೂ ಈಗ ಮುಂದಾಗಿದೆ. ನ್ಯಾಪ್‌ಕಿನ್‌ ಮೇಲೆ ಜಿಎಸ್‌ಟಿ ವಿಧಿಸಲೇ ಕೂಡದು. ಎಲ್ಲಾ ಮಹಿಳೆಯರು ಹೋರಾಡಬೇಕು.

–ಸುಮಕಾಂತರಾಜು,

ಟಿ.ದಾಸರಹಳ್ಳಿ

ಪ್ರತಿಕ್ರಿಯಿಸಿ (+)