ಸೋಮವಾರ, ಡಿಸೆಂಬರ್ 16, 2019
18 °C
ಮಿಥಾಲಿ ಪಡೆಗೆ ನ್ಯೂಜಿಲೆಂಡ್ ಸವಾಲು

ಮಹಿಳೆಯರ ವಿಶ್ವಕಪ್‌ ಕ್ರಿಕೆಟ್‌: ಭಾರತಕ್ಕೆ ಮಹತ್ವದ ಪಂದ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಮಹಿಳೆಯರ ವಿಶ್ವಕಪ್‌ ಕ್ರಿಕೆಟ್‌: ಭಾರತಕ್ಕೆ ಮಹತ್ವದ ಪಂದ್ಯ

ಡರ್ಬಿ: ಸತತ ಎರಡು ಪಂದ್ಯ ಗಳಲ್ಲಿ ಸೋಲು ಕಂಡಿರುವ ಭಾರತ ಮಹಿಳೆಯರ ತಂಡ ಶನಿವಾರ ಪ್ರಬಲ ನ್ಯೂಜಿಲೆಂಡ್ ಎದುರು ‘ಮಾಡು ಇಲ್ಲವೇ ಮಡಿ’ ಪಂದ್ಯ ಆಡಲಿದೆ.

ಭಾರತದ ಸೆಮಿಫೈನಲ್‌ ಕನಸು ನನಸಾಗಬೇಕಾದರೆ ಈ ಪಂದ್ಯ ಗೆದ್ದು ಕೊಳ್ಳುವುದು ಅನಿವಾರ್ಯವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಪಂದ್ಯದಲ್ಲಿ ಗೆಲುವು ದಾಖಲಿಸುವ ಸುಲಭ ಅವಕಾಶವನ್ನು ಭಾರತ ಕೈಚೆ ಲ್ಲಿತ್ತು. ಬಳಿಕ ಆಸ್ಟ್ರೇಲಿಯಾ ಎದುರು ಕೂಡ ನೀರಸವಾಗಿ ಆಡಿತ್ತು.

ನಾಲ್ಕು ಪಂದ್ಯಗಳ ಸತತ ಗೆಲುವಿನ ಬಳಿಕ ಕಂಡ ಎರಡು ಸೋಲುಗಳು ಮಿಥಾಲಿ ಪಡೆಯ ವಿಶ್ವಕಪ್‌ ಕನಸಿಗೆ ಪ್ರಮುಖ ಅಡ್ಡಿಯಾಗಿವೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿರುವ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಸೆಮಿಫೈನಲ್ ತಲುಪಿವೆ.

ನಂತರದ ಸ್ಥಾನಗಳಲ್ಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಭಾರತ ಈಗಾಗಲೇ ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ. ನ್ಯೂಜಿ ಲೆಂಡ್ ಆರರಲ್ಲಿ ಮೂರು ಪಂದ್ಯಗಳನ್ನು ಮಾತ್ರ ಜಯಿಸಿದೆ. ಆದರೆ ನ್ಯೂಜಿಲೆಂಡ್ ತಂಡ ಹೆಚ್ಚು ರನ್ ರೇಟ್ ಹೊಂದಿರುವ ಕಾರಣ ಶನಿವಾರದ ಮುಖಾಮುಖಿಯಲ್ಲಿ ಗೆದ್ದ ತಂಡವೇ ಸೆಮಿಫೈನಲ್ ಪ್ರವೇಶಿಸಲಿದೆ. ಭಾರತ ಹಿಂದಿನ ಎರಡೂ ಪಂದ್ಯಗಳಲ್ಲಿ ಹೆಚ್ಚಿನ ಅಂತರದ ಸೋಲು ಅನುಭವಿಸಿದ್ದೇ ಇದಕ್ಕೆ ಕಾರಣ.

(ನ್ಯೂಜಿಲೆಂಡ್‌ ತಂಡದ ನಾಯಕಿ ಸೂಜಿ ಬೇಟ್ಸ್‌)

ಈ ಪಂದ್ಯಗಳಲ್ಲಿ ಭಾರತ ತಂಡ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಗಿತ್ತು. ದಕ್ಷಿಣ ಆಫ್ರಿಕಾ ಎದುರು ದೀಪ್ತಿ ಶರ್ಮಾ (60) ಏಕೈಕ ಹೋರಾಟ ನಡೆಸಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯದಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳು ಜವಾಬ್ದಾರಿ ಯಿಂದ ಆಡಲಿಲ್ಲ. ಪೂನಮ್ ರಾವತ್‌ ಅವರ ಶತಕ  ಹಾಗೂ ನಾಯಕಿ ಮಿಥಾಲಿ ರಾಜ್ ಅವರ ದಾಖಲೆಯ ಆಟ ಭಾರ ತದ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ಭರವಸೆ ಉಳಿಯುವಂತೆ ಮಾಡಿದೆ.

ತಂಡದಲ್ಲಿರುವ ಕರ್ನಾಟಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ (0) ಹಿಂದಿನ ಪಂದ್ಯದಲ್ಲಿಯೂ ತಮ್ಮ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ.

ಸತತ ಮೂರು ಪಂದ್ಯಗಳಲ್ಲಿ ವಿಫಲರಾಗಿರುವ ಸ್ಮೃತಿ ಮಂದಾನ ಹಾಗೂ ಹರ್ಮನ್‌ಪ್ರೀತ್ ನಿರ್ಣಾಯಕ ಪಂದ್ಯದಲ್ಲಿ ಮಿಂಚುವ ಭರವಸೆ ಇದೆ.

ಬೌಲಿಂಗ್‌ನಲ್ಲಿ ಭಾರತದ ಪ್ರಮುಖ ಆಕರ್ಷಣೆ ಎನಿಸಿದ್ದ  ಏಕ್ತಾ ಬಿಷ್ಠ್ ಆಸ್ಟ್ರೇಲಿಯಾದ ಬ್ಯಾಟ್ಸ್‌ವುಮನ್‌ಗಳ ರನ್ ಹೊಳೆ ತಡೆಯುವಲ್ಲಿ ವೈಫಲ್ಯ ಅನುಭವಿಸಿದ್ದರು. ಹತ್ತು ಓವರ್‌ ಬೌಲಿಂಗ್ ಮಾಡಿದರೂ ಒಂದೂ ವಿಕೆಟ್ ಅವರಿಗೆ ದಕ್ಕಲಿಲ್ಲ.

ಏಕ್ತಾ ಅವರೊಂದಿಗೆ ಅನುಭವಿ ಜೂಲನ್ ಗೋಸ್ವಾಮಿ, ಪೂನಮ್ ಯಾದವ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಬೆಂಚ್ ಕಾಯುತ್ತಿರುವ ಕರ್ನಾಟಕದ  ರಾಜೇಶ್ವರಿ ಗಾಯಕವಾಡ್‌ಗೆ ಈ ಪಂದ್ಯದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರಾಜೇಶ್ವರಿ ಮಿಂಚಿದ್ದರು. ಕ್ಷೇತ್ರ ರಕ್ಷಣೆಯಲ್ಲಿಯೂ ಭಾರತ ಕಳಪೆಯಾಗಿ ಆಡಿದೆ. ಮೊದಲ ಮೂರು ಪಂದ್ಯಗಳಲ್ಲೇ ಭಾರತ ಎಂಟು ಕ್ಯಾಚ್‌ಗಳನ್ನು ಕೈಚೆಲ್ಲಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 10ಕ್ಕಿಂತ ಹೆಚ್ಚು ರನ್‌ಗಳನ್ನು ಅನಗತ್ಯವಾಗಿ ಬಿಟ್ಟುಕೊಟ್ಟಿತ್ತು.

ಬೇಟ್ಸ್‌ ಆಕರ್ಷಣೆ: ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಸೋಲು ಕಂಡಿರುವ ನ್ಯೂಜಿಲೆಂಡ್ ಪಡೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಮತೋಲನ ಹೊಂದಿದೆ. ಪ್ರತಿಭಾನ್ವಿತ ಆಲ್‌ರೌಂಡರ್ ಆಟಗಾರ್ತಿ ಸೋಫಿ ಡಿವೈನ್ ಹಾಗೂ ನಾಯಕಿ ಸೂಜಿ ಬೇಟ್ಸ್ ಈ ತಂಡದ ಪ್ರಮುಖ ಆಕರ್ಷಣೆ.

ಬೇಟ್ಸ್‌ ಈ ಬಾರಿಯ ವಿಶ್ವಕಪ್‌ನ ಐದು ಪಂದ್ಯಗಳಿಂದ 240 ರನ್ ಕಲೆ ಹಾಕಿದ್ದಾರೆ. ಒಂದು ಶತಕ ಕೂಡ ಇದರಲ್ಲಿ ಸೇರಿದೆ. ಆಮಿ ಸತರ್ಥ್‌ವೇಟ್ ಹಾಗೂ ರಾಚೆಲ್ ಪ್ರೀಸ್ಟ್ ಕೂಡ ರನ್‌ ಹೊಳೆ ಹರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಅಮೇಲಿಯಾ ಕೆರ್‌ ಈ ಬಾರಿಯ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಆಟಗಾರ್ತಿ ಐದು ಪಂದ್ಯಗಳಿಂದ 10 ವಿಕೆಟ್ ಕಬಳಿಸಿದ್ದಾರೆ.

*

ಪ್ರತಿಕ್ರಿಯಿಸಿ (+)