ಶನಿವಾರ, ಡಿಸೆಂಬರ್ 7, 2019
25 °C

ಆಕಾಶದ ಕೆಳಗೆ ಊಟದ ರುಚಿ

Published:
Updated:
ಆಕಾಶದ ಕೆಳಗೆ ಊಟದ ರುಚಿ

ಮಗೆ ಪ್ರಿಯವಾದವರ ಜೊತೆ ಆಕಾಶದ ಕೆಳಗೆ ಕುಳಿತು ರುಚಿ ರುಚಿಯಾದ ಊಟ ಸವಿಯಬೇಕೆಂಬ ಆಸೆಯಿದ್ದರೆ ಗಾಂಧಿ ನಗರದ ಐವಿ ಸ್ಯಾಂಕ್ಟಮ್‌ ಹೋಟೆಲ್‌ಗೆ ಭೇಟಿ ನೀಡಿ.

ಐವಿ ಸ್ಯಾಂಕ್ಟಮ್‌ನ ಹೋಟೆಲ್‌ನ ಏಳನೇ ಮಹಡಿಯಲ್ಲಿರುವ ರೂಫ್‌ಟಾಪ್‌ ರೆಸ್ಟೋರೆಂಟ್‌ನಲ್ಲಿ ಕುಳಿತರೆ ಆಕಾಶದ ಕೆಳಗೇ ಕುಳಿತ ಅನುಭವ. ಸುತ್ತಲೂ ಅಳವಡಿಸಿರುವ ಗಾಜಿನ ಮೂಲಕ ಬೆಂಗಳೂರಿನ ಅಂದ ಸವಿಯುತ್ತಾ ಬಿಸಿಬಿಸಿ ಸೂಪ್ ಕುಡಿಯುತ್ತಾ ಹೊಸ ರೀತಿಯ ಆಹಾರದ ಪಯಣಕ್ಕೆ ಚಾಲನೆ ನೀಡಬಹುದು. ನೆತ್ತಿಯ ಮೇಲಿನ ಸೂರ್ಯ ಎಷ್ಟೇ ಸುಡುತ್ತಿದ್ದರೂ ಶಾಖ ಒಳಗೆ ಬರದಂತೆ ತಡೆಯುತ್ತದೆ ಮೇಲೆ ಅಳವಡಿಸಿರುವ ವಿಶೇಷ ಗಾಜು ಮತ್ತು ಶಕ್ತಿಯುತ ಹವಾನಿಯಂತ್ರಣ ವ್ಯವಸ್ಥೆ.

ಕರಿ ಸೂಟು ಧರಿಸಿದ ನಗುಮುಖದ ಯುವಕ ಮೆನು ಕಾರ್ಡನ್ನು ಮುಂದೆ ಇಟ್ಟು ‘ನಿಮಗೇನು ಕೊಡಲಿ ಸರ್’ ಎಂದಾಗ ಪೀಕಲಾಟ ಪ್ರಾರಂಭವಾಗುತ್ತದೆ. ಮೆನು ಕಾರ್ಡ್‌ನಲ್ಲಿ ಖಾದ್ಯಗಳ ಪಟ್ಟಿ ಅಷ್ಟು ದೊಡ್ಡದಿದೆ. ದೇಸಿ ಮತ್ತು ಕಾಂಟಿನೆಂಟಲ್ ಊಟೋಪಹಾರ ಇಲ್ಲಿ ಸಿಗುವುದು ಇದಕ್ಕೆ ಕಾರಣ. ಜೊತೆಗೆ ಚೈನೀಸ್ ಖಾದ್ಯಗಳೂ ಇವೆ.

ರೋಟಿ, ಕುಲ್ಚಾ, ಬಿರಿಯಾನಿ, ಹಲವು ಬಗೆಯ ಸ್ಟಾರ್ಟರ್‌ಗಳು, 10–15 ಬಗೆಯ ಕರಿಗಳು ಆಯ್ಕೆಯಲ್ಲಿ ಗೊಂದಲ ಮೂಡಿಸುತ್ತವೆ. ಉಳಿದ ರೆಸ್ಟೊರೆಂಟ್‌ಗಳಿಗಿಂತ ಭಿನ್ನವಾಗಿರಲೇಬೇಕೆಂದು ಹಟ ತೊಟ್ಟು ಇಲ್ಲಿನ ಶೆಫ್‌ ಪ್ರತಿ ಖಾದ್ಯದಲ್ಲಿಯೂ ವಿಶೇಷತೆ ತುಂಬುತ್ತಾರೆ. ರೋಟಿ, ಕುಲ್ಚಾ, ಬಿರಿಯಾನಿಗಳು ಬೇರೆ ರೆಸ್ಟೊರೆಂಟ್‌ಗಳಲ್ಲೂ ಸಿಗುತ್ತವೆ ಆದರೆ ಇಲ್ಲಿನ ವಿಶೇಷ ಸ್ಟಫ್ಡ್‌ ಕುಲ್ಚಾ .

ಸಾಮಾನ್ಯ ಕುಲ್ಚಾಗಳು ಶೆಫ್‌ನ ಕೈಚಳಕದಿಂದಾಗಿ ತರಕಾರಿ ಮತ್ತು ಚಟ್ನಿಗಳ ಪೇಸ್ಟ್ ತುಂಬಿಕೊಂಡು ರುಚಿಭರಿತ ಸ್ಟಫ್ಡ್ ಕುಲ್ಚಾ ಆಗುತ್ತವೆ. ಬಿರಿಯಾನಿಯಲ್ಲಿ ಇಲ್ಲಿ ಹಲವು ವಿಧಗಳಿವೆ. ಧಮ್ ಬಿರಿಯಾನಿ, ಅಂಬೂರ್ ಬಿರಿಯಾನಿ, ಲಖನೌ ಬಿರಿಯಾನಿ ಮತ್ತು ಇಲ್ಲಿನ ವಿಶೇಷ ಸಿಜ್ಲರ್ ಬಿರಿಯಾನಿ. ಧಮ್‌ ಬಿರಿಯಾನಿಯನ್ನು ಪಾಶ್ಚಾತ್ಯ ಶೈಲಿಗೆ ಒಗ್ಗಿಸಿ ಸಿಜ್ಲರ್‌ ಬಿರಿಯಾನಿ ಆಗಿಸಿದ್ದಾರೆ.

ರೆಸ್ಟೊರೆಂಟ್‌ನ ನುರಿತ ಸಿಬ್ಬಂದಿಯೇ ತಯಾರಿಸುವ ಮಸಾಲೆಗಳು ಖಾದ್ಯಗಳ ರುಚಿ ಹೆಚ್ಚಲು ಪ್ರಮುಖ ಕಾರಣಗಳಲ್ಲೊಂದು. ಯಾವುದೇ ಸಿದ್ಧ ಮಸಾಲೆಗಳನ್ನು ಹೊರಗಿನಿಂದ ತರದೇ ಇವರೇ ತಯಾರಿಸಿದ ಮಸಾಲೆಗಳನ್ನಷ್ಟೆ ಅಡುಗೆಯಲ್ಲಿ ಬಳಸುತ್ತಾರೆ ಇಲ್ಲಿನ ಸಿಬ್ಬಂದಿ.

ಸೀ ಫುಡ್‌ಗಳಲ್ಲೂ ಸಾಕಷ್ಟು ಆಯ್ಕೆಗಳಿವೆ. ಸಿಗಡಿ ಬಳಸಿ ಮಾಡುವ ತವಾ ಪ್ರಾನ್ಸ್‌, ಸಿಸೋಮಿ ಫಿಶ್‌ ಫ್ರೈ, ತಮಿಳುನಾಡು ಶೈಲಿಯ ಮೀನಿನ ಖಾದ್ಯಗಳು ದೊರೆಯುತ್ತವೆ. ಗೋವಾ ಶೈಲಿಯ ಮೀನಿನ ಖಾದ್ಯಗಳಿಗೆ ಇಲ್ಲಿ ಹೆಚ್ಚು ಬೇಡಿಕೆಯಂತೆ.

ಮಾಂಸಾಹಾರಿಗಳಿಗಿರುವಷ್ಟೇ ಆಯ್ಕೆಗಳು ಸಸ್ಯಹಾರಿಗಳಿಗೂ ಲಭ್ಯವಿದೆ. ಇಲ್ಲಿನ ಸಸ್ಯಹಾರಿ ಖಾದ್ಯಗಳಲ್ಲಿ ಪನ್ನೀರ್‌ ಮುಂಚೂಣಿಯಲ್ಲಿದೆ. ಆಲೂಗಡ್ಡೆಯನ್ನು ಅಡ್ಡಡ್ಡ ಕೊಯ್ದು ಹಳ್ಳ ಮಾಡಿ ಅದರೊಳಗೆ ಬಟಾಣಿ ಪೇಸ್ಟ್, ತರಕಾರಿ ಪೇಸ್ಟ್ ಜೊತೆಗೆ ಮಸಾಲೆ ತುಂಬಿ ತಂದೂರಿ ಒಲೆಯಲ್ಲಿ ಬೇಯಿಸಿದ ‘ಸ್ಟಫ್ಡ್‌ ಪೊಟ್ಯಾಟೊ’ ಸ್ಟಾರ್ಟರ್‌ಗಳಲ್ಲಿ ಗಮನ ಸೆಳೆಯುತ್ತದೆ. ‘ವೆಜ್‌ರೋಲ್‌’ಅನ್ನೇ ಹೋಲುವ ‘ನೂರಾನಿ ಪರ್ಚಾ ಪನ್ನೀರ್‌’ ಕೂಡಾ ಇವರದೇ ಆವಿಷ್ಕಾರ. ಪನ್ನೀರ್‌ ಅನ್ನು ಹಾಳೆಯ ಆಕಾರಕ್ಕೆ ಕತ್ತರಿಸಿ ಊದುಗೊಳವೆ ಆಕಾರಕ್ಕೆ ಸುತ್ತಿ ಅದರೊಳಗೆ ಮಸಾಲೆ, ತರಕಾರಿಗಳನ್ನು ಹಾಕಿ, ಮೇಲೆ ಬೆಣ್ಣೆ ಮೆತ್ತಿ ಕೊತ್ತಂಬರಿ ಸೊಪ್ಪುಗಳನ್ನಿಟ್ಟು ಅಲಂಕರಿಸಿ ಓವೆನ್‌ನಲ್ಲಿ ಬೇಯಿಸಿದ 'ಪನ್ನೀರ್ ರೋಲ್' ನಾಲಿಗೆಯ ರುಚಿ ಮೊಗ್ಗುಗಳನ್ನು ಅರಳಿಸುತ್ತದೆ.

ಸಿಹಿ ಖಾದ್ಯಗಳಲ್ಲೂ ವಿಶೇಷತೆ ಕಾಯ್ದುಕೊಂಡಿದ್ದಾರೆ. ಬೇಯಿಸಿದ ಜೋಳದಿಂದ ತಯಾರಿಸಿದ ‘ಸ್ವೀಟ್‌ ಕಾರ್ನ್‌ ಹಲ್ವಾ’ಕ್ಕೆ ವಿಶೇಷ ರುಚಿ ಇದೆ. ಇದರ ಜೊತೆ ಬಂಗಾಳದ ವಜ್ರದಾಕಾರದ ‘ಚಿತ್ರಕೂಟ’ ಬಾಯಿಗಿಟ್ಟರೆ ಕರಗುತ್ತದೆ.

ಬೆಳಿಗ್ಗೆ 7ರಿಂದಲೇ ರೆಸ್ಟೊರೆಂಟ್ ಪ್ರಾರಂಭವಾಗುತ್ತದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಕಾಂಟಿನೆಂಟಲ್ ಖಾದ್ಯಗಳು ತಯಾರಿರುತ್ತವೆ. ₹300ಕ್ಕೆ ಬಫೆ ಇರುತ್ತದೆ. ನಿಮ್ಮಿಷ್ಟದ ಮಾಂಸಾಹಾರ ಮತ್ತು ಸಸ್ಯಾಹಾರವನ್ನು ನೀವೇ ಆಯ್ಕೆ ಮಾಡಿಕೊಂಡು ತಿನ್ನಬಹುದು.

ಅಲಾಕಾಟ್‌ ಆರ್ಡರ್‌ ಕೂಡ ಮಾಡಬಹುದು. ಇಲ್ಲಿನ ಬಹುತೇಕ ಖಾದ್ಯಗಳಿಗೆ ಭಿನ್ನ ರುಚಿಯ ಸ್ಪರ್ಷ ನೀಡಿರುವುದು ಶೆಫ್ ಸಂಜೀಬ್‌ ರಾಯ್‌. ಕೋಲ್ಕತ್ತ ಮೂಲದ ರಾಯ್‌ಗೆ 15 ವರ್ಷಗಳ ಅನುಭವವಿದೆ. ಮುಂದಿನ ತಿಂಗಳು ಹೊಸ ಬಗೆಯ ‘ಫ್ಲೇಮ್‌ ಫುಡ್‌’ ಪರಿಚಯಿಸಲು ತಯಾರಾಗಿದ್ದಾರೆ.

ಈಗಾಗಲೇ ಅದರ ಪ್ರಾಥಮಿಕ ಪ್ರಯೋಗಗಳನ್ನು ಮುಗಿಸಿದ್ದು ರೆಸಿಪಿಗಳು ತಯಾರಾಗಿವೆ ಎನ್ನುತ್ತಾರೆ ವ್ಯವಸ್ಥಾಪಕ ನಿರ್ದೇಶಕ

ಭರತ್ ವಿ.ಹೋಟೆಲ್‌: ಐವಿ ಸ್ಯಾಂಕ್ಟಮ್‌

ವಿಶೇಷ: ದೇಸೀ ಮತ್ತು ಕಾಂಟಿನೆಂಟಲ್ ಆಹಾರ

ವಿಳಾಸ: ನಂ 33, 5ನೇ ಮುಖ್ಯರಸ್ತೆ, ಶೇಷಾದ್ರಿ ರಸ್ತೆ, ಆನಂದ್ ರಾವ್ ವೃತ್ತದ ಬಳಿ

ಟೇಬಲ್ ಕಾಯ್ದಿರಸಲು: 080 46315555

ಸಮಯ– ಉಪಾಹಾರ ಬೆಳಿಗ್ಗೆ 7

ಊಟ ಮಧ್ಯಾಹ್ನ 12 ರಿಂದ 4

ರಾತ್ರಿ ಊಟ 7 ರಿಂದ 11.30

ಇಬ್ಬರಿಗೆ: ₹800

ಪ್ರತಿಕ್ರಿಯಿಸಿ (+)