ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಸೃಷ್ಟಿ ಪ್ರಮಾಣ ಕಡಿಮೆ

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ  ರಾಷ್ಟ್ರದಲ್ಲಿ ಐ.ಟಿ ಉದ್ಯಮ ಅಪಾರ ಲಾಭ ಗಳಿಸಿರುವುದಲ್ಲದೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೋಟ್ಯಂತರ  ಉದ್ಯೋಗಗಳನ್ನೂ ಸೃಷ್ಟಿಸಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ನವಶ್ರೀಮಂತಿಕೆಯ ಪ್ರತಿಷ್ಠೆಯನ್ನು ತಂದುಕೊಟ್ಟ ಐ.ಟಿ ಉದ್ಯೋಗಗಳ  ಭವಿಷ್ಯ  ಹೀಗೆಯೇ ಮುಂದುವರಿಯುವುದೇ? ತಂತ್ರಜ್ಞಾನ ತ್ವರಿತಗತಿಯಲ್ಲಿ ಬದಲಾಗುತ್ತಿರುವ ಈಗಿನ ಸಂದರ್ಭದಲ್ಲಿ ಉದ್ಯೋಗಿಗಳು ಅಪ್ರಸ್ತುತರಾಗುತ್ತಿದ್ದಾರೆಯೇ?  ಮುಂದಿನ ಐದು ವರ್ಷಗಳಲ್ಲಿ ಒಟ್ಟು ಉದ್ಯೋಗಿಗಳಲ್ಲಿ ಶೇ 40ರಷ್ಟು ಮಂದಿಗೆ  ಕೌಶಲ ನವೀಕರಣ ಅಗತ್ಯವಾಗುತ್ತದೆ ಎಂಬುದು ನಾಸ್ಕಾಂ ವಿಶ್ಲೇಷಣೆ.  ಈ ವಿದ್ಯಮಾನ ಕುರಿತ ಅವಲೋಕನ

ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಆಗುವುದಿಲ್ಲ. ಆದರೆ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಕಡಿಮೆ ಸಂಖ್ಯೆಯಲ್ಲಿ ಉದ್ಯೋಗಗಳು ಲಭಿಸಲಿವೆ. ಉದ್ಯೋಗ ಸೃಷ್ಟಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ ಆಗಲಿದೆ.ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ತೊಡಗಿಸಿಕೊಂಡಿರುವುದು ಅಮೆರಿಕವನ್ನು ಹೊರತುಪಡಿಸಿದರೆ ಭಾರತದಲ್ಲಿ ಮಾತ್ರ. ಪ್ರತಿವರ್ಷ 1.5 ಲಕ್ಷದಿಂದ 2 ಲಕ್ಷದವರೆಗೆ ಇಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿದೆ. ಆದರೆ, ಹಲವು ಕಾರಣಗಳಿಂದಾಗಿ, ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಕಡಿಮೆ ಇರಲಿದೆ.

ಕೃತಕ ಬುದ್ಧಿಮತ್ತೆ ಹಾಗೂ ಮೆಷಿನ್ ಲರ್ನಿಂಗ್‌ನ ಕಾರಣದಿಂದಾಗಿ ನಿರ್ದಿಷ್ಟ ಪ್ರಕ್ರಿಯೆಗೆ ಅನುಗುಣವಾಗಿ ಕೆಲಸ ನಡೆಯುವ ಕ್ಷೇತ್ರಗಳಲ್ಲಿನ ಉದ್ಯೋಗಗಳು ಸ್ವಯಂಚಾಲಿತ ಆಗಲಿವೆ. ಆದರೆ ಈಗಾಗಲೇ ಇರುವ ಉದ್ಯೋಗಗಳು ಕಡಿಮೆ ಆಗುವುದಿಲ್ಲ, ಅವು ಮಾಯವಾಗುವುದೂ ಇಲ್ಲ.
ಭಾರತದ ಐ.ಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಸರಾಸರಿ ವಯಸ್ಸು 27 ವರ್ಷಗಳು. ಇವರಲ್ಲಿ ಶೇಕಡ 80ರಷ್ಟು ಜನರಿಗೆ ಪುನಃ ತರಬೇತಿ ನೀಡ
ಬಹುದು- ಇವರು ಯುವಕರಾಗಿರುವ ಕಾರಣದಿಂದಾಗಿ. ಹೊಸದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳ ಬಗ್ಗೆ ಇವರಿಗೆ ತರಬೇತಿ ನೀಡಬಹುದು.

ಭಾರತದ ಮಾಹಿತಿ ತಂತ್ರಜ್ಞಾನ ಉದ್ದಿಮೆ ಅತ್ಯಂತ ಸಂಕೀರ್ಣ ಕೆಲಸವನ್ನೂ, ಅತ್ಯಂತ ಸರಳವಾದ ಕೆಲಸವನ್ನೂ ನಿರ್ವಹಿಸುತ್ತಿದೆ. ಬಿಪಿಒ  (ವಾಣಿಜ್ಯ ಪ್ರಕ್ರಿಯೆ ಹೊರಗುತ್ತಿಗೆ) ಉದ್ಯಮವು ಸಂಕೀರ್ಣವಾದ ಹಾಗೂ ಸರಳವಾದ ಕೆಲಸಗಳೆರಡನ್ನೂ ಮಾಡುತ್ತದೆ.
ವಿಶ್ವದಲ್ಲಿ ನಾವು ಇಂದು ಮೂರು ಬಗೆಯ ಉದ್ಯೋಗಗಳನ್ನು ಗುರುತಿಸಬಹುದು. ಮೊದಲನೆಯ ಬಗೆಯ ಕೆಲಸಗಳಿಗೆ ಮಿದುಳಿನ ಬಲ ಹಾಗೂ ಎಡ ಭಾಗಗಳೆರಡರ ನೆರವು ಬೇಕು. ತರ್ಕವನ್ನು ಆಧರಿಸಿದ, ಸೃಜನಾತ್ಮಕ ಕೆಲಸಗಳು ಇವು. ಈ ಬಗೆಯ ಕೆಲಸಗಳು ಉಳಿದುಕೊಳ್ಳಲಿವೆ. ಇಂಥ ಕೆಲಸಗಳನ್ನು ಪ್ರೋಗ್ರಾಮಿಂಗ್‌ ಮೂಲಕ ಮಾಡುವುದು ಕಷ್ಟ. ಎರಡನೆಯ ಬಗೆಯ ಕೆಲಸಗಳು ವ್ಯಕ್ತಿ ಆಧಾರಿತವಾದದ್ದು, ಈ ಕೆಲಸಗಳಿಗೆ ವೇತನ ಕಡಿಮೆ. ನಕಲು ಮಾಡಲು ಸಾಧ್ಯವಾಗದ, ಸೇವೆ ಆಧಾರಿತ ಕೆಲಸಗಳೂ ಉಳಿದುಕೊಳ್ಳಲಿವೆ.
ಇಂದು ನಮ್ಮೆದುರು ಇರುವ ಬಹುಪಾಲು ಉದ್ಯೋಗಗಳು ಒಂದು ನಿರ್ದಿಷ್ಟ ಪ್ರಕ್ರಿಯೆಗೆ ಅನುಗುಣವಾಗಿ ನಡೆಯುವಂಥವು. ಇಲ್ಲಿ ಕೆಲಸ ಮಾಡುವ ವ್ಯಕ್ತಿ ಒಂದು ಹಂತವಾದ ನಂತರ ಇನ್ನೊಂದು ಹಂತವನ್ನು ಪೂರ್ಣಗೊಳಿಸುತ್ತ ಬರುತ್ತಾನೆ. ಇಂಥ ಕೆಲಸಗಳಲ್ಲಿ ಸೃಜನಶೀಲತೆಗೆ ಹೆಚ್ಚಿನ ಅವಕಾಶ ಇಲ್ಲ. ಇವು
ಗಳನ್ನು ಸುಲಭವಾಗಿ ಸ್ವಯಂಚಾಲಿತಗೊಳಿಸಬಹುದು. ಈ ಕ್ಷೇತ್ರದಲ್ಲಿನ ಉದ್ಯೋಗಗಳನ್ನು ದೀರ್ಘಾವಧಿಯಲ್ಲಿ ಇಲ್ಲವಾಗಿಸಬಹುದು.
ಇದಕ್ಕೆ ಒಂದು ಉದಾಹರಣೆ ನೀಡುತ್ತೇನೆ. ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ನಮ್ಮ ದೇಶದ ಬ್ಯಾಂಕುಗಳ ಆಸ್ತಿಯ ಮೌಲ್ಯದಲ್ಲಿ ಹತ್ತರಿಂದ ಹನ್ನೆರಡು ಪಟ್ಟು ಹೆಚ್ಚಳವಾಗಿದೆ.  ಇದೇ ಅವಧಿಯಲ್ಲಿ ಈ ಕ್ಷೇತ್ರದ ಉದ್ಯೋಗಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಶೇಕಡ 5ರಷ್ಟು ಮಾತ್ರ. ಮೊದಲು ಮಾಡುತ್ತಿದ್ದ ಹಲವು ಕೆಲಸಗಳು ಇಂದು ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಮೂಲಕ ಸ್ವಯಂಚಾಲಿತ ಆಗಿವೆ. ಈಗ ಬ್ಯಾಂಕಿಂಗ್ ವಲಯದಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಹೆಚ್ಚು ಉದ್ಯೋಗಗಳಿವೆ- ದಾಖಲೆಗಳನ್ನು ಕಾಪಿಟ್ಟುಕೊಳ್ಳುವಂತಹ, ಲೆಕ್ಕಪತ್ರ ಇಡುವಂತಹ ಕೆಲಸಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ದಾಖಲೆಗಳನ್ನು ವ್ಯವಸ್ಥಿತವಾಗಿ ಇಡುವುದು, ಲೆಕ್ಕಪತ್ರ ಇಡುವುದು ಒಂದು ನಿಯಮಕ್ಕೆ ಅನುಸಾರವಾಗಿ ನಡೆಯುವ ಕೆಲಸ. ಇಂಥ ಕೆಲಸಗಳು ಸ್ವಯಂ ಚಾಲಿತವಾಗಿ ಆಗುವಂತೆ ಮಾಡಬಹುದು. ಮುಂದಿನ ಹತ್ತು-ಹದಿನೈದು ವರ್ಷಗಳಲ್ಲಿ ಬೇರೆ ಬೇರೆ ಉದ್ದಿಮೆಗಳಲ್ಲಿ ಇದೇ ಮಾದರಿಯ ಪರಿವರ್ತನೆಗಳು ಕಂಡುಬರಲಿವೆ.

ನಿರ್ದಿಷ್ಟ ನಿಯಮಗಳಿಗೆ ಅನುಗುಣವಾಗಿ ನಡೆಯುವ ಬೇರೆ ಬೇರೆ ಕ್ಷೇತ್ರದ ಉದ್ಯೋಗಗಳನ್ನು ಸ್ವಯಂಚಾಲಿತಗೊಳಿಸಬಹುದು. ಭಾರತದ ಅರ್ಥ ವ್ಯವಸ್ಥೆಯು ವಾರ್ಷಿಕ ಶೇ 8ರಷ್ಟು ದರದಲ್ಲಿ ಬೆಳವಣಿಗೆ ಸಾಧಿಸಿದರೆ, ಕಾರ್ಮಿಕರ ಉತ್ಪಾದನಾ ಸಾಮರ್ಥ್ಯ ಶೇಕಡ 1ರಷ್ಟು ದರದಲ್ಲಿ ಬೆಳೆದರೆ, ಉದ್ಯೋಗ ಸೃಷ್ಟಿ ಪ್ರಮಾಣವು ಶೇಕಡ 7ರ ದರದಲ್ಲಿ ಬೆಳವಣಿಗೆ ಸಾಧಿಸುತ್ತದೆ. ಕೆಲಸಗಳನ್ನು ಸ್ವಯಂಚಾಲಿತಗೊಳಿಸುವುದು, ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಉದ್ಯೋಗ ಸೃಷ್ಟಿಯ ಪ್ರಮಾಣ ಕಡಿಮೆ ಇರುತ್ತದೆ. ಅಂದರೆ ಆರ್ಥಿಕತೆ ಶೇಕಡ 8ರ ದರದಲ್ಲಿ ಬೆಳವಣಿಗೆ ಸಾಧಿಸಿದರೆ ಉದ್ಯೋಗ ಸೃಷ್ಟಿಯ ಪ್ರಮಾಣಶೇ 4–5ರಷ್ಟು ಇರಬಹುದು. ಇದು ಎಲ್ಲ ಕ್ಷೇತ್ರಗಳಲ್ಲೂ ಕಂಡುಬರಲಿದೆ- ತಯಾರಿಕಾ ಕ್ಷೇತ್ರ, ಸೇವಾ ವಲಯ ಹಾಗೂ ಕೃಷಿಯಲ್ಲೂ ಇದು ಕಾಣಿಸಲಿದೆ.

ಆಟೊಮೊಬೈಲ್ ಉದ್ಯಮವನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಇಲ್ಲಿ ಬಹುತೇಕ ಕೆಲಸಗಳು ಸ್ವಯಂಚಾಲಿತವಾಗಿ ಆಗುತ್ತಿವೆ. ವಾಹನಗಳ ತಯಾರಿಕೆಯ ವಿವಿಧ ಹಂತಗಳ ಹಲವು ಕೆಲಸಗಳನ್ನು ಯಂತ್ರಮಾನವ ಮಾಡುತ್ತಿದ್ದಾನೆ.  ಈ ಚಿತ್ರಣ ತಯಾರಿಕಾ ವಲಯದ ಎಲ್ಲ ಕ್ಷೇತ್ರಗಳಲ್ಲೂ ಕಾಣಿಸುತ್ತಿದೆ. ಉತ್ತಮ ಗುಣಮಟ್ಟದ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಅಲ್ಲಿ ಬೇಡಿಕೆ ಹೆಚ್ಚಿರುವ ವಸ್ತುಗಳನ್ನು ರೋಬೊಗಳು ಸಿದ್ಧಪಡಿಸಬಲ್ಲವು. ಬ್ಯಾಂಕಿಂಗ್, ಸೇವಾ ಕ್ಷೇತ್ರ, ಕನ್ಸಲ್ಟೆನ್ಸಿ ವಲಯಗಳ ಹಲವು ಕೆಲಸಗಳು ಕೂಡ ಸ್ವಯಂಚಾಲಿತ ಆಗಬಲ್ಲವು. ಅಮೆರಿಕದಲ್ಲಿ ಗದ್ದೆ ಉಳುಮೆ ಮಾಡುವುದು, ಬೀಜ ಬಿತ್ತನೆ, ಕೀಟನಾಶಕ ಸಿಂಪಡಣೆ, ಸಸಿಗಳಿಗೆ ನೀರೆರೆಯುವುದು, ಬೆಳೆ ಕಟಾವು ಕೆಲಸಗಳನ್ನು ಯಂತ್ರಗಳೇ ಮಾಡುತ್ತಿವೆ. ಭಾರತದ ಕೆಲವು ಪ್ರದೇಶಗಳಲ್ಲಿ ಕೂಡ ಕೃಷಿಯ ಬಹುಪಾಲು ಕೆಲಸಗಳು ಸ್ವಯಂಚಾಲಿತವಾಗಿ ನಡೆಯುತ್ತಿವೆ. ಇದು ಮುಂದಿನ ವರ್ಷಗಳಲ್ಲಿ ಹೆಚ್ಚಾಗಲಿದೆ.
ಮುಂದಿನ ನಾಲ್ಕೈದು ವರ್ಷಗಳಲ್ಲಿ ಸ್ವಯಂಚಾಲಿತ ಕಾರುಗಳು ರಸ್ತೆಗೆ ಇಳಿಯಲಿವೆ. ಈ ಕಾರುಗಳನ್ನು ಮೊಬೈಲ್ ಫೋನ್ ಬಳಸಿ ಚಾಲನೆ ಮಾಡಬಹುದು. ಇಂಥ ಕಾರುಗಳು ಭಾರತಕ್ಕೂ ಬರಲಿವೆ. ಒಟ್ಟಿನಲ್ಲಿ ಹೇಳುವುದಾದರೆ, ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಯ ತೀವ್ರತೆ ಕುಗ್ಗಲಿದೆ.
ವಾರ್ಷಿಕ ಶೇ 1ರಿಂದ 2ರಷ್ಟು ಆರ್ಥಿಕ ಬೆಳವಣಿಗೆ ಕಾಣುತ್ತಿರುವ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಲಭ್ಯ ಉದ್ಯೋಗಗಳ ಸಂಖ್ಯೆ ಕಡಿಮೆ ಆಗಬಹುದು. ಅಮೆ
ರಿಕದ ಮಧ್ಯಮ ವರ್ಗ ಕಳೆದ 15 ವರ್ಷಗಳಲ್ಲಿ ಆದಾಯ ಹೆಚ್ಚಳವನ್ನೇ ಕಂಡಿಲ್ಲ. ಕಳೆದ ವರ್ಷ ಅಲ್ಲಿನ ಮಧ್ಯಮ ವರ್ಗದ ವಾರ್ಷಿಕ ತಲಾವಾರು ಆದಾಯ 2009ಕ್ಕೆ ಹೋಲಿಸಿದರೆ ಐದು ಸಾವಿರ ಡಾಲರ್‌ಗಳಷ್ಟು ಕಡಿಮೆ ಆಗಿದೆ. ಆದಾಯದಲ್ಲಿ ಹೆಚ್ಚಳ ಆಗದಿದ್ದರೂ, ಚೀನಾದಿಂದ ವಸ್ತುಗಳು ಕಡಿಮೆ ಬೆಲೆಗೆ ಆಮದಾಗುತ್ತಿದ್ದ ಕಾರಣ ಅಮೆರಿಕದ ಮಧ್ಯಮ ವರ್ಗ ಉಳಿದುಕೊಂಡಿದೆ. ಈಗ ಚೀನಾದಿಂದ ಆಮದು ಹೆಚ್ಚುತ್ತಿದೆ. ಇದರ ಪರಿಣಾಮ ಅಮೆರಿಕದ ಮಧ್ಯಮ ವರ್ಗದ ಮೇಲೆ ಆಗುತ್ತಿದೆ. ಕಳೆದ 15 ವರ್ಷಗಳಲ್ಲಿ ಒಂದು ಕೋಟಿ ಉತ್ತಮ ಉದ್ಯೋಗ ಅಮೆರಿಕದಿಂದ ಕಣ್ಮರೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಲಿದೆ.

ಮನುಷ್ಯ ಮಾಡುವ ಕೆಲಸವನ್ನು ತಂತ್ರಾಂಶ ಅಥವಾ ರೋಬೊಗಳು ಮಾಡುವುದು ವಿಶ್ವದ ಎಲ್ಲೆಡೆ ಹೆಚ್ಚುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕ್ರೋಡೀಕೃತ ಸಂಪತ್ತು ಇದೆ, ಅಲ್ಲಿನ ಜನ ವೃದ್ಧಾಪ್ಯದತ್ತ ನಡೆಯುತ್ತಿದ್ದಾರೆ. ಹಾಗಾಗಿ ಈ ಪ್ರಕ್ರಿಯೆಯು ಅವರ ಪಾಲಿಗೆ ಒಳಿತನ್ನು ತರಬಹುದು. ತಯಾರಿಕೆ, ಸೇವೆ ನೀಡುವಿಕೆ ಮೇಲಿನ ವೆಚ್ಚಗಳನ್ನು ಅವರು ತಗ್ಗಿಸಬೇಕಿದೆ, ವೃದ್ಧರನ್ನು ಚೆನ್ನಾಗಿ ನೋಡಿಕೊಳ್ಳಬೇಕಿದೆ ಹಾಗೂ ತಮ್ಮಲ್ಲಿ ತಯಾ
ರಾಗುವ ಉತ್ಪನ್ನಗಳ ಗುಣಮಟ್ಟ ಕುಸಿಯದಂತೆಯೂ ನಿಗಾ ಇಡಬೇಕಿದೆ. ಆದರೆ ಉದ್ಯೋಗ ಸೃಷ್ಟಿ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕಿರುವ ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆಗಳಲ್ಲಿ ಈ ಪ್ರಕ್ರಿಯೆ ರಾಚನಿಕ ಸಮಸ್ಯೆ ಸೃಷ್ಟಿಸಬಹುದು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಕನಿಷ್ಠ 10 ಕೋಟಿ ಯುವಕರಿಗೆ ಕೆಲಸ ಸಿಕ್ಕಿಲ್ಲ ಅಥವಾ ಅವರಿಗೆ ಉತ್ತಮವಲ್ಲದ ಕೆಲಸಗಳು ದೊರೆತಿವೆ. ಹತ್ತು ವರ್ಷಗಳಿಂದ ಪ್ರತಿ ವರ್ಷ 4.4 ಕೋಟಿ ಯುವಕರು ಕೆಲಸ ಮಾಡುವ ವಯಸ್ಸಿಗೆ ಬರುತ್ತಿದ್ದಾರೆ. ಇವರಲ್ಲಿ ಶೇಕಡ 30ರಷ್ಟು ಜನ ಕೃಷಿಯತ್ತ ಮುಖ ಮಾಡಬಹುದು. ಅಂದರೆ ನಾವು ಪ್ರತಿ ವರ್ಷ 1.7 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಆದರೆ ನಾವು ಪ್ರತಿವರ್ಷ 55 ಲಕ್ಷದಿಂದ 60 ಲಕ್ಷ ಯುವಕರಿಗೆ ಮಾತ್ರ ಉದ್ಯೋಗ ಸೃಷ್ಟಿಸುತ್ತಿದ್ದೇವೆ. ಅಂದರೆ ಹತ್ತು ವರ್ಷಗಳಿಂದ, ಪ್ರತಿವರ್ಷ ಒಂದು ಕೋಟಿ ಯುವಕರಿಗೆ ಒಳ್ಳೆಯ ಉದ್ಯೋಗ ಸಿಕ್ಕಿಲ್ಲ ಅಥವಾ ಕಡಿಮೆ ವೇತನದ ಕೆಲಸಗಳು ಸಿಕ್ಕಿವೆ. ಮುಂದಿನ ಹತ್ತು ವರ್ಷಗಳವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ. 2025ರ ವೇಳೆಗೆ ಭಾರತದಲ್ಲಿ ಉತ್ತಮ ಕೆಲಸ ಇಲ್ಲದ ಅಥವಾ ಕಡಿಮೆ ಸಂಬಳದ ಕೆಲಸ ಪಡೆದ 20 ಕೋಟಿ ಯುವಕರು (21 ರಿಂದ 45 ವರ್ಷ ವಯಸ್ಸಿನವರು) ಇರಲಿದ್ದಾರೆ.
ಇದು ಸಮಾಜದ ಮೇಲೆ ತೀವ್ರ ಪರಿಣಾಮಗಳನ್ನು ಉಂಟು ಮಾಡಬಹುದು. ಪಟೇಲರು, ಜಾಟರು, ಮರಾಠರು ಮತ್ತು ಇವರಂತಹ ಇತರರು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಒತ್ತಾಯಿಸಿ ನಡೆಸಿದ ಹೋರಾಟಗಳಲ್ಲಿ ಇದನ್ನು ಕಾಣಬಹುದು. ಈ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಬಹುತೇಕರು ಶಿಕ್ಷಣ ಪಡೆದವರು. ಅವರಿಗೆ ಸಣ್ಣ ಉದ್ಯೋಗಗಳು ಸಾಲುತ್ತಿರಲಿಲ್ಲ.  ಉತ್ತಮ ಉದ್ಯೋಗಗಳು ಅವರಿಗೆ ಬೇಕು. ಆದರೆ ಇಂತಹ ಉತ್ತಮ ಉದ್ಯೋಗಗಳು, ಉತ್ತಮ ವೇತನ ಕೊಡುವ ಉದ್ಯೋಗಗಳು ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಇಲ್ಲ.ಯುವಜನರು ಹೆಚ್ಚಿರುವುದು ಭಾರತದ ಪಾಲಿಗೆ ವರದಾನ ಎನ್ನಲಾಗುತ್ತದೆ. ಆದರೆ ಭಾರತದಲ್ಲಿ ಈಗ ಇದೊಂದು ದುಃಸ್ವಪ್ನದಂತೆ ಆಗಿದೆ- ಹತ್ತು ವರ್ಷಗಳಿಂದ ಯುವಕರಿಗೆ ಸೂಕ್ತ ಉದ್ಯೋಗ ಸಿಗದ ಕಾರಣಕ್ಕೆ. ಈ ಅವಧಿಯಲ್ಲಿ ಸರ್ಕಾರಗಳು ಸವಾಲಿಗೆ ಸರಿಯಾಗಿ ಸ್ಪಂದಿಸುವಂತಹ ಕ್ರಮಗಳನ್ನು ಕೈಗೊಳ್ಳಲಿಲ್ಲ. ಈ ಸವಾಲಿಗೆ ಉತ್ತರ ಕಂಡುಕೊಳ್ಳಲು ನಾವು ನಮ್ಮ ಬಂಡವಾಳ ಹಾಗೂ ಮಾನವ ಸಂಪನ್ಮೂಲದ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಉದ್ಯೋಗವನ್ನು ಭಾರಿ ಸಂಖ್ಯೆಯಲ್ಲಿ ಸೃಷ್ಟಿ
ಸುವ ಉದ್ದಿಮೆಗಳಲ್ಲಿ ಹಣ ಹೂಡಿಕೆ ಮಾಡಬೇಕು, ವಾಣಿಜ್ಯೋದ್ಯಮ ನಡೆಸಲು ಈಗಿರುವ ಅಡೆತಡೆಗಳನ್ನು ನಿವಾರಿಸಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡುವವರಿಗೆ ಉತ್ತೇಜನ ನೀಡಬೇಕು. ಆದರೆ ಕಳೆದ ಮೂರು ವರ್ಷಗಳ ಅವಧಿಯಲ್ಲೂ ಇಂತಹ ಕೆಲಸಗಳು ಆಗಿಲ್ಲ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿಯಾದರೂ ಸರ್ಕಾರವು ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಗಮನ ನೀಡಬೇಕು.

₹ 15 ಸಾವಿರ ಕೋಟಿ ವೆಚ್ಚದ ಶುದ್ಧೀಕರಣ ಘಟ ಕಕ್ಕೆ ನಮ್ಮ ಸರ್ಕಾರಗಳು ನೀಡುವ ಉತ್ತೇಜನ ಹೆಚ್ಚು. ಆದರೆ ಇಂಥ ಒಂದು ಘಟಕ ಸೃಷ್ಟಿಸುವ ಉದ್ಯೋಗ ಒಂದು ಸಾವಿರ ಮಾತ್ರ. ಐವತ್ತು ಸಾವಿರ ಜನರಿಗೆ ಉದ್ಯೋಗ ನೀಡುವ ಜವಳಿ ಉದ್ದಿಮೆಗೆ ಈ ಮಟ್ಟಿಗೆ ಪ್ರೋತ್ಸಾಹ ಸಿಗುವುದಿಲ್ಲ. ಇಂಥ ಕಡೆ ಕಾರ್ಮಿಕ ಸಂಘಟನೆಗಳೂ ಕೆಲವು ತೊಂದರೆಗಳನ್ನು ತಂದಿಡುತ್ತವೆ. ಈ ಎಲ್ಲ ಕಾರಣಗಳಿಂದಾಗಿ ಭಾರತದಲ್ಲಿ ಉದ್ಯೋಗ ನಾಶವಾಗುತ್ತಿದೆ. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಬಾಂಗ್ಲಾದೇಶದ ಜವಳಿ ರಫ್ತು ಮೊತ್ತ ಇಪ್ಪತ್ತೈದು ಪಟ್ಟು ಹೆಚ್ಚಾಗಿದೆ. ಆದರೆ ನಮ್ಮ ದೇಶದ ಜವಳಿ ಉತ್ಪನ್ನಗಳ ರಫ್ತು ಪ್ರಮಾಣ ಆ ಮಟ್ಟದಲ್ಲಿ ಹೆಚ್ಚಾಗಿಲ್ಲ. ನಮ್ಮಲ್ಲಿನ ನೀತಿಗಳೇ ಉದ್ಯೋಗ ಸೃಷ್ಟಿಗೆ ಪೂರಕವಾಗಿಲ್ಲ. ಅವುಗಳನ್ನು ಬದಲಾಯಿಸದ ಹೊರತು, ಪರಿಸ್ಥಿತಿ ಸುಧಾರಿಸುವುದಿಲ್ಲ.
ನಮ್ಮಲ್ಲಿನ ಜನಸಂಖ್ಯಾ ಬೆಳವಣಿಗೆ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ, ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತ ಹೋದಂತೆ ಅವರನ್ನು ಚೆನ್ನಾಗಿ ನೋಡಿ
ಕೊಳ್ಳುವ ಹೊಣೆಯೂ ಹೆಚ್ಚುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಎದುರಿಸಲು ನಾವು ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು.

*****

1.70 ಲಕ್ಷ - 2016–17ರಲ್ಲಿ ಸೃಷ್ಟಿಯಾಗಿರುವ ಉದ್ಯೋಗಗಳ ಪ್ರಮಾಣ

25-30 ಲಕ್ಷ -2025ರ ಹೊತ್ತಿಗೆಸೃಷ್ಟಿಯಾಗಲಿರುವ ಹೊಸ ಉದ್ಯೋಗಗಳ ಸಂಖ್ಯೆ 

40 ಲಕ್ಷ - ಐ.ಟಿ ಉದ್ಯಮದಲ್ಲಿ ಈಗ ಇರುವ ಒಟ್ಟು ಉದ್ಯೋಗಿಗಳು

-ಟಿ.ವಿ. ಮೋಹನ್‌ದಾಸ್ ಪೈ
ಮಣಿಪಾಲ್ ಗ್ಲೋಬಲ್ ಎಜುಕೇಷನ್‌ನ ಅಧ್ಯಕ್ಷ

ನಿರೂಪಣೆ: ವಿಜಯ್‌ ಜೋಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT