ಸೋಮವಾರ, ಡಿಸೆಂಬರ್ 16, 2019
25 °C

ವೃತ್ತಿಕೌಶಲ ನವೀಕರಣಕ್ಕೆ ಗಮನ ಅನಿವಾರ್ಯ

ವಿಶ್ವನಾಥ ಎಸ್‌. Updated:

ಅಕ್ಷರ ಗಾತ್ರ : | |

ವೃತ್ತಿಕೌಶಲ ನವೀಕರಣಕ್ಕೆ ಗಮನ  ಅನಿವಾರ್ಯ

ಮಾಹಿತಿ ತಂತ್ರಜ್ಞಾನ (ಐ.ಟಿ) ವಲಯದಲ್ಲಿ ಉದ್ಯೋಗ ಕಡಿತಕ್ಕೆ ಕಂಪೆನಿಗಳನ್ನು  ಮಾತ್ರ ಹೊಣೆ ಮಾಡುವುದರಲ್ಲಿ ಅಥವಾ ದೂರುವುದರಲ್ಲಿ ಅರ್ಥವಿಲ್ಲ.  ಸ್ವತಃ ಉದ್ಯೋಗಿಗಳು ಹಾಗೂ  ಶಿಕ್ಷಣ ವ್ಯವಸ್ಥೆಯೂ  ಕಾರಣ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮುಖ್ಯವಾಗಿ ಐ.ಟಿ ವಲಯಕ್ಕೆ ಸಂಬಂಧಿಸಿದಂತೆ ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ಮಧ್ಯೆ ಅಂತರ ಇದೆ. ಉದ್ಯಮವನ್ನು ಗಮನದಲ್ಲಿ ಇಟ್ಟುಕೊಂಡು ಶಿಕ್ಷಣ ಸಂಸ್ಥೆಗಳು ಪಠ್ಯದಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಶಿಕ್ಷಣ ಕ್ಷೇತ್ರದ ತಜ್ಞರು, ವಿದ್ಯಾರ್ಥಿಗಳು ಅಭಿಪ್ರಾಯಪಡುತ್ತಾರೆ.

ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕ್ಷಿಪ್ರ ಗತಿಯ ಬದಲಾವಣೆ ನಡೆಯುತ್ತಿದೆ. ಕೃತಕ ಬುದ್ಧಿಮತ್ತೆ, ಹೊಸ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದೆ. ಐ.ಟಿ ಉದ್ಯಮ ಮತ್ತು ಉದ್ಯೋಗಿಗಳು ತಮ್ಮ ಭವಿಷ್ಯ ಕಾಪಾಡಿಕೊಳ್ಳಲು ಕೌಶಲ ನವೀಕರಣಕ್ಕೆ ಗಮನ ನೀಡಲೇಬೇಕಾದ ಅನಿವಾರ್ಯ ತಲೆದೋರಿದೆ.

ಐ.ಟಿ ಉದ್ಯೋಗ ಬಿಕ್ಕಟ್ಟು ದೇಶದ ಐ.ಟಿ ಉದ್ಯಮ ಮತ್ತು ಉದ್ಯೋಗಿಗಳಷ್ಟೇ ಅಲ್ಲದೆ, ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿಯೂ ಆತಂಕ ಮೂಡಿಸಿದೆ. ಉದ್ಯಮ ಮತ್ತು ಶೈಕ್ಷಣಿಕ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ  ಆಗದೇ ಇದ್ದರೆ ಉದ್ಯೋಗ ಕಡಿತದಂತಹ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

ಈ ಮೊದಲು ಉದ್ಯಮದಲ್ಲಿ ಬೇಡಿಕೆ ಹೆಚ್ಚಿದ್ದಾಗ ಕಂಪೆನಿಗಳು,  ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮಾತ್ರವೇ ಕೆಲಸಕ್ಕೆ ಸೇರಿಸಿಕೊಂಡಿಲ್ಲ. ಸಾಫ್ಟ್ ಸ್ಕಿಲ್ ಇರುವಂತಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡುತ್ತಿದ್ದವು. ಇದರಿಂದ ವಿದ್ಯಾರ್ಥಿಗಳೂ ಸಹ ಸಾಫ್ಟ್ ಸ್ಕಿಲ್ ಬಗ್ಗೆಯೇ ಹೆಚ್ಚು ಗಮನ ನೀಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕಂಪೆನಿಗಳು ತಂತ್ರಜ್ಞಾನ  ರಂಗದಲ್ಲಿಯೇ ವಿಶೇಷ ಕೌಶಲ ಅಥವಾ ಪರಿಣತಿ ಹೊಂದಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುತ್ತಿವೆ.

‘ಐ.ಟಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯಲ್ಲಿಯೂ ಬದಲಾವಣೆ ಆಗಬೇಕು’ ಎನ್ನುತ್ತಾರೆ ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಬಿ.ಜಿ ಸಂಗಮೇಶ್ವರ. ‘ಉದ್ಯೋಗಾವಕಾಶಗಳೇ  ಇಲ್ಲ ಎಂದರ್ಥವಲ್ಲ. ನಿಮಗೆ ಆ ಸಾಮರ್ಥ್ಯ ಇರಬೇಕಷ್ಟೆ. ಉದ್ಯಮದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೆ ಅವರ ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಜ್ಜು

ಗೊಳಿಸಬಹುದು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ ಜತೆಗೆ ತಂತ್ರಜ್ಞಾನದ ಬಗ್ಗೆಯೂ ತರಬೇತಿ ನೀಡುತ್ತಿದ್ದೇವೆ. ಆಗಸ್ಟ್ ಒಳಗಾಗಿಯೇ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಂದಾಜು 100 ಕಂಪೆನಿಗಳು, ಸ್ಟಾರ್ಟ್ ಅಪ್‌ಗಳು ಕ್ಯಾಂಪಸ್ ಆಯ್ಕೆ ನಡೆಸುತ್ತಿವೆ’ ಎಂದು ಅವರು ಹೇಳುತ್ತಾರೆ.

ಉದ್ಯಮ ಆಧಾರಿತ ಕೋರ್ಸ್ ‘ಉದ್ಯಮ ಆಧಾರಿತ ಕೋರ್ಸ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೂ ಕೆಲಸ ಹುಡುಕಿಕೊಳ್ಳಲು ಸುಲಭವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಸದ್ಯಕ್ಕೆ, ದತ್ತಾಂಶ ವಿಶ್ಲೇಷಣೆ (ಡೇಟಾ ಅನೆಲಿಟಿಕ್ಸ್‌) ಮಾರುಕಟ್ಟೆಯಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಇವೆ. ಇದಕ್ಕಾಗಿ ಐಬಿಎಂ ಜತೆ ಒಪ್ಪಂದಕ್ಕೆ ಮುಂದಾಗಿದ್ದೇವೆ. ‘ಅಮೆರಿಕಕ್ಕೆ ಹೋಗುವವರು ಕಡಿಮೆ ಆಗುತ್ತಿದ್ದಾರೆ. ಇದರಿಂದ ಎಂ. ಟೆಕ್‌ಗೆ ಬೇಡಿಕೆ ಹೆಚ್ಚಲಿದೆ. ಡೇಟಾ ಸೈನ್ಸ್, ಇನ್ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್, ಮೆಟೀರಿಯಲ್ ಸೈನ್ಸ್ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ.‘ವಾಸ್ತವ ಪರಿಸ್ಥಿತಿಯ ಅರಿವಿದ್ದರೆ ಅದಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಉದ್ಯೋಗಾವಕಾಶ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಲಿದೆ ಎನ್ನುವುದು ಸರಿಯಲ್ಲ. ಸ್ಮಾರ್ಟ್ ಸಿಟಿ, ಡಿಜಿಟಲೀಕರಣದಿಂದ ಹೆಚ್ಚೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಅದಕ್ಕೆ ಬೇಕಾದ ಕೌಶಲ ರೂಪಿಸಿಕೊಳ್ಳಬೇಕಷ್ಟೆ.

‘ಶೇ 75ರಷ್ಟು ವಿದ್ಯಾರ್ಥಿಗಳು ಕೆಲಸಕ್ಕೆ ಸೇರುತ್ತಾರೆ. ಇನ್ನುಳಿದ ಶೇ 25 ರಷ್ಟು ವಿದ್ಯಾರ್ಥಿಗಳಲ್ಲಿ ಕೆಲವರು ಉನ್ನತ ವ್ಯಾಸಂಗ ಆಯ್ಕೆ ಮಾಡಿಕೊಂಡರೆ ಇನ್ನೂ ಕೆಲವರು ಉದ್ಯಮಿಗಳಾಗುತ್ತಿದ್ದಾರೆ’ ಎನ್ನುತ್ತಾರೆ ಅವರು.

ಒಂದು ವರ್ಷದವರೆಗೂ ಬಿಕ್ಕಟ್ಟು ಮುಂದುವರಿಯಲಿದೆ: ‘ಉದ್ಯೋಗ ಕಡಿತ ಅಲ್ಪಾವಧಿಯದ್ದಲ್ಲ. ಮುಂದಿನ 6 ತಿಂಗಳಿನಿಂದ 1 ವರ್ಷದವರೆಗೂ ಇದು ಮುಂದುವರಿಯಲಿದೆ. ಉತ್ತಮ ಕೌಶಲ ಇದ್ದರೆ ಉದ್ಯೋಗ ಕಡಿತದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾರು ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಾರೋ ಅವರು ಉದ್ಯೋಗದಲ್ಲಿ ಮುಂದುವರಿಯುತ್ತಾರೆ’ ಎನ್ನುವುದು ಬಿಸಿಐಸಿ ಮಾಜಿ ಅಧ್ಯಕ್ಷ ಮತ್ತು ಸೋನಾ ವಳ್ಳಿಯಪ್ಪನ್‌ ಗ್ರೂಪ್‌ ಸಿಇಒ  ತ್ಯಾಗು ವಳ್ಳಿಯಪ್ಪನ್‌ ಅವರ ಅಭಿಪ್ರಾಯ.

‘ಐ.ಟಿ ಉದ್ಯೋಗ ಕಡಿತ ಎನ್ನುವುದು ಬ್ರೆಕ್ಸಿಟ್‌ನಿಂದ ಆರಂಭವಾಯಿತು. ಅಮೆರಿಕದ ವೀಸಾ ನೀತಿ ಅದರ ಪ್ರಭಾವವನ್ನು ಹೆಚ್ಚಿಸಿದೆಯಷ್ಟೆ. ಜಾಗತಿಕ ಸ್ಪರ್ಧಾತ್ಮಕತೆ, ಮಂದಗತಿಯ ಆರ್ಥಿಕ ಬೆಳವಣಿಗೆಯು   ಭಾರತದ ಉದ್ಯಮದ ಪ್ರಗತಿಗೆ ಹಿನ್ನಡೆ ಉಂಟುಮಾಡಿದೆ. ಜಾಗತಿಕ ಮಾರುಕಟ್ಟೆಯ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಭಾರತಕ್ಕೆ ಇದೊಂದು ಸವಾಲು.

‘ಐ.ಟಿ ಉದ್ಯಮಕ್ಕೆ ಸಂಬಂಧಿಸಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯ ಅಗತ್ಯವಿದೆ. ಶಿಕ್ಷಣ ವ್ಯವಸ್ಥೆ ಮತ್ತು ಉದ್ಯಮದ ಮಧ್ಯೆ ಭಾರಿ ಅಂತರ ಇದೆ. ಉದ್ಯಮದ ಅಗತ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುವಂತಾಗಬೇಕು. ಸದ್ಯ ದೇಶದಲ್ಲಿ ಐಐಎಂ, ಐಐಟಿ ಹೊರತುಪಡಿಸಿ ಶೇ 40 ರಷ್ಟು ವಿಶ್ವವಿದ್ಯಾಲಯಗಳು ಮಾತ್ರವೇ ಈ ಬಗ್ಗೆ ಹೆಚ್ಚು ಗಮನ ನೀಡುತ್ತಿವೆ’ ಎಂದಿದ್ದಾರೆ. ‘ಐ.ಟಿ. ಕಂಪೆನಿಗಳ ಬೇಡಿಕೆಗೆ ಅನುಗುಣವಾದ ಶಿಕ್ಷಣ ಸಿಗುತ್ತಿಲ್ಲ.  ಹೀಗಾಗಿ ಓದು ಮುಗಿದ ನಂತರ ಹೆಚ್ಚುವರಿ ಕೌಶಲ ಪಡೆಯಲು ಕೋರ್ಸ್‌ಗೆ ಸೇರಿಕೊಳ್ಳಲೇಬೇಕು. ಅದಕ್ಕೆ ಹೆಚ್ಚುವರಿ ಹಣ ತೆರಬೇಕಾಗುತ್ತದೆ. ಕಾಲೇಜು ಶುಲ್ಕ ಕಟ್ಟಲು ಕಷ್ಟಪಡುವವರಿಗೆ ಹೆಚ್ಚುವರಿಯಾಗಿ ಹಣ ತೆತ್ತು ಹೊರಗಡೆ ಕೋರ್ಸ್‌ ಮಾಡುವುದು ಕಷ್ಟ. ಆ ಕಾರಣಕ್ಕೆ ಅವರಿಗೆ ಸರಿಯಾದ ಉದ್ಯೋಗವೂ ಸಿಗುವುದಿಲ್ಲ. ಈಗ ಬಹಳ ತಡವಾಗಿ ಆದರೂ ನಮ್ಮ ಕಾಲೇಜಿನಲ್ಲಿ ಉದ್ಯಮದ ಬೇಡಿಕೆ ಪೂರೈಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಂತಹ ಕೋರ್ಸ್ ಬಂದಿದೆ. ಮುಂದೆ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ ಎನ್ನುವ ವಿಶ್ವಾಸವಿದೆ ಎನ್ನುತ್ತಾರೆ’ ಬೆಂಗಳೂರಿನ ಕಗ್ಗಲಿಪುರದಲ್ಲಿರುವ ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಈಗಷ್ಟೇ ಎಂಜಿನಿಯರಿಂಗ್‌ ಪದವಿ ಮುಗಿಸಿರುವ ಸಯ್ಯದ್ ಮೌಲಾ.

‘ಪ್ರತಿಷ್ಠಿತ ಕಾಲೇಜಿನಲ್ಲಿಯೇ ಓದುವ ಆರ್ಥಿಕ ಶಕ್ತಿ ಎಲ್ಲಾ ವಿದ್ಯಾರ್ಥಿಗಳಿಗೂ ಇರುವುದಿಲ್ಲ. ಕೆಲವೇ ಕೆಲವು ಕಾಲೇಜುಗಳಲ್ಲಿ ಉದ್ಯಮದ ಅಗತ್ಯಕ್ಕೆ ಅನುಗುಣವಾದ ಕೋರ್ಸ್‌ಗಳಿವೆ. ಎಲ್ಲಾ ಕಾಲೇಜುಗಳಲ್ಲಿಯೂ ಇದು ಸಿಗುವಂತಾಗಬೇಕು’ ಎನ್ನುತ್ತಾರೆ  ಬೆಂಗಳೂರಿನ ಬಸವನಗುಡಿ ನಿವಾಸಿ ಕುಮಾರಸ್ವಾಮಿ.

***************

ಉದ್ಯೋಗಿಗಳ ಕೌಶಲ ನವೀಕರಣಕ್ಕೆ ಪ್ರಮುಖ ಐ.ಟಿ ಕಂಪೆನಿಗಳು ಕೈಗೊಂಡ ಕ್ರಮಗಳು

* ಇನ್ಫೊಸಿಸ್‌ ಕಂಪೆನಿ ತನ್ನ ಉದ್ಯೋಗಿಗಳ ಕೌಶಲ ನವೀಕರಣಕ್ಕೆ ಮತ್ತು ಸಂಸ್ಥೆಯಲ್ಲಿ ನಾವೀನ್ಯ ಅಳವಡಿಸಿಕೊಳ್ಳಲು ‘ಡಿಸೈನ್‌ ಥಿಂಕಿಂಗ್‌ ಪ್ಲಾಟ್‌ಫಾರಂ’ ಸಿದ್ಧಪಡಿಸಿದೆ.

* ಹಾಲಿ ಉದ್ಯೋಗಿಗಳು ಮತ್ತು ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ತರಬೇತಿ ನೀಡಲು ಆನ್‌ಲೈನ್‌ ಕೋರ್ಸ್‌ಗಳನ್ನು ನೀಡುವಂತಹ ಸಂಸ್ಥೆಗಳೊಂದಿಗೂ ಇನ್ಫೊಸಿಸ್‌ ಸಹಯೋಗ ಹೊಂದಿದೆ.

* ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಕಂಪೆನಿ ಡಿಜಿಟಲ್‌ ತಂತ್ರಜ್ಞಾನದ ಮೂಲಕ 1 ಲಕ್ಷ ಜನರಿಗೆ ಕೌಶಲ ತರಬೇತಿ ನೀಡುವುದಾಗಿ ಘೋಷಿಸಿದೆ.

* ವಿಪ್ರೊ ಕಂಪೆನಿ ತನ್ನ ಸಿಬ್ಬಂದಿಗೆ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲು ‘Newton’s Cradle’ ಕಾರ್ಯಕ್ರಮ ಹಮ್ಮಿಕೊಂಡಿದೆ. 7 ರಿಂದ 8 ವರ್ಷ ಅನುಭವ ಇರುವ ಉದ್ಯೋಗಿಗಳನ್ನು ಕೌಶಲ ನವೀಕರಣದ ಮೂಲಕ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುವುದು.  ಹೀಗೆ ತೆರವಾಗುವ  ಸ್ಥಾನಗಳಲ್ಲಿ,  ಹೊಸದಾಗಿ ಕಂಪೆನಿ ಸೇರುವ ಉದ್ಯೋಗಿಗಳು  ಹೆಚ್ಚಿನ ಹೊಣೆಗಾರಿಕೆಯ ಕೆಲಸಗಳನ್ನು ನಿರ್ವಹಿಸಲು ಅವಕಾಶಗಳು ಲಭ್ಯವಾಗಲಿವೆ.

* ಎಚ್‌ಸಿಎಲ್‌ ಟೆಕ್ನಾಲಜೀಸ್, ಕೌಶಲ ನವೀಕರಣಕ್ಕೆ ಕ್ರಮ ಕೈಗೊಂಡಿದ್ದು  18,000 ಉದ್ಯೋಗಿಗಳು ತರಬೇತಿ ಪಡೆಯುತ್ತಿದ್ದಾರೆ.

* ಕಾಗ್ನಿಜೆಂಟ್‌ ಕಂಪೆನಿಯು ಮಾರುಕಟ್ಟೆಯ ಬೇಡಿಕೆಗೆ ಅನುಗುಣ ವಾಗಿ ಉದ್ಯೋಗಿಗಳ ಕೌಶಲ ವೃದ್ಧಿಸಲು ಹಾಗೂ ಸೂಕ್ತ ಕೌಶಲ ಇರುವ ಉದ್ಯೋಗಿಗಳನ್ನು ಗುರುತಿಸಲು ಅನುಕೂಲ ಆಗುವಂತೆ ಆ್ಯಪ್‌ ಅಭಿವೃದ್ಧಿಪಡಿಸಿದೆ. ಕಾಗ್ನಿಜೆಂಟ್‌ ಅಕಾಡೆಮಿಯಲ್ಲಿ ಕೌಶಲ ನವೀಕರಣ ಮಾಡಿಕೊಳ್ಳಲು ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಿದೆ.

ಪ್ರತಿಕ್ರಿಯಿಸಿ (+)