ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಕುಂಡ ಬಾಡಿಗೆಗಿದೆ

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

ನಗರದಲ್ಲಿ ನಡೆಯುವ ಮದುವೆ, ಸಮಾವೇಶ, ರಾಜಕೀಯ ಸಮಾರಂಭ ಏನೇ ಇರಲಿ ಪ್ರವೇಶದ್ವಾರದಿಂದ ವೇದಿಕೆವರೆಗೂ ಹಸಿರು ಮತ್ತು ವರ್ಣಮಯ ನೋಟ ನೀಡುವುದು ಈಗ ಸಾಮಾನ್ಯ. ಅಷ್ಟು ಚಂದದ, ನಳನಳಿಸುವ ಹೂ ಕುಂಡಗಳು ಸಮಾರಂಭದ ಹೊತ್ತಿಗೆ ಎಲ್ಲಿಂದ ಕಲೆಹಾಕುತ್ತಾರೆ ಎಂದು ನಿಮಗೂ ಅನಿಸಿರಬಹುದು. ಇಡೀ ಪರಿಸರಕ್ಕೆ ಸಮಾರಂಭದ ಕಳೆ ನೀಡುವುದು ಬಾಡಿಗೆ ಕುಂಡಗಳು. ಸಮಾರಂಭಕ್ಕೆ ಬಂದು ಹೋಗುವ ಅತಿಥಿಗಳಂತೆ ಈ ಬಾಡಿಗೆ ಕುಂಡಗಳೂ ಹಾಗೆ ಬಂದು ಹೀಗೆ ಹೋಗುತ್ತವೆ.

ಪುಟ್ಟದೊಂದು ಕಚೇರಿ ಇರಲಿ, ದೊಡ್ಡ ಮಳಿಗೆಯೇ ಇರಲಿ, ಅಲ್ಲಿ ಹಸಿರಿದ್ದರೆ ಚಂದ. ನಗರದ ಜನ ತಮ್ಮ ಪರಿಸರವನ್ನು ಹಸಿರು ಮತ್ತು ಹೂಗಳಿಂದ ಅಲಂಕರಿಸಲು ಈಗ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಈ ಮಧ್ಯೆ ಒಳಾಂಗಣ ವಿನ್ಯಾಸಕ್ಕೆ ಬೇಡಿಕೆ ಹೆಚ್ಚಿದೆ. ಒಳಾಂಗಣ ವಿನ್ಯಾಸವೂ ಹಸಿರು ಮತ್ತು ಹೂಗಳಿಂದ ಕೂಡಿದ್ದರೆ! ಹೌದು, ಬಾಡಿಗೆ ಕುಂಡಗಳು ಹಸಿರೂ ನೀಡಿ, ಹೂಗಳ ಘಮವನ್ನೂ ಹರಡುತ್ತಿವೆ.

ಕಚೇರಿಗಳಲ್ಲಿ ಸಸ್ಯಗಳನ್ನು ಬೆಳೆಸಿದರೆ ಅವುಗಳಿಗೆ ಹೆಚ್ಚು ಪೋಷಣೆ ಬೇಕಾಗುತ್ತದೆ. ರಜಾ ದಿನಗಳಲ್ಲಿ ಒಳಗೇ ಬಂಧಿಯಾಗುವ ಅವು ಬಾಡಿಹೋಗುತ್ತವೆ. ಆ ಚಿಂತೆ ದೂರ ಮಾಡಲೆಂದೇ ಬಂದಿವೆ ಬಾಡಿಗೆ ಹೂಕುಂಡಗಳು. ಕುಂಡಗಳನ್ನು ಬಾಡಿಗೆಗೆ ಪಡೆದು ಒಳಾಂಗಣ ವಿನ್ಯಾಸ ಮಾಡುವ ಟ್ರೆಂಡ್‌ ನಗರದಲ್ಲಿ ಹೆಚ್ಚುತ್ತಿದೆ. ಕುಂಡಗಳನ್ನು ಬಾಡಿಗೆಗೆ ನೀಡುವ ನರ್ಸರಿಗಳೂ ಸಾಕಷ್ಟಿವೆ. ಬಾಡಿಗೆಗೆ ನೀಡಲೆಂದೇ ಆಲಂಕಾರಿಕ ಗಿಡಗಳನ್ನು ಬೆಳೆಸುವವರೂ ಇದ್ದಾರೆ.

ಒಳಾಂಗಣದ ವಿನ್ಯಾಸವನ್ನು ಪದೇ ಪದೇ ಬದಲಿಸುವ ಮನೋಭಾವದವರಿಗೆ ಬಾಡಿಗೆ ಹೂಕುಂಡಗಳು ಉತ್ತಮ ಆಯ್ಕೆ. ಕುಂಡಗಳನ್ನು ಬಾಡಿಗೆಗೆ ಪೂರೈಸುವ ಸಂಸ್ಥೆಗಳು ಕುಂಡಗಳನ್ನು ಕಚೇರಿಗಳಿಗೆ ಕೊಂಡೊಯ್ಯುವುದು, ಅವುಗಳ ನಿರ್ವಹಣೆ, ಕುಂಡಗಳನ್ನು ನಿಗದಿತ ಸಮಯದಲ್ಲಿ ಬದಲಾಯಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತವೆ.

ಮಡಿವಾಳದ ಲಕ್ಷ್ಮೀಕಾಂತ್‌ ಹದಿನೈದು ವರ್ಷಗಳಿಂದ ನರ್ಸರಿ ನಡೆಸುತ್ತಿದ್ದಾರೆ. ಸಾಫ್ಟ್‌ವೇರ್‌ ಕಂಪೆನಿಗಳಿಗೆ ಬಾಡಿಗೆಗೆ ಹೂಕುಂಡಗಳನ್ನು ಇವರು ಪೂರೈಸುತ್ತಾರೆ.

‘ಹತ್ತರಿಂದ ಇಪ್ಪತ್ತು ಕುಂಡಗಳನ್ನು ಪಡೆದರೆ ಒಂದು ಕುಂಡಕ್ಕೆ ತಿಂಗಳಿಗೆ ₹90 ಬಾಡಿಗೆ. ನೂರಿನ್ನೂರು ಕುಂಡಗಳನ್ನು ಪಡೆದರೆ ₹60ಗೆ ನೀಡಲಾಗುವುದು. ಒಳಾಂಗಣದಲ್ಲಿರುವ ಕುಂಡಗಳಿಗೆ ವಾರಕ್ಕೆ ಎರಡು ಬಾರಿ, ಬಿಸಿಲಲ್ಲಿರುವ ಕುಂಡಗಳಾದರೆ ನಾಲ್ಕು ಬಾರಿ ನೀರುಣಿಸುವ ಕೆಲಸ ನಮ್ಮ ಸಿಬ್ಬಂದಿ ಮಾಡುತ್ತಾರೆ. ಸಸಿ ಹಾಳಾದರೆ ಬದಲಿಸುತ್ತೇವೆ. ಬಹುತೇಕ ಕಚೇರಿಗಳು ಹವಾನಿಯಂತ್ರಿವಾಗಿರುವ ಕಾರಣ ಅಲ್ಲಿ ಬೆಳೆಯುವ ಸಸಿಗಳನ್ನು ಮಾತ್ರ ಹೆಚ್ಚಾಗಿ ಬಳಸುತ್ತೇವೆ. ಹವಾನಿಯಂತ್ರಿತ ಕೊಠಡಿಯಲ್ಲಿ ಹೆಚ್ಚೆಂದರೆ ಎರಡು ದಿನ ಸಸಿಗಳು ಚೆನ್ನಾಗಿರುತ್ತವೆ. ಮತ್ತೆ ಬದಲಾಯಿಸಬೇಕಾಗುತ್ತದೆ. ಸುಮಾರು 30 ಬಗೆಯ ಒಳಾಂಗಣ ಸಸ್ಯಗಳು (ಇಂಡೋರ್‌ ಪ್ಲಾಂಟ್‌) ನಮ್ಮಲ್ಲಿವೆ’ ಎನ್ನುತ್ತಾರೆ ಅವರು.

ಮೈಸೂರು ರಸ್ತೆಯಲ್ಲಿರುವ ಪ್ರಕೃತಿ ಪ್ಲಾಂಟ್‌ ನರ್ಸರಿ, ಕೋರಮಂಗಲದ ಪ್ಲಾಸ್ಮ ನರ್ಸರಿ ಬಾಡಿಗೆಗೆ ಹೂಕುಂಡ ನೀಡುವ ವ್ಯವಹಾರ ನಡೆಸುತ್ತಿವೆ. ರಾಜ್‌ಯೋಗಿನಿ ನರ್ಸರಿ ಮದುವೆಯಂಥ ದೊಡ್ಡ ಕಾರ್ಯಕ್ರಮಗಳಿಗೆ ಹೂ ಕುಂಡ, ಹೂದಾನಿಗಳನ್ನು ಬಾಡಿಗೆಗೆ ನೀಡುತ್ತಿರುವ ನಗರದ ಪ್ರಮುಖ ನರ್ಸರಿ.

*
ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಕಂಪೆನಿಗಳು ಶುರುವಾದಾಗಿನಿಂದ ಬಾಡಿಗೆಗೆ ಹೂಕುಂಡಗಳನ್ನು ಪಡೆಯುವ ಪದ್ಧತಿ ಶುರುವಾಗಿದೆ. ಈಗ ಬಹುತೇಕ  ಕಂಪೆನಿಗಳು ಬಾಡಿಗೆಗೆ ಕುಂಡಗಳನ್ನು ಪಡೆಯುತ್ತಿವೆ.
–ಲಕ್ಷ್ಮೀಕಾಂತ್‌, ಮಡಿವಾಳ,
ಸಂಪರ್ಕಕ್ಕೆ:99027 25121

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT